ಗುರುವಾರ , ಸೆಪ್ಟೆಂಬರ್ 24, 2020
27 °C

ತೋಟವೇ ಶಾಲೆ; ರೈತರೇ ಶಿಕ್ಷಕರು

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ Updated:

ಅಕ್ಷರ ಗಾತ್ರ : | |

Prajavani

ಆ ಮಕ್ಕಳು ಪೈರಿನಲ್ಲಿದ್ದ ಒಂದೊಂದು ಕಾಳನ್ನು ಕುತೂಹಲದಿಂದ ಮುಟ್ಟಿ ನೋಡುತ್ತಿದ್ದರು. ಪರಸ್ಪರ ತಮಗೆ ತಿಳಿದಂತೆ ಪ್ರಶ್ನೆ ಕೇಳುತ್ತಿದ್ದರು. ಇನ್ನೊಂದು ಮಕ್ಕಳ ಗುಂಪು ಹೆಸರು ಕೇಳಿರದ ಕೃಷಿ ಪರಿಕರಗಳನ್ನು ಅಚ್ಚರಿಯಿಂದ ವೀಕ್ಷಿಸುತ್ತಿದ್ದರು. ಕೆಲವರು ಕಳೆ ಕಿತ್ತರೆ, ಕೆಲವರು ಕಿತ್ತ ಕಳೆಯನ್ನು ಒಟ್ಟು ಮಾಡುತ್ತಿದ್ದರು. ಈ ಮಕ್ಕಳು ಕೇಳುತ್ತಿದ್ದ ಕುತೂಹಲದ ಪ್ರಶ್ನೆಗಳಿಗೆ ತೋಟದ ಮಾಲೀಕರು ಅಷ್ಟೇ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಯೂನಿಫಾರ್ಮ್‌ ತೊಟ್ಟ ಮಕ್ಕಳು ಜಮೀನಿನ ತುಂಬಾ ಲವಲವಿಕೆಯಿಂದ ಓಡಾಡುತ್ತಿದ್ದಾಗ ಇಡೀ ತೋಟವೇ ಶಾಲೆಯಂತೆ ಕಾಣುತ್ತಿತ್ತು !

ಇಂಥ ‘ಹಸಿರು ಪಾಠ’ ಕೇಳಲು ತೋಟಕ್ಕೆ ಬಂದವರು ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಶಾಲೆಯ ನಾಲ್ಕನೇ ತರಗತಿಯ ಮಕ್ಕಳು. ಈ ಚಟುವಟಿಕೆಗೆ ಅವರಿಗೆ ಪಠ್ಯದ ಭಾಗವೇನಲ್ಲ. ಆದರೆ, ಆ ತರಗತಿಯ ಕನ್ನಡ ಪಠ್ಯದಲ್ಲಿನ ‘ಅಜ್ಜಿಯ ತೋಟದಲ್ಲಿ ಒಂದು ದಿನ’ ಎಂಬ ಪಾಠ, ಮಕ್ಕಳನ್ನು ಈ ತೋಟಕ್ಕೆ ಬರುವಂತೆ ಮಾಡಿತು.

ಆ ಪಾಠದ ಸಾರ ಹೀಗಿದೆ; ರಜಾದಿನದಲ್ಲಿ ಮಕ್ಕಳೆಲ್ಲ ಸೇರಿ ಶಿಕ್ಷಕರೊಂದಿಗೆ ಅಜ್ಜಿಯ ತೋಟಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿನ ಪರಿಸರ ವೈವಿಧ್ಯ, ತೋಟದಲ್ಲಿ ಬೆಳೆಯುವ ಬೆಳೆಗಳನ್ನು ನೋಡುತ್ತಾ ಕಲಿಯುತ್ತಾರೆ. ಈ ಪಾಠದಿಂದ ಮಕ್ಕಳಿಗೆ ತೋಟ ನೋಡುವ ಆಸೆಯಾಗುತ್ತದೆ. ಶಿಕ್ಷಕರೂ ಕೂಡ ಮಕ್ಕಳಿಗೆ ಕೃಷಿ ಚಟುವಟಿಕೆಗಳ ನೈಜದರ್ಶನ ಮಾಡಿಸುವ ಬಗ್ಗೆ ಚಿಂತಿಸುತ್ತಾರೆ. ಪರಿಣಾಮವಾಗಿ ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಗಿಣಿಗೇರಾ ಗ್ರಾಮದ ಪಕ್ಕದಲ್ಲಿರುವ ರೈತರ ಕೊಂಡೊಯ್ಯ ಅವರ ತೋಟಕ್ಕೆ ಕರೆದೊಯ್ಯುದಿದ್ದರು.

ಮಕ್ಕಳು ತಮ್ಮ ತೋಟಕ್ಕೆ ಬಂದರೆಂಬ ಖುಷಿಯಲ್ಲೇ ರೈತ ಕೊಂಡಯ್ಯ ಅವರ ಪತ್ನಿ, ಮಕ್ಕಳೊಂದಿಗೆ ಮಕ್ಕಳಾದರು. ನುಗ್ಗೆ ತೋಟದಲ್ಲಿ ಕಳೆ ಕೀಳುವ ಕೆಲಸ ಕೈಬಿಟ್ಟು ಮಕ್ಕಳೊಂದಿಗೆ ಬೆರೆತು ಕೃಷಿ ಪಾಠವನ್ನು ಹೇಳಿಕೊಡಲಾರಂಭಿಸಿದರು.

ಕೃಷಿಪರಿಕರಗಳ ದರ್ಶನ..

ಕೊಂಡಯ್ಯ, ತಾವು ಬಳಸುವ ಕೃಷಿ ಪರಿಕರಗಳನ್ನು ಮನೆಯ ಅಂಗಳದಲ್ಲಿ ಸಾಲಾಗಿ ಜೋಡಿಸಿಟ್ಟರು. ಅವರ ಪತ್ನಿ, ಒಂದೊಂದೇ ಪರಿಕರಗಳನ್ನು ಮಕ್ಕಳಿಗೆ ತೋರಿಸುತ್ತಾ, ‘ಇದು ಸಲಿಕೆ. ಇದರಿಂದ ಮಣ್ಣು ತೆಗಿತೀವಿ. ಇದು ಕುರ್ಚಿಗಿ, ಕುಡುಗೋಲು, ಕುಂಟೆ, ನೇಗಿಲು, ಮೇವುಗತ್ತರಿ, ಕುಡ’ ಎಂದು ಪರಿಚಯಿಸಿದರು. ಇವುಗಳನ್ನು ಪರಿಚಯಿಸುತ್ತ ಹೋದಂತೆಲ್ಲ ಮಕ್ಕಳು ಕಣ್ಣರಳಿಸಿ ನೋಡುತ್ತಿದ್ದರು. ಕುತೂಹಲದಿಂದ ಅವುಗಳನ್ನು ಬಳಸಿ ನೋಡಿದರು.

ಮಕ್ಕಳಿಗೆ ಕೃಷಿ ಸಲಕರಣಿಗಳನ್ನು ಪರಿಚಯಿಸಿದ ಅವರು, ಪಕ್ಕದಲ್ಲೇ ಇದ್ದ ನುಗ್ಗೆ ಸೊಪ್ಪು, ಚವಳಿಗಿಡ, ಸಜ್ಜೆ ತೋಟಗಳತ್ತ ಕರೆದೊಯ್ದರು. ಅಲ್ಲಿದ್ದ ಬೆಳೆ ವೈವಿಧ್ಯದ ಕುರಿತು ಮಾಹಿತಿ ನೀಡಿದರು. ಬಳಿಕ ಮಕ್ಕಳು ಕಳೆ ಕಿತ್ತರು. ಕಿತ್ತ ಕಳೆಯನ್ನು ರಾಶಿ ಮಾಡಿದರು. ಖುಷಿ ಖುಷಿಯಾಗಿ ಆಟವಾಡುವ ಹಾಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಶ್ರಮದಾನದೊಂದಿಗೆ ಕಥೆ..

ಶ್ರಮದಾನ ಮಾಡುತ್ತಲೇ ರೈತ ದಂಪತಿ ಕಥೆ ರೂಪದಲ್ಲಿ ತಮ್ಮ ಕೃಷಿ ಜೀವನವನ್ನು ಮಕ್ಕಳಿಗೆ ವಿವರಿಸಿದರು. ಮಕ್ಕಳು ಕೂಡ ಅವರನ್ನು ‘ಕೃಷಿ ವಿಧಾನ ಹೇಗೆ. ಹೇಗೆ ಬೆಳೆಯುತ್ತೀರಿ. ಬೆಳೆದ ತರಕಾರಿಯನ್ನು ಎಲ್ಲಿ ಮಾರಾಟ ಮಾಡುತ್ತೀರಿ. ಎಷ್ಟು ಲಾಭ ಬರುತ್ತದೆ. ನಷ್ಟವಾದಾಗ ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಿಸಿದರು ರೈತ ದಂಪತಿ.

ಕೃಷಿ ಪಾಠದ ನಂತರ, ಊಟ. ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಅಜ್ಜಿಗೆ ಧನ್ಯವಾದ ಹೇಳಿ ಒಲ್ಲದ ಮನಸ್ಸಿನಿಂದ ಶಾಲೆ ಕಡೆ ಪಯಣ ಬೆಳೆಸಿದರು.

‘ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠಕ್ಕಿಂತ ನಿಸರ್ಗದ ಜೊತೆಗೆ ಕಲಿಯುವ ಪಾಠವೇ ಶ್ರೇಷ್ಠ ಮತ್ತು ಪರಿಣಾಮಕಾರಿ’ – ಇದು ರವೀಂದ್ರನಾಥ ಟಾಗೋರರು ಮಾತು ಇಲ್ಲಿ ಕೃತಿಗೆ ಇಳಿಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು