ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಕವಿ 'ಕೆಎಸ್ ನ' ತವರಿನಲ್ಲಿ ಬ್ರಹ್ಮದೇಗುಲ

Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ, ಪ್ರೇಮಕವಿ ‘ಮೈಸೂರು ಮಲ್ಲಿಗೆ’ಯ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟೂರು. ಹದಿನಾರನೇ ಶತಮಾನದ ವೀರಶೈವ ಕವಿ ನಂಜುಂಡ ಸಹಾ ಇಲ್ಲಿಯವರೇ. ಅವರು ಬರೆದ ‘ಭೈರವೇಶ್ವರ ಕಾವ್ಯ’ ಪ್ರಸಿದ್ಧವಾದುದು.

ಹೊಯ್ಸಳರ ಕಾಲದಲ್ಲಿ ಈ ಹಳ್ಳಿ ಒಂದು ಅಗ್ರಹಾರವಾಗಿತ್ತು. ಇಲ್ಲಿ ಅನೇಕ ದೇವಾಲಯಗಳಿದ್ದವೆಂದು ಹೇಳಲಾಗುತ್ತದೆ. 1111ರಲ್ಲಿ ನಿರ್ಮಿತವಾಗಿದ್ದ ಮಲ್ಲೇಶ್ವರ, ಜನಾರ್ದನ ಮತ್ತಿತರ ದೇವಾಲಯಗಳು ಹಾಳಾಗಿವೆ. ಜನಾರ್ದನ ದೇವಾಲಯದಲ್ಲಿದ್ದ ಕೇಶವನ ಮೂರ್ತಿ ಅಮೆರಿಕದ ನ್ಯೂಯಾರ್ಕ್‌ನ ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯದಲ್ಲಿದೆ. ಅದರ ಪೀಠದ ಮೇಲಿನ ಶಾಸನದಿಂದ ಬಳ್ಳಿಗಾಮೆಯ ದಾಸೋಜನೆಂಬ ಶಿಲ್ಪಿಯು ಈ ಮೂರ್ತಿಯನ್ನು ಕಡೆದಂತೆ ತಿಳಿದುಬರುತ್ತದೆ.

ಬಮ್ಮವ್ವೆನ ಕನಸು ಸಾಕಾರಗೊಂಡದ್ದು

ಕಿಕ್ಕೇರಿಯಲ್ಲಿ ಸದ್ಯ ಸುಸ್ಥಿತಿಯಲ್ಲಿರುವ ಹೊಯ್ಸಳ ದೇವಾಲಯವೆಂದರೆ ಬ್ರಹ್ಮೇಶ್ವರ ಅಥವಾ ಬ್ರಹ್ಮಲಿಂಗೇಶ್ವರ ದೇವಾಲಯ. ಹೊಯ್ಸಳ ದೊರೆ ಒಂದನೇಯ ನರಸಿಂಹನ ಆಡಳಿತ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಕಿಕ್ಕೇರಿ ಪ್ರಾಂತದ ದಳವಾಯಿಯಾಗಿದ್ದ ಬರಮಯ್ಯನ ಹೆಂಡತಿ ಬಮ್ಮವ್ವೆ ನಾಯಕಿ 1171ರಲ್ಲಿ ಈ ದೇವಾಲ ಯವನ್ನು ಕಟ್ಟಿಸಿದಳು. ಆಕೆಗೆ ಬ್ರಹ್ಮ ದೇವರಿಗೆ ಮುಡಿಪಾದ ದೇವಾಲಯವೊಂದನ್ನು ನಿರ್ಮಿಸುವ ಬಯಕೆಯಿತ್ತು. ಬಹುಶಃ ಆಕೆಯ ಹೆಸರೂ ಬಮ್ಮವ್ವೆಯೆಂದು ಇದ್ದುದರಿಂದ ತನ್ನ ಹೆಸರನ್ನೂ ಅಮರಗೊಳಿಸುವ ಮನುಷ್ಯ ಸಹಜ ಬಯಕೆಯದಾಗಿರಬೇಕು. ನಾಯಕಿಯು ಬ್ರಹ್ಮ ದೇವಾಲಯದ ನಿರ್ಮಾಣಕ್ಕೆ ಕೈಹಾಕಿದಳು. ದೇವಾಲಯದ ಕೆಲಸ ಸಾಗಿದಂತೆ ಕೆಲವು ಅಪ್ರಿಯಕರ ಘಟನೆಗಳು ಜರುಗತೊಡಗಿದವು. ‘ಬ್ರಹ್ಮನನ್ನು ಯಾರೂ ಪೂಜಿಸದ ಕಾರಣ ಆ ದೇವಾಲಯ ನಿರ್ಮಾಣ ಮಾಡದಿದ್ದರೆ ಒಳಿತು’ ಎಂದು ಆಸ್ಥಾನದ ಪಂಡಿತರು ಆಕೆಗೆ ಹೇಳಿದರು.

ಆದರೆ ಬಮ್ಮವ್ವೆ ನಾಯಕಿಗೆ ಬ್ರಹ್ಮ ಎನ್ನುವ ಹೆಸರಿನ ಬಗ್ಗೆ ಮನಸ್ಸಿತ್ತು. ದೇವಾಲಯದ ನಿರ್ಮಾಣ ಕಾರ್ಯ ಸುಸೂತ್ರವಾಗಿ ಸಾಗಲೆಂದು ಅವಳು ದೇವರನ್ನು ಪ್ರಾರ್ಥಿಸಿದಳು. ಆಕೆಯ ಕನಸಿನಲ್ಲಿ ಶಿವ ದರ್ಶನ ನೀಡಿ ಆ ದೇವಾಲಯದಲ್ಲಿ ತನ್ನನ್ನು ಪ್ರತಿಷ್ಠಾಪಿಸಬೇಕೆಂದು ಹೇಳಿದನು. ಇದರಿಂದ ಸಂತಸಗೊಂಡ ನಾಯಕಿ ತಾನು ಕಟ್ಟುತ್ತಿದ್ದ ದೇವಾಲಯವನ್ನು ಶಿವನಿಗೆ ಮುಡಿಪಾಗಿಟ್ಟಳಲ್ಲದೆ, ಶಿವನನ್ನು ಬ್ರಹ್ಮೇಶ್ವರನನ್ನಾಗಿ ಪ್ರತಿಷ್ಠಾಪಿಸಿದಳು. ಈ ದೇವಾಲಯವು ಬ್ರಹ್ಮೇಶ್ವರ ಅಥವಾ ಬ್ರಹ್ಮಲಿಂಗೇಶ್ವರ ದೇವಾಲಯವೆಂದು ಹೆಸರುವಾಸಿಯಾಯಿತು ಎಂಬುದು ಈ ದೇಗುಲದ ಹಿಂದಿರುವ ಕಥೆ.

ಕಲಾ ಸಂಪತ್ತಿನ ದೇಗುಲ

ಬಹುತೇಕ ಹೊಯ್ಸಳ ದೇವಾಲಯಗಳಂತೆ ಇದನ್ನು ಪ್ರತ್ಯೇಕ ಜಗತಿಯ ಮೇಲೆ ಕಟ್ಟಿಲ್ಲ. ನೆಲಮಟ್ಟದಲ್ಲಿಯೇ ಕಟ್ಟಿದ್ದಾರೆ. ಇತರ ಹೊಯ್ಸಳ ದೇವಾಲಯಗಳಂತೆ ಪ್ರಾಣಿ ಪಕ್ಷಿಗಳ ಸಾಲುಗಳುಳ್ಳ ಹಂತ ಹಂತದ ಪಟ್ಟಿಕೆಗಳೂ ಇಲ್ಲಿಲ್ಲ. ಆದರೆ ಉಳಿದಂತೆ ಹೊಯ್ಸಳ ವಾಸ್ತುಶಿಲ್ಪದ ಎಲ್ಲಾ ಕುರುಹುಗಳೂ ಇಲ್ಲಿವೆ. ಗರ್ಭಗೃಹ, ಸುಕನಾಸಿ, ನವರಂಗಗಳಲ್ಲದೆ ನಂದಿಗಾಗಿ ಪ್ರತ್ಯೇಕ ಮಂಟಪವಿರುವುದು ಇಲ್ಲಿನ ವಿಶೇಷ.

ಪೂರ್ವಾಭಿಮುಖವಾಗಿರುವ ದೇವಾಲಯಕ್ಕೆ ನಂದಿಮಂಟಪ ಹಾಗೂ ನವರಂಗದ ನಡುವಿನ ಜಾಗದ ಉತ್ತರ ದಕ್ಷಿಣ ಭಾಗದಿಂದ ಪ್ರವೇಶ ಮಾಡಬಹುದು. ನವರಂಗ ದ್ವಾರದ ಎರಡೂ ಬದಿಯಲ್ಲಿ ಆಳೆತ್ತರದ ಆಕರ್ಷಕ ದ್ವಾರಪಾಲಕರ ವಿಗ್ರಹಗಳಿವೆ. ನವರಂಗದಲ್ಲಿ ನಾಲ್ಕು ಸ್ಥಂಭಗಳ ಮೇಲೆ ಛಾವಣಿಯನ್ನು ನಿಲ್ಲಿ ಸಲಾಗಿದೆ. ಆ ಕಂಬಗಳ ಮೇಲಿರುವ ಶಿಲಾಬಾಲಿಕೆಯರ ಶಿಲ್ಪಗಳು ಬೇಲೂರಿನ ಶಿಲ್ಪಗಳನ್ನು ನೆನಪಿಸುತ್ತವೆ. ಮೊದಲು ಒಟ್ಟು ಹನ್ನೆರಡು ಇದ್ದವಂತೆ. ಅವುಗಳಲ್ಲಿ ಕೆಲವು ಕಳುವಾಗಿ ಸದ್ಯ ಮೂರು ಉಳಿದಿವೆ. ನವರಂಗದ ಛಾವಣಿಯಲ್ಲಿ ಸುಂದರ ಭುವನೇಶ್ವರಿಗಳಿವೆ.

ಗರ್ಭಗುಡಿಯಲ್ಲಿ ನಾಲ್ಕು ಅಡಿ ಎತ್ತರದ ಶಿವಲಿಂಗವಿದ್ದು ಅದನ್ನು ಬ್ರಹ್ಮೇಶ್ವರನೆಂದು ಕರೆಯಲಾಗುತ್ತದೆ. ಇಲ್ಲಿರುವ ಲಿಂಗವನ್ನು ಮೊದಲೇ ಕೆತ್ತಲಾಗಿದ್ದು, ಅದು ಮಲ್ಲೇಶ್ವರ ದೇವಾಲಯದಲ್ಲಿ ಇತ್ತು. ನಂತರ ಅದನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು 1085ರ ಶಾಸನವೊಂದು ತಿಳಿಸುತ್ತದೆ.

ಸುಂದರ ವಾಸ್ತುಶಿಲ್ಪ

ಹೊಯ್ಸಳರ ವಾಸ್ತುಶೈಲಿಯಲ್ಲಿ ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಹೊರಮೈನ ಭಿತ್ತಿಯಲ್ಲಿ ಕಾಣಬಹುದು. ಗಣಪತಿ, ವರಾಹ, ಭೈರವಿ, ಬ್ರಹ್ಮ ಮತ್ತು ಸರಸ್ವತಿ, ಲಕ್ಷ್ಮಿನಾರಾಯಣ, ನರಸಿಂಹ, ಕಾಲ
ಭೈರವ, ನೃತ್ಯಗಾತಿ, ಪೌರಾಣಿಕ ಪಾತ್ರಗಳು ಮತ್ತು ಪ್ರಸಂಗಗಳು ಇಲ್ಲಿ ನಿರೂಪಿತವಾಗಿವೆ. ಮದನಿಕಾ ವಿಗ್ರಹಗಳ ಸಣ್ಣ ಪ್ರತಿಕೃತಿಗಳಿವೆ. ಗರ್ಭಗೃಹದ ಮೇಲೆ ಸುಂದರ ಗೋಪುರವಿದೆ.

ಹೊಯ್ಸಳ ದೊರೆ ಬಿಟ್ಟಿದೇವನು ದ್ವಾರಾವತಿಯಿಂದ ಗಂಗಾ ಮಂಡಲವನ್ನು ಆಳುತ್ತಿದ್ದ. ಆತ ಬ್ರಹ್ಮೇಶ್ವರ ದೇವಾಲಯಕ್ಕೆ ಭೂವನ ಹಳ್ಳಿ ಎಂಬ ಗ್ರಾಮವನ್ನೂ, 15 ಖಂಡುಗದಷ್ಟು ಉತ್ಪತ್ತಿಯುಳ್ಳ ಗದ್ದೆಗಳನ್ನೂ ಕೊಟ್ಟಿದ್ದನೆಂಬ ಉಲ್ಲೇಖ ಶಾಸನಗಳಲ್ಲಿದೆ. ಬ್ರಹ್ಮರ್ಷಿ ಪಂಡಿತ ಎಂಬುವನಿಗೆ ಈ ದತ್ತಿಗಳನ್ನು ಕೊಟ್ಟು, ದೇವಾಲಯದ ನಿರ್ವಹಣೆ ಮತ್ತು ನಿತ್ಯಪೂಜೆಗಳನ್ನು ಮಾಡಬೇಕೆಂದು ವಿಧಿಸಿದ್ದನು.

ಕಾಳಜಿ ಕಾಣುತ್ತಿಲ್ಲ..

ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿನಲ್ಲಿದೆಯಾದರೂ ವಿಶೇಷ ಕಾಳಜಿ ಕಾಣಿಸುವುದಿಲ್ಲ. ಖಾಯಂ ಅರ್ಚಕರು ಇಲ್ಲ. ಹೀಗಾಗಿ ದೇವಾಲಯದ ಮೇಲೆ ನಿಗಾ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ. ಅಲ್ಲದೇ ಈ ದೇವಾಲಯದ ಬಗ್ಗೆ ಪ್ರವಾಸಿಗರಿಗೆ, ಕಲಾಸಕ್ತರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ಈ ದೇವಾಲಯವು ನಿರ್ಲಕ್ಷ್ಯಕ್ಕೆ ಒಳಗಾಗಲು ಮತ್ತೊಂದು ಕಾರಣ.

ಬ್ರಹ್ಮೇಶ್ವರ ದೇವಾಲಯದ ಎದುರಿಗೆ ದೊಡ್ಡಕೆರೆ ಇದೆ. ಇದಲ್ಲದೆ ನರಸಿಂಹ, ಉಪ್ಪರಿಗೆ ಬಸವಣ್ಣ ಹಾಗೂ ಗ್ರಾಮದೇವತೆ ಕಿಕ್ಕೇರಮ್ಮನ ದೇವಾಲಯಗಳು ಕಿಕ್ಕೇರಿಯಲ್ಲಿವೆ. ಪಾಳುಬಿದ್ದ ಹೊಯ್ಸಳ ದೇವಾಲಯಗಳಲ್ಲಿದ್ದ ನರಸಿಂಹ, ಜನಾರ್ದನ, ತಿರುಮಲ ಮೊದಲಾದ ವಿಗ್ರಹಗಳನ್ನು ಹೊಸದಾಗಿ ನಿರ್ಮಿಸಲಾದ ನರಸಿಂಹ ದೇವಾಲಯದಲ್ಲಿ ಇರಿಸಲಾಗಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT