ಕಲಬುರ್ಗಿಯಲ್ಲಿ ವೈಷ್ಣೋದೇವಿ ದರ್ಶನ!

7

ಕಲಬುರ್ಗಿಯಲ್ಲಿ ವೈಷ್ಣೋದೇವಿ ದರ್ಶನ!

Published:
Updated:

ಕೆಂಪು ಬಣ್ಣದ ಬಂಡೆಗಳನ್ನು ರಾಶಿ ಹಾಕಿದಂತೆ ಕಾಣುವ ಬೆಟ್ಟ. ಅದರ ಮೇಲೆ ಬಿಳಿ ಬಣ್ಣದ ದೇಗುಲಗಳು. ತುಸು ಕತ್ತೆತ್ತಿ ನೋಡಿದರೆ, ಬೆಟ್ಟದ ತುದಿಯಲ್ಲಿ ಮತ್ತೊಂದು ಗೋಪುರ. ಕೆಳಭಾಗ ದಲ್ಲಿರುವ ಗುಹೆಯಂತಹ ದ್ವಾರದಿಂದ ಮೆಟ್ಟಿಲುಗಳನ್ನು ಹತ್ತಿ ಮೇಲೇರುತ್ತಿದ್ದರೆ, ದಾರಿ ಉದ್ದಕ್ಕೂ ‘ದೇಗುಲಗಳ ದರ್ಶನ’. ಬೆಟ್ಟದ ತುದಿ ತಲುಪಿದರೆ ವೈಷ್ಣೋದೇವಿಯ ದರ್ಶನ...!

ಇದು ಕಲಬುರ್ಗಿಯ ಆಳಂದ ಮುಖ್ಯರಸ್ತೆಯ ಗಬರಾದಿ ಲೇಔಟ್‌ನಲ್ಲಿ ಕಾಣುವ ವೈಷ್ಣೋದೇವಿ ದೇವಾಲಯದ ಚಿತ್ರಣ. ‘ಅರೆ, ವೈಷ್ಣೋದೇವಿ ದೇವಾಲಯ ಜಮ್ಮುವಿನಲ್ಲಿ ಅಲ್ಲವೆ ಇರೋದು’ ಎಂದು ಆಶ್ಚರ್ಯಪಡಬೇಡಿ. ನಿಜ, ಅಲ್ಲೇ ಇರೋದು. ಆದರೆ, ಆ ದೇವಾಲಯದ ಪ್ರತಿರೂಪವನ್ನೇ ಕಲಬುರ್ಗಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗಬರಾದಿ ರಿಲಿಜಿಯನ್‌ ಟ್ರಸ್ಟ್‌ ಮತ್ತು ಸ್ನೇಹಿತರು ಸೇರಿ ಇದನ್ನು ನಿರ್ಮಿಸಿದ್ದಾರೆ. ಒಂದು ಎಕರೆಯಲ್ಲಿ 108 ಅಡಿ ಎತ್ತರವಿರುವ ಬೆಟ್ಟದ ರೀತಿಯೇ ವಿನ್ಯಾಸಗೊಳಿಸಿದ್ದಾರೆ. 

ಎರಡು ವರ್ಷಗಳ ಹಿಂದೆ...
ಫೆಬ್ರುವರಿ 20, 2014ರಂದು ದೇವಾಲಯ ನಿರ್ಮಾಣ ಕಾರ್ಯ ಆರಂಭವಾಯಿತು. ಜೂನ್ 20, 2018ರ ವೇಳೆಗೆ ಪೂರ್ಣಗೊಂಡು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ‘ಬಡವರು ಜಮ್ಮುವಿನವರೆಗೂ ಹೋಗಿ ವೈಷ್ಣೋದೇವಿ ದರ್ಶನ ಮಾಡುವುದು ಕಷ್ಟ. ಅಂಥವರಿಗೆ ಇಲ್ಲೇ ಆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಕಲಬುರ್ಗಿಯಲ್ಲೇ ದೇವಾಲಯ ನಿರ್ಮಿಸಲು ನಿರ್ಧಾರ ಮಾಡಿದೆವು. ನಮ್ಮ ಕಾರ್ಯಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ತುಂಬಾ ಸಂತೋಷವಾಗುತ್ತಿದೆ’ ಎಂದು ಟ್ರಸ್ಟ್‌ ಕಾರ್ಯದರ್ಶಿ ರಾಜು ಗಬರಾದಿ ಸಂತಸ ಹಂಚಿಕೊಂಡರು.

ಸರ್ಕಾರದ ನೆರವಿಲ್ಲದೆ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಮಂದಿರಕ್ಕೆ ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ, ಪುಣೆ, ರಾಯಚೂರು, ಧಾರವಾಡ, ಮುಂಬೈ ಸೇರಿದಂತೆ ವಿವಿಧ ಜಿಲ್ಲೆಗಳು ಮತ್ತು ಅಕ್ಕಪಕ್ಕದ ರಾಜ್ಯಗಳಿಂದಲೂ ಜನರು ಬರುತ್ತಿದ್ದಾರೆ. ಪ್ರತಿದಿನ 700–800 ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಾನುವಾರದಂದು ಈ ಸಂಖ್ಯೆ ಎರಡು ಸಾವಿರ ದಾಟುತ್ತದೆ. ದೇವಾಲಯದಲ್ಲಿ ಪ್ರಸಾದದ ವ್ಯವಸ್ಥೆ ಇಲ್ಲ. ಟ್ರಸ್ಟ್‌ ಮೂಲಕ ತೆಂಗಿನಕಾಯಿ ಹಾಗೂ ದೇವಿಯ ಚಿತ್ರವಿರುವ ಚಿಕ್ಕ ನಾಣ್ಯವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಇಲ್ಲಿ ತೆಂಗಿನಕಾಯಿ ಒಡೆಯುವಂತಿಲ್ಲ ಎನ್ನುತ್ತಾರೆ ದೇವಾಲಯದವರು.

ಬೆಟ್ಟ ಏರುವುದಕ್ಕೆ ವ್ಯವಸ್ಥೆ
ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ದೇವಾಲಯವನ್ನು ತೆರೆದಿರುತ್ತಾರೆ. ಆ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಮಧ್ಯಾಹ್ನ 4 ಗಂಟೆಯಿಂದ ಸಂಜೆ 8 ಗಂಟೆವರೆಗೆ ದೇವಾಲಯ ತೆರೆದಿರುತ್ತದೆ. ಬೆಳಿಗ್ಗೆ 6 ಗಂಟೆಗೆ ಪೂಜೆ ಆರಂಭ. ಬೆಳಿಗ್ಗೆ 7 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಆರತಿ ನೆರವೇರುತ್ತದೆ. 

ಬೆಟ್ಟದ ಮೇಲಕ್ಕೆ ಹತ್ತಲು ಮತ್ತು ಇಳಿಯಲು ಮೆಟ್ಟಿಲು, ಇಳಿಜಾರಿನ ಹಾದಿಯ ವ್ಯವಸ್ಥೆ ಇದೆ. ಹಿರಿಯರು, ಅಶಕ್ತರು, ಮಕ್ಕಳಿಗಾಗಿ ಲಿಫ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ಬೆಟ್ಟದ ಮೇಲೆ ಹತ್ತುವಾಗ ಮೊದಲು ಗಣೇಶ, ಹನುಮಂತ ದೇವರು, ಚಾಮುಂಡಿದೇವಿಯ ದೇವಾಲಯಗಳು ಸಿಗುತ್ತವೆ. ಮುಂದೆ ಸಾಗಿದರೆ ಪಾರ್ವತಿ, ವೈಷ್ಣವಿ, ಸರಸ್ವತಿ ದೇವಿಯ ದೇವಾಲಯ ಕಾಣುತ್ತದೆ. ನಂತರದಲ್ಲಿ ದತ್ತಾತ್ರೆಯ, ಭೈರವ, ಕಾಳಿಕಾ ಮಾತೆ, ಬಾಲಾಜಿ, ಚರಣ ಪಾದುಕೆಯ ದರ್ಶನವಾಗುತ್ತದೆ.

ಭೈರವಗುಹೆ ಕಟ್ಟಡ ನಿರ್ಮಾಣ ಹಂತದಲ್ಲಿದೆ. 2 ರಿಂದ 3 ತಿಂಗಳಿನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮುಂದೆ ಅಮರನಾಥದಲ್ಲಿರುವಂತೆ ‘ಮಂಜುಗಡ್ಡೆ ಅಮರಾಥನ’ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸುವ ಯೋಚನೆ ಇದೆ. ಮುಂದಿನ ದಿನಗಳಲ್ಲಿ ರಾಘವೇಂದ್ರ, ಅಯ್ಯಪ್ಪ, ಮಹಾವೀರ, ನವಗ್ರಹ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಟ್ರಸ್ಟ್‌ನವರು.

ನಿರ್ಮಾಣದಲ್ಲಿ ತೊಡಗಿಕೊಂಡವರು..
ಮಧ್ಯಪ್ರದೇಶದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜಾನಿ ಅವರು ಬೆಟ್ಟದ ಶೈಲಿಯ ಕಲ್ಲು ಬಂಡೆಗಳನ್ನು ನಿರ್ಮಿಸಿದ್ದಾರೆ. ಖಾಜಾಮಿಯಾ ಲೇಬರ್‌ ಕಂಟ್ರಾಕ್ಟರ್ ಮೆಟ್ಟಿಲು ಮತ್ತು ಇಳಿಜಾರಿನ ಹಾದಿ ನಿರ್ಮಿಸಿದ್ದಾರೆ. ಸೋನಾಪುರದ ಎಂಜಿನಿಯರ್‌ ದೇವಾಲಯದ ನೀಲನಕ್ಷೆ ಸಿದ್ಧಪಡಿಸಿಕೊಟ್ಟಿದ್ದಾರೆ. ಮುಂದೆ ದೇವಾಲಯದ ಸುತ್ತಲಿನ ಗೋಡೆ ಹಾಗೂ ಉದ್ಯಾನ ನಿರ್ಮಿಸುವ ಯೋಜನೆ ಇದೆ. ಇನ್ನು ಕೆಲವು ತಿಂಗಳುಗಳಲ್ಲಿ ಅದು ಕಾರ್ಯ ರೂಪಕ್ಕೆ ಬರಲಿದೆ. ಭಕ್ತರಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಗೇಟ್‌ ವ್ಯವಸ್ಥೆ ಮಾಡಲಾಗುತ್ತಿದೆ. 


–ಚಾಮುಂಡೇಶ್ವರಿ ದೇವಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !