ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: ಜಲ ಸಂಪನ್ನ ಗ್ರಾಮವೇ ‘ನೂಲಗೇರಿ’

ಗ್ರಾಮದಲ್ಲಿ ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳ ಮೆರುಗು
Last Updated 25 ಸೆಪ್ಟೆಂಬರ್ 2021, 13:42 IST
ಅಕ್ಷರ ಗಾತ್ರ

ಹಿರೇಕೆರೂರು: ನುಲ್‌ ಅಥವಾ ನುಯ್ ಶಬ್ದಗಳು ಜಲಸೂಚಿಯಾಗಿವೆ. ಗೇರಿ ಎಂಬುದು ಕೆರೆಯಿಂದ ಬಂದದ್ದು. ಹಾಗಾಗಿ ಜಲಸಂಪನ್ನವಾಗಿರುವ ಗ್ರಾಮಕ್ಕೆ ‘ನೂಲಗೇರಿ’ ಎಂಬ ಹೆಸರು ಬಂದಿದೆ ಎಂದು ಸಂಶೋಧಕ ಡಾ.ಭೋಜರಾಜ ಪಾಟೀಲ ಅವರು ಹಿರೇಕೆರೂರು ತಾಲ್ಲೂಕು ಗ್ರಾಮನಾಮ ಅಧ್ಯಯನ ಪುಸ್ತಕದಲ್ಲಿ ತಿಳಿಸಿದ್ದಾರೆ. ‌

ಧಾರ್ಮಿಕ ಕ್ಷೇತ್ರವಾಗಿದ್ದ ಅಬಲೂರು ಕೇಂದ್ರವಾಗಿಸಿಕೊಂಡು ಒಂದು ಕಡೆ ದೂಪದಹಳ್ಳಿ, ಇನ್ನೊಂದು ಕಡೆ ದೀವಿಗಿಹಳ್ಳಿ (ದೀಪದಹಳ್ಳಿ) ಮತ್ತೊಂದು ಕಡೆ ನೂಲಗೇರಿ ಗ್ರಾಮಗಳಿವೆ. ಇಲ್ಲಿ ನೂಲು ತೆಗೆಯುವ ಕೇರಿ ಅಂದರೆ ನೂಲುವ+ಕೇರಿ ನೂಲಗೇರಿ ಆಗಿದೆ ಎಂದು ಇನ್ನೊಬ್ಬ ಸಂಶೋಧಕ ಡಾ.ಚಾಮರಾಜ ಕಮ್ಮಾರ ಪ್ರತಿಪಾದಿಸುತ್ತಾರೆ.

ಹತ್ತಾರು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ನೂಲಗೇರಿ ಗ್ರಾಮದಲ್ಲಿ ಪ್ರಾಚೀನ ಕಾಲದ ಶಿವಾಲಯಗಳಿವೆ. ರಾಷ್ಟ್ರಕೂಟರ ಕಾಲದ ಎರಡು ಶಾಸನಗಳು, ಕಲ್ಯಾಣ ಚಾಲುಕ್ಯರ ಕಾಲದ ಮೂರು ಶಾಸನಗಳು ಹಾಗೂ ಯಾದವರ ಕಾಲದ ಎರಡು ಶಾಸನಗಳು ವರದಿಯಾಗಿವೆ.

ಕ್ರಿ.ಶ 1089ರ ಕಲ್ಯಾಣ ಚಾಲುಕ್ಯರ ಕಾಲದ ಶಾಸನವು ನೂಲಗೇರಿ ಕೇತಗಾವುಂಡನನ್ನು ಉಲ್ಲೇಖಿಸುತ್ತದೆ. ಕ್ರಿ.ಶ 1109ರ ಶಾಸನವು ನೂಲಗೇರಿಯ ಬಣಂಜಿಗಾದಿಗಳಿಂದ ಭೂಮಿ ಮತ್ತು ಸುಂಕದಾನ ಮಾಡಿರುವ ಬಗ್ಗೆ ತಿಳಿಸುತ್ತದೆ. ಗ್ರಾಮದಲ್ಲಿ ದೊರೆತ 8 ಸಾಲಿನ ಜಿನ ಶಾಸನ ಅಪೂರ್ಣವಾಗಿದೆ.

ಅಬಲೂರು ಗ್ರಾಮದಲ್ಲಿ ಶಿರಸ್‌ ಪವಾಡ ನಡೆಸಿದ ಏಕಾಂತರಾಮಯ್ಯನಿಗೆ ಬಿಜ್ಜಳ ರಾಜನು ದತ್ತಿಯಾಗಿ ನೀಡಿದ 6 ಗ್ರಾಮಗಳಲ್ಲಿ ನೂಲಗೇರಿ ಕೂಡ ಒಂದಾಗಿತ್ತು ಎಂದು ಶಾಂತ ನಿರಂಜನ ಕವಿಯ ಅಬ್ಬಲೂರು ಚರಿತೆ ಕಾವ್ಯದಲ್ಲಿ ಉಲ್ಲೇಖವಿದೆ.

ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ನೂಲಗೇರಿ ಗ್ರಾಮದಲ್ಲಿ ಪ್ರತಿಭೆಗಳ ದಂಡು ಸಿಗುತ್ತದೆ. ತಿಪ್ಪೇರುದ್ರಸ್ವಾಮಿ, ನಾಗಲಿಂಗ ಲೀಲೆಯಂತಹ ಭಕ್ತಿ ಪ್ರಧಾನ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಕೊಟ್ರೇಶ ಅಂಗಡಿ ಈ ಗ್ರಾಮದವರು.

ನಾಟಕ ರಚನೆ, ಅಭಿನಯ ಹಾಗೂ ನಿರ್ದೇಶನದ ಮೂಲಕ ಹೆಸರು ಪಡೆದಿರುವ ನಿವೃತ್ತ ಶಿಕ್ಷಕ ವೀರನಗೌಡ ದಳವಾಯಿ, ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ಮಲ್ಲೇಶ ಹುಲ್ಮನಿ, ಶಿಲ್ಪಕಲೆಯಲ್ಲಿ ಹೆಸರು ಪಡೆದ ದಿವಂಗತ ಮಾದೇವಪ್ಪ ಮಾಯಾಚಾರಿ, ನಾಗಲಿಂಗಪ್ಪ ಮಾಯಾಚಾರಿ ಗ್ರಾಮಕ್ಕೆ ಹೆಮ್ಮೆ ತಂದವರು. ಜತೆಗೆ ಗ್ರಾಮವು ಹತ್ತಾರು ಸೈನಿಕರನ್ನು ದೇಶಕ್ಕೆ ಕೊಡುಗೆ ನೀಡಿದೆ.

ಕೃಷಿ, ಬೀಜೋತ್ಪಾದನೆ, ಮಿಶ್ರತಳಿ ರಾಸುಗಳ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿರುವ ನೂಲಗೇರಿ ಗ್ರಾಮದ ಮಧ್ಯದಲ್ಲಿ ಭವ್ಯವಾಗಿ ನಿರ್ಮಿಸಿರುವ ವೀರಭದ್ರೇಶ್ವರ ದೇವಸ್ಥಾನವಿದೆ. ಇತ್ತೀಚಿನ ವರ್ಷಗಳಲ್ಲಿ ಬಾದಾಮಿ ಬನಶಂಕರಿ ದೇವಿಯ ದೇವಸ್ಥಾನ ನಿರ್ಮಾಣವಾಗಿದ್ದು, ಪ್ರತಿ ವರ್ಷ ರಥೋತ್ಸವ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT