ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕು ಮತ್ತು ಬೆಸುಗೆಗಳ ನಡುವೆ

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

ಜೊನಾಥನ್ ಸ್ವಿಫ್ಟ್ ಬರೆದಿರುವ ‘ಗಲಿವರ್ಸ್ ಟ್ರಾವೆಲ್ಸ್’ ಎಂಬ ಪ್ರಖ್ಯಾತ ಪುಸ್ತಕವನ್ನು ನೀವು ಓದಿರಬಹುದು; ಅಥವಾ ಆ ಕತೆ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಆ ಕತೆಯಲ್ಲಿ ಲಿಲ್ಲಿಪುಟ್ಟರಿಗೂ ಬ್ಲೆಫುಸ್ಕು ರಾಜ್ಯದವರಿಗೂ ಸದಾ ಯುದ್ಧ ನಡೆಯುತ್ತಿರುತ್ತದೆ. ಈ ಯುದ್ಧಕ್ಕೆ ಕಾರಣ, ಮೊಟ್ಟೆಯನ್ನು ಸಣ್ಣ ತುದಿಯಿಂದ ಒಡೆಯಬೇಕೋ ಅಥವಾ ದೊಡ್ಡ ತುದಿಯಿಂದ ಒಡೆಯಬೇಕೋ ಎಂಬ ಬಗ್ಗೆ ಈ ಎರಡೂ ರಾಜ್ಯಗಳಿಗೆ ಇದ್ದ ಭಿನ್ನಾಭಿಪ್ರಾಯ! ಇದು ಸ್ವಿಫ್ಟ್ ತನ್ನ ಕಾಲದ ಯುದ್ಧಗಳನ್ನು ಗೇಲಿ ಮಾಡುವ ರೀತಿ.

ಪ್ರತಿದಿನ ಭಾರತದಲ್ಲಿ ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಜನ ಕಿತ್ತಾಡುತ್ತಾರೆ; ಸಂಘಟನೆಗಳು, ರಾಜಕೀಯ ಪಕ್ಷಗಳು ಒಡೆಯುತ್ತಿರುತ್ತವೆ. ಇವಕ್ಕೆಲ್ಲ ಕಾರಣಗಳನ್ನು ಹುಡುಕುತ್ತಾ ಹೋದರೆ, ಅವುಗಳಲ್ಲಿ ನೂರಕ್ಕೆ ಎಂಬತ್ತರಷ್ಟು ಪ್ರಸಂಗಗಳಲ್ಲಿ ಸ್ವಿಫ್ಟ್ ಹೇಳುವ ಅಸಂಗತ ಕಾರಣಗಳೇ ಕಾಣುತ್ತವೆ. ಆದರೆ ದೇಶದ ರಾಜಕೀಯ ಚರಿತ್ರೆಯಲ್ಲಿ ನಿಜಕ್ಕೂ ಗಂಭೀರ ಕಾರಣಗಳಿಗಾಗಿ ಬೇರ್ಪಟ್ಟ ಸಂಘಟನೆಗಳನ್ನು ಈ ಪಟ್ಟಿಗೆ ಸೇರಿಸುವುದು ತಪ್ಪಾಗುತ್ತದೆ.

ಅದೇನೇ ಇರಲಿ, ಭಾರತದಲ್ಲಿ ಯಾವ ಯಾವ ಕಾರಣಗಳಿಗೋ ಒಡೆದು ಹೋಗಿದ್ದ ರಾಜಕೀಯ ಪಕ್ಷಗಳು ಹಾಗೂ ಚಳವಳಿಗಳು ಇದ್ದಕ್ಕಿದ್ದಂತೆ ಏಕತೆಯ ಮಹತ್ವವನ್ನು ಅರಿತುಕೊಂಡಂತಿವೆ. ಮೊದಲನೆಯದು, ಕರ್ನಾಟಕದಲ್ಲಿ ಐದು ದಲಿತ ಸಂಘರ್ಷ ಸಮಿತಿಗಳು ಕೂಡಿ ರಚಿಸಿರುವ ‘ದಸಂಸ ಒಕ್ಕೂಟ’. ಎರಡನೆಯದು, ಸಂಯುಕ್ತ ಜನತಾದಳ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ, ರಾಷ್ಟ್ರೀಯ ಲೋಕದಳ ಸೇರಿ, ಪ್ರಾಯಶಃ ‘ಸಮಾಜವಾದಿ ಜನತಾ ದಳ’ ಎಂಬ ಹೆಸರು ಪಡೆಯಲಿರುವ ಜನತಾ ಪರಿವಾರದ ಹೊಸ ಪಕ್ಷ.

ಕಳೆದ ವಾರ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮೂಲಕ ಕರ್ನಾಟಕದಲ್ಲಿ ದಲಿತ ಚಳವಳಿಯ ಮತ್ತೊಂದು ಹೊಸ ಘಟ್ಟ ಸೃಷ್ಟಿಯಾದಂತಿತ್ತು. ವೇದಿಕೆಯ ಮೇಲೆ ಒಕ್ಕೂಟದ ಪರವಾಗಿ ಎರಡು ತಲೆಮಾರಿಗೆ ಸೇರಿದ, ಐದು ವಿವಿಧ ದಲಿತ ಸಂಘರ್ಷ ಸಮಿತಿಗಳ ನಾಯಕರಾದ ಎಂ.ಜಯಣ್ಣ, ಗುರುಪ್ರಸಾದ್ ಕೆರಗೋಡು, ಡಿ.ಜಿ.ಸಾಗರ್, ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ ಇದ್ದರು.

ವೇದಿಕೆಯ ಹಿನ್ನೆಲೆಯಲ್ಲಿದ್ದ ಬ್ಯಾನರಿನಲ್ಲಿ ಅಂಬೇಡ್ಕರ್, ಬುದ್ಧ, ಬಸವರ ಚಿತ್ರಗಳಿದ್ದವು. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಬ್ಯಾನರಿನ ಹಿಂದಿನಿಂದ ಗಾಂಧಿ ಕೂಡ ಮೆಲ್ಲಗೆ ಇಣುಕುತ್ತಿದ್ದರು. ವೇದಿಕೆ ಎದುರು ಮೂಲ ದಲಿತ ಸಂಘರ್ಷ ಸಮಿತಿಗೆ ತಳಹದಿ ಹಾಕಿದ್ದ ಡಾ. ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಅವರಿದ್ದರು. ಈ ಏಕತೆಯನ್ನು ಕಂಡು ಸಂಭ್ರಮಗೊಂಡಿದ್ದ ಕಾರ್ಯಕರ್ತರು,  ಚಳವಳಿಯ ಒಡನಾಡಿಗಳು ಸಭೆಯಲ್ಲಿ ಕಿಕ್ಕಿರಿದಿದ್ದರು. 

‘ದಸಂಸ ಒಕ್ಕೂಟ’ ತನ್ನ ಮೊದಲ ಸಭೆಯಲ್ಲಿ ಜಾತಿ ಜನಗಣತಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಸಲದ ಬಜೆಟ್ಟಿನಲ್ಲಿ ದಲಿತರಿಗೆ ಮೀಸಲಾಗಿರಿಸಿರುವ 16,536 ಕೋಟಿ ರೂಪಾಯಿಯ ವಿನಿಯೋಗ ಕುರಿತು ಚರ್ಚಿಸುತ್ತಿತ್ತು. ಕಳೆದ ಬಜೆಟ್ಟಿನಲ್ಲಿ ದಲಿತರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಕಾಯ್ದಿರಿಸಿದ್ದ  ₨ 15,832 ಕೋಟಿ ಈ ಸಲ ಇನ್ನಷ್ಟು ಹೆಚ್ಚಿದೆ.

ಈ ಹಿಂದೆ ಯಡಿಯೂರಪ್ಪನವರು ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಎಂಟು ಸಾವಿರ ಕೋಟಿ ಮೀಸಲಿಟ್ಟಿದ್ದು ಕೂಡ ಮಹತ್ವದ ಹೆಜ್ಜೆಯೇ ಆಗಿತ್ತು. ಈ ಸಲದ ಮೊತ್ತವಂತೂ ಈ ತನಕ  ದೇಶದ ಯಾವುದೇ ರಾಜ್ಯ ಕಂಡರಿಯದಷ್ಟು ದೊಡ್ಡ ಮೊತ್ತ. ಪ್ರೊ. ಜಾಫೆಟ್ ಹೇಳಿದಂತೆ ‘ಕೊನೆಯ ಪಕ್ಷ ಹತ್ತು ವರ್ಷ ಈ ಬಗೆಯ ನಿಗದಿತ ಹಣ ಸಾರ್ಥಕವಾಗಿ ವಿನಿಯೋಗವಾದರೆ ಕರ್ನಾಟಕದ ದಲಿತರ ಆರ್ಥಿಕ ಸ್ಥಿತಿಯ ಚಿತ್ರಣ ಸಂಪೂರ್ಣವಾಗಿ ಬದಲಾಗಬಲ್ಲದು.’

ಈ ಏಪ್ರಿಲ್ ತಿಂಗಳಿಂದ ಒಂದು ವರ್ಷ ನಿರಂತರವಾಗಿ ಈ ವೆಚ್ಚವನ್ನು ಅವಲೋಕನ ಮಾಡಬಲ್ಲ ಒಂದೇ ಜವಾಬ್ದಾರಿಯನ್ನು ಕೈಗೆತ್ತಿಕೊಂಡರೂ ಸಾಕು, ಈ ದಲಿತ ಒಕ್ಕೂಟದ ಅಸ್ತಿತ್ವ ಸಾರ್ಥಕವಾಗಬಲ್ಲದು. ಈ ಮೊತ್ತದ ಬಳಕೆಯ ಪ್ರಕ್ರಿಯೆಯನ್ನು ದಸಂಸ ಒಕ್ಕೂಟ ಹಾಗೂ ಇನ್ನಿತರ ದಲಿತ ಸಂಘಟನೆಗಳು ತಜ್ಞರ ಮಾರ್ಗದರ್ಶನದ ನೆರವು ಪಡೆದು ಅಧ್ಯಯನ ಮಾಡಬಲ್ಲವೆ?

ಯಾಕೆಂದರೆ, ಈ ಬಜೆಟ್ ಸಮಾಜ ಕಲ್ಯಾಣ ಮಂತ್ರಿಗಳು ಹಾಗೂ ಮುಖ್ಯಮಂತ್ರಿಯವರ ಬದ್ಧತೆಯ ಜೊತೆಗೇ ದಲಿತ ಚಳವಳಿಯ ಹಲವು ವರ್ಷಗಳ ಒತ್ತಾಯದ ಫಲವೂ ಹೌದು. ದಲಿತ ಸಂಘಟನೆಗಳು ನಿರಂತರವಾಗಿ ಮಂಡಿಸುತ್ತಾ ಬಂದಿರುವ ಬಜೆಟ್ ಪೂರ್ವದ ಬೇಡಿಕೆಗಳು ಹಾಗೂ ಬಜೆಟ್ ಮಂಡನೆಯ ನಂತರದ ವಿಶ್ಲೇಷಣೆಗಳು, ಬೆಂಗಳೂರಿನ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ಯ ‘ಸಾಮಾಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರ’ ನಡೆಸಿದ ಬಜೆಟ್ ಪೂರ್ವ ಚಿಂತನಾ ಸಭೆಗಳು ಕೂಡ ದಲಿತ ವರ್ಗಗಳು ಈ ಬಜೆಟ್ ಪಡೆಯುವಲ್ಲಿ ನೆರವಾಗಿವೆ. ಚಳವಳಿಗಳ ಬಗ್ಗೆ ಸಿನಿಕರಾಗಿರುವವರು ದಲಿತ ಚಳವಳಿಯ ಹಾಗೂ ಚಳವಳಿಯ ಸಂಗಾತಿಗಳ ಈ ಬಗೆಯ ಕೆಲಸಗಳನ್ನು ಸರಿಯಾಗಿ ಗಮನಿಸಬೇಕು.

ಇನ್ನು ಈಗ ಶುರುವಾಗಿರುವ ಜನತಾ ಪಕ್ಷಗಳ ಒಗ್ಗೂಡುವಿಕೆಯ ಪ್ರಕ್ರಿಯೆಯನ್ನು ನೋಡೋಣ. ದೇಶದಲ್ಲಿ ಹಬ್ಬುತ್ತಿರುವ ಕೋಮುವಾದ ತಡೆಯುವುದರ ಜೊತೆಗೇ, ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳು ರಾಜಕೀಯ ನೆಲೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೂಡ ಈ ಏಕತೆಯ ರಾಜಕಾರಣ ಅನಿವಾರ್ಯ. ಲಾಲೂ ಪ್ರಸಾದ್ ಹಾಗೂ ನಿತೀಶ್ ಒಟ್ಟಾಗಿ ಹೊರಟರೆ ಬಿಹಾರದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯನ್ನೂ ಸಮೀಕ್ಷೆಗಳು ಸೂಚಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕುಸಿಯುತ್ತಿರುವ ಸಮಾಜವಾದಿ ಪಕ್ಷಕ್ಕೂ, ಕರ್ನಾಟಕದ ಜನತಾದಳಕ್ಕೂ ಇದು ನೆರವಾಗಬಲ್ಲದು.

ಎಲ್ಲಕ್ಕಿಂತ ಮುಖ್ಯವಾಗಿ, ಅಷ್ಟಿಷ್ಟು ಸಮಾಜವಾದಿ ಹಿನ್ನೆಲೆಯ, ಕೊಂಚವಾದರೂ ಪ್ರಗತಿಪರ ಧೋರಣೆಯ ಸೆಂಟ್ರಿಸ್ಟ್ ಪಕ್ಷಗಳು ದೇಶಕ್ಕೆ ಅತ್ಯಗತ್ಯ. ಆದರೆ ಈ ಪಕ್ಷಗಳ ವಿಲೀನಕ್ಕೆ ತಕ್ಕ ತಾತ್ವಿಕತೆ, ಹೊಸ ಕಾರ್ಯಕ್ರಮಗಳಿಲ್ಲದಿದ್ದರೆ  ಜನರಲ್ಲಿ ಹೊಸ ಉತ್ಸಾಹ ಹುಟ್ಟಿಸಲಾರದು. ಈ ಪಕ್ಷಗಳು ಬಳಸುತ್ತಿರುವ ಭಾಷೆ ಕೂಡ ಹಳೆಯದಾಗಿರುವುದರ ಜೊತೆಗೆ ಹೊಸ ತಲೆಮಾರಿನ ಧೋರಣೆಗಳನ್ನು ಇವು ಸರಿಯಾಗಿ ಗ್ರಹಿಸಿದಂತಿಲ್ಲ; ಹೊಸ ತಲೆಮಾರಿಗೆ ಬೇಕಾದ ನುಡಿಗಟ್ಟನ್ನೂ ಈ ಪಕ್ಷಗಳು ರೂಪಿಸಿಕೊಂಡಂತಿಲ್ಲ.

ರಾಜ್ಯ ಮಟ್ಟದ ಅಧಿಕಾರದ ಬಗೆಗೇ ಹೆಚ್ಚು ಯೋಚಿಸುತ್ತಿರುವ ಈ ಪಕ್ಷಗಳ ಸ್ಥಳೀಯ ರಾಜಕೀಯ ಒತ್ತಡಗಳೇನೇ ಇರಲಿ, ಇವು ಬಹುಜನ ಸಮಾಜ ಪಕ್ಷವನ್ನು ತಮ್ಮ ಒಕ್ಕೂಟದಿಂದ ತಾತ್ವಿಕವಾಗಿ ಹೊರಗಿಡುವುದು ದೇಶದ ಭವಿಷ್ಯದ ರಾಜಕಾರಣದ  ದೃಷ್ಟಿಯಿಂದ ತಪ್ಪಾಗುತ್ತದೆ. ಮುಲಾಯಂ, ಲಾಲೂ, ಶರದ್ ಯಾದವ್, ನಿತೀಶ್ ಈ ಎಲ್ಲರೂ ಗುರುವೆಂದು ಒಪ್ಪಿಕೊಂಡಿರುವ ಲೋಹಿಯಾ ಇಂದು ಇದ್ದಿದ್ದರೆ ಅವರು ಮಾಯಾವತಿಯವರ ನೇತೃತ್ವದಲ್ಲಿ ಈ ಎಲ್ಲ ಪಕ್ಷಗಳೂ ಒಂದು ಒಕ್ಕೂಟ ರಚಿಸಿ ಲೋಕಸಭಾ ಚುನಾವಣೆಯನ್ನು ಎದುರಿಸುವಂತೆ ಪ್ರೇರೇಪಿಸುತ್ತಿದ್ದರೆಂದು ನನ್ನ ಊಹೆ; ದಲಿತ ಮುಖ್ಯಮಂತ್ರಿಯೊಬ್ಬರನ್ನು ಕೆಳಗಿಳಿಸಿ ಮತ್ತೆ ಅಧಿಕಾರ ಹಿಡಿದಿರುವ ನಿತೀಶ್ ಕುಮಾರ್ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಇರುವ ಮುಖ್ಯ ದಾರಿಯೆಂದರೆ ತಮ್ಮ ಒಕ್ಕೂಟದಲ್ಲಿ ಮಾಯಾವತಿಯವರಿಗೆ ಮುಖ್ಯ ಹೊಣೆಯೊಂದನ್ನು ಕೊಟ್ಟು ಮುಂದಿನ ಲೋಕಸಭಾ ಚುನಾವಣೆ ಎದುರಿಸುವುದು. ಇದು ವಿರೋಧ ಪಕ್ಷಗಳ ಅಖಿಲ ಭಾರತ ಮಟ್ಟದ ರಾಜಕೀಯದ ದೃಷ್ಟಿಯಿಂದಲೂ ಲಾಭಕರ. ಅದೇ ವೇಳೆಗೆ ಈ ಒಗ್ಗೂಡುವಿಕೆಯ ಸಂದರ್ಭದಲ್ಲಿ ತಮ್ಮ ಬಹುಕಾಲದ ಮಿತ್ರರಾದ ಕಮ್ಯುನಿಸ್ಟ್ ಪಕ್ಷಗಳನ್ನು  ದೂರವಿಡುವುದು ಆರೋಗ್ಯಕರವಲ್ಲ.

ಚರಿತ್ರೆಯಲ್ಲಿ ಯಾವ ಯಾವ ಕಾರಣಗಳಿಗೋ ಬೇರಾಗಿರುವ ಕಮ್ಯುನಿಸ್ಟ್ ಪಕ್ಷಗಳು ಒಟ್ಟಿಗೇ ಬರಬಲ್ಲವೆ? ಈಗಾಗಲೇ ಸರ್ಕಾರ ನಡೆಸುವಲ್ಲಿ ಒಟ್ಟಿಗೇ ಸೇರಿರುವ ಕಮ್ಯುನಿಸ್ಟ್ ಪಕ್ಷಗಳು ಇನ್ನೂ ದೊಡ್ಡ ಮಟ್ಟದಲ್ಲಿ ದೇಶದ ರಾಜಕಾರಣದಲ್ಲಿ ಇರಬೇಕಾದ ಅಗತ್ಯವಿದೆ. ಯಾಕೆಂದರೆ ಅನೇಕ ಬಗೆಯ ಆರ್ಥಿಕ ವಿಚಾರಗಳಲ್ಲಿ ಕಮ್ಯುನಿಸ್ಟರಿಗೆ ಇರುವ ಸ್ಪಷ್ಟತೆ, ಅಧ್ಯಯನದ ಬಲ, ವಿಶ್ಲೇಷಣೆಯ ಆಳ ಬೇರಾವುದೇ ಪಕ್ಷಗಳ ಚಿಂತಕರಲ್ಲಿಲ್ಲ. ಆದರೆ ಕಮ್ಯುನಿಸ್ಟ್ ಪಕ್ಷಗಳು ಕೂಡ ಹೊಸ ನುಡಿಗಟ್ಟು, ಹೊಸ ವಲಯಗಳನ್ನು ರೂಪಿಸಿಕೊಳ್ಳದಿದ್ದರೆ ಮರುಹುಟ್ಟು ಪಡೆಯಲಾರವು.

ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಒಗ್ಗೂಡುತ್ತಿರುವ ಈ ಕಾಲದಲ್ಲಿ ಮತ್ತೆ ಚರಿತ್ರೆಯ ಹಳೆಯ ಪ್ರಶ್ನೆ ಎದುರಾಗುತ್ತದೆ. ಇವರೆಲ್ಲ ಮತ್ತೆ ಹೋಳಾಗುವುದಿಲ್ಲವೆ? ಅದನ್ನು ತಪ್ಪಿಸಲು ಕೆಲವು ಪ್ರಾಕ್ಟಿಕಲ್ ಉತ್ತರಗಳಿವೆ. ಉದಾಹರಣೆಗೆ, ದಲಿತ ಸಂಘಟನೆಗಳು ಪೂರ್ಣ ವಿಲೀನದ ಬಗ್ಗೆ ನಿರ್ಧಾರ ಮಾಡುವವರೆಗೂ, ತಂತಮ್ಮ ಸಂಘಟನೆಗಳ ಸ್ವತಂತ್ರ ಅಸ್ತಿತ್ವಗಳನ್ನು ಉಳಿಸಿಕೊಂಡೇ ಮುನ್ನಡೆಯುವುದು ಒಳ್ಳೆಯದು. ಹಿಂದೊಮ್ಮೆ ಬಹುಜನ ಸಮಾಜ ಪಕ್ಷದ ಜೊತೆ ಹೋಗಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಯ ಮೇಲೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಪ್ರಶ್ನೆಯ ಮೇಲೆ, ಕೆಲವು ಸಲ ವ್ಯಕ್ತಿಗತ ಕಾರಣಗಳಿಂದ ಈ ಸಂಘಟನೆಗಳು ಭಿನ್ನ ಹಾದಿ ಹಿಡಿದವು.

ಆದರೂ ಈ ಎಲ್ಲರಿಗೂ ಅಂಬೇಡ್ಕರ್ ವಾದವೇ ಮೂಲ ಸಿದ್ಧಾಂತ. ಆದ್ದರಿಂದ ಕುಟುಂಬಗಳ ಒಡಕು ಹಾಗೂ ಒಗ್ಗೂಡುವಿಕೆಯಂತೆ ಇವನ್ನೆಲ್ಲ ನೋಡದಿದ್ದರೆ ಈ ಬಗ್ಗೆ ಸಿನಿಕರಾಗುತ್ತಲೇ ಇರುತ್ತೇವೆ. ಹಾಗಾದರೆ ಒಡಕಿನ ಕಾಯಿಲೆ ಹಬ್ಬಿದ ಹಾಗೆ ಈ ಏಕತೆಯ ಆರೋಗ್ಯವೂ ಹಬ್ಬಬಹುದಲ್ಲವೆ? ಒಡೆದ ರೈತ ಬಣಗಳು ಕೂಡ ರೈತರ ಭೂಮಿಯ ಹಕ್ಕನ್ನು ರಕ್ಷಿಸಿಕೊಳ್ಳಲೇಬೇಕಾದ ಈ ನಿರ್ಣಾಯಕ ಹಂತದಲ್ಲಿ ಒಂದಾಗಬಹುದೇ? ಇನ್ನುಳಿದ ದಲಿತ ಸಂಘಟನೆಗಳೂ ಒಂದೆಡೆ ಬರಬಹುದೇ? ಈ ಎಲ್ಲ ಸಂಘಟನೆಗಳು ಒಂದು ಸಮಾನ ವೇದಿಕೆಯಿಂದ ವರ್ಷಕ್ಕೆ ಆರು ನಿರ್ದಿಷ್ಟ ಕಾರ್ಯಕ್ರಮಗಳನ್ನು ಮಾಡಲಿ. ಆಗ ದೇಶದ ತುಂಬ ಹಬ್ಬುವ ಸಂದೇಶವೇ ಬೇರೆ ಥರ ಇರಬಲ್ಲದು.

ಈ ಅಂಕಣ ಮುಗಿಸುವ ವೇಳೆಗೆ, ಆಮ್ ಆದ್ಮಿ ಪಕ್ಷದ ಭಿನ್ನಮತೀಯರ ಸಭೆ ದೆಹಲಿಯಲ್ಲಿ ನಡೆಯುತ್ತಿತ್ತು. ಅಲ್ಲಿ ಕೂಡ ಆಮ್ ಆದ್ಮಿ ಪಕ್ಷ ಒಂದಾಗಿರಬೇಕೆಂಬ ದನಿ ಮತ್ತೆ ಮತ್ತೆ ಕೇಳಿ ಬರುತ್ತಿದೆಯೆಂದು ಅಲ್ಲಿದ್ದ ಮಿತ್ರರೊಬ್ಬರು ಫೋನಿನಲ್ಲಿ ಹೇಳುತ್ತಿದ್ದರು. ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಕೇಜ್ರಿವಾಲರ ಮನೆಗೆ ಹೋಗಿ ಏಕತೆಯ ಸಂದೇಶ ತಲುಪಿಸಲಿರುವ ಮಾತೂ ಕೇಳಿ ಬಂತು. ಅಂಬೇಡ್ಕರ್ ಜನ್ಮದಿನದಂದು ಏಕತೆಯ ಆರೋಗ್ಯ ಎಲ್ಲೆಡೆ ಹಬ್ಬುತ್ತಿದೆಎನ್ನಿಸಿ ಖುಷಿಯಾಗತೊಡಗಿತು…

ಕೊನೆ ಟಿಪ್ಪಣಿ: ಸಂಘಟನೆಗಳಿಗೆ ಬೇಕು ಕಾವ್ಯದ ಒಳನೋಟ ಗೋಪಾಲಕೃಷ್ಣ ಅಡಿಗರ ‘ಇದು ಬಾಳು!’ ಪದ್ಯದಲ್ಲಿ ಎರಡು ತಾತ್ವಿಕ ಒಳನೋಟಗಳು ಬರುತ್ತವೆ: 

ಕೂಡಲಾರದೆದೆಯಾಳದಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿನ್ನತೆಯ ವಿಕಟಹಾಸ್ಯ

ಮೊದಲ ಸಾಲಿನಲ್ಲಿ ನಾವು ಎಂದೂ ಕಳೆದುಕೊಳ್ಳಬಾರದ ನಿರೀಕ್ಷೆಯಿದೆ; ಎರಡನೆಯ ಸಾಲಿನಲ್ಲಿ ಯಾವುದು ಬೇಕಾದರೂ ಬಿರುಕು ಬಿಡಬಹುದು ಎಂಬ ಕಠೋರ ವಾಸ್ತವವಿದೆ. ಕಾವ್ಯದ ಸೂಕ್ಷ್ಮ ಜ್ಞಾನ ಗ್ರಹಿಸುವುದನ್ನು ಕೈಬಿಟ್ಟಿರುವ ಚಳವಳಿಗಳು ಹಾಗೂ ರಾಜಕೀಯ ಪಕ್ಷಗಳು ಬಿರುಕು-ಬೆಸುಗೆಗಳ ಎರಡೂ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಮುನ್ನಡೆಯುತ್ತಿರಬೇಕಾಗುತ್ತದೆ. ಜೊತೆಗೇ ಸಂಘಟನೆಗಳ ಒಕ್ಕೂಟಗಳು ಲಿಖಿತ ಅಥವಾ ಅಲಿಖಿತ ನೀತಿಸಂಹಿತೆಗಳನ್ನು ರೂಢಿಸಿಕೊಳ್ಳದಿದ್ದರೆ ಅವು ನಾಯಕರ ಅಹಮ್ಮಿಗೋ, ಸಿಲ್ಲಿ ಕಾರಣಗಳಿಗೋ ಒಡೆಯುತ್ತಿರುತ್ತವೆ.

ಸಂಘಟನೆಗಳಲ್ಲಿ ಬಿಕ್ಕಟ್ಟು ಹುಟ್ಟುವ ಅಂಶಗಳ ಬಗ್ಗೆ ಮುಕ್ತವಾಗಿ ಚಿಂತಿಸುತ್ತಿರಬೇಕಾಗುತ್ತದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಕಾರಿಕೊಳ್ಳುವುದನ್ನು ಬಿಡಬೇಕಾಗುತ್ತದೆ. ಜೊತೆಗೆ, ತಾವು ಯಾರನ್ನು ಪ್ರತಿನಿಧಿಸುತ್ತಿದ್ದೇವೆ ಎಂದುಕೊಂಡಿದ್ದೇವೆಯೋ ಆ ವರ್ಗಗಳ ಅಭಿಪ್ರಾಯಗಳನ್ನು, ಹೊಸ ತಲೆಮಾರಿನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕಾಗುತ್ತದೆ.
ಆದರೆ ತಾವು ಪ್ರತಿನಿಧಿಸುವ ಜನರ ಮಾತನ್ನು ಸಂಘಟನೆಗಳು ಎಂದಾದರೂ ಕೇಳಿಸಿಕೊಂಡಿವೆಯೇ?
editpage feedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT