ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ‘ಪಂಚವಾರ್ಷಿಕ’ ಜಡತೆ!

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

ಹೆಚ್ಚುಕಡಿಮೆ ಕರ್ನಾಟಕದ ಪ್ರಾದೇಶಿಕ ಪಕ್ಷ­ದಂತಿರುವ ಜಾತ್ಯತೀತ ಜನತಾದಳ ಎದು­ರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ನಮ್ಮ ಸಾರ್ವಜನಿಕ ವಲಯ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಅಧಿಕೃತವಾಗಿ ಸೇರದಿರುವ, ಆದರೆ ರಾಜಕೀಯದಲ್ಲಿ ಆಸಕ್ತಿಯಿರುವ ಅನೇ­ಕರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಏಳುಬೀಳುಗಳನ್ನು ಗಮನಿಸುತ್ತಿರು­ತ್ತಾರೆ; ಹೀಗಾಗಿ, ತಕ್ಷಣಕ್ಕೆ ಅಧಿಕಾರ ಹಿಡಿಯುವ ಸಾಧ್ಯತೆ ಇರದ ಜನತಾದಳವನ್ನು ಇಂಥವರು ಹೆಚ್ಚು ಗಮನಿಸುತ್ತಿಲ್ಲ. ಕರ್ನಾಟಕದಲ್ಲಿ ಜನತಾ­ದಳದ ದುಡುಕಿನಿಂದ ಆರು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ನಂಬಿರುವ ಕೆಲವು ಪ್ರಗತಿಪರ ಲೇಖಕರು ‘ಜನತಾದಳ ಮುಳುಗಿ ಹೋದರೆ ಒಳ್ಳೆಯದು’ ಎಂದು ಕಾಂಗ್ರೆಸ್ ಹಾಗೂ ಬಿಜೆಪಿಯವರಂತೆಯೇ ಮಾತಾ­ಡುತ್ತಿರುತ್ತಾರೆ. ಬಿಜೆಪಿಯನ್ನು ವಿರೋಧಿ­ಸುವ, ಕಾಂಗ್ರೆಸ್ಸನ್ನು ಬೆಂಬಲಿಸುವ ಈ ಲೇಖಕರ ಪ್ರಕಾರ, ಕರ್ನಾಟಕಕ್ಕೆ ಎರಡೇ ಪಕ್ಷಗಳು ಸಾಕು. ಇವರಲ್ಲಿ ಅನೇಕರು ಬಿಜೆಪಿಗಿಂತ ಹೆಚ್ಚಾಗಿ ಜನತಾದಳವನ್ನು ವಿರೋಧಿಸುತ್ತಿರುವುದರಲ್ಲಿ ದೂರದೃಷ್ಟಿಯ ಕೊರತೆ ಇರುವಂತಿದೆ. ಯಾವುದೇ ರಾಜ್ಯದಲ್ಲಿ ಎರಡೇ ಪಕ್ಷಗಳಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಪ್ರಾಥಮಿಕ ಸತ್ಯವನ್ನೂ ಕಾಂಗ್ರೆಸ್ ಹಾಗೂ ಬಿಜೆಪಿ ಮಾತ್ರ ಇರುವ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ ಎಂಬ ವಾಸ್ತವವನ್ನೂ ಇವರಲ್ಲನೇಕರು ಮರೆತಂತಿದೆ.

ಈ ಬಗೆಯ ನೋಟಗಳ ನಡುವೆ ನಿಂತು, ಕರ್ನಾ­ಟಕದಲ್ಲಷ್ಟೇ ತನ್ನ ಅಸ್ತಿತ್ವವನ್ನು ಉಳಿಸಿ­ಕೊಂಡಿ­ರುವ ಜನತಾದಳದ ಸ್ಥಿತಿಯನ್ನು ಕೊಂಚ ವಸ್ತುನಿಷ್ಠವಾಗಿ ಗಮನಿಸುವುದು ಒಳ್ಳೆಯದು. ಅಧಿಕಾರ ರಾಜಕಾರಣದ ಹಾವು ಏಣಿ ಆಟದಲ್ಲಿ ಕೊಂಚ ಸೊರಗಿದಂತೆ ಕಾಣುವ ಪಕ್ಷಗಳ ಬಗ್ಗೆ ಆಗಾಗ್ಗೆ ಯೋಚಿಸುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಕೂಡ ಮುಖ್ಯ. ಹಿಂದೆ ಎರಡು ಮೂರು ಸಲ ಅಧಿಕಾರ ನಡೆಸಿ, ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡರ ಜೊತೆಯೂ ಸಮ್ಮಿಶ್ರ ಸರ್ಕಾರ ನಡೆಸಿದ ಜನತಾದಳ ಕಳೆದ ಐದಾರು ವರ್ಷಗಳಿಂದ ಅಧಿಕಾರದಲ್ಲಿಲ್ಲ. ‘ಕರ್ನಾ­ಟಕದಲ್ಲಿ ಬಿಜೆಪಿ ಸರ್ಕಾರದ ಹಲವು ಹಗರಣ­ಗಳನ್ನು ನಮ್ಮ ಪಕ್ಷ ಬಯಲಿಗೆಳೆಯಿತು; ಯಡಿ­ಯೂರಪ್ಪನವರನ್ನು ಕೆಳಗಿಳಿಸಲು ಹಾಗೂ ಬಿಜೆಪಿ ಸೋಲಲು ನಮ್ಮ ಪಕ್ಷ ದಾಖಲೆಸಮೇತ ಹೊರ­ಗೆಳೆದ ಹಗರಣಗಳೇ ಮುಖ್ಯ ಕಾರಣ; ಆದರೆ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ­ವಿರೋಧಿ ಅಲೆಯ ಫಲವೆಲ್ಲ ಕಾಂಗ್ರೆಸ್ಸಿಗೆ ಹೋಯಿತು’ ಎಂದು ನಂಬುವ ಜನತಾ ದಳದ ನಾಯಕರು ಆ ವಿಷಾದ ಯೋಗದಿಂದ ಇನ್ನೂ ಹೊರಬಂದಿಲ್ಲ! ಅದೇನೇ ಇದ್ದರೂ, ಕಳೆದ ಚುನಾವಣೆಯಲ್ಲಿ, ಅತಂತ್ರ ವಿಧಾನಸಭೆ ನಿರ್ಮಾ­ಣ­ವಾದರೆ ಜನತಾದಳ ಮತ್ತೆ ಬಿಜೆಪಿಯ ಜೊತೆಗೆ ಹೋಗಬಹುದೆಂಬ ಆತಂಕದಿಂದ ಕೂಡ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ಸಿನತ್ತ ಹೆಚ್ಚು ವಾಲಿದ್ದು ನಿಜ. ಆಡಳಿತ­ವಿರೋಧಿ ಅಲೆಯ ಜೊತೆಗೆ, ಸಿದ್ದರಾಮಯ್ಯ­ನವರ ನಾಯಕತ್ವ ಹಾಗೂ ಪರಮೇಶ್ವರ್ ಅಧ್ಯಕ್ಷತೆ ಎರಡೂ ಸೇರಿ ಉಂಟಾದ ಹೊಸ ಜಾತಿ ಸಮೀಕರಣ ಕೂಡ ಕಾಂಗ್ರೆಸ್ಸಿಗೆ ನೆರವಾಯಿತು. ಅದೆಲ್ಲ ಈಗ ಇತಿಹಾಸ.

ಆದರೂ ತಮ್ಮ ಪಕ್ಷ ಬಿಜೆಪಿಗಿಂತ ಹೆಚ್ಚು ಸೀಟುಗಳನ್ನೂ ಹೆಚ್ಚು ಪ್ರಮಾಣದ ಮತಗಳನ್ನೂ ಪಡೆಯಿತು ಎಂಬುದು ಜನತಾದಳಕ್ಕೆ ಇವತ್ತು ಮರೆತುಹೋದಂತಿದೆ. ವಿರೋಧ ಪಕ್ಷದಲ್ಲಿದ್ದು­ಕೊಂಡು ಅರ್ಥಪೂರ್ಣ ಕೆಲಸ ಮಾಡಬಹು­ದೆಂಬ ಆತ್ಮವಿಶ್ವಾಸ ಕೂಡ ಜನತಾದಳಕ್ಕೆ ಕಡಿಮೆ­ಯಾದಂತಿದೆ. ಅದರ ಕಣ್ಣೆಲ್ಲ ಮುಂದೆ ತನಗೆ ಅಧಿಕಾರ ದೊರೆಯುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯ ಮೇಲಷ್ಟೆ ನೆಟ್ಟಂತಿದೆ. ಇನ್ನು ಮುಂದಿನ ಮೂರೂವರೆ ವರ್ಷಗಳವರೆಗೂ ಕಾಂಗ್ರೆಸ್ಸಿನ ಅಧಿಕಾರಕ್ಕೆ ಧಕ್ಕೆಯಿಲ್ಲ; ಅತ್ತ ಬಿಜೆಪಿಯವರಿಗೆ ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎಂಬ ಆತ್ಮವಿಶ್ವಾಸವಿದೆ; ಇವರಿಬ್ಬರ ನಡುವೆ ತನ್ನ ಐಡೆಂಟಿಟಿಯ ಪ್ರಶ್ನೆಯೂ ಜನತಾದಳಕ್ಕೆ ಎದು­ರಾಗಿದೆ. ಅದರ ಜೊತೆಗೆ, ಜನತಾದಳದಲ್ಲಿ­ರುವ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ­ನವರು ತಮ್ಮ ಜನತಾದಳದ ಹಳೆಯ ಸಂಗಾತಿ­ಯೆಂಬ ಕಾರಣಕ್ಕೆ ಅವರ ವಿರುದ್ಧ ಹೆಚ್ಚು ಮಾತಾ­ಡಲು ಸಿದ್ಧ­ರಿಲ್ಲ; ಜನತಾದಳದ ಕೆಲವು ಶಾಸಕರು ವಿರೋಧ­ಪಕ್ಷದ ಪಾತ್ರಕ್ಕೆ ಒಗ್ಗಿಕೊಳ್ಳಲು ಇನ್ನೂ ಹೆಣಗುತ್ತಿದ್ದಂತಿದೆ. ಸದನದಲ್ಲಿ ಸಮಸ್ಯೆಗಳನ್ನು ಗಂಭೀರವಾಗಿ ವಿಶ್ಲೇಷಣೆ ಮಾಡುವ ಶಕ್ತಿ ವೈ.ಎಸ್.ವಿ. ದತ್ತ, ಕೆ.ಎಂ. ಶಿವಲಿಂಗೇಗೌಡರಂಥ ಕೆಲವೇ ನಾಯಕರಿಗಷ್ಟೇ ಇದೆ. ಹೊಸ ನಾಯಕರು ತಯಾ­ರಾಗುತ್ತಿಲ್ಲ. ಇಕ್ಬಾಲ್ ಅನ್ಸಾರಿ, ಹೊರಟ್ಟಿ ಅವ­ರಂಥ ಹಿರಿಯರಾಗಲೇ ರಾಗ ಎಳೆಯುತ್ತಿ­ದ್ದಾರೆ. ಅವರ ರಾಗಗಳನ್ನು ಗಂಭೀರವಾಗಿ ಕೇಳಿಸಿ­ಕೊಳ್ಳುವ ಮುಕ್ತ ಮನಸ್ಥಿತಿ ಜನತಾದಳದಲ್ಲಿ­ದ್ದಂ-­ತಿಲ್ಲ. ಮುಳುಗುವ ಹಡಗಿನಿಂದ ಇಲಿಗಳು ಓಡು­ವಂತೆ ಕೆಲವು ಶಾಸಕರು ಜನತಾದಳದಿಂದ ಓಡಲು ಸಿದ್ಧರಾಗಿರುವಂತೆ ಕಾಣುತ್ತಿದೆ. ಇನ್ನೂ ಮೂರೂವರೆ ವರ್ಷ ಇವರನ್ನು ಹೇಗೆ ‘ಸಾಕ­ಬೇಕು’ ಎಂಬ ‘ಪ್ರಾಕ್ಟಿಕಲ್’ ಸಮಸ್ಯೆಯೂ ಪಕ್ಷದ ನಾಯ­ಕರಿಗಿದೆ! ಪಕ್ಷ ಅಧಿಕಾರವಿಲ್ಲ­ದಿರುವಾಗ ಹಾಗೂ ಚುನಾವಣೆ ದೂರವಿರುವಾಗ ಯಾವ ಬಗೆಯ ರಾಜಕಾರಣ ಮಾಡಬೇಕು ಎಂಬ ಬಗ್ಗೆ ಜನತಾದಳಕ್ಕೆ ಹೊಸ ಐಡಿಯಾಗಳ ಕೊರತೆಯೂ ಇರುವಂತೆ ತೋರುತ್ತದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೇನು ಎಂಬ ಪ್ರಶ್ನೆ ಜನತಾದಳವನ್ನು ತೀವ್ರವಾಗಿ ಕಾಡುತ್ತಿದ್ದಂತಿದೆ. ಅಂದರೆ, ಜನತಾದಳ ಆಳದಲ್ಲಿ ತನ್ನ ಅಸ್ತಿತ್ವದ ನಿಜ­ವಾದ ಪ್ರಶ್ನೆ ಎದುರಿಸುತ್ತಿದ್ದಂತಿದೆ. ಆದರೆ ಈ ಅನುಭವವನ್ನು ಕೂಡ ಜನತಾದಳ ಆಗಾಗ್ಗೆ ಎದು­ರಿಸಿ ಗೆದ್ದಿದೆಯೆಂಬುದನ್ನು ಕಡೆ­ಗಣಿಸ­ಲಾಗದು.

ಇದೀಗ ಮತ್ತೊಮ್ಮೆ ಜನತಾದಳದ ಅಧ್ಯಕ್ಷ­ರಾಗಿರುವ ಕುಮಾರಸ್ವಾಮಿಯವರ ನಾಯಕತ್ವ ಪಕ್ಷಕ್ಕೆ ಅನಿವಾರ್ಯವಿರಬಹುದು. ಆದರೆ ಬದ­ಲಾದ ರಾಜಕೀಯ ಸನ್ನಿವೇಶದಲ್ಲಿ, ಕುಮಾರ­ಸ್ವಾಮಿಯವರ ಜೊತೆಜೊತೆಗೇ ಅನೇಕ ನಾಯಕ­ರನ್ನು ಬೆಳೆಸುವ ಸಾಧ್ಯತೆಯನ್ನು ಕುರಿತು ಜನತಾ­ದಳ ಯೋಚಿಸುತ್ತಿಲ್ಲ. ಮತ್ತೆ ಕುಮಾರಸ್ವಾಮಿ ಯವರನ್ನೇ ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ದೇವೇಗೌಡರು ‘ಮಮತಾ ಬ್ಯಾನರ್ಜಿಯವರಿಗೆ ಮಗ ಇದ್ದಿದ್ದರೂ ಇದೇ ಕೆಲಸ ಮಾಡುತ್ತಿದ್ದರು’ ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿ ಕೊಂಡರು. ಒಂದು ಕಾಲಕ್ಕೆ ಪ್ರಧಾನಿಯಾಗಿದ್ದ ದೇವೇ­ಗೌಡರಿಗೆ ಹೊಸ ತಲೆಮಾರಿನ ಮತ­ದಾರರು ಈ ಬಗೆಯ ಮಾತುಗಳನ್ನು ಕೇಳಿ ಅಸಹ್ಯ­ಪಡುತ್ತಾರೆ ಎಂಬುದು ಗೊತ್ತಿರಲಿಕ್ಕಿಲ್ಲ. ಆದರೆ ಅತ್ತ ಇನ್ನೂ ರಾಹುಲ್–-ಪ್ರಿಯಾಂಕಾರನ್ನೇ ನಂಬಿ ಕುಳಿತಿರುವ ಕಾಂಗ್ರೆಸ್ಸಿನ ಮನಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಭಾರತದ ಬಹುತೇಕ ರಾಜಕೀಯ ನಾಯಕರಲ್ಲಿ ಹೆಚ್ಚುಕಡಿಮೆ ಇದೇ ಮನಸ್ಥಿತಿ­ಯಿದೆ. ತಮ್ಮ ಆಸ್ತಿಯನ್ನು ವರ್ಗಾಯಿಸುವಂತೆ ಪಕ್ಷಗಳನ್ನು ವರ್ಗಾಯಿಸುವವರ ಬಗ್ಗೆ ಹೊಸ ಮತದಾರರಲ್ಲಿ ಬೆಳೆಯುತ್ತಿರುವ ಸಿಟ್ಟು ನಮ್ಮ ನಾಯಕರಿಗೆ ಅರಿವಾದಂತಿಲ್ಲ.

ಇದೆಲ್ಲದರ ನಡುವೆ, ಜನತಾದಳದ ಇತ್ತೀಚಿನ ಉತ್ಸಾಹದ ನಡೆಯೊಂದನ್ನು ನೋಡೋಣ. ರಾಷ್ಟ್ರ­­ಮಟ್ಟದಲ್ಲಿ ಬಿಜೆಪಿವಿರೋಧಿ ಪಕ್ಷಗಳ ಒಕ್ಕೂಟ ರೂಪಿಸಲು ದೇವೇಗೌಡರೂ ಪ್ರಯತ್ನಿ­ಸು­ತ್ತಿದ್ದಾರೆ. ಈಚೆಗೆ ಬಿಹಾರದ ಉಪಚುನಾವಣೆ­ಯಲ್ಲಿ ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾ­ದಳ, ಲಾಲುಪ್ರಸಾದರ ರಾಷ್ಟ್ರೀಯ ಜನತಾ­­ದಳ ಕಾಂಗ್ರೆಸ್ಸಿನ ಜೊತೆಗೂಡಿ ಬಿಹಾರ­ದಲ್ಲಿ ಹೆಚ್ಚು ಸೀಟುಗಳನ್ನು ಗೆದ್ದ ಮೇಲೆ ಈ ಬಗೆಯ ಪ್ರಯತ್ನದ ಅಗತ್ಯ ಮತ್ತು ಅನಿವಾರ್ಯ­ವನ್ನು ಕೆಲವು ಪಕ್ಷ­ಗಳು ಮನಗಂಡಿವೆ. ಈಗ ಜಾರ್ಖಂಡ್ ರಾಜ್ಯ­ದಲ್ಲಿ ಚುನಾವಣೆ ಎದುರಿ­ಸಲು ಈ ಮೂರೂ ಪಕ್ಷಗಳು ಮತ್ತೆ ಒಂದಾಗಿವೆ; ಮುಂದೆ ಬರುವ ಬಿಹಾರ ಚುನಾವಣೆಯಲ್ಲೂ ಈ ಒಕ್ಕೂಟ ಮುಂದು­ವರಿಯಬಹುದು. ನಿತೀಶ್ ಹಾಗೂ ಲಾಲು­­ಪ್ರಸಾದ್ ತಂತಮ್ಮ ಪಕ್ಷಗಳನ್ನು ವಿಲೀನ­ಗೊಳಿಸಲು ಕೂಡ ಯೋಚಿಸುತ್ತಿದ್ದಾರೆ. ಇದು ಮೋದಿ ಮಂಪರಿನಲ್ಲಿರುವ ಇವತ್ತಿನ ಭಾರತ­ದಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ಎಡೆ ಮಾಡಿ­ಕೊಡುವ ಸಣ್ಣ ಸೂಚನೆಯಂತೆ ಕಾಣು­ತ್ತಿದೆ. ಜನತಾಪರಿವಾರದ ವಿಲೀನದಿಂದ ಕರ್ನಾ­ಟ­ಕದಲ್ಲಿ ತಕ್ಷಣಕ್ಕೆ ದೊಡ್ಡ ಬಗೆಯ ಪರಿ­ಣಾಮ ಆಗ­ದಿರಬಹುದು. ಆದರೆ ಈ ಒಕ್ಕೂಟ ಬಿಹಾರ­ದಲ್ಲಿ ಯಶಸ್ವಿಯಾದರೆ ಕರ್ನಾಟಕದಲ್ಲಿ ಅಷ್ಟಿಷ್ಟು ಉಳಿ­ದಿ­ರುವ ಸಂಯುಕ್ತ ಜನತಾದಳ, ಜಾತ್ಯತೀತ ಜನ­ತಾದಳದೊಂದಿಗೆ ವಿಲೀನವಾಗ­ಬಹುದೇ? ಅದ­ರಿಂದ ಜಾತ್ಯತೀತ ಜನತಾದಳಕ್ಕೆ ಎಷ್ಟು ಪ್ರಯೋ­ಜನ­ವಾಗಬಲ್ಲದು? ಆಗ ಕಾಂಗ್ರೆ­ಸ್ಸಿನ ಜೊತೆ ಅದರ ಸಂಬಂಧ ಹೇಗಿರುತ್ತದೆ? ಇವು ಜನ­ತಾ­­ದಳದ ಎದುರಿಗಿರುವ ನಿಜವಾದ ಪ್ರಶ್ನೆಗಳು.

ಇದೆಲ್ಲದರ ಆಚೆಗೆ ನಿಂತು ನೋಡಿದರೆ, ಜನತಾ­ಪರಿವಾರ ಹಾಗೂ ಕಾಂಗ್ರೆಸ್ ಒಟ್ಟಾಗುತ್ತಿ­ರು­ವುದು ಕಳೆದ ದಶಕಗಳಲ್ಲಿ ಭಾರತದ ರಾಜಕೀಯ­ದಲ್ಲಿ ವಿಕಾಸಗೊಂಡ ವಿಶಿಷ್ಟ ಬಗೆಯ ಪ್ರಜಾ­ಪ್ರಭು­ತ್ವವನ್ನು ಮತ್ತೆ ಸಾಧಿಸುವ ಪ್ರಯತ್ನದ ಮುಂದುವರಿಕೆಯಂತೆಯೂ ಕಾಣುತ್ತದೆ. ಹಲವು ಪಕ್ಷಗಳು ಸೇರಿ ಅಧಿಕಾರ ಹಿಡಿದ ಆ ಎರಡು ದಶಕಗಳು ಏಕಪಕ್ಷ ಆಳ್ವಿಕೆಯ ಸರ್ವಾಧಿಕಾರಕ್ಕೆ ಕೊನೆ ಹಾಡಿದ್ದನ್ನು ಹಾಗೂ ಪ್ರಜಾಪ್ರಭುತ್ವದ ಹೆಸ­ರಿ­ನಲ್ಲಿ ಹಬ್ಬುವ ‘ಪಕ್ಷಸರ್ವಾಧಿಕಾರ’ವನ್ನು ಕಡಿಮೆ ಮಾಡಲೆತ್ನಿಸಿದ್ದನ್ನು ಮರೆಯಬಾರದು.

ಪ್ರಜಾಪ್ರಭುತ್ವದಲ್ಲಿ ಅತಿ ಬಹುಮತದ ಸರ್ಕಾರ­ಗಳು ಮೆಲ್ಲಗೆ ಸರ್ವಾಧಿಕಾರಕ್ಕೆ ತಿರುಗುತ್ತವೆ ಹಾಗೂ ಎಲ್ಲ ಬಗೆಯ ಆರೋಗ್ಯಕರ ಚರ್ಚೆ­ಗ­ಳನ್ನು ಬಹುಮತದ ಅಹಂಕಾರದಿಂದ ಹೊಸಕಿ ಹಾಕು­ತ್ತವೆ. ಅದರಲ್ಲೂ ಕಾರ್ಪೊರೇಟ್ ಬಂಡ­ವಾಳ­ವಾದಿಗಳು ತಮಗೆ ಬೇಕಾದ ಸರ್ಕಾರಗಳ ಪರವಾದ ವಾದಗಳನ್ನು ರೂಪಿಸಲು ಹಣ ಹಾಗೂ ಬಾಡಿಗೆ ಚಿಂತಕರನ್ನು ಒದಗಿಸುತ್ತಿರುವ ಈ ಕಾಲದಲ್ಲಿ ಬಗೆಬಗೆಯ ರಾಜಕೀಯ ಪಕ್ಷಗಳು ಗಟ್ಟಿಗೊಳ್ಳಬೇಕಾದ ಅಗತ್ಯ ಇಡೀ ಭಾರತಕ್ಕಿದೆ ಹಾಗೂ ನಿರ್ದಿಷ್ಟವಾಗಿ ಕರ್ನಾಟಕಕ್ಕೂ ಇದೆ.
ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಹೆಚ್ಚು ರಾಜಕೀಯ ಪಕ್ಷಗಳಿದ್ದಷ್ಟೂ ಒಳ್ಳೆಯದು. ಕರ್ನಾ­ಟಕ­ದಲ್ಲಿ ಕಮ್ಯುನಿಸ್ಟ್ ಪಕ್ಷಗಳು, ಬಿ.ಎಸ್.ಪಿ., ಜೆ.ಡಿ.ಯು., ಸರ್ವೋದಯ ಕರ್ನಾಟಕ ಮುಂತಾದ ಪಕ್ಷಗಳ ಬಗ್ಗೆ ಅಸಡ್ಡೆ ತೋರುವ ರಾಜಕೀಯ ವಿಶ್ಲೇಷಕರು ಹಾಗೂ ಲೇಖಕರು ಚುನಾವಣಾ ರಾಜಕಾರಣವನ್ನು ಮಾತ್ರ ಗಮನ­ದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳ ಮೌಲ್ಯ­ವನ್ನು ಅಳೆಯುತ್ತಿರುವಂತಿದೆ. ಅದೇ ವೇಳೆಗೆ, ಈ ರಾಜಕೀಯ ಪಕ್ಷಗಳೂ ಚುನಾವಣೆಯೇ ಅಂತಿಮ ಎಂಬ ಹಳ್ಳಕ್ಕೆ ಬಿದ್ದು ತಮ್ಮ ಸಾಧ್ಯತೆಯ ಬಗೆಗಿನ ನಂಬಿಕೆಯನ್ನೇ ಕಳೆದುಕೊಂಡಂತಿವೆ. ಅದರಲ್ಲೂ ನರೇಂದ್ರ ಮೋದಿ ಪ್ರಚಾರ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಆ ಬಗೆಯ ಪ್ರಚಾರ ಸಿಕ್ಕದಿರುವ ಪಕ್ಷಗಳ ಸ್ಥೈರ್ಯ ಕೊಂಚ ಉಡುಗುವುದು ನಿಜ. ಆದರೆ ಪ್ರಚಾರದ ಅಬ್ಬರ ಎಲ್ಲವನ್ನೂ ತಂದು­ಕೊಡು­ವುದಿಲ್ಲ ಎಂಬುದನ್ನು ಮೊನ್ನಿನ ಮಹಾ­ರಾಷ್ಟ್ರ ಚುನಾವಣೆಯೂ ತೋರಿಸಿದೆ. ತಮಗೆ ಬೇಕಾ­ದವರನ್ನು ಮಿಂಚಿಸುವ, ಉಳಿದವರನ್ನು ಮುಳುಗಿಸುವ ‘ಮಾಧ್ಯಮ ಮಾರುಕಟ್ಟೆ’ಯಲ್ಲಿ ಸ್ಪರ್ಧಿಸಲಾಗದ ರಾಜಕೀಯ ಪಕ್ಷಗಳು ಜನರನ್ನು ತಲುಪುವ ಹೊಸ ಮಾರ್ಗಗಳನ್ನು ಹುಡುಕಿ­ಕೊಳ್ಳ­ಲೇಬೇಕಾಗುತ್ತದೆ. ಕಾನ್ಶಿರಾಮ್‌ ಅವರ ಕಾಲ­ದಲ್ಲಿ ಬಹುಜನ ಸಮಾಜಪಕ್ಷ ಮಾಧ್ಯಮಗಳ ಪ್ರಚಾ­ರವನ್ನು ನಂಬಿಕೊಳ್ಳಲೇ ಇಲ್ಲ. ಬದಲಿಗೆ ತನ್ನ ನಿಷ್ಠಾವಂತ ಕಾರ್ಯಕರ್ತರ ಮೂಲಕ ಜನ­ಸಂಪರ್ಕ­ವನ್ನೇ ಪ್ರಧಾನವಾಗಿ ನೆಚ್ಚಿಕೊಂಡು ಕೆಲಕಾಲ ಯಶಸ್ವಿಯೂ ಆಯಿತು. ಆದರೂ ಒಂದು ಕಾಲಕ್ಕೆ ಯಶಸ್ವಿಯಾದ ಮಾರ್ಗಗಳು ಮತ್ತೊಂದು ಕಾಲದಲ್ಲಿ ಕೈ ಕೊಟ್ಟಾಗ ರಾಜ­ಕೀಯ ಪಕ್ಷಗಳು ಹೊಸ ಮಾರ್ಗಗಳನ್ನು ಹುಡುಕಿ­ಕೊಳ್ಳಬೇಕಾಗುತ್ತದೆ.

ಆದರೆ ಚುನಾವಣೆಯ ನಂತರದ ಐದು ವರ್ಷ­ಗಳ ಕಾಲ ನಿರುದ್ಯೋಗಿಗಳಂತೆ ಅಡ್ಡಾಡುವ ಅನೇಕ ಪಕ್ಷಗಳ ನಾಯಕರಿಗೆ ಜನರ ನಿಜವಾದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಪಕ್ಷಗಳನ್ನು ಜೀವಂತವಾಗಿರಿಸಿಕೊಳ್ಳಬೇಕೆಂಬ ತುಡಿತ ಹಾಗೂ ಒಲವು ಕಡಿಮೆಯಾಗ­ತೊಡ­ಗಿದೆ. 5 ವರ್ಷಗಳ ನಂತರ ಪ್ರತ್ಯಕ್ಷವಾಗಿ ತಮ್ಮ ಐಡೆಂ­ಟಿಟಿ ಕಾರ್ಡ್ ಝಳಪಿಸುವ ರಾಜ­ಕೀಯ ಪಕ್ಷಗಳನ್ನು ಮತದಾರರು ಹೇಗೆ ನಂಬು­ತ್ತಾರೆ? ಅಥವಾ ಯಾಕೆ ನಂಬಬೇಕು? ಈ ಅಧಿ­ವೇಶನ­ದಲ್ಲಿ ಕೂಗಾಡಿ ಮತ್ತೊಂದು ಅಧಿವೇಶ­ನದ ತನಕ ಮೌನವಾಗುವ, ವಿರೋಧ ಪಕ್ಷದಲ್ಲಿ ಕೂತಿರುವು­ದ­ರಿಂದ ಮುಂದಿನ 5 ವರ್ಷ ಕಾಲ ವಿರೋ­ಧಿಸು­ವುದು ಬಿಟ್ಟರೆ ತಮಗೆ ಬೇರೇನೂ ಕೆಲಸ­ವಿಲ್ಲ ಎಂಬ ಮನಸ್ಥಿತಿಯಿಂದ ನಮ್ಮ ರಾಜ­ಕೀಯ ಪಕ್ಷಗಳು ಬಿಡಿಸಿಕೊಳ್ಳದ ಹೊರತು ಅವು ತಮ್ಮ ‘ಪಂಚ­ವಾರ್ಷಿಕ ಜಡತೆ’ಯಿಂದ ಹೊರ­ಬರಲಾರವು!

ಕೊನೆ ಟಿಪ್ಪಣಿ: ನಾನು ‘ವಿರೋಧ’ ಪಕ್ಷ ಅಲ್ಲ ಸ್ವಾಮಿ!
ರೈತನಾಯಕ ಪ್ರೊಫೆಸರ್ ನಂಜುಂಡಸ್ವಾಮಿ­ಯವರು ಶಾಸಕರಾಗಿದ್ದಾಗ ಒಂದು ದಿನ ವಿಧಾನ­ಸಭೆಯ ಸಭಾಧ್ಯಕ್ಷರು ಅವರನ್ನುದ್ದೇಶಿಸಿ ‘ಈಗ ವಿರೋಧ ಪಕ್ಷದವರು ಮಾತಾಡಬೇಕು’ ಎಂದರು. ಆಗ ನಂಜುಂಡಸ್ವಾಮಿಯವರು ‘ನಾನು ‘ವಿರೋಧ’ ಪಕ್ಷದವನಲ್ಲ ಸ್ವಾಮೀ! ಇಡೀ ಕರ್ನಾಟಕದ ಪರವಾಗಿ ಮಾತಾಡತಕ್ಕಂಥವನು!’ ಎಂದರು. ಈ ಮಾತಿನ ಧ್ವನಿಯನ್ನು ‘ವಿರೋಧ ಪಕ್ಷ’ದ ಸಾಲಿನಲ್ಲಿ ಕುಳಿತಿರುವ ಶಾಸಕರು ಸರಿ­ಯಾಗಿ ಅರಿತುಕೊಳ್ಳುವುದು ಒಳ್ಳೆಯದು. ರೈತ­ಸಂಘದ ಇಬ್ಬರು ಶಾಸಕರು ಇದ್ದ ಕಾಲ­ದಲ್ಲೂ ನಂಜುಂಡ ಸ್ವಾಮಿಯವರು ಸದನದಾ­ಚೆಗೆ ರೈತ­ಸಂಘಟನೆಯ ಕೆಲಸವನ್ನು ಬಿಡಲಿಲ್ಲ. ಶಾಸಕತ್ವದ ಅವಧಿ ಮುಗಿದ ನಂತರ ಇನ್ನಷ್ಟು ಹುರುಪಿನಿಂದ ಚಳವಳಿಯ ಕೆಲಸ ಮಾಡಿದರು. ಶಾಂತವೇರಿ ಗೋಪಾಲಗೌಡರ ಕಾಲದಲ್ಲಿ ಯಾರು ಮುಖ್ಯ­ಮಂತ್ರಿಯಾಗಿದ್ದಾರೆಂಬುದು ಈ ಕಾಲದ ಜನರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಶಾಂತವೇರಿ ಗೋಪಾಲ­ಗೌಡರು ಇನ್ನೂ ನಮ್ಮ ನೆನಪಿನಲ್ಲಿರುವುದು ಅವರು ಕರ್ನಾಟಕದ ಮುಖ್ಯ ಪ್ರಶ್ನೆಗಳನ್ನು ಎತ್ತಿ­ಕೊಂಡಿದ್ದರಿಂದ. ಇವೆಲ್ಲ ನಮ್ಮ ವಿರೋಧ ಪಕ್ಷ­ಗಳಿಗೆ ಸ್ಫೂರ್ತಿಯಾಗಬಹುದೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT