ಕರಾವಳಿ ರುಚಿಯ ‘ಮಂಗಳೂರ್‌ ಕಿಚನ್‌ ’

7

ಕರಾವಳಿ ರುಚಿಯ ‘ಮಂಗಳೂರ್‌ ಕಿಚನ್‌ ’

Published:
Updated:
Prajavani

ಮಂಗಳೂರ್‌ ಕಿಚನ್‌’, ಹೆಸರು ಕೇಳುತ್ತಿದ್ದಂತೆ ಕರಾವಳಿಯ ವಿಶೇಷ ಖಾದ್ಯಗಳ ನೆನಪಾಗುತ್ತದೆ. ಅದರಲ್ಲೂ ಬಗೆ ಬಗೆಯ ಮೀನಿನ ಖಾದ್ಯಗಳ ನೆನಪಾಗದೇ ಇರದು. ಮಂಗಳೂರಿನ ರವಿತೇಜ ಶೆಟ್ಟಿ ಅವರು ಈ ಹೋಟೆಲಿನ ಮಾಲೀಕರು. ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಬೆಂಗಳೂರಿಗೆ ಬಂದ ಅವರು ಆರಂಭದಲ್ಲಿ ಹಲವು ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ, ತಾನೂ ಸ್ವಂತದ್ದೊಂದು ಹೋಟೆಲು ನಡೆಸುವ ಕನಸು ಕಂಡವರು.

ಹೋಟೆಲು ಶುರು ಮಾಡಬೇಕೆಂದರೆ, ಎಲ್ಲ ಬಗೆಯ ಅಡುಗೆಗಳನ್ನೂ ಮಾಡುವುದು ಕಲಿತಿರಬೇಕು ಎಂದು ತನಗೆ ತಾನೇ ಅಂದುಕೊಂಡು ರವಿತೇಜ, ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ರುಚಿಕಟ್ಟಾಗಿ ತಯಾರಿಸುವುದನ್ನು ಕಲಿತವರು. ಗೆಳೆಯರೊಂದಿಗೆ ಪಾಲುದಾರಿಕೆಯಲ್ಲಿ ಹೋಟೆಲ್ ಆರಂಭಿಸಿದರು. ಈಗಲೂ ಮೂರು ಹೋಟೆಲುಗಳ ಪಾಲುದಾರರು. ಇದರ ನಡುವೆಯೇ ಸ್ವಂತ ಹೋಟೆಲಿನ ಕನಸು ನನಸಾಗಿದೆ. ನಾಗರಬಾಇವಿ ಮುಖ್ಯರಸ್ತೆಯಲ್ಲಿರುವ ಗೋವಿಂದರಾಜನಗರದ ಭಾರತಿ ಆಸ್ಪತ್ರೆಯ ಎದುರು ‘ಮಂಗಳೂರ್‌ ಕಿಚನ್‌’ ಎಂಬ ಸುಸಜ್ಜಿತ ಹೋಟೆಲು ಆರಂಭಿಸಿ ಏಳು ತಿಂಗಳಾಗಿದೆ. ಆದರೆ, ಇಷ್ಟು ಚಿಕ್ಕ ಅವಧಿಯಲ್ಲಿಯೇ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.

ಕರಾವಳಿಯ ಮೀನಿನ ಖಾದ್ಯದ ಜೊತೆಗೆ ಹೈದರಾಬಾದ್‌ ದಮ್ ಬಿರಿಯಾನಿ, ಆಂಧ್ರ ಶೈಲಿಯ ಖಾದ್ಯ, ತಂದೂರಿ, ಚೈನೀಸ್‌, ಅರೇಬಿಯನ್‌, ಉತ್ತರಭಾರತ ಶೈಲಿಯ ತಿನಿಸುಗಳೂ ಇಲ್ಲಿ ಲಭ್ಯ. ರುಚಿಕರವಾದ ವಿವಿಧ ಶೈಲಿಯ ಸಸ್ಯಾಹಾರಿ ತಿನಿಸುಗಳೂ ಇಲ್ಲಿ ದೊರೆಯುತ್ತವೆ. ಹೀಗಾಗಿ ಎಲ್ಲ ವಯೋಮಾನ, ಎಲ್ಲ ಪ್ರದೇಶದವರು ಮತ್ತು ಬೇರೆ ಬೇರೆ ಶೈಲಿಯ ಅಡುಗೆ ಇಷ್ಟಪಡುವವರಿಗೆ ‘ಮಂಗಳೂರು ಕಿಚನ್‌’ ಅಚ್ಚುಮೆಚ್ಚು. ಆನ್‌ಲೈನ್‌ನಲ್ಲಿ ಆಹಾರ ಪೂರೈಸುವ ಸ್ವಿಗ್ಗಿ, ಜುಮಾಟೊ ಮೂಲಕ ಮಂಗಳೂರು ಕಿಚನ್‌ನ ವಿಶೇಷ ಅಡುಗೆಗಳು ಹೆಚ್ಚು ಜನರಿಗೆ ತಲುಪುತ್ತಿವೆ.

ಕರಾವಳಿ ವಿಶೇಷ: ಕರಾವಳಿ ವಿಶೇಷಗಳಲ್ಲಿ ಸಿಗಡಿ ಸುಕ್ಕ, ಏಡಿ ಸುಕ್ಕದ ಜೊತೆಗೆ ತೆಳುವಾದ ನೀರುದೋಸೆ ತಿನ್ನುತ್ತಿದ್ದರೆ ಅದೊಂದು ಪರಮ ಸುಖದ ಅನುಭವ. ಮಂಗಳೂರು ಶೈಲಿಯ ಮೀನಿನ ಸಾರು, ಕೆಂಪಕ್ಕಿ ಅನ್ನದ ಜೊತೆ ಉಣ್ಣಬೇಕು. ಇದರ ಎದುರು ಯಾವ ಬಿರಿಯಾನಿಯೂ ಸಮವಲ್ಲ.

ಕರಾವಳಿಯ ಆಹಾರ ತಯಾರಿಕಾ ವಿಧಾನವೇ ಭಿನ್ನ. ಸಿದ್ಧ ಮಸಾಲೆ ಪುಡಿಗಳನ್ನು ಆಲ್ಲಿ ಬಳಸುವುದಿಲ್ಲ. ಪ್ರತಿ ಸಾಂಬಾರು ತಯಾರಿಸುವಾಗ ಒಳಮೆಣಸು, ಕೊತ್ತಂಬರಿ, ಜೀರಿಗೆ ಸೇರಿದಂತೆ ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದು, ನಯವಾಗಿ ರುಬ್ಬಿ ಮಸಾಲೆ ಸಿದ್ಧಪಡಿಸಲಾಗುತ್ತದೆ. ಮಂಗಳೂರು ಶೈಲಿಯ ಖಾದ್ಯಗಳಿಗೆ ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ. ಹಾಗೆ ಮಾಡಿದರೆ ಮಾತ್ರ ಕರಾವಳಿಯ ಸಾಂಪ್ರದಾಯಕ ರುಚಿ ಸಿಗುತ್ತದೆ. ಮಂಗಳೂರ್‌ ಕಿಚನ್‌ನಲ್ಲಿ ಇದೇ ರೀತಿಯಲ್ಲಿ ಮಸಾಲೆ ಸಿದ್ಧಪಡಿಸಲಾಗುತ್ತದೆ. ಉಳಿದಂತೆ ಚೈನೀಸ್‌, ಆಂಧ್ರ, ತಂದೂರಿ, ಅರೇಬಿಯನ್‌ ಖಾದ್ಯಗಳನ್ನು ತಯಾರಿಸುವ ನುರಿತ ಬಾಣಸಿಗರಿದ್ದಾರೆ.

ಕೋರಿ ರೊಟ್ಟಿ: ಮಂಗಳೂರಿನ ಒಣ ಅಕ್ಕಿರೊಟ್ಟಿಯನ್ನು, ತೆಂಗಿನಕಾಯಿಯ ಹಾಲು ಹಾಕಿ ತಯಾರಿಸಿದ ತೆಳು ಕೋಳಿ ಸಾರಿನಲ್ಲಿ ನೆನೆಸಿ ತಿಂದರೆ ಅದರ ರುಚಿಯನ್ನು ಬೇರೆ ಯಾವ ಖಾದ್ಯಗಳ ಜೊತೆಗೂ ಹೋಲಿಸಲು ಸಾಧ್ಯವಿಲ್ಲ. ‘ಬೆಂಗಳೂರಿನ ಜನಕ್ಕೆ ಇದೆಲ್ಲ ಹೊಸದು. ಹಾಗಾಗಿ ಕೋರಿರೊಟ್ಟಿ, ಕೋಳಿ ಸಾರನ್ನು ಹೇಗೆ ತಿನ್ನುವುದು ಎಂಬುದನ್ನೂ ಹೇಳಿಕೊಡುತ್ತೇವೆ’ ಎನ್ನುತ್ತಾರೆ ರವಿತೇಜ ಶೆಟ್ಟಿ.

ಮಂಗಳೂರ್‌ ಕಿಚನ್‌ನ ವಿಶೇಷತೆ ಎಂದರೆ ಡೀಪ್‌ ಫ್ರೈ ಮಾಡಬೇಕಾದ ಖಾದ್ಯಗಳನ್ನು ಅವರು ತವಾದಲ್ಲಿಯೇ ರುಚಿಕಟ್ಟಾಗಿ ಬೇಯಿಸುತ್ತಾರೆ. ಹದವಾಗಿ ಮಸಾಲೆ ಬೆರೆಸಿ, ಎಷ್ಟು ಬೇಕೋ ಅಷ್ಟೇ ಬೇಯಿಸಿರುವ ಸಿಗಡಿ, ಬಂಗುಡೆ, ಪಾಂಫ್ರೆಟ್‌ ತವಾ ಫ್ರೈ ಮೀನಿನ ನಿಜವಾದ ರುಚಿಯ ಅನುಭವ ನೀಡುತ್ತದೆ.

‘ಚಿಕನ್‌ ಬಿರಿಯಾನಿ ಸೇರಿದಂತೆ ಹಲವು ಚಿಕನ್‌ ಖಾದ್ಯಗಳಿಗೆ ಮುಕ್ಕಾಲು ಕೇಜಿ ತೂಕದ ಕೋಳಿಗಳನ್ನೇ ಬಳಸುತ್ತೇವೆ ಇದರಿಂದಾಗಿ ಮಾಂಸ ಹೆಚ್ಚು ಮೆದುವಾಗಿರುತ್ತದೆ’ ಎನ್ನುತ್ತಾರೆ ಅವರು.

ಇಲ್ಲಿಯ ಖಾದ್ಯಗಳ ಬೆಲೆಯೂ ಹೆಚ್ಚೇನಿಲ್ಲ. ಇಲ್ಲಿನ ಗರಿಷ್ಠ ಬೆಲೆ ₹ 280. ಮನೆ–ಕಚೇರಿ ಡೆಲಿವರಿ ವ್ಯವಸ್ಥೆ ಇದೆ. ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಉಚಿತ ಪೂರೈಕೆ (ಕನಿಷ್ಠ ₹350 ಬೆಲೆಯ ಆರ್ಡರ್‌ಗಳಿಗೆ ಮಾತ್ರ) ಮಾಡಲಾಗುತ್ತದೆ. 

ಮೂರು ಬಗೆಯ ಕೋಂಬೊ

ರುಮಾಲು ರೋಟಿ, ಚಿಕನ್‌ ಕರಿ, ಬಾಯಿಲ್ಡ್‌ ರೈಸ್‌, ಚಿಕನ್‌ ಕಬಾಬ್‌, ಬೇಯಿಸಿದ ಮೊಟ್ಟೆ ಒಳಗೊಂಡ ಕೋಂಬೊ ಮೀಲ್ ಬೆಲೆ ₹110, ಎರಡು ಚಿಕನ್‌ ಲಾಲಿಪಾಪ್‌, ಹೈದರಾಬಾದ್ ಬಿರಿಯಾನಿ ರೈಸ್‌, ಒಂದು ಬೇಯಿಸಿದ ಮೊಟ್ಟೆ ಇರುವ ಲಾಲಿಪಾಪ್‌ ಕೋಂಬೊ ಬೆಲೆ ₹ 99, ಚಿಕನ್‌ ಬಿರಿಯಾನಿ, ಒಂದು ಬೇಯಿಸಿದ ಮೊಟ್ಟೆ, ಒಂದು ಫ್ರೈಡ್‌ ಲೆಗ್‌ಪೀಸ್‌, ಒಂದು ಪರೋಟಾ ಮತ್ತು ಚಿಕನ್‌ ಕರಿ ಇರುವ ಎಕ್ಸಿಕ್ಯುಟಿವ್‌ ಕೋಂಬೊ ಬೆಲೆ ₹160.

ರೆಸ್ಟೋರೆಂಟ್‌: ಮಂಗಳೂರು ಕಿಚನ್‌

ವಿಳಾಸ:  #4/55, 2ನೇ ಮುಖ್ಯರಸ್ತೆ, ಗೋವಿಂದರಾಜನಗರ, ಭಾರತಿ ಆಸ್ಪತ್ರೆಯ ಎದುರು, ವಿಜಯನಗರ

ವಿಶೇಷ: ಮೀನಿನ ಖಾದ್ಯ, ಹೈದರಾಬಾದ್‌ ಬಿರಿಯಾನಿ

ಸಮಯ: ಮಧ್ಯಾಹ್ನ 12ರಿಂದ ರಾತ್ರಿ 10.30

ಮಾಹಿತಿಗೆ: 91484 54444

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !