ಗಡಿನಾಡ ಕುವರಿಯ ಕನ್ನಡ ಪ್ರೇಮ..!

7
‘ಸಂಶೋಧನೆಯ ಬಳಿಕ ಕರುನಾಡಿನಲ್ಲೇ ಕನ್ನಡಮ್ಮನ ಸೇವೆಗೈಯುವಾಸೆ’

ಗಡಿನಾಡ ಕುವರಿಯ ಕನ್ನಡ ಪ್ರೇಮ..!

Published:
Updated:
Prajavani

ವಿಜಯಪುರ: ‘ನಾನು ಕನ್ನಡ ಭಾಷಾಭಿಮಾನಿ. ಕನ್ನಡ ಮಾಧ್ಯಮದ ವಿದ್ಯಾರ್ಥಿನಿ. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರೆಗೂ ಕನ್ನಡ ಮಾಧ್ಯಮದಲ್ಲೇ ಕಲಿತವಳು...’

‘ಚಿಕ್ಕಂದಿನಿಂದಿಲೂ ನನ್ನ ತಾಯ್ನುಡಿ ಕನ್ನಡದ ಬಗ್ಗೆ ವಿಶೇಷ ಗೌರವಾದರ. ಅದೂವೇ ಇಲ್ಲಿವರೆಗೂ ನನ್ನನ್ನು ಕೈ ಹಿಡಿದು ಕರೆ ತಂದಿದೆ. ಇನ್ಮುಂದೆ ಕರುನಾಡಿನಲ್ಲೇ ಕನ್ನಡಮ್ಮನ ಸೇವೆಗೈಯುವ ಕನಸು ಕಟ್ಟಿಕೊಂಡಿರುವೆ..’

ನೆರೆಯ ಮಹಾರಾಷ್ಟ್ರದಲ್ಲಿ ಕನ್ನಡದ ಪ್ರಭಾವ ದಟ್ಟೈಸಿರುವ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಉಮದಿ ಭಾಗದ ಬೆಳ್ಳುಂಡಗಿಯ ಸುಧಾರಾಣಿ ಶಿವಪ್ಪ ಮಣೂರ ಮನದಾಳದ ಮಾತುಗಳಿವು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವದಲ್ಲಿ ಬುಧವಾರ ಎಂಎ ಕನ್ನಡ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ಬಳಿಕ ‘ಪ್ರಜಾವಾಣಿ’ ಜತೆ ಗಡಿನಾಡಿನ ಕನ್ನಡದ ಕುವರಿ ಮಾತನಾಡಿದರು.

‘ಬೆಳ್ಳುಂಡಗಿ ನಮ್ಮೂರು. ನಮ್ಮದು ರೈತ ಕುಟುಂಬ. ನಾವು ನಾಲ್ವರು ಸಹೋದರಿಯರು. ನನ್ನ ಇಬ್ಬರು ಹಿರಿಯ ಸಹೋದರಿಯರು ಎಸ್ಸೆಸ್ಸೆಲ್ಸಿವರೆಗೂ ಓದಿ ಲಗ್ನವಾಗಿದ್ದಾರೆ. ನಮ್ಮ ಕುಟುಂಬದಲ್ಲೇ ಹೆಚ್ಚು ಓದಿದವಳು ನಾನೊಬ್ಬಳೇ. ಪಿಯುಸಿ, ಪದವಿಯಲ್ಲೂ ರ‍್ಯಾಂಕ್ ಗಳಿಸಿದ್ದೆ. ಕಿರಿಯ ಸಹೋದರಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ.

ಒಂದು ಎಕರೆ ಭೂಮಿ ಹೊಂದಿರುವ ನನ್ನಪ್ಪ ಓದಿಗೆ ಎಲ್ಲೂ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ. ಈಗಾಗಲೇ ಪಿಎಚ್‌.ಡಿಗೆ ನೋಂದಣಿ ಮಾಡಿಸಿರುವೆ. ವಿಷಯ ಆಯ್ಕೆ ಮಾಡಿಕೊಂಡು, ಪದವಿ ಪಡೆದ ಬಳಿಕ ಕರುನಾಡಿನಲ್ಲೇ ಕನ್ನಡಮ್ಮನ ಸೇವೆಗೈಯಬೇಕು ಎಂಬ ಉತ್ಕಟ ಬಯಕೆ ನನ್ನದಾಗಿದೆ’ ಎಂದು ಸುಧಾರಾಣಿ ತಮ್ಮ ಭವಿಷ್ಯದ ಕನಸು ಹಂಚಿಕೊಂಡರು.

ಅಪ್ಪನ ಆಸೆ ಪೂರೈಸಿದೆ:

‘ನಮ್ಮಪ್ಪ ಇದೇ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಭಾಗದಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಮಗಳು ನಮ್ಮ ವಿ.ವಿ.ಯಲ್ಲೇ ಓದಬೇಕು. ಮೊದಲ ರ‍್ಯಾಂಕ್ ಗಳಿಸಬೇಕು ಎಂಬ ಕನಸು ಕಂಡಿದ್ದರು.

ಅಪ್ಪನ ಕನಸು ನನಸು ಮಾಡಲಿಕ್ಕಾಗಿಯೇ ರಾಮದುರ್ಗದಿಂದ ಇಲ್ಲಿಗೆ ಬಂದೆ. ಇದೀಗ ನಮ್ಮಪ್ಪನ ಆಸೆ ಈಡೇರಿಸಿದ್ದಕ್ಕೆ ತುಂಬಾ ಖುಷಿಯಾಗಿದೆ. ಸಂಬಂಧಿ ಎಸ್‌.ಎಂ.ಜಾಮದಾರ ಐಎಎಸ್‌ ಅಧಿಕಾರಿಯಾಗಿ ಹೆಸರು ಮಾಡಿದವರು. ನಾನು ಕೆಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿರುವೆ. ಅದರ ಸಾಕಾರಕ್ಕಾಗಿಯೇ ಶ್ರಮಿಸುವೆ’ ಎಂದು ಅರ್ಥಶಾಸ್ತ್ರ ಎಂಎ ವಿಭಾಗದ ಮೂರು ಚಿನ್ನದ ಪದಕಗಳನ್ನು ತನ್ನ ಕೊರಳಿಗೇರಿಸಿಕೊಂಡ ಗೀತಾ ಜಾಮದಾರ ತಿಳಿಸಿದರು.

ಜೀವನದಲ್ಲೇ ಮೊದಲು...

‘ರ‍್ಯಾಂಕ್ ನನ್ನ ಪಾಲಿಗೆ ಕನಸಾಗಿತ್ತು. ಪಿಯುಸಿ, ಪದವಿಯಲ್ಲಿ ಯಶಸ್ವಿ ಫಲಿತಾಂಶ ಪಡೆದಿದ್ದರೂ; ರ‍್ಯಾಂಕ್ ಸನಿಹ ಸುಳಿದಿರಲಿಲ್ಲ. ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಗೆ ದಾಖಲಾದ ಬಳಿಕ ನಡೆದ ಘಟಿಕೋತ್ಸವದಲ್ಲೇ ನಿರ್ಧರಿಸಿದ್ದೆ. ನಾನು ಸಹ ರ‍್ಯಾಂಕ್ ವಿಜೇತೆಯಾಗಬೇಕು ಎಂದು ಸಂಕಲ್ಪ ಮಾಡಿದೆ. ಇದಕ್ಕಾಗಿ ಶ್ರಮಿಸಿದೆ. ಸಂಭ್ರಮದ ಕ್ಷಣಗಳು ಇದೀಗ ನನ್ನದಾಗಿವೆ’ ಎಂದು ಮೋರಟಗಿಯ ಚಂದ್ರಕಲಾ ತಡಕಲ್‌ ಸಂತಸ ವ್ಯಕ್ತಪಡಿಸಿದರು.

‘ನಮ್ಮದು ಮಧ್ಯಮ ವರ್ಗದ ಕುಟುಂಬ. ತಂದೆ ದಿನಸಿ ವ್ಯಾಪಾರಿ. ನಾನು ಬೆಳೆದಿದ್ದು, ಇರೋದು ಅಜ್ಜಿ ಮನೆಯಲ್ಲೇ. ಜೀವನದಲ್ಲಿ ಮೊದಲ ಬಾರಿಗೆ ರ‍್ಯಾಂಕ್ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾಲ್ಕು ಚಿನ್ನದ ಪದಕ ಸಂತಸವನ್ನು ಇಮ್ಮಡಿಗೊಳಿಸಿವೆ. ಪಿಎಚ್‌.ಡಿ ಪದವಿ ಪಡೆದ ಬಳಿಕ ಉಪನ್ಯಾಸಕಿಯಾಗಬೇಕು ಎಂಬ ಕನಸು ಕಟ್ಟಿಕೊಂಡಿರುವೆ’ ಎಂದು ತಡಕಲ್ ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !