ಆಲಮಟ್ಟಿ ಉದ್ಯಾನ ನೋಡುವುದೇ ಚಂದ!

7

ಆಲಮಟ್ಟಿ ಉದ್ಯಾನ ನೋಡುವುದೇ ಚಂದ!

Published:
Updated:
ಆಲಮಟ್ಟಿ ಉದ್ಯಾನ ನೋಡುವುದೇ ಚಂದ!

ಮುಗಿಲತ್ತ ಮುಖಮಾಡಿ ಬೆಳೆದು ನಿಂತಿರುವ ಸಾಲು ಮರಗಳ ನಡುವಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಮನಸ್ಸಿಗೆ ಮಲೆನಾಡಿನ ಅನುಭವ. ಆ ರಸ್ತೆಯ ತುದಿಯಲ್ಲಿ ಬೃಹತ್ ಪ್ರವೇಶದ್ವಾರ. ದ್ವಾರದ ಎರಡೂ ಬದಿಗಳಲ್ಲಿ ಭಗತ್ ಸಿಂಗ್, ರಾಜಗುರು ಸೇರಿದಂತೆ ವಿವಿಧ ರಾಷ್ಟ್ರ ನಾಯಕರು ಎರಡೂ ಕೈಗಳಲ್ಲಿ ಜಲಾಶಯವನ್ನೇ ಹೊತ್ತು ನಿಂತಿರುವಂತಹ ಪುತ್ಥಳಿಗಳು. ಪ್ರವೇಶದ್ವಾರದಿಂದ, ಒಳ ಹೊಕ್ಕರೆ ಗುಡ್ಡಕ್ಕೇ ಹಸಿರು ಸೀರೆ ಉಡಿಸಿದಂತೆ ಕಾಣುವ ಬೃಹತ್ ಉದ್ಯಾನ!

ಹತ್ತು ವರ್ಷಗಳ ಹಿಂದೆ ಆರಂಭವಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಉದ್ಯಾನಗಳಲ್ಲಿ ಈಗ ಹೀಗೆ ಮಲೆನಾಡಿನ ಸೊಬಗು ಮೈದೆಳೆದಿದೆ. ಹಸಿರು ಚಾದರ ಹೊದ್ದುಕೊಂಡಂತೆ ಕಾಣುವ ಈ ಉದ್ಯಾನಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇನ್ನೂರು ಎಕರೆಯಲ್ಲಿ ರಾಕ್ ಗಾರ್ಡನ್, ಮೊಘಲ್ ಗಾರ್ಡನ್, ಇಟಾಲಿಯನ್ ಗಾರ್ಡನ್, ಫ್ರೆಂಚ್ ಗಾರ್ಡನ್‌, ಕೃಷ್ಣ, ಲವ-ಕುಶ ಗಾರ್ಡನ್ ಉದ್ಯಾನಗಳ ಸಂಕೀರ್ಣವೇ ಅನಾವರಣಗೊಂಡಿದೆ.

ಮೊಘಲ್ ಉದ್ಯಾನ: ಇದನ್ನು ರಾಷ್ಟ್ರಪತಿ ಭವನದ ಮೊಘಲ್ ಉದ್ಯಾನದ ಶೈಲಿಯಲ್ಲಿಯೇ ನಿರ್ಮಿಸಲಾಗಿದೆ. ಸಾವಿರಕ್ಕೂ ಹೆಚ್ಚು ಸ್ಥಿರ ಕಾರಂಜಿಗಳನ್ನು ಅಳವಡಿಸಲಾಗಿದ್ದು, ಬಣ್ಣ-ಬಣ್ಣದ ಬೆಳಕಲ್ಲಿ ನೀರಿನ ನೃತ್ಯ ನೋಡುವುದೇ ಚಂದ. ಉದ್ಯಾನದ ಆವರಣದಲ್ಲಿ ಅಲಮಂಡಾ, ಸ್ಯಾಕಾಸ್, ಅಲಿವಾನ, ಇಗ್ಜೋರಾ, ಫಾಮ್ಸ್ ತರಹದ ಆಲಂಕಾರಿಕ ಸಸ್ಯಗಳಿವೆ. ಬಣ್ಣದ ಸಸ್ಯಗಳ ಅಂದವನ್ನು ಅಸ್ವಾದಿಸುತ್ತಿರುವಾಗಲೇ, ಪಕ್ಕದಲ್ಲಿ ಸಸ್ಯಗಳಲ್ಲೇ ರೂಪುಗೊಂಡ ಆನೆ, ಆನೆಯ ಮರಿ, ಈಶ್ವರಲಿಂಗದಂತಹ ಕಲಾ‌ಕೃತಿಗಳು ‘ಇತ್ತ ನೋಡಿ’ ಎನ್ನುತ್ತವೆ.
ಏಳು ಬ್ಲಾಕ್‌ಗಳಲ್ಲಿ ಹಸಿರು ಹುಲ್ಲು ಹಾಸಿನೊಂದಿಗೆ ಕಂಗೊಳಿಸುವ ಮೊಘಲ್ ಉದ್ಯಾನ ಪ್ರವಾಸಿಗರ ಆಕರ್ಷಣೆಯ ತಾಣ. ಪ್ರವೇಶದ್ವಾರದಿಂದ ಜಲಾಶಯದವರೆಗೂ 33 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಈ ಉದ್ಯಾನ ಮೈಚಾಚಿಕೊಂಡಿದೆ.

ಕೃಷ್ಣ – ಲವಕುಶ ಉದ್ಯಾನ: ಇಡೀ ಗುಡ್ಡಕ್ಕೆ ಹಸಿರು ಸೀರೆ ಉಡಿಸಿದಂತೆ ಕಾಣುವ ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗಿರಿಯಲ್ಲಿ ಕೃಷ್ಣ ಹಾಗೂ ಲವಕುಶ ಉದ್ಯಾನಗಳಿವೆ. ಹದಿಮೂರು ವರ್ಷಗಳ ಹಿಂದೆ ನಿರ್ಮಾಣವಾದ ಕೃಷ್ಣನ ಉದ್ಯಾನದಲ್ಲಿ ಕೃಷ್ಣನ ಬಾಲಲೀಲೆ, ಗೋಪಿಕಾ ಸ್ತ್ರೀಯರೊಂದಿಗೆ ಮೋಜು, ನೃತ್ಯ-ಚೆಲ್ಲಾಟ, ಗೋವುಗಳ ಪಾಲನೆಯ ದೃಶ್ಯಗಳು ಮೋಹಕವಾಗಿವೆ.

ಲವ- ಕುಶ ಉದ್ಯಾನ ರಾಮಾಯಣದ ನಂತರದ ಕಥೆ ಹೇಳುತ್ತದೆ. ವಾಲ್ಮೀಕಿ ಆಶ್ರಮ, ಲವ-ಕುಶರ ಬಾಲ್ಯ, ಲವ-ಕುಶರು ಅಶ್ವಮೇಧವನ್ನು ಕಟ್ಟಿ ಹಾಕಿದ ರೂಪಕ, ಹನುಮಂತ- ವಾನರ ಸೈನ್ಯದ ಸಂವಾದ ನೋಡುಗರನ್ನು ರಾಮಾಯಣದ ಕಾಲಕ್ಕೆ ಕರೆದೊಯ್ಯುತ್ತವೆ. ಗುಡ್ಡದಲ್ಲಿ ಈ ಹಿಂದೆ ನೆಟ್ಟಿದ್ದ ಸಸಿಗಳು ಹೆಮ್ಮರವಾಗಿವೆ. ಲವಕುಶರ ಕಥನವನ್ನು ಈ ಮರಗಳ ನೆರಳಲ್ಲಿ ಸಾಗುತ್ತಾ ವೀಕ್ಷಿಸಬಹುದು.

 

ರಾಕ್‌ ಗಾರ್ಡನ್‌: ‌ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಲಾರೂಪ ನೀಡಿರುವುದು ರಾಕ್ ಗಾರ್ಡನ್ ವಿಶೇಷ. ಸಿಲ್ವರ್ ಲೇಕ್ ಬೋಟಿಂಗ್ ಗಾರ್ಡನ್‌ನ ಸೊಬಗು ಹೆಚ್ಚಿಸಿದೆ. ಮಂಗ, ಡೈನೋಸಾರ್, ಚಿಟ್ಟೆಗಳ ಉದ್ಯಾನ ಪುಟಾಣಿಗಳಿಗೆ ಮುದ ನೀಡುತ್ತವೆ. ಸಸ್ಯರಾಶಿಯಲ್ಲಿ ಅರಳಿರುವ ಸೂರ್ಯನ ಕಿರಣಗಳ ಚಿತ್ತಾರ ಆಕರ್ಷಕವಾಗಿದೆ. ಬುಡಕಟ್ಟು ಜನಾಂಗ, ಗ್ರಾಮೀಣ ಬದುಕು ಪರಿಚಯಿಸುವ ಪ್ರತಿಕೃತಿಗಳು, ಚಕ್ಕಡಿ, ಒಕ್ಕಲುತನ ಉಪಕರಣಗಳು ಉದ್ಯಾನದೊಳಗೆ ಗ್ರಾಮೀಣ ಬದುಕಿನ ಕಥೆ ಹೇಳುತ್ತವೆ.

ರಾಕ್ ಗಾರ್ಡನ್‌ ಮಕ್ಕಳನ್ನು ಆಕರ್ಷಿಸುವ ತಾಣ. ಅರ್ಧ ಎಕರೆಯಲ್ಲಿ ಮಕ್ಕಳಿಗಾಗಿ 20 ಬಗೆಯ ಆಟಿಕೆಗಳಿವೆ. ಹುಲ್ಲುಹಾಸು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇದಕ್ಕೆ ಪ್ರವೇಶ ಉಚಿತ. ಬೆಳಗಿನಿಂದ ಸಂಜೆವರೆಗೂ ಸುತ್ತಾಡಿ, ಸುಸ್ತಾಗಿದ್ದರೆ, ಸಂಜೆ 6 ರಿಂದ 7.30 ರವರೆಗೆ ಪ್ರದರ್ಶನಗೊಳ್ಳುವ ಕಾರಂಜಿ ನೃತ್ಯವನ್ನೂ ನೋಡಿಕೊಂಡು ಬರಬಹುದು.

ಸಂಗೀತ ಕಾರಂಜಿ:‌ ಬೆಳಗಿನಿಂದ ಸಂಜೆವರೆಗೂ ಕಂಗೊಳಿಸುವ ಹಸಿರು ಉದ್ಯಾನದ ಅಂಗಳದಲ್ಲಿ ರಾತ್ರಿಯಾಗುತ್ತಲೇ ಬಣ್ಣ ಬಣ್ಣದ ಬೆಳಕಲ್ಲಿ ಕಾರಂಜಿಗಳು ಚಿಮ್ಮಲಾರಂಭಿಸುತ್ತವೆ. ಬರೀ ಚಿಮ್ಮುವುದಲ್ಲ, ನರ್ತನವನ್ನೂ ಮಾಡುತ್ತವೆ. 25 ನಿಮಿಷಗಳ ಕಾಲ ಐದು ಹಾಡುಗಳಿಗೆ ಕಾರಂಜಿಗಳು ನೃತ್ಯ ಮಾಡುತ್ತವೆ. 30 ಅಡಿವರೆಗೂ ಜಿಗಿಯುವ ಕಾರಂಜಿಗಳ ನೃತ್ಯ ನೋಡುವುದೇ ಸೊಗಸು. ಕಾರಂಜಿ ಸೊಗಸನ್ನು ಕಾಲುಚಾಚಿ ವಿರಮಿಸಿಕೊಂಡು ವೀಕ್ಷಿಸಲು 1500 ಆಸನಗಳ ಸಾಮರ್ಥ್ಯದ ವೃತ್ತಾಕಾರದ ಸ್ಟೇಡಿಯಂ ಕೂಡ ಇದೆ.

ಉದ್ಯಾನ ಆರಂಭವಾದಾಗಲೇ ಸಂಗೀತ ಕಾರಂಜಿ ಶುರುವಾಗಿತ್ತು. ಈಗ ಮತ್ತಷ್ಟು ಆಧುನೀಕರಣಗೊಳ್ಳುತ್ತಿದೆ. ಮೂರು ಎಕರೆ ವಿಸ್ತೀರ್ಣದಲ್ಲಿರುವ ಈ ಸಂಗೀತ ಕಾರಂಜಿ, ರಾಜ್ಯದ ದೊಡ್ಡ ಸಂಗೀತ ಕಾರಂಜಿ ಎಂಬ ಹೆಗ್ಗಳಿಕೆಯೂ ಇದೆ. ಕಾರಂಜಿಗಳಿಗೆ ಸಾಥ್‌ ನೀಡಲು ಅದರ ಅಕ್ಕಪಕ್ಕ ನಾಲ್ಕು ಮೂಲೆಗಳಲ್ಲಿ ಚಿಕ್ಕ ಚಿಕ್ಕ ‘ಎಲಿಪ್ಸಿಯಾ’ ಆಕಾರದ ಕಾರಂಜಿಗಳಿವೆ.

ಆಕರ್ಷಕ ಲೇಸರ್ ಶೋ: ಬೆಳಕು ಮತ್ತು ಕಾರಂಜಿ ನೃತ್ಯಕ್ಕೆ ಗಣಕೀಕೃತ ವ್ಯವಸ್ಥೆ, ಹನ್ನೆರಡು ಕಡೆ ಡಾಲ್ಫಿ ಸೌಂಡ್ ಸಿಸ್ಟಮ್, ವಿನೂತನ ತಂತ್ರಜ್ಞಾನದ ಲೇಸರ್ ಶೋ ಅಳವಡಿಕೆಯಾಗಿದ್ದು, ಎಲ್ಲವೂ ಪ್ರಾಯೋಗಿಕ ಹಂತದಲ್ಲಿದೆ. ಗಣಕೀಕೃತ ಲೇಸರ್ ಶೋನಲ್ಲಿ ಐತಿಹಾಸಿಕ, ಜನಪದ, ಪೌರಾಣಿಕ, ವೈಜ್ಞಾನಿಕ ವಿಷಯ ಆಧಾರಿತ ಥೀಮ್‌ಗಳು ಪ್ರದರ್ಶನಗೊಳ್ಳ­ಲಿವೆ. ಪ್ರವಾಸಿಗರಿಗೆ ಸಾಂಸ್ಕೃತಿಕ ರಸದೌತಣ ನೀಡಲಿವೆ. ಇದು ದಕ್ಷಿಣ ಭಾರತದಲ್ಲಿಯೇ ವಿನೂತನ ತಂತ್ರಜ್ಞಾನದ ಮೊದಲ ಲೇಸರ್ ಶೋ. ಇಲ್ಲಿರುವುದು ಹೈದರಾಬಾದ್‌ನ ಲುಂಬಿನಿ ಗಾರ್ಡನ್ ಲೇಸರ್ ಶೋಕ್ಕಿಂತಲೂ ಆಧುನಿಕ ತಂತ್ರಜ್ಞಾನ’ ಎಂಬುದು ಉದ್ಯಾನ ನಿರ್ವಾಹಕರ ಅಭಿಪ್ರಾಯ.

ರಾಕ್‌ ಉದ್ಯಾನದಲ್ಲಿ ಸಂಚರಿಸಲು ಚುಕು ಬುಕು ಎಲೆಕ್ಟ್ರಿಕ್‌ ರೈಲು, ಲೇಸರ್ ಫೌಂಟೇನ್‌, ಮೊಘಲ್‌ ಉದ್ಯಾನದ ಎಂಟ್ರನ್ಸ್‌ ಪ್ಲಾಜಾಕ್ಕೆ ವರ್ಣ ಬೆಳಕಿನ ವ್ಯವಸ್ಥೆ, ‌ಖಾಸಗಿ ಸಹಭಾಗಿತ್ವದಲ್ಲಿ ಫ್ಯಾಂಟಸಿ ಪಾರ್ಕ್, ವಾಟರ್ ಪಾರ್ಕ್‌ ನಿರ್ಮಾಣ, ಆಲಮಟ್ಟಿ ಗುಡ್ಡದಿಂದ ಸೀತಮ್ಮನ ಗುಡ್ಡದವರೆಗೆ ರೋಪ್‌ ವೇ ನಿರ್ಮಾಣ... ಇವೆಲ್ಲ ಈ ಉದ್ಯಾನಕ್ಕೆ ಭೇಟಿ ನೀಡುವ ಭವಿಷ್ಯದ ಪ್ರವಾಸಿಗರಿಗೆ ಸಿಗಬಹುದಾದ ಆಕರ್ಷಣೆಗಳು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry