ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಚಿ ತಿನ್ನುವ ಸುಖ...

Last Updated 13 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಹಂಚಿ ತಿನ್ನುವಲ್ಲಿರುವ ಸುಖ ಅರ್ಥವಾಗಿದೆ. ಎಲ್ಲ ಕುಟುಂಬಗಳೂ ಬೆರೆತು ಆಹಾರ ಸಿದ್ಧಪಡಿಸಿ ಹಂಚಿ ತಿಂದಾಗ ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂತೃಪ್ತ ಭಾವ ಮೂಡುತ್ತದೆ.

– ಇದು ಹೆಣ್ಣೂರಿನ ನಾರ್ತ್‌ವುಡ್‌ ಲೇಔಟ್‌ನಲ್ಲಿರುವ ಶೀಲಾ ಬಿರಾದಾರ್‌ – ವಿಜಯ್‌ ಜಗತಾಪ್‌ ದಂಪತಿಯ ಮಾತು. ಶೀಲಾ ಅವರು ಫಿಲಿಪ್ಸ್‌ ಇನ್ನೋವೇಷನ್‌ ಕ್ಯಾಂಪಸ್‌ನ ಉದ್ಯೋಗಿ. ಈ ದಂಪತಿಯ ಮಾತಿಗೆ ಅವರ ಪಕ್ಕದ ಮನೆಯ ಕುಟುಂಬದ ಬೆನ್ನಿ ಮತ್ತು ಅವರ ಪತ್ನಿ ಆ್ಯನ್ಸಿ ಅವರೂ ದನಿಗೂಡಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಹಸಿದಕೊಂಡಿರುವವರಿಗಾಗಿ ಏನಾದರೂ ಮಾಡಬೇಕು ಎಂದು ಇವರೆಲ್ಲರ ಮನ ತುಡಿಯುತ್ತಿತ್ತು. ಹಾಗೆಂದು ಬೀದಿಗಿಳಿಯುವಂತಿಲ್ಲ. ಹೀಗಾಗಿ, ಸಮೀಪದ ಪೊಲೀಸ್‌ ಠಾಣೆಯ ಅಧಿಕಾರಿಗಳನ್ನು ಭೇಟಿಯಾಗಿ ನಮ್ಮ ಇಂಗಿತ ವ್ಯಕ್ತಪಡಿಸಿದರು. ಅವರೂ ಸಮ್ಮತಿಸಿದರು. ಅದೇ ದಿನ ಇದ್ದಕ್ಕಿದ್ದಂತೆ ಬೆನ್ನಿ ಅವರೂ ಬಂದು ನಾವು ಒಂದಿಷ್ಟು ಜನರಿಗೆ ಅಡುಗೆ ಮಾಡಿ ಬಡಿಸಿದರೆ ಹೇಗೆ? ಎಂದು ಕೇಳಿದರು.

ಶೀಲಾ ಬಿರಾದಾರ್‌ ಮನೆಯಂಗಳದಲ್ಲಿ ಅಡುಗೆ ಸಿದ್ಧತೆ

ಹಾಗೆ ಹೇಳಿದ್ದೇ ತಡ ಐಡಿಯಾ ಜಾರಿಗೂ ಬಂತು. ಬಾಡಿಗೆಯ ಅಡುಗೆ ಪಾತ್ರೆ ತಂದಾಯಿತು. ಬೆನ್ನಿ ಮತ್ತು ವಿಜಯ್‌ ನೇತೃತ್ವದಲ್ಲೇ ಮನೆಯಂಗಳದಲ್ಲೇ ಅಡುಗೆ ಕೇಂದ್ರ ಸ್ಥಾಪನೆ ಆಯಿತು. ಅವರಿಬ್ಬರು ಹೋಗಿ ದಿನಸಿ ಸಾಮಗ್ರಿ ತಂದರು. ಮೊದಲ ದಿನವೇ ಸುಮಾರು 200 ಜನರಿಗೆ ಬೇಕಾದಷ್ಟು ಅಡುಗೆ ಸಿದ್ಧವಾಯಿತು.

ಅಡುಗೆ ಸಿದ್ಧವಾಯಿತು. ಇದನ್ನು ತಲುಪಿಸುವುದು ಹೇಗೆ? ಮತ್ತೆ ಪೊಲೀಸರಿಗೆ ಕರೆ ಮಾಡಿದರು. ಆ ಸಮಯಕ್ಕೆ ಆಗಲೇ ಪೊಲೀಸರು ಆಹಾರದ ಅಗತ್ಯವಿದ್ದ ಪ್ರದೇಶಗಳನ್ನು ಗುರುತಿಸಿದ್ದರು. ಬೈಯಪ್ಪನಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್‌ ರಫಿ ಅವರ ನೇತೃತ್ವದಲ್ಲೇ ಈ ತಂಡದ ಇಬ್ಬರು ಹೋಗಿ ಆಹಾರ ಪೊಟ್ಟಣ ವಿತರಿಸಿದರು. ಮೊದಲ ದಿನದ ಪ್ರತಿಕ್ರಿಯೆ ಇಡೀ ತಂಡಕ್ಕೆ ಹುರುಪು ತಂದಿತು. ಈ ‘ದಾಸೋಹ’ ಪ್ರಕ್ರಿಯೆ ನಿರಂತರವಾಯಿತು. ಈಗಲೂ ಪೊಲೀಸ್‌ ವಾಹನದ ಹಿಂದೆ ಆಹಾರ ಪೊಟ್ಟಣ ಹೊತ್ತ ಬಿರಾದಾರ್‌ ಕುಟುಂಬದ ಕಾರುಗಳು ಹೋಗುತ್ತವೆ.

ಒಂದು ಬದಲಾವಣೆ...

ಎರಡು ಕುಟುಂಬಗಳ ಆಸಕ್ತಿ ನೋಡಿ ಅಕ್ಕಪಕ್ಕದವರೂ ಕೈಜೋಡಿಸಿದರು. ಸಲಿಲ್‌, ಸುರೇಂದ್ರನ್‌, ತೆನ್‌ರಾಜ್‌ ಸಹಿತಹಲವರು ಅಡುಗೆಗೆ, ಪ್ಯಾಕಿಂಗ್‌, ವಿತರಣೆ ಹೀಗೆ ಯಾವುದೆಲ್ಲ ಸಾಧ್ಯವೋ ಆಯಾ ಕೆಲಸ ಮಾಡಿದರು. ಓಣಿಯ ಮಕ್ಕಳೆಲ್ಲಾ ಅಡುಗೆ ರುಚಿಗೆ ಮನಸೋತರು.

‘ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ, ಆದರೆ, ಇಷ್ಟೊಂದು ಪ್ರಮಾಣದಲ್ಲಿ ಸಿದ್ಧಪಡಿಸುತ್ತೇನೆ ಅಂದುಕೊಂಡಿರಲಿಲ್ಲ. ಅದೇ ರುಚಿ, ಗುಣಮಟ್ಟ ಕಾಯ್ದುಕೊಂಡಿದ್ದೇನೆ’ ಎಂದು ಖುಷಿಯಾಗಿ ಹೇಳಿದರು ಶೀಲಾ.

ಈ ‘ದಾಸೋಹ’ದ ವಿಚಾರ ತಿಳಿದು ಬಿರಾದಾರ್‌ ಅವರ ಸಹಪಾಠಿಗಳು, ಸ್ನೇಹಿತರು ಅವರವರ ವ್ಯಾಪ್ತಿಯೊಳಗೆ ಅಡುಗೆ, ಆಹಾರ ವಿತರಣೆ ಆರಂಭಿಸಿದರು. ತಮ್ಮ ನಿತ್ಯದ ಅಡುಗೆಯಲ್ಲಿ ಒಂದಿಷ್ಟು ಹೆಚ್ಚು ಸಿದ್ಧಪಡಿಸಿ ಅಗತ್ಯವುಳ್ಳವರಿಗೆ ಕೊಟ್ಟರು. ಇನ್ನು ಕೆಲವರು, ಬ್ರೆಡ್‌, ಬಿಸ್ಕೆಟ್‌ ಕೊಟ್ಟರು. ಹೀಗೆ ಈಗ ದಾಸೋಹ ಹಲವು ವಿಸ್ತಾರ ಪಡೆದಿದೆ.

ಏನೇನು ಮೆನು?

ಎಲ್ಲ ಪೌಷ್ಟಿಕಾಂಶ ಇರುವಂತೆಆಹಾರಸಿದ್ಧಪಡಿಸಲಾಗುತ್ತದೆ. ವೆಜ್‌ ಪಲಾವ್‌, ವೆಜ್‌ ಬಿರಿಯಾನಿ, ಪುದೀನಾ ಬಟಾಣಿ ರೈಸ್‌... ಹೀಗೆ ದಿನಕ್ಕೊಂದು ವೈವಿಧ್ಯ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಪೊಟ್ಟಣದಲ್ಲಿ ಒಂದಿಷ್ಟು ಹೆಚ್ಚು ಪ್ರಮಾಣದ ಆಹಾರ ಹಾಕುತ್ತಾರೆ. ಕೆಲವರಿಗೆ ರಾತ್ರಿ ಊಟಕ್ಕೂ ಅನುಕೂಲವಾಗುವಂತೆ ಪ್ರಮಾಣ ಕಾಯ್ದುಕೊಳ್ಳುತ್ತಿದ್ದಾರೆ.

ಒಟ್ಟಾರೆ ಲಾಕ್‌ಡೌನ್‌ನ 19 ದಿನಗಳ ಕಾಲ ನಿರಂತರವಾಗಿ ಹಸಿದವರಿಗೆ ಊಟ ನೀಡಿದ ತೃಪ್ತಿ ಇಲ್ಲಿನವರದ್ದು. ಎಲ್ಲಿಯೂ ಹಣದ ನೆರವಿಗೆ ಕೈಚಾಚದೇ ತಮ್ಮಲ್ಲಿದ್ದದ್ದನ್ನಷ್ಟೇ ಬಳಸಿಕೊಂಡು ದಾಸೋಹ ನಡೆಸಿದೆ ಈ ಬಿರಾದಾರ್‌ ಕುಟುಂಬ ನೇತೃತ್ವದ ತಂಡ.

ಮಾಹಿತಿಗೆ ಶೀಲಾ ಬಿರಾದಾರ್‌: ಮೊ. 9538600877

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT