ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕನಸಿನ ‘ಗ್ರಾಮ ಸೇವೆ’

Last Updated 3 ಅಕ್ಟೋಬರ್ 2019, 9:36 IST
ಅಕ್ಷರ ಗಾತ್ರ

ಸೆಪ್ಟೆಂಬರ್ ಎರಡನೇ ವಾರದ ಕೊನೆಗೆ ವಿಜಯಕುಮಾರ್ ವಾಟ್ಸ್‌ಆ್ಯಪ್‌ ಸಂದೇಶ ಕಳಿಸಿದ್ದರು, ‘ನಮ್ಮ ತಂಡದ 194ನೇ ಶ್ರಮದಾನ. ಊರಿನ ಸಹಕಾರಿ ಸಂಘದ ಕಟ್ಟಡವನ್ನು ಶುಚಿಗೊಳಿಸಿದ್ದೇವೆ’ ಎಂದು. ಜತೆಗೆ ಚಿತ್ರವನ್ನೂ ಕಳಿಸಿದ್ದರು. ಹಾಗಾದರೆ 193 ವಾರಗಳಲ್ಲಿ ಈ ತಂಡ ಏನೇನು ಮಾಡಿದೆ?

ಗ್ರಾಮೀಣ ಭಾರತದ ಅಭಿವೃದ್ಧಿ ಎಂಬ ವಿಷಯ ಪ್ರಸ್ತಾಪವಾದಾಗಲೆಲ್ಲ ಕೋಟಿ ಕೋಟಿ ರೂಪಾಯಿಗಳ ಅನುದಾನ ಕಣ್ಮುಂದೆ ರಾಚುತ್ತದೆ. ಆರ್ಥಿಕ ಸಹಕಾರಗಳು ಮೇಲಾಟವಾಡುತ್ತವೆ. ಆದರೆ, ಅಭಿವೃದ್ಧಿ ಎನ್ನುವುದನ್ನು ಪೈಸೆಯಿಂದ ಪ್ರತ್ಯೇಕಿಸಿದಾಗ, ನಿಜವಾದ ಅಭಿವೃದ್ಧಿಯ ಹಾದಿ ಕಾಣುತ್ತದೆ. ಆಗ ‘ಸೇವೆ’ಗೆ ನಿಜವಾದ ಅರ್ಥ ಬರುತ್ತದೆ. ಇಂಥದ್ದೇ ಸೇವೆಯನ್ನು ವಿಜಯಕುಮಾರ್ ತಂಡ ಮಾಡುತ್ತಿದೆ. ಹಳ್ಳಿಗೆ ದನಿಯಾಗಿದೆ!

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಮಡಪ್ಪಾಡಿ ಚಿಕ್ಕ ಹಳ್ಳಿ. ಬಹುತೇಕರು ಅಡಿಕೆ ಕೃಷಿಕರು. ತಾಲ್ಲೂಕು ಕೇಂದ್ರದಿಂದ ಊರಿಗೆ ಒಂದೆರಡು ಸರ್ಕಾರಿ ಬಸ್‍ಗಳು ಬಂದುಹೋಗುತ್ತವೆ. ಮಿಕ್ಕಂತೆ ಜನರು ಸ್ವಂತ ವಾಹನ, ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದಾರೆ. ಒಂದು ಸಹಕಾರಿ ಸಂಘವಿದೆ, ಶಾಲೆಯಿದೆ.

ಈ ಹಳ್ಳಿಯಲ್ಲಿ ರೂಪುಗೊಂಡ ‘ಮಹಾತ್ಮ ಗಾಂಧಿ ಗ್ರಾಮ ಸೇವಾ ಕೇಂದ್ರ’ಕ್ಕೆ ಇದೇ ಅಕ್ಟೋಬರ್‌ 2ರ ಗಾಂಧಿಜಯಂತಿಗೆ ಐದು ವರ್ಷ ತುಂಬುತ್ತದೆ. ಈ ಸೇವಾ ತಂಡದಲ್ಲಿ ಹದಿನಾಲ್ಕು ಮಂದಿ ಸದಸ್ಯರಿದ್ದಾರೆ. ಎಲ್ಲರೂ ಐವತ್ತು ಮೀರಿದವರು! ವಾರಕ್ಕೊಂದು ದಿನ - ಶನಿವಾರ ಅಥವಾ ರವಿವಾರ ಹಳ್ಳಿಗಾಗಿ ‘ಶ್ರಮದಾನ’ ಮಾಡುತ್ತಾರೆ. ಬೆಳಿಗ್ಗೆ ಏಳು ಗಂಟೆಯಿಂದ ಒಂಬತ್ತೂವರೆ ತನಕ. ರಸ್ತೆ, ಮೋರಿ, ಮುಳುಗುಸೇತುವೆ, ಸಾರ್ವಜನಿಕ ಸ್ಥಳಗಳ ಶುಚೀಕರಣ... ಹೀಗೆ ಐದು ವರ್ಷಗಳಿಂದ ಇವರ ಶ್ರಮ ಕೈಂಕರ್ಯ ನಡೆಯುತ್ತಿದೆ. ಸಮವಸ್ತ್ರ ಧರಿಸಿಕೊಂಡು, ಸಮಯ ಪಾಲನೆಯೊಂದಿಗೆ, ಶಿಸ್ತು ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ.

ತಂಡದ ಸದಸ್ಯರಲ್ಲಿ ಸ್ವಂತ ವಾಹನವಿದೆ. ಪರಸ್ಪರ ಸಂವಹನಕ್ಕೆ ವಾಟ್ಸ್‌ಆ್ಯಪ್ ಗುಂಪು ಮಾಡಿಕೊಂಡಿದ್ದಾರೆ. ಮುಂದಿನ ವಾರ ಯಾವ ಕೆಲಸ ಮಾಡಬೇಕು. ಯಾರು, ಯಾರು ಎಲ್ಲಿ ಸೇರಬೇಕು. ಕೆಲಸದ ವಿಧಾನ ಏನು.. ಎಂಬಿತ್ಯಾದಿ ಮಾಹಿತಿಯನ್ನು ಸಂಚಾಲಕ ವಿಜಯಕುಮಾರ್ ಮೊದಲೇ ರವಾನಿಸುತ್ತಾರೆ. ಕೆಲಸಕ್ಕೆ ಬೇಕಾದ ಹಾರೆ, ಪಿಕಾಸಿ, ಕತ್ತಿಯತಹ ಪರಿಕರಗಳನ್ನು ಸದಸ್ಯರೇ ಹೊಂದಿಸಿಕೊಳ್ಳುತ್ತಾರೆ. ಒಂದಿಬ್ಬರ ಅಸೌಖ್ಯತೆ ಹೊರತುಪಡಿಸಿ, ಗೈರು ಹಾಜರಾದವರು ತೀರಾ ಕಡಿಮೆ. ಶಶಿಧರ್ ಕೇವಳ ಅವರು ಒಂದು ರಜೆಯನ್ನು ತೆಗೆದುಕೊಳ್ಳದ ಸದಸ್ಯರು.

‘ನಾವು ಕೆಲಸಗಳನ್ನು ಪ್ರತಿಷ್ಠೆಗಾಗಿ ಮಾಡಿದ್ದಲ್ಲ. ನಮ್ಮ ನಮ್ಮ ಸಂತೋಷಕ್ಕೆ ಮಾತ್ರ. ಆರಂಭದಲ್ಲಿ ತೊಡಗಿದಾಗ ಇವರಿಗೇನೋ ಅನುದಾನ ಬರುತ್ತದೆ ಎನ್ನುವ ಗುಮಾನಿ ಅನೇಕರಲ್ಲಿತ್ತು. ಅದೆಲ್ಲ ಇಲ್ಲ ಎಂದು ತಿಳಿದಾಗ ಸುಮ್ಮನಾದರು. ನಮ್ಮ ಕೆಲಸಗಳಿಗೆ ಮಾಧ್ಯಮದ ಬೆಳಕು ಬಿದ್ದಾಗ ವಿಚಾರಗಳು ನಾಲ್ದೆಸೆ ಹಬ್ಬಿತು’ ಎನ್ನುತ್ತಾರೆ ವಿಜಯಕುಮಾರ್. ಪ್ರತಿ ಶ್ರಮದಾನದಂದು ಎಷ್ಟು ಸದಸ್ಯರು ಹಾಜರಾದರು, ಇಲ್ಲಿವರೆಗೆ ಏನೆಲ್ಲ ಕೆಲಸಗಳಾಗಿವೆ. ತಮ್ಮ ಕೆಲಸದ ಬಗ್ಗೆ ಬಂದಿರುವ ವರದಿಗಳ ಪತ್ರಿಕಾ ತುಣುಕುಗಳು.. ಹೀಗೆ ಎಲ್ಲ ದಾಖಲೆಗಳನ್ನೂ ವ್ಯವಸ್ಥಿತವಾಗಿ ಜೋಡಿಸಿದ್ದಾರೆ. ಶ್ರಮದಾನದ ವಿಡಿಯೊ ಡಾಕ್ಯುಮೆಂಟರಿಯೂ ಇದೆ.

ಹಳ್ಳಿಯನ್ನು ಸಂಪರ್ಕಿಸುವ ರಸ್ತೆಗಳ ಇಕ್ಕೆಡೆಗಳಲ್ಲಿ ಗಿಡಗಳು ಬೆಳೆದು ರಸ್ತೆಯನ್ನಾವರಿಸಿಕೊಳ್ಳುವುದು ಸಹಜ. ರಸ್ತೆ ಮಧ್ಯೆ ನಿರ್ಮಾಣವಾಗುವ ಹೊಂಡಗಳಿಂದ ದ್ವಿಚಕ್ರ ವಾಹನಗಳಿಗೆ ತೊಂದರೆ. ಕಾಡು ಕಡಿಯದೆ, ರಸ್ತೆ ಕಿರಿದಾಗಿ ವಾಹನ ಸಂಚಾರ ತೊಡಕಾಗುತ್ತದೆ. ಕೆಲವೆಡೆ ಅಪಘಾತಗಳಾವುದೂ ಇದೆ. ಈ ಎಲ್ಲಾ ಸೂಕ್ಷ್ಮತೆಯನ್ನು ಅರ್ಥೈಸಿಕೊಂಡ ತಂಡ, ವರ್ಷಕ್ಕೆ ಕನಿಷ್ಠ ಮೂರು ಬಾರಿ ಗಿಡ, ಮುಳ್ಳುಗಳನ್ನು ಸವರಿ ಶುಚಿಗೊಳಿಸಿ, ದಾರಿಯನ್ನು ಸುಗಮಗೊಳಿಸಿದೆ.

‘ಕೆಲವೊಮ್ಮೆ ರಸ್ತೆಯ ಬದಿಯಲ್ಲಿ ಓಟೆ ಬಿದಿರಿನ ಗುಚ್ಛಗಳೇ ಬೆಳೆದು ವಾಹನ ಅಷ್ಟೇ ಅಲ್ಲ, ಮನುಷ್ಯರು ನಡೆದಾಡಲು ಸಾಧ್ಯವಾಗುತ್ತಿ ರಲಿಲ್ಲ. ಇಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ವೈಭವೀಕರಿಸುವುದಕ್ಕಿಂತ, ಇದಕ್ಕೇನು ಪರಿಹಾರ ಮಾಡಬೇಕೆಂದು ಯೋಚಿಸಿದೆವು. ತಕ್ಷಣ ಕಾರ್ಯಪ್ರವೃತ್ತರಾದೆವು. ನಮ್ಮಲ್ಲಿರುವ ಎಲ್ಲವನ್ನೂ ಪಂಚಾಯತ್, ಸರ್ಕಾರ ಮಾಡಲಿ ಎಂಬ ಮನಸ್ಥಿತಿ ಬದಲಾಗಬೇಕು’ – ತಂಡದ ಹಿರಿಯ ಸದಸ್ಯ ಪಿ.ಸಿ.ಜಯರಾಂ ವಾಸ್ತವದತ್ತ ಬೆರಳು ತೋರುತ್ತಾರೆ.

ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗದೆ ರಸ್ತೆಯ ಡಾಂಬರ್‌ ಕಿತ್ತು ಹೋಗುತ್ತಿದೆ. ಇದರಿಂದಾಗಿ ರಸ್ತೆಗಳಲ್ಲಿ ಹೊಂಡ- ಗುಂಡಿಗಳಾಗಿದ್ದವು. ಕೆಲವೊಮ್ಮೆ ರಸ್ತೆಗೆ ಗುಡ್ಡಗಳು ಜರಿದು ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡವು. ಇದನ್ನು ಯಾರೂ ಗಮನಿಸುವುದಿಲ್ಲ. ಮಳೆಗಾಲದಲ್ಲಿ ನೀರು ಎಲ್ಲೆಲ್ಲೋ ಹರಿದು ಹಾನಿ ಮಾಡಿಬಿಡುತ್ತದೆ. ಈ ಮೂಲಭೂತ ಸಮಸ್ಯೆಯನ್ನು ಅರಿತ ತಂಡವು ಚರಂಡಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಟ್ಟಿದೆ.

ಮಳೆಗಾಲದಲ್ಲಿ ಸಂಭವಿಸಿದ ನೆರೆಗೆ ಮರದ ದಿಮ್ಮಿಗಳು, ಗೆಲ್ಲುಗಳು ಮೋರಿಗೆ-ಮುಳುಗು ಸೇತುವೆಗೆ ಅಡ್ಡವಾಗಿ ನಿಂತು ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀರು ಹರಿದು ಹೋಗದೆ ಕೃತಕ ನೆರೆ ಸೃಷ್ಟಿಯಾಗುತ್ತದೆ. ‘ಇಂತಹ ಸಂದರ್ಭದಲ್ಲಿ ಯಾರನ್ನೂ ಕಾಯಲಿಲ್ಲ. ಊರಿನ ಸಮಸ್ಯೆಯ ಪರಿಹಾರಕ್ಕೆ ನಾವೇ ಮುಂದಾಗಿದ್ದೆವು. ಮೋರಿಯ ಕೆಳಭಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯ, ಕಸ, ಕಡ್ಡಿಗಳನ್ನು ಶುಚಿಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದ್ದೆವು’ – ವಿಜಯಕುಮಾರ್ ತಮ್ಮ ತಂಡದ ಕೆಲಸಗಳನ್ನು ಒಂದೊಂದೇ ನೆನಪು ಮಾಡಿಕೊಂಡರು.

ಶಾಲೆಗೆ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ತಂಡ ನೂರು ಅಡಿಕೆ ಗಿಡಗಳನ್ನು ನೆಟ್ಟಿದೆ. ಆ ಗಿಡಗಳಿಗೆ ನೀರು ಪೂರೈಸಲು ಹೊಂಡ ಮಾಡಿಸಿದ್ದಾರೆ. ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ಗೊಬ್ಬರ, ಕಳೆ ಕೀಳುವ ಕೆಲಸಗಳನ್ನೆಲ್ಲಾ ಸದಸ್ಯರೇ ನಿರ್ವಹಿಸುತ್ತಾರೆ. ‘ಇನ್ನೊಂದೆರಡು ವರ್ಷಗಳಲ್ಲಿ ಒಂದೂವರೆ ಖಂಡಿ ಅಡಿಕೆಯು ಶಾಲೆಗೆ ವರಮಾನ ತರುತ್ತದೆ’ ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ ಸೋಮಶೇಖರ ಕೇವಳ. ಯುವಕ ಮಂಡಲದ ಆವರಣದ ಶುಚಿತ್ವ ಮತ್ತು ದುರಸ್ತಿ, ಶೌಚಾಲಯ ಶುಚೀಕರಣ, ಸನಿಹದ ಕಂದ್ರಪ್ಪಾಡಿ ಎನ್ನುವಲ್ಲಿ ಮೂವತ್ತು ಮರಗಿಡಗಳನ್ನು ನೆಟ್ಟು ಪೋಷಣೆ.. ಹೀಗೆ ಹತ್ತಾರು ಕಾರ್ಯಗಳನ್ನು ತಂಡ ಕೈಗೊಂಡಿದೆ.

ಸೇವಾಕೇಂದ್ರ ತಂಡ ಕಟ್ಟಲು ನಿಮಗೆ ಪ್ರೇರಣೆ ಹೇಗೆ? ಈ ಪ್ರಶ್ನೆಗೆ ಸಂಚಾಲಕ ವಿಜಯಕುಮಾರ್ ಹೇಳುತ್ತಾರೆ, ‘2014ರ ಕಾಲಘಟ್ಟ. ಊರಿಗಾಗಿ ಏನಾದರೂ ಮಾಡಬೇಕು ಎನ್ನುವ ಯೋಚನೆಯಿತ್ತು. ಸಮಾನ ಮನಸಿಗರಲ್ಲಿ ವಿಚಾರ ಪ್ರಸ್ತಾಪಿಸಿದೆ. ಅದೇ ಹೊತ್ತಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಸ್ವಚ್ಛ ಭಾರತ್’ ಕಲ್ಪನೆಯನ್ನು ಘೋಷಿಸಿದರು. ನಮ್ಮ ಯೋಜನೆಗೆ ಮಾನಸಿಕವಾಗಿ ಬಲ ಬಂತು. ಅಕ್ಟೋಬರ್ 2, 2014 ರಂದು ಕೆಲಸ ಶುರು ಮಾಡಿದೆವು. ಆರಂಭದಲ್ಲಿ ಏಳು ಮಂದಿ ಇದ್ದೆವು. ಈಗ ಡಬ್ಬಲ್ ಆಗಿದೆ’.

ಸ್ವಚ್ಛ ಭಾರತ್ ಅಂದರೆ ಬಿದ್ದ ಕಸವನ್ನು ಹೆಕ್ಕುವುದಷ್ಟೇ ಅಲ್ಲ! ತಮ್ಮ ತಮ್ಮ ಊರಿನ ಸ್ವಚ್ಛತೆಯನ್ನು ಕಾಪಾಡುವುದು ಕೂಡ. ಇದು ನಮ್ಮ ಆಂದೋಲನದ ಒಂದು ಭಾಗವಾಗಿದೆ. ಮಡಪ್ಪಾಡಿಯ ತಂಡ ಊರಿಗೆ ಸ್ಪಂದಿಸಿದೆ. ‘ನಮ್ಮ ಕೆಲಸಕ್ಕೆ ಪ್ರಶಂಸೆ ಬೇಡ. ಯಾರು ನೆಗೆಟಿವ್ ಮಾತಾಡ್ತಾರೆ ಎನ್ನುವ ಯೋಚನೆಯೂ ನಮಗಿಲ್ಲ. ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ. ಹೊಸ ಯುವಕರು ಮುಂದೆ ಬಂದು ತಂಡವನ್ನು ಮುನ್ನಡೆಸಬೇಕು. ಈಗ ರಸ್ತೆಗಳು ನವೀಕರಣಗೊಂಡಿವೆ. ಮೊದಲಿನಂತೆ ಕೆಲಸಗಳಿಲ್ಲ. ನಮ್ಮ ಕೆಲಸದ ದಿಕ್ಕನ್ನು ಬದಲಿಸಬೇಕಾಗಿದೆ’ – ಇದು ತಂಡದ ಯೋಚನಾ ದಿಕ್ಕು.

ಪ್ರಧಾನಿಯವರ ಕನಸನ್ನು ಹಳ್ಳಿಯ ಒಂದು ಸಣ್ಣ ತಂಡವು ಸಾಕಾರಗೊಳಿಸಿದೆ. ಗಾಂಧೀಜಿಯವರ ಯೋಚನೆಯ ಕೂಡಾ ಗ್ರಾಮೋದ್ಧಾರವಾಗಿತ್ತು. ಮಡಪ್ಪಾಡಿಯ ಮಹಾತ್ಮ ಗಾಂಧಿ ಗ್ರಾಮ ಸೇವಾ ಕೇಂದ್ರವು ನಿಜಾರ್ಥದ ‘ಸೇವೆ’ಯತ್ತ ಹೆಜ್ಜೆಯೂರಿದೆ. ಮುಂದೆ ಈಗಿನ ನಿರ್ವಹಣಾ ಕೆಲಸಗಳ ಜತೆಗೆ ನೆಲ-ಜಲ ಸಂರಕ್ಷಣೆಯತ್ತ ಹೊರಳಲು ರೂಪುರೇಷೆ ಸಿದ್ಧವಾಗುತ್ತಿದೆ.

ತಂಡದ ಶಕ್ತಿ

ತಂಡದ ಸದಸ್ಯರು. ಎಂ.ಡಿ.ವಿಜಯಕುಮಾರ್ (ಸಂಚಾಲಕರು), ಚಂದ್ರಶೇಖರ ಗುಡ್ಡೆಮನೆ, ಗಂಗಯ್ಯ ಪೂಂಬಾಡಿ, ಪಿ.ಸಿ.ಜಯರಾಮ, ಪ್ರಶಾಂತ ಪೂಂಬಾಡಿ, ರಾಜಕುಮಾರ ಪೂಂಬಾಡಿ, ಶಶಿಧರ ಕೇವಳ, ಶಿವಪ್ಪ ಪೂಂಬಾಡಿ, ಸೋಮಶೇಖರ ಕೇವಳ, ಸುನಿಲ್ ಮಡಪ್ಪಾಡಿ, ವಿಶ್ವನಾಥ ಗೋಳಾಡಿ, ವಿಶ್ವನಾಥ ಕಜೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT