ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡ್ಡರ ಮನೆಗಳನ್ನು ಕಂಡೀರಾ?: ರಾಜನಕೋಳೂರಿನಲ್ಲಿ ಪುರಾತನ ಪಳೆಯುಳಿಕೆ

Last Updated 4 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಯಾದಗಿರಿ ಜಿಲ್ಲೆಯ ಹುಣಸಗಿಯಿಂದ 10 ಕಿ.ಮೀ. ದೂರದಲ್ಲಿರುವ ರಾಜನಕೋಳೂರು ಒಂದರ್ಥದಲ್ಲಿ ಐತಿಹಾಸಿಕ ತಾಣ. 2900 ವರ್ಷಗಳ ಹಿಂದೆ ನಿರ್ಮಿತ ಇಲ್ಲಿನ ಬುಡ್ಡರ ಮನೆಗಳು ವಿದೇಶಿಯರು ಸೇರಿ ಹಲವರಿಗೆ ಕುತೂಹಲ ಮೂಡಿಸಿವೆ. ಸಂಶೋಧನೆಗೆ ಆಸ್ಪದ ಮಾಡಿಕೊಟ್ಟಿವೆ. ಒಂದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಬುಡ್ಡರ ಮನೆಗಳು ಇರುವುದು ಈ ಪ್ರದೇಶದ ವಿಶೇಷ...

ನಾರಾಯಣಪುರ ಬಸವಸಾಗರ ಜಲಾಶಯದ ನೀರಿನ ಭೋರ್ಗರೆತ ಕಣ್ತುಂಬಿಕೊಂಡು ಇನ್ನೇನೂ ಶಹಾಪುರದತ್ತ ಸಾಗಬೇಕು ಎನ್ನುವಷ್ಟರಲ್ಲಿ ವಾಹನದ ಮುಂಭಾಗದಲ್ಲಿ ಕೂತಿದ್ದ ಶಿಕ್ಷಕ ಕೈದಾಳ ಕೃಷ್ಣಮೂರ್ತಿ ಹಿಂದಿರುಗಿ, ‘ಇಲ್ಲಿನ ರಾಜನಕೋಳೂರು ಬಳಿಯಿರುವ ಬುಡ್ಡರ ಮನೆಗಳ ಬಗ್ಗೆ ಗೊತ್ತಾ? ಎಂದರು. ರಸ್ತೆ ಬದಿ ನೋಡುತ್ತ ನಿಧಾನವಾಗಿ ಕಣ್ಣು ಮುಚ್ಚುತ್ತಿದ್ದ ನನಗೆ ನಿದ್ದೆಯೇ ಹಾರಿಹೋಯಿತು. ಪಟ್ಟನೆ ಎಚ್ಚರಗೊಂಡೆ.

ಸಂಜೆ 6 ದಾಟಿತ್ತು. ಕತ್ತಲು ಆವರಿಸತೊಡಗಿತ್ತು. ಚಾಲಕನನ್ನು ವೇಗವಾಗಿ ಸಾಗುವಂತೆ ಹೇಳಿ, ವಾಹನವನ್ನು ಕಾಲುವೆ ಬದಿ ನಿಲ್ಲಿಸಿದರು. ಅವಸರದಲ್ಲಿ ಕೆಳಗಿಳಿದು ನೋಡಿದರೆ, ‘ಬುಡ್ಡರ ಮನೆ’ಯ ಗೇಟಿನ ಬೀಗ ನಿರಾಸೆಗೊಳಿಸಿತು. ಆದರೇನಂತೆ, ಕಾಂಪೌಂಡ್‌ನ ಕಂಬಿ ಜಿಗಿದು ಒಳ ಹೊಕ್ಕಿ ಚಿತ್ರಗಳನ್ನು ಕ್ಲಿಕ್ಕಿಸಿದೆ. ಸಮೀಪದಲ್ಲೇ ಮರದ ಕಟ್ಟೆ ಮೇಲೆ ಕೂತಿದ್ದ ಗ್ರಾಮಸ್ಥರು ಕೂಗಿ, ‘ಸಾಹೇಬ್ರ, ನಮ್ಮೂರಾಗ ಬಿಟ್ಟರೆ ಇಷ್ಟೊಂದು ಬುಡ್ಡರ ಮನೆಗಳು ಬೇರೆಲ್ಲೂ ಇಲ್ಲ’ ಎಂದರು.

‘ಇವುಗಳನ್ನು ಡಾಲ್ಮೆನ್‌ (ಹಾಸು ಬಂಡೆಯ ಗೋರಿ), ಮಹಾಶಿಲೆ, ಸ್ಮಶಾನ ಎಂದು ನೀವು ಏನಾದರೂ ಕರೆಯಿರಿ. ಆದರೆ, ಇವು ನಮ್ಮ ಪಾಲಿಗೆ ಬುಡ್ಡರ ಮನೆಗಳು. ಇತಿಹಾಸ ತಜ್ಞರು, ಸಂಶೋಧಕರು ಆಗಾಗ್ಗೆ ಇಲ್ಲಿ ಬಂದು ಹೋಗುತ್ತಾರೆ. ಆದರೆ, ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಸಿಕ್ಕಿಲ್ಲ’ ಎಂದು ಅವರು ಹೇಳಿದರು. ಇದರ ಕುರಿತು ಮಾಹಿತಿ ಹೆಕ್ಕಿದಷ್ಟು ಕುತೂಹಲ ಹೆಚ್ಚುತ್ತದೆ ಎಂದು ಅವರ ಮುಖಭಾವ ಹೇಳುತಿತ್ತು.

ಆಸಕ್ತಿಕರ ಸಂಗತಿಯೆಂದರೆ, ಇವು 2900 ವರ್ಷಗಳಷ್ಟು ಪುರಾತನವಾದವು. ಸಮಾಧಿಗಳಾದರೂ ಇವುಗಳ ಆಕಾರ ಸಂಪೂರ್ಣ ಭಿನ್ನ. ಯಾವುದೂ ಸಮ ಎತ್ತರದಲ್ಲಿಲ್ಲ. ಕೆಲವು 12 ಅಡಿ ಎತ್ತರವಿದ್ದರೆ, ಇನ್ನೂ ಕೆಲವು 3 ಅಡಿಯಷ್ಟು ಕಿರಿದು. ದೂರದಿಂದ ಪುಟ್ಟ ಮನೆಯಂತೆ ಕಾಣುತ್ತವೆ. ಆದರೆ, ಅವುಗಳಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಆದರೆ, ಮೃತರಿಗೆಂದೇ ಈ ‘ಬುಡ್ಡರ ಮನೆ’ಗಳು ಅಸ್ತಿತ್ವಕ್ಕೆ ಬಂದವು.

ಇಲ್ಲಿನ ಬಹುತೇಕ ಶಿಲೆಗಳು ಕಬ್ಬಿಣದ ಯುಗದಲ್ಲಿ ನಿರ್ಮಾಣಗೊಂಡವು. ಕೆಲವಷ್ಟು ಶಿಲೆಗಳು ಕಬ್ಬಿಣದ ವಿಸ್ತ್ರತ ಬಳಕೆಗೂ ಮುನ್ನ ನಿರ್ಮಾಣಗೊಂಡವು. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮತ್ತು ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್‌ನಲ್ಲಿ ಇಂಥ ಸ್ಮಾರಕ ಶಿಲೆಗಳನ್ನು ಕಾಣಬಹುದು. ಈ ತರಹದ ಶಿಲೆಗಳು ಪುರಾತನ ಮಾರ್ಗದಲ್ಲಿಯೇ ಹೆಚ್ಚು ಕಂಡು ಬರುವುದು ವಿಶೇಷ. ಆಗಿನ ಕಾಲಘಟ್ಟದಲ್ಲಿ ಮಣಿ, ಸಲಕರಣೆಗಳಂತಹ ಸರಕುಗಳ ವ್ಯಾಪಾರ ಹೆಚ್ಚು ನಡೆಯುತಿತ್ತು.

‘ಪುಟ್ಟದಾದ 4 ರಿಂದ 5 ಮನೆಗಳಲ್ಲಿ ಗಿಡ್ಡರು ವಾಸಿಸುತ್ತಿದ್ದರೆಂದು ಮತ್ತು ಸತ್ತ ಬಳಿಕ ಅವರನ್ನು ಅಲ್ಲಿಯೇ ಸಮಾಧಿ ಮಾಡಲಾಗುತಿತ್ತು ಎಂದು ಪೂರ್ವಜರು ಹೇಳುತ್ತಾರೆ. ಆದರೆ, ಇದರ ಕುರಿತು ಇನ್ನಷ್ಟು ಸಂಶೋಧನೆ ಆಗಬೇಕಿದೆ. ಅದಕ್ಕೆಂದೇ ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ, ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಸಂಪರ್ಕಿಸುತ್ತಿದ್ದೇವೆ’ ಎಂದು ರಾಜನಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ಉಲ್ಲೇಸೂರ ಹೇಳುತ್ತಾರೆ.

ಬುಡ್ಡರ ಮನೆಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಲು ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಗೇಟಿನ ವ್ಯವಸ್ಥೆ ಮಾಡಲಾಗಿದೆ. ಪುರಾತತ್ವ ಇಲಾಖೆಯವರು ಮಾಹಿತಿ ಫಲಕವನ್ನು ಅಳವಡಿಸಿದ್ದಾರೆ. ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಇದರ ಕುರಿತು ಮಾಹಿತಿ ಸಿಗಬೇಕು. ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕು ಎಂಬುದು ಗ್ರಾಮಸ್ಥರ ಉದ್ದೇಶ. ಇದಕ್ಕಾಗಿ ಅವರ ಪ್ರಯತ್ನ ಮುಂದುವರೆದಿದೆ.

ಬಗೆಬಗೆಯ ಶಿಲೆಗಳು..

ಪುರಾತನ ಕಾಲದಲ್ಲಿ ಅಂತ್ಯಕ್ರಿಯೆ ವೇಳೆ ಡಾಲ್ಮೆನ್‌ಗಳನ್ನು ನಿರ್ಮಿಸಲಾಗುತಿತ್ತು. ನಿಡಿಕಲ್ಲು ಅಥವಾ ಸ್ಮಾರಕ ಶಿಲೆ (ಮೆನ್ಹೀರ್), ಕಲ್ಲಿನ ವರ್ತುಲಗಳು ಅಥವಾ ಚೂ‍ಪು ತುದಿಯ ಒರಟು ಕಲ್ಲುಗಳ ರಾಶಿ (ಕೈರ್ನ್‌) ಬೇರೆ ಮಾದರಿಯ ಶಿಲೆಗಳನ್ನು ಜಗತ್ತಿನ ವಿವಿಧೆಡೆ ಇವೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT