ಅಣಬೆ ಲೋಕದ ಜೀವಜಾಲ!

7

ಅಣಬೆ ಲೋಕದ ಜೀವಜಾಲ!

Published:
Updated:
ಅಣಬೆ ಲೋಕದ ಜೀವಜಾಲ!

ಅಣಬೆ ಎಂಬ ನಿಸರ್ಗದ ಇನ್ನೊಂದು ಸೋಜಿಗಕ್ಕೆ ಮರುಳಾದವರಲ್ಲಿ ನಾನೂ ಒಬ್ಬ. ಈ ಮರುಳು ಬಹಳ ಹಳೆಯದು. ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಪುಟ್ಟ ಆಗ್ಫಾ ಕ್ಯಾಮೆರಾ ಖರೀದಿಸಿದಾಗ ಕಂಡಕಂಡವರ ಚಿತ್ರ ಹಿಡಿಯುವ ಆತುರ. ಆಮೇಲೆ ಅದು ಹೂಗಳೆಡೆಗೆ ತಿರುಗಿತು. ಹೂವಿನಿಂದ ಅತ್ತ ಚಿಟ್ಟೆಗಳಿಗೂ ಇತ್ತ ಅಣಬೆಗಳಿಗೂ ಆಸಕ್ತಿ ಕವಲೊಡೆಯಲು ಹೆಚ್ಚು ವೇಳೆ ಬೇಕಾಗಲಿಲ್ಲ. ಅಣಬೆಯ ಬೆಡಗು ಬಿನ್ನಾಣ ಹೂವಿಗೇನು ಕಮ್ಮಿ? ನಮ್ಮಲ್ಲಿ ಹಿತ್ತಲು, ತೋಟ, ಬೇಣ, ಬೆಟ್ಟದಲ್ಲಿ ಅಣಬೆಗಳಿಗೆ ಕೊರತೆಯಂತೂ ಇಲ್ಲ. ಮೊದ ಮೊದಲು ‘ಚಂದದ’ ಅಣಬೆಗಳ ಚಿತ್ರ ತೆಗೆಯುವ ಹುಮ್ಮಸ್ಸು. 'ಚಂದ' ಅಂದರೆ ವಿಶಿಷ್ಟ ಆಕಾರ, ಕಣ್ಸೆಳೆಯುವ ಬಣ್ಣ, ಅಪಾರ ಸಂಖ್ಯೆ ಇತ್ಯಾದಿ. ಆಮೇಲೆ ಎಲ್ಲ ಅಣಬೆಗಳೂ ವಿಶಿಷ್ಟವೇ ಎಂದು ಅರಿವಾಯಿತು.

ಆಕಾರವನ್ನೇ ನೋಡಿ: ‘ನಾಯಿಕೊಡೆ’ಯ ಅನ್ವರ್ಥವಾಗಿ ಛತ್ರಿ ತರ, ಬಟ್ಟಲು, ಚೆಂಡು, ಇಡ್ಲಿ, ಬೋಗುಣಿ, ಮಲ್ಲಿಗೆ, ದಾರದ ಎಳೆ, ಹೂವು, ನಕ್ಷತ್ರ... ಪಟ್ಟಿ ಮುಗಿಯದು. ಇನ್ನು ವರ್ಣವೈಭವಕ್ಕೆ ಮಿತಿಯಿಲ್ಲ. ಶುಭ್ರ ಬಿಳಿಯಿಂದ ಕಡುಗಪ್ಪಿನ ನಡುವೆ ಬಹುತೇಕ ಶೇಡ್ ಇದ್ದರೂ ಬಿಳಿ ಹಾಗೂ ಕಂದು ಬಣ್ಣಗಳದು ಮೇಲುಗೈ. ಹಸಿರು ಅಣಬೆ ಕಂಡಿರಲಿಲ್ಲ, ಸಿದ್ದಾಪುರ ತಾಲೂಕಿನ ಚಿಕ್ಕಪ್ಪನ ಮನೆಯ ಬಳಿ ಅದೂ ಸಿಕ್ಕಿತು. ಸಂಖ್ಯೆಯೂ ಅಷ್ಟೇ. ತಿರಸ್ಕಾರ ಭರಿತ ನಾಣ್ಣುಡಿಯೇ ಇದೆಯಲ್ಲ, ‘ನಾಯಿಕೊಡೆಯಂತೆ ಮೇಲೆದ್ದವು’ ಎಂದು!

ಪ್ರಾಥಮಿಕ ಹಂತದ ಬೆರಗು ಕಳೆದ ಬಳಿಕ ಅಣಬೆ ಅವಲೋಕನ ತುಸು ಆಳಕ್ಕಿಳಿಯಿತು. ಅಂದರೆ ಅವುಗಳ ಬುಡಕ್ಕೆ. ಏಕೆಂದರೆ ಪ್ರತಿ ಪ್ರಭೇದದ ಅಣಬೆಯ ಮೂಲದ್ರವ್ಯವೂ ವಿಭಿನ್ನವೇ. ಈ ಜ್ಞಾನೋದಯವಾದದ್ದು ನಮ್ಮ ಅಡಿಕೆ ತೋಟದಲ್ಲಿ. ಮುರಿದು ಬಿದ್ದ ತೆಂಗಿನ ಬೊಡ್ಡೆಗೆ ಹಿಡಿದ ಸಹಸ್ರಾರು ಕೊಡೆಗಳು, ಕತ್ತರಿಸಿ ಹಾಕಿದ ಕಾಫಿ ಕಾಂಡದಲ್ಲಿ ಅರಳಿದ ಚಂದದ ಅಣಬೆ ಹೂಗಳು, ಗೆದ್ದಲಿನ ಹಾಳು ಹುತ್ತದ ಮೇಲೆ ಬೆಳ್ಳಂಬೆಳಗ್ಗೆ ಅಕ್ಕಿ ಬೀರಿದಂತೆ ಕಂಡ ನುಚ್ಚಣಬೆಗಳು, ಅಡಿಕೆ ಬುಡದ ಗೊಬ್ಬರದಲ್ಲಿ ಇಡ್ಲಿ ಅಣಬೆ.. ಇದ್ಯಾವುದೂ ಬೇರೆ ಪರಿಸ್ಥಿತಿಯಲ್ಲಿ ಕಾಣಲಾಗದು. ಹಾಗೆಯೇ ಬೆಟ್ಟ ಬೇಣಗಳಲ್ಲಿ ಕಂಡ ನಾಯಿಕೊಡೆಗಳ ಸೊಬಗು ಬೇರೆಯೇ.


ಅಣಬೆ ಮೇಲೆ ಕೂರುವ ಕೀಟಗಳನ್ನು ಹಿಡಿಯಲು ಕಾಯುತ್ತಿರುವ ಕಪ್ಪೆ

ಕಡೆಗೆ ಈ ಮರುಳು ಸೆಳೆದಿದ್ದು ಅಣಬೆಯ ಸುತ್ತ ಹೆಣೆದುಕೊಂಡ ಜೀವಜಾಲದ ಅಚ್ಚರಿಯ ಲೋಕಕ್ಕೆ! ನಮ್ಮ ಅಡಿಕೆ ತೋಟದಲ್ಲಿ ಅರಳುವ ಹಲವು ಅಣಬೆಗಳಲ್ಲಿ ಅಚ್ಚ ಬಿಳಿ ಬಣ್ಣದ ಕೊಂಬಿನಂತಿರುವ ಕಂದು ಟೋಪಿಯ ಅಣಬೆಗೆ (stink horn) ಪ್ರಮುಖ ಸ್ಥಾನ. ದುರ್ವಾಸನೆ ಬೀರುವ ಇದು ಬಲು ನಾಜೂಕು ಮತ್ತು ಅಲ್ಪ ಜೀವಾವಧಿಯದು. ಒಮ್ಮೆ ಅದರ ಮೇಲೆ ಮುಕುರಿದ್ದ ಗುಂಗಾಡು ಹಾಗೂ ನೊಣಗಳ ಚಿತ್ರ ತೆಗೆಯಲು ಬಾಗಿದಾಗ ಮಣ್ಣು ಬಣ್ಣದ ಬುಷ್ ಬ್ರೌನ್ ಚಿಟ್ಟೆ ಫಕ್ಕನೆ ಹಾರಿತು. ಆಮೇಲೆ ಗಮನಿಸಿದರೆ ಪಾಮ್ ಫ್ಲೈ, ಇವನಿಂಗ್ ಬ್ರೌನ್ ಚಿಟ್ಟೆಗಳು, ಕೆಂಪಿರುವೆ (ಸೌಳಿ), ಬಸವನ ಹುಳು ಮುಂತಾದವರೂ ಇದರ ಗಿರಾಕಿಗಳೇ! ತೋಟದಂಚಿನ ಹುಲ್ಲಿನ ಬೇಣದಲ್ಲಿ ಪಿಜ್ಜಾದಂತಹ ಬೃಹತ್ ಅಣಬೆ, ಕ್ರಿಕೆಟ್ ಚೆಂಡಿನಂಥ ಗುಂಡನೆ ಅಣಬೆಗಳೂ ಏಳುತ್ತವೆ. ಮರುದಿನ ಕೊಳೆತು ಮಲದ ಮುದ್ದೆಯಂತೆ ಅಸಹ್ಯ ನಾತ ಬೇರೆ. ಈ ಹಳಸಲು ಅಣಬೆಗಳು ಹಿಸುಕ, ಜೊರಟೆ (ಸಹಸ್ರಪದಿ)ಗಳಿಗೆ ಮೃಷ್ಟಾನ್ನವೇ ಇರಬೇಕು. ತಾಸುಗಟ್ಟಲೆ ಚಪ್ಪರಿಸುತ್ತ ಮೈಮರೆಯುತ್ತವೆ! ಕೆಲವು ಕಂಬಳಿಹುಳ, ಗುಂಗಿಹುಳಗಳೂ ಅಣಬೆ ಸ್ವಾದ ಸವಿಯುವವರ ಪಟ್ಟಿಯಲ್ಲಿವೆ. ಭೋಜನಕೂಟಕ್ಕೆ ಇಷ್ಟೆಲ್ಲ ಮಂದಿ ಸೇರಿದಾಗ ಕಳ್ಳಕಾಕರು ಬರದಿರುವರೆ? ಅಣಬೆಯ ಹತ್ತಿರ ಹೊಂಚುಹಾಕಿ ಅತಿಥಿಗಳ ತಿಥಿ ಮಾಡುವ ಜೇಡ, ಕಪ್ಪೆಗಳು ಈ ವರ್ಗಕ್ಕೆ ಸೇರಿದವು.


ಬಣ್ಣದ ಅಣಬೆ ಮತ್ತು ಸಹಸ್ರಪದಿ

ನುಚ್ಚಣಬೆ, ಜಾಲಣಬೆ, ಹೆಗ್ಗಾಲಣಬೆಯಂತಹ ನಾಲ್ಕಾರು ಬಗೆಯ ಅಣಬೆಗಳು ಮಾತ್ರ ಮನುಷ್ಯರ ಹೊಟ್ಟೆಗಿಳಿಯುತ್ತವೆ. ಇನ್ನುಳಿದವುಗಳಿಂದ ದೂರವಿರುವುದು ಕ್ಷೇಮ ಎನ್ನುತ್ತಾರೆ ತಿಳಿದವರು. ಅತ್ತ ಅಪಾರ ಸಂಖ್ಯೆಯ ಜೀವಿಗಳು ಅಣಬೆ ಆಶ್ರಯದಲ್ಲಿ ಇವೆಯಲ್ಲ, ಅವು ಹೇಗೆ ದಕ್ಕಿಸಿಕೊಳ್ಳುತ್ತವೆ? ಹೂವಿನ ಮಕರಂದ ಹೀರುವ ಅಂದದ ಪಾತರಗಿತ್ತಿಗಳಿಗೆ ಕೊಳಕು ನಾಯಿಕೊಡೆಗಳ ಹಂಬಲವೇಕೆ?

ಸಸ್ಯ ಮತ್ತು ಪ್ರಾಣಿಗಳ ಸಾವಯವ ಅವಶೇಷಗಳನ್ನು ಜೀರ್ಣಿಸಿ ಮಣ್ಣಿಗೆ ಸೇರಿಸುವ ಪ್ರಕ್ರಿಯೆಯಲ್ಲಿ ಅಣಬೆಗಳ ಪಾತ್ರ ಹಿರಿದು. ಮತ್ತೊಂದೆಡೆ ಕಿರುಜೀವಿಗಳು ಅಣಬೆಗಳನ್ನೇ ಜೀರ್ಣಿಸಿ ಬದುಕುತ್ತವೆ. ದುರ್ನಾತದಿಂದ ಮನುಜಕುಲವನ್ನು ದೂರವಿಟ್ಟು ಅದೇ ನಾತದಿಂದಕೀಟಗಳ ಸೆಳೆಯುವ ಕೌತುಕದ ನಡೆ. ಅವುಗಳಿಗೆ ಪೋಷಕಾಂಶ ಒದಗಿಸಿ ತನ್ನ ಬೀಜಕಣಗಳನ್ನು ಪಸರಿಸುವ ಕರಾಮತ್ತು. ನಿಸರ್ಗದ ಎಣೆಯಿಲ್ಲದ ಲೀಲೆಗೆ ಮರುಳಾಗದಿರಲು ಸಾಧ್ಯವೇ?
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry