ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹಾಲಿಡೇ ‘ಲೀಡ್’ ಜಾಲಿಡೇ

Last Updated 30 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಪ್ರತಿ ದಿನವೂ ಭಾನುವಾರ ಯಾಕಾಗಬಾರದು? ಹಾಗಾದರೆ ಎಷ್ಟು ಚೆನ್ನ..!

ಕೊರೊನಾವೈರಾಣು ಹರಡುವ ಮುನ್ನ, 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗುವ ತನಕ ಉತ್ಕಟ ಮನೋಭಿಲಾಷೆ ಹೀಗಿತ್ತು. ಆದರೆ, 6ನೇ ದಿನದ ಗೃಹ ಬಂಧನಕ್ಕೇ ರಜೆ ಸಾಕಾಯ್ತು. ರಜೆ-ಸಜೆಯ ಸಹವಾಸವೇ ಬೇಡ. ಕೆಲಸ ಮಾಡುತ್ತಿದ್ದರೆ ಸಾಕಪ್ಪ.. ಎನಿಸಿಬಿಟ್ಟಿದೆ.

ಆದರೆ, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌, ತನ್ನ ‘ಲೀಡ್‌‘ (ಲೀಡರ್ಸ್ ಎಕ್ಸಲರೇಟಿಂಗ್ ಡೆವಲಪ್‌ಮೆಂಟ್‌) ಕಾರ್ಯಕ್ರಮದ 70 ಸ್ವಯಂ ಸೇವಕರಿಗೆ ಈ 21 ದಿನಗಳ ‘ದಿಗ್ಬಂಧನ‘ದ ಸಮಯ ವನ್ನು ಮನೆಯಲ್ಲೇ ಕುಳಿತು ಅರ್ಥಪೂರ್ಣವಾಗಿ ಕಳೆಯುವಂತೆ ‘ವೆಕೇಷನ್‌ ಟಾಸ್ಕ್‌‘ಗಳನ್ನು ರೂಪಿಸಿಕೊಟ್ಟಿದೆ.

‘ಬ್ರೆಕ್ ಕೋವಿಡ್-19 ಚೈನ್’ ಸವಾಲು ಸ್ವೀಕರಿಸಿದ ‘ಲೀಡ್ಚಾಲೆಂಜ್ ಮ್ಯಾನೇಜರ್’ ಸಂತೋಷ ಬಿರಾದಾರ, ಮನೆಯಲ್ಲೇ ಕುಳಿತು ಕೈಗೊಳ್ಳುವ 21ದಿನಗಳಿಗಾಗುವಷ್ಟು ಚಟುವಟಿಕೆಗಳನ್ನು (ಹೋಮ್ಲಿ ಟಾಸ್ಕ್)ಗಳನ್ನು ಸಿದ್ಧಪಡಿಸಿದ್ದಾರೆ. ‘ಲೀಡ್’ ಸಂಯೋಜಕ ಅಭಿನಂದನ್ ಕವಳೆ, ಯೋಜನಾಧಿಕಾರಿ ಗುರನಗೌಡ ಕುರಗುಂದ, ದೇಶಪಾಂಡೆ ಫೌಂಡೇಷನ್ ಸಿಇಓ ವಿವೇಕ್ ಪವಾರ್ ಅವರ ಸಾರಥ್ಯದಲ್ಲಿ ಈ ಯೋಜನೆ ರೂಪುಗೊಂಡಿದೆ.

ಈಲೀಡ್ಯೋಜನೆಯಲ್ಲಿ ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್, ಕಂಪ್ಯೂಟರ್ ಸೈನ್ಸ್ ಸೇರಿದಂತೆ, ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ ವಿಜಯಪುರ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ಹುಬ್ಬಳ್ಳಿ-ಧಾರವಾಡದವರು. ಹುಬ್ಬಳ್ಳಿ ಸ್ಯಾಂಡ್ ಬಾಕ್ಸ್ ಪ್ರೇರಣೆಯಿಂದತೆಲಂಗಾಣ ರಾಜ್ಯದ ಕಾಕತೀಯ ಸ್ಯಾಂಡ್ ಬಾಕ್ಸ್‌ ನಲ್ಲಿ(ಎರಡೂ ದೇಶಪಾಂಡೆ ಫೌಂಡೇಷನ್‌ ಘಟಕಗಳು) ಸಹ ಈಗ ಈ ವಿಶಿಷ್ಠ ಕಾರ್ಯಕ್ರಮ ನಡೆಯುತ್ತಿದೆ.

ಎಂಥ ಸಂದರ್ಭದಲ್ಲೂ ಮನೆ ಬಿಟ್ಟು ಹೊರಬರದೇ, ಮೊಬೈಲ್‌ ಫೋನ್‌ ಬಳಕೆ ಮಿತಗೊಳಿಸಿ, ಮನೆಯವರೊಟ್ಟಿಗೆ ಹಿತವಾದ ‘ಹ್ಯಾಂಡ್ಸ್ ಆನ್ ಎಕ್ಸಪೀರಿಮೆಂಟ್ಸ್’ ಮಾಡುತ್ತ, ರಜೆ ಅವಧಿಯ ಪ್ರತಿ ಎರಡು ದಿನಗಳಿಗೊಮ್ಮೆ ಹೊಸ ಟಾಸ್ಕ್ ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸುತ್ತ ಬಂದಿದ್ದಾರೆ ‘ಲೀಡರ್ಸ್’. ‘ಥಿಂಕಿಂಗ್ ಔಟ್ ಆಫ್ ಬಾಕ್ಸ್’ ಪರಿಕಲ್ಪನೆ ಈ ಯುವ ಮನಸ್ಸುಗಳದ್ದು.

ಲಾಕ್‌ಡೌನ್‌ ದಿನದಿಂದ ಆರಂಭ

‘ಇಂಡಿಯಾ ಲಾಕ್‍ಡೌನ್’ ಘೋಷಣೆಯಾದ ಮೊದಲ ದಿನದಿಂದ, ಎರಡು ದಿನಗಳಿಗೊಂದು ಹೊಸ ಟಾಸ್ಕ್ ರೂಪಿಸಿ ಸಾಮಾಜಿಕ ಮಾಧ್ಯಮದ ಮೂಲಕ (ವಾಟ್ಸ್ಆ್ಯಪ್‌ ಮತ್ತು ಫೇಸ್‍ಬುಕ್)ಲೀಡ್ಸ್ವಯಂ ಸೇವಕರಿಗೆ ದೇಶಪಾಂಡೆ ಫೌಂಡೇಷನ್‍ ಮಾರ್ಗದರ್ಶನ ಮಾಡುತ್ತಿದೆ.

ಮೊದಲೆರೆಡು ದಿನ, ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸ್ವಯಂಸೇವಕರು, ತಪ್ಪು ಮತ್ತು ದೋಷಪೂರಿತ ಮಾಹಿತಿ/ಸುದ್ದಿಗಳನ್ನು ಪ್ರತ್ಯೇಕಿಸಿ, ಮಹತ್ವದ ಸಾರ್ವಜನಿಕ ಹಿತದ ಮತ್ತು ಅಭಿಪ್ರಾಯ ರೂಪಿಸಬೇಕಾದ ವಿಷಯ, ಮಾಹಿತಿ ಮತ್ತು ಸುದ್ದಿಗಳನ್ನು ತಮ್ಮ ಆಪ್ತೇಷ್ಠರಿಗೆ ರವಾನಿಸಿ, ಅನಗತ್ಯ ವಿಷಯ ಹಂಚಿಕೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ‘ಡಿಜಿಟಲ್ ಜಂಕ್’ ನಿಯಂತ್ರಿಸಿದ್ದಾರೆ.

3 ಹಾಗೂ 4 ದಿನ, ‘ಟಿಕ್ ಟಾಕ್’ ತಂತ್ರಾಂಶ ಬಳಸಿಕೊಂಡು,ಕೊರೊನಾವೈರಾಣು ಹರಡುವಿಕೆ ತಡೆಗಟ್ಟಲು ಆರೋಗ್ಯ ಮಾನದಂಡಗಳಡಿ, ಸ್ವಚ್ಛವಾಗಿ ಕೈ ತೊಳೆಯುವ ಬಗೆ, ಮುಖಗವಚ, ಕೈಗವಚ ಹಾಗೂ ಸ್ಯಾನಿಟೈಜರ್ ಬಳಕೆ, ಬಿಸಿ ಪದಾರ್ಥಗಳನ್ನೇ ಸೇವಿಸಬೇಕಾದ ಅನಿವಾರ್ಯತೆ ಕುರಿತು ಪುಟ್ಟ ವಿಡಿಯೊಕ್ಲಿಪ್‍ಗಳನ್ನು ತಯಾರಿಸಿ, ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ.

5 ಹಾಗೂ 6 ದಿನ, ತಮ್ಮ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿ, ಪಕ್ಷಿಗಳಿಗಾಗಿ ವಿಶಿಷ್ಠ ಮಾದರಿಯ ‘ಬರ್ಡ್ ಫೀಡರ್ಸ್’, ‘ವಾಟರ್ ಬಾಲ್ಸ್’ ರೂಪಿಸಿ, ಬಿರು ಬಿಸಿಲಿನಲ್ಲಿ ದಾಹ ತೀರಿಸಿಕೊಳ್ಳಲು ಪಕ್ಷಿ ಮಿತ್ರರಾಗಿದ್ದಾರೆ.

ಮುಂದಿನ ದಿನಗಳ ಚಟುವಟಿಕೆ..

ಮುಂದೆ..7 ಹಾಗೂ 8 ದಿನಕ್ಕೆ, ಓಣಿಯ ಬಿಡಾಡಿ ದನ ಕರು, ನಾಯಿಗಳಿಗೆ ‘ತುತ್ತು ಅನ್ನ ನೀಡೋಣ’ ಎಂಬ ಮಾನವೀಯ ಆಂದೋಲನ ‘ಲೀಡರ್ಸ್’ ನಡೆಸಿದರು. ಮನೆ ಎದುರು ತುಸು ಆಹಾರ, ಬಕೆಟ್‍ನಲ್ಲಿ ನೀರಿಟ್ಟು ಮೂಕ ಪ್ರಾಣಿಗಳ ಹಸಿವು-ದಾಹ ತಣಿಸುವ ಕಾರ್ಯ ಮುಂದುವರಿಸಿದ್ದಾರೆ.

9-10ನೇ ದಿನಕ್ಕೆ, ತಂದೆ-ತಾಯಿಯೊಟ್ಟಿಗೆ ದೇಸಿ/ಜನಪದ ಆಟಗಳಾದ ಪಗಡೆ, ಹುಲಿಮನೆ ಇತ್ಯಾದಿ ಕಲಿಯುವ, 11 ಮತ್ತು 12ನೇ ದಿನಕ್ಕೆ ಅಜ್ಜ ಹಾಗೂ ಅಜ್ಜಿಯರನ್ನು ಕೂಡಿಸಿಕೊಂಡು, ಅವರಿಂದ ಹಾಡು, ಹಸೆ ಮತ್ತು ನೀತಿ ಪಾಠಗಳ ‘ಆಡಿಯೋ-ವಿಡಿಯೋ ಚಿತ್ರಿಕೆ’ ತಯಾರಿಸಿ, ‘ಇ-ಬುಕ್’ ಪ್ರಕಟಿಸುವ ಸಿದ್ಧತೆಲೀಡ್ಸ್ವಯಂಸೇವಕರಲ್ಲಿದೆ.

13-14ನೇ ದಿನದಲ್ಲಿ ಮನೆಯ ಹಳೆಯ ವಸ್ತುಗಳನ್ನು ಬಳಸಿ, ‘ಬೆಸ್ಟ್ ಔಟ್ಫ್ಆ ಫ್‌ ವೇಸ್ಟ್’ ಮಾದರಿಯಲ್ಲಿ ತಮ್ಮ ಅಭ್ಯಾಸ ಕೊಠಡಿಯ ಒಪ್ಪೋರಣ ವಿಶಿಷ್ಠವಾಗಿ ಮಾಡುವ ಸವಾಲು ಸ್ವೀಕರಿಸಿದ್ದಾರೆ. 15-16ನೇ ದಿನಗಳಲ್ಲಿ, ಅಮ್ಮನಿಂದ ಎರಡು ವಿಶೇಷ ಖಾದ್ಯಗಳ ತಯಾರಿಕೆ ಹೇಳಿಸಿಕೊಂಡು, ಮನೆಯ ಎಲ್ಲರಿಗೂ ಉಣಬಡಿಸುವ, ಅಮ್ಮನಿಗೆ ಅಡುಗೆ ಕೆಲಸದಿಂದ ಎರಡು ದಿನ ರಜೆ ಕೊಡುವ ಸಿದ್ಧತೆಯಲ್ಲಿದ್ದಾರೆ. 17-18ನೇ ದಿನ, ಕೂಡಿಟ್ಟ ಹಳೆಯ ವೃತ್ತ ಪತ್ರಿಕೆಗಳನ್ನು ಬಳಸಿಕೊಂಡು, ಔಷಧ ಅಂಗಡಿಗಳಿಗೆ ಅಗತ್ಯವಿರುವ ನಾನಾ ನಮೂನೆಯ ‘ಪೇಪರ್ ಬ್ಯಾಗ್ಸ್’ ತಯಾರಿಸಿ, ಸಮೀಪದ ಅಂಗಡಿಗೆ ನೀಡುವ ಸಂಕಲ್ಪ ‘ಲೀಡರ್ಸ್’ ಮಾಡಿದ್ದಾರೆ. 19-20ನೇ ದಿನ ಮಳೆಗಾಲಕ್ಕೆ ಅನುವಾಗುವಂತೆ, ಬೀಜಗಳ ಗಾತ್ರಕ್ಕೆ ಅನುಗುಣವಾಗಿ ರಂಧ್ರ ಮಾಡಿದ, ಬೀಜವಿಲ್ಲದ ಉಂಡೆಗಳನ್ನು ಮನೆಮಂದಿಯೊಟ್ಟಿಗೆ ತಯಾರಿಸಿ, ಸಿದ್ಧ ಪಡಿಸಿಟ್ಟುಕೊಳ್ಳುವ ತಯಾರಿ ಮಾಡಿಕೊಂಡಿದ್ದಾರೆ!

ಹಕ್ಕಿಗೂಡಿಗೆ ಆಹಾರ..

ಈ ಲೇಖನ ಬರೆಯುವ ವೇಳೆಗೆ,ಲೀಡ್ಸ್ವಯಂ ಸೇವಕರು ಆರು ದಿನಗಳನ್ನು ಪೂರೈಸಿದ್ದರು. ಇಲ್ಲಿವರೆಗೆ ತಾವು ಕಲಿತು ಮಾಡಿದ ಬರ್ಡ್‌ ಫೀಡರ್ಸ್‌ಗಳನ್ನು ಮನೆಯ ಎದುರು ಗಿಡಗಳಿಗೆ ತೂಗಿ ಹಾಕಿದ್ದಾರೆ. ತಾವೇ ತಯಾರಿಸಿದ ಮುಖಗವಚಗಳನ್ನು ಜನರಿಗೆ ಹಂಚಿದ್ದಾರೆ. ಬೀದಿಯ ಪ್ರಾಣಿಗಳಿಗೆ ಆಹಾರವಿಟ್ಟಿದ್ದಾರೆ. ಜನರಲ್ಲಿ ‘ಕೊರೊನಾಸೋಂಕು‘ ಕುರಿತು ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗಾಗಿ, ಕೋವಿಡ್ ರಜೆ-ಸಜೆಯಲ್ಲ; ಮಜವಾಗಿದೆ ಈ ಸ್ವಯಂಸೇವಕರ ಮನೆಗಳಲ್ಲಿ!

ಉಚಿತವಾಗಿ ಹಂಚಿದ್ವಿ

ಕೋವಿಡ್ -19 ವೈರಾಣು ಹರಡಿದ ಬಳಿಕ ಮಾಸ್ಕ್ ‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತ್ರಿ, ರೇಟು ನಾಲ್ಕು ಪಟ್ಟು ಹೆಚ್ಚಾತ್ರಿ, ಅವೆಲ್ಲ ಬಳಸಿ, ಬಿಸಾಕುವಂಥವು, ನಾವು ಯೋಚನೆ ಮಾಡಿದ್ವಿ, ನಮ್ಮಮನೆಯೊಳಗೆ ಹೊಲಿಗೆ ಮಷೀನ್ ಐತಿ,ನಾವ್ಯಾಕ ಪುನರ್ ಬಳಕೆ ಸಾಧ್ಯವಿರುವ ಮಾಸ್ಕ್‌‌ಗಳನ್ನು ತಯಾರಿಸಿ ಅವಶ್ಯಕತೆ ಇರುವವರಿಗೆ ಉಚಿತವಾಗಿ ಕೊಡಬಾರದು ಅಂತ, ತಲಾ 100 ಮಾಸ್ಕ್ ತಯಾರಿಸಿ ಹಂಚಿದ್ವಿರಿ, ಭಾಳ ಖುಷಿಯಾತು. ಇನ್ನೊಬ್ಬರಿಗೆ ಉಪಯೋಗವಾಗೋ ಕೆಲಸಮಾಡಿದ್ವಿ ಅಂತ.
-ಸಂಪದಾ ಅಧ್ಯಾಪಕ, ಎಂಜಿನಿಯರಿಂಗ್ ವಿದ್ಯಾರ್ಥಿನಿ, ಜಮಖಂಡಿ
-ರಂಜಿತಾ ಕಿತ್ತೂರ, ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ, ವಿಜಯಪುರ.

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ, ಈ ಲಿಂಕ್ ಮೂಲಕ 'ಲೀಡ್ ಚಟುವಟಿಕೆಯ ಭಾಗವಾಗಿ,
Facebook-dcselead, Instragram-leadcampus twitter-@dcselead , mobile- 9686654748 helpline

ಚಿತ್ರಗಳು: ದೇಶಪಾಂಡೆ ಪೌಂಡೇಷನ್,ಲೀಡ್ಪ್ರೊಗ್ರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT