ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧದ ನಡುವೆ ಬೆಲೆ ಕಂಡವರು...

Last Updated 6 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಆದಾಗ ಮಾರುಕಟ್ಟೆ ಸಿಗದೆ ಹಣ್ಣು ಸೇರಿದ ಹಾಗೆ ಕೃಷಿ ಉತ್ಪನ್ನಗಳನ್ನು ತಿಪ್ಪೆಗೆಸೆದವರು ಎಷ್ಟೋ ಜನ. ಆದರೆ, ಹಾಗೆ ಮಾಡದೆ ಪರ್ಯಾಯ ಮಾರ್ಗ ಹುಡುಕಿ ಯಶಸ್ವಿಯಾದವರ ಕಥೆ ಇಲ್ಲಿದೆ.

‘ಕೋಹಿನೂರ್‌’ ಬೆಲೆ ಬಂತು ಕರಬೂಜಕೆ...
‘ನಾಲ್ಕೆಕರೆ ಕೊಹಿನೂರ್ ಕರಬೂಜ ಬೆಳೆದಿದ್ದೆ; ಕಟಾವಾಗೋಕೂ ಕೋರೊನಾ ಬರೋಕು ಸರಿ ಹೋಯ್ತು, ತಗೋಳೋರು ಯಾರಾದ್ರೂ ಇದ್ದಾರಾ?‘– ಶಿವಮೊಗ್ಗದ ಸ್ನೇಹಿತ ಕಿರಣ್ ಪ್ರಶ್ನೆ.

ಲಾಕ್‌ಡೌನ್‌ ಘೋಷಣೆಗೆ ಮೊದಲು ಹೇಗೋ ಒಂದಿಪ್ಪತ್ತು ಟನ್ನನ್ನು ಮುಂಬೈ ಮಾರುಕಟ್ಟೆಗೆ ಕಳುಹಿಸಿಬಿಟ್ಟಿದ್ದರು. ಇನ್ನೂ 20-25 ಟನ್ ಹಣ್ಣಿತ್ತು. ಎದೆಗುಂದದೆ ನೋಡೇಬಿಡೋಣಾಂತ ‘ಎಕೊ ಆಹಾರ್’ ಬ್ರಾಂಡಿನಡಿ ಶಿವಮೊಗ್ಗದ ಗ್ರಾಹಕರಿಗೆ ಮಾರಲು ಶುರು ಮಾಡಿದರು. ಒಂದಷ್ಟು ಮಾರಾಟವೂ ಆಯ್ತು. ದುರಾದೃಷ್ಟ, ಲಾಕ್‌ಡೌನ್‌ ಘೋಷಣೆ ಆಯ್ತು. ಮೊದಲು ಮಾರಾಟವೂ ನಿರ್ಬಂಧ, ನಂತರ ಸಡಿಲಿಕೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆಯಿಂದ ಗ್ರಾಹಕರ ಮನೆ ಮನೆಗೆ ತೆರಳಿ ಮಾರುತ್ತಿರುವ ಪರಿಣಾಮ ಕರಬೂಜದ ಲಾಟು ಬಹುತೇಕ ಕರಗಿದೆ. ಜೊತೆಗೆ ಹಾಕಿದ ಬಂಡವಾಳಕ್ಕೆ ಮೋಸವಾಗಿಲ್ಲ. ಕೈಚೆಲ್ಲಿ ಕುಳಿತಿದ್ರೆ, ಲಕ್ಷಾಂತರ ರೂಗಳ ನಷ್ಟ ಅನುಭವಿಸಬೇಕಿತ್ತು.

ಅರಿಸಿನ ಚಿನ್ನವಾಯಿತು...
ಕಳೆದ ಸಲ ಏಳೇ ಗುಂಟೆಯಲ್ಲಿ ಅರಿಸಿನ ಬೆಳೆದಿದ್ದರು ದೇವಗಳ್ಳಿ (ಮೈಸೂರು) ಶಂಕರೇಗೌಡರು. ಸಾವಯವ ವಿಧಾನದಲ್ಲಿ ಬೆಳೆದಿದ್ದ ಅರಿಸಿನವಾದ್ದರಿಂದ, ಅದನ್ನು ಬೇಯಿಸಿ, ಒಣಗಿಸಿ ಪಾಲಿಷ್ ಮಾಡಿ ಪುಡಿ ಮಾಡಿಸಿದರು. ಏಳು ಗುಂಟೆ ಪ್ರದೇಶದಲ್ಲಿ ಬೆಳೆದ ಅರಿಸಿನ ಪುಡಿ ಮಾಡಿದಾಗ 400 ಕೆ.ಜಿ ಸಿಕ್ಕಿತು. ‘ಮಾರ್ಕೆಟ್‌ ರೇಟ್‌ನಲ್ಲಿ ಮಾರಿದರೆ ₹25 ಸಾವಿರ ಸಿಕ್ಕಿರೋದು. ನಾನು ಹಂಗೆ ಮಾಡ್ಲಿಲ್ಲ. ನಂದೇ ಬ್ರಾಂಡ್ ಮಾಡಿ, ಕೆ.ಜಿಗೆ ₹300ರಂತೆ ದರ ನಿಗದಿ ಮಾಡಿ ಮಾರಿಬಿಟ್ಟೆ. ಲಕ್ಷದ ಮೇಲೆ ಇಪ್ಪತ್ಸಾವ್ರ ಸಿಕ್ತು, ಖರ್ಚು-ವೆಚ್ಚ ಕಳ್ದು ಒಂದುಳಿತು‘ ಅಂದ್ರು ಗೌಡರು. ಬಹಳಷ್ಟು ರೈತರು ಎಕರೆಯಲಿ ಅರಿಸಿನ ಬೆಳೆದು ಮಾರಿದರೂ ಸದ್ಯದ ಮಾರುಕಟ್ಟೆ ದರದಲ್ಲಿ ಲಕ್ಷ ಸಿಗೋದು ಕಷ್ಟ. ಇಂಥಹವರ ನಡುವೆ ಶಂಕರೇಗೌಡರ ಪ್ರಯತ್ನ ಮತ್ತು ಸಿಕ್ಕ ಯಶಸ್ಸು ಶ್ಲಾಘನೀಯ.

ಸಂಪರ್ಕ ಮೊ.: 94809 09359.

ಮೌಲ್ಯವರ್ಧಿಸಲು ತರಬೇತಿ ಯಾರು ಕೊಡುತ್ತಾರೆ?
ಈಗಾಗಲೇ ಅಂತಹ ಕೆಲಸದಲ್ಲಿ ತೊಡಗಿರುವ ಕೃಷಿಕರು; ಸಿಎಫ್‍ಟಿಆರ್‌ಐ ಮೈಸೂರು (08212514534ಮತ್ತು ttbd@cftri.res.in), ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು(080-23086100), ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ (9480696381, de@uhsbagalkot.edu.in), ಪ್ರತಿ ಜಿಲ್ಲೆಯಲ್ಲೂ ಇರುವ ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕೆ ವಿಶ್ವವಿದ್ಯಾಲಯ/ಕಾಲೇಜುಗಳನ್ನು ಸಂಪರ್ಕಿಸಬಹುದು.

ಸದ್ಯದ ಸ್ಥಿತಿಯಲ್ಲಿ ಚರ್ಚೆಯಾಗುತ್ತಿರುವ ಅನೇಕ ಪರ್ಯಾಯ ಅವಕಾಶ-ಸಾಧ್ಯತೆಗಳು ‘ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು‘ ಎಂಬಂತಾಗಿದೆ. ಮುಂದೆಯೂ ಗುಡ್ಡಕ್ಕೆ ಬೆಂಕಿ ಮತ್ತೆ ಮತ್ತೆ ಬೀಳುತ್ತಲೇ ಇರುತ್ತದೆ(ಬೇಡಿಕೆ/ದರ ಕುಸಿತ ಆಗಾಗ ಆಗುತ್ತಲೇ ಇರುತ್ತದೆ); ಅದಕ್ಕಾಗಿಯಾದರೂ ಈಗಲೇ ಸಿದ್ಧರಾಗಬೇಕಾಗಿರುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT