ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುನಾಡಿನ ಅಂಚೆಚೀಟಿಗಳು...

Last Updated 4 ನವೆಂಬರ್ 2019, 19:30 IST
ಅಕ್ಷರ ಗಾತ್ರ

ದೇಶದಲ್ಲಿ 3500ಕ್ಕೂ ಹೆಚ್ಚು ಸ್ಮರಣೆಯ ಅಂಚೆ ಚೀಟಿಗಳನ್ನು ಹೊರತರಲಾಗಿದೆ. ಅದರಲ್ಲಿ ಕನ್ನಡ ನಾಡಿಗೆ ಸಂಬಂಧಿಸಿದ ಸ್ಟ್ಯಾಂಪ್ ಸಂಖ್ಯೆ ಸುಮಾರು 65. ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ತಿಂಗಳಲ್ಲಿ, ಕನ್ನಡ ನಾಡಿನ ಆಯ್ದ ಅಂಚೆ ಚೀಟಿಗಳ ಕುರಿತ ಪರಿಚಯ ಇಲ್ಲಿದೆ.

ಅದು ಹೆಬ್ಬೆಟ್ಟು ಅಗಲದ ಬಣ್ಣದ ಕಾಗದದ ತುಂಡು. ಅದರಲ್ಲಿ ಚಿತ್ರಗಳಿರುತ್ತವೆ. ಗೆರೆ–ಅಕ್ಷರಗಳಿರುತ್ತವೆ. ರಂಗುರಂಗಿನ ಈ ಬಣ್ಣದ ಕಾಗದದ ತುಂಡಿನ ವ್ಯಾಮೋಹ ಮಾತ್ರ ಇಂದು ಜಗತ್ತನೇ ಆವರಿಸಿದೆ. ಅದರ ಜನಪ್ರಿಯತೆ ದೊಡ್ಡ ಹವ್ಯಾಸ ಮಾತ್ರವಲ್ಲ. ಬೃಹತ್ ಉದ್ಯಮ ರೂಪ ತಾಳಿವುರುದೇ ಇನ್ನೊಂದು ಕೌತುಕ.

ಹೌದು. ಈಗ ಹೇಳ ಹೊರಟಿರುವ ವಿಷಯ ಅಂಚೆ ಚೀಟಿಗಳದ್ದು. ಕಾಗದ ಪತ್ರಗಳ ರವಾನೆಯ ಶುಲ್ಕರೂಪದಲ್ಲಿ ಹುಟ್ಟಿಕೊಂಡು ಆಧುನಿಕ ಅಂಚೆಯ ಭಾಗವಾಗಿರುವ ಅಂಚೆ ಚೀಟಿಗಳು ಕೇವಲ ಬಣ್ಣದ ಕಾಗದದ ಚೂರುಗಳು ಮಾತ್ರವಲ್ಲ. ಆಯಾ ದೇಶಗಳ ಅಧಿಕೃತ ರಾಯಭಾರಿಗಳೂ ಕೂಡ. ದೇಶ, ಭಾಷೆ, ಗಡಿಗಳ ಅಡೆತಡೆ ಇಲ್ಲದೇ ಕಾಗದ ಪತ್ರಗಳನ್ನು ಕೊಂಡೊಯ್ಯುವ ಅಂಚೆ ಚೀಟಿಗಳ ಪರಿಪಾಠಕ್ಕೆ ಒಂದೂವರೆ ಶತಕದ ಚರಿತ್ರೆ ಇದೆ.

ಕನ್ನಡ ನಾಡಿನಲ್ಲಿ, ಮೊದಲು ಅಂಚೆ ವ್ಯವಸ್ಥೆ ಶುರುವಾಗಿದ್ದು ಮೈಸೂರು ಸಂಸ್ಥಾನದ ಸ್ಥಾಪನೆಯ ಆಸುಪಾಸಿನಲ್ಲಿ. ಅದು ‘ಮೈಸೂರು ಅಂಚೆ’ ಎಂಬ ಹೆಸರಿನಲ್ಲಿ. ಆದರೂ ಆಗ ಅಂಚೆ ಚೀಟಿಗಳಿರಲಿಲ್ಲ. ಆಗೇನಿದ್ದರೂ ಮೊಹರು, ಠಸ್ಸೆಗಳ ಕಾಲ. ಭಾರತದ ಪ್ರಾದೇಶಿಕ ಅಂಚೆ ಸೇವೆಯಲ್ಲಿ ಉತ್ತಮ ಹೆಸರು ಮಾಡಿದ್ದ ‘ಮೈಸೂರು ಅಂಚೆ’ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡಿದ್ದು ಬ್ರಿಟಿಷರು ಭಾರತದಾದ್ಯಂತ ತಮ್ಮದೇ ‘ಇಂಪೀರಿಯಲ್ ಅಂಚೆ’ ಆರಂಭಿಸಿದಾಗ. ಸ್ವಾತಂತ್ರ್ಯಾ ನಂತರ ಕನ್ನಡ ನಾಡು ಭಾರತೀಯ ಅಂಚೆ ಒಕ್ಕೂಟಕ್ಕೆ ಸೇರಿ ಹೋಯಿತು. ದೇಶದ ಎಲ್ಲ ರಾಜ್ಯಗಳಂತೆ ಅಂಚೆ ಚೀಟಿ ಪ್ರಕಟಣೆಯಲ್ಲಿ ಕರ್ನಾಟಕ ತನ್ನ ಪಾಲು ಪಡೆದುಕೊಂಡಿದೆ. ಆದರೂ ಆ ಪಾಲು ಅಷ್ಟೇನೂ ಹೆಚ್ಚಿಲ್ಲ.

1948ರಲ್ಲಿ ಪಯಣ ಶುರುವಿಟ್ಟುಕೊಂಡ ಭಾರತೀಯ ಅಂಚೆ ಇಲಾಖೆ ಈವರೆಗೆ ಸುಮಾರು 3,500ಕ್ಕೂ ಹೆಚ್ಚು ವಿಶೇಷ ಹಾಗೂ ಸ್ಮರಣೆಯ ಅಂಚೆ ಚೀಟಿಗಳನ್ನು ಹೊರತಂದಿದೆ. ಇದರಲ್ಲಿ ಕರ್ನಾಟಕದ ಪಾಲು ಕಡಿಮೆ. ನೆರೆಹೊರೆ ರಾಜ್ಯಗಳಲ್ಲಿ ಅಂಚೆ ಚೀಟಿಗಳ ಸಂಖ್ಯೆ ನೂರು ದಾಟಿದ್ದರೂ, ಕರ್ನಾಟಕವನ್ನು ಪ್ರತಿಬಿಂಬಿಸುವ ಅಂಚೆ ಚೀಟಿಗಳ ಸಂಖ್ಯೆ 65–70 ಮಾತ್ರ.

1949ರಲ್ಲಿ ಹೊರಬಂದ ನಿಯತ ಅಂಚೆ ಚೀಟಿ ಸರಣಿಯಲ್ಲಿ ಕಾಣಿಸಿಕೊಂಡ ವಿಜಯಪುರದ (ಅಂದು ಬಿಜಾಪುರ) ಗೋಲಗುಂಬಜ್‌ ಚಿತ್ರವುಳ್ಳ ಅಂಚೆ ಚೀಟಿಯೇ ಕರ್ನಾಟಕದ ಮೊದಲ ಅಂಚೆ ಚೀಟಿ. ತಮ್ಮ ದೂರದೃಷ್ಟಿಯ ತಂತ್ರಜ್ಞಾನ ಕೌಶಲ್ಯದಿಂದ, ಆಡಳಿತದಿಂದ ಖ್ಯಾತಿ ಪಡೆದ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನೂರು ವರ್ಷ ತುಂಬಿದಾಗ ಪ್ರಕಟವಾದ ‘ಸರ್‌ ಎಂ.ವಿ. ಅಂಚೆ ಚೀಟಿ’ ಕರ್ನಾಟಕದ ಗಣ್ಯರೊಬ್ಬರ ಗೌರವಾರ್ಥ ಪ್ರಕಟವಾದ ಪ್ರಥಮ ಸ್ಟ್ಯಾಂಪ್. ಆಗ ಜವಾಹರಲಾಲ್‌ ನೆಹರೂ ಅವರು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ‘ಸರ್‌ಎಂವಿ ಅಂಚೆ ಚೀಟಿ’ಯನ್ನು ಬಿಡುಗಡೆ ಮಾಡಿದ್ದರು.

ಕರ್ನಾಟಕದ ಗಣ್ಯರು, ವಿಶೇಷ ಸಂದರ್ಭಗಳು, ಪ್ರಸಿದ್ಧ ಸ್ಮಾರಕಗಳು, ಕಲೆ, ಕಲಾವಿದರನ್ನು ಅಂಚೆ ಇಲಾಖೆ ತುಸು ಕಡೆಗಣಿಸುತ್ತಿದೆ ಎನಿಸಿದರೂ, ಪೂರ್ಣವಾಗಿ ನಿರ್ಲಕ್ಷ್ಯ ಮಾಡಿಲ್ಲ. ಹೀಗಾಗಿ ಸಂತಕವಿ ಕನಕದಾಸರು, ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ಸಮಾಜ ಸುಧಾರಕ ಬಸವಣ್ಣ, ಬ್ರಿಟಿಷರ ವಿರುದ್ಧ ಸೆಣಸಿದ ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್‌ ಅಂಚೆ ಚೀಟಿಗಳಲ್ಲಿ ಕಾಣಿಸಿ
ಕೊಂಡಿದ್ದಾರೆ. ಇದರ ಜತೆಗೆ, ಡಿ.ವಿ.ಗುಂಡಪ್ಪನವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಡಿವಿಜಿ ಅಂಚೆ ಚೀಟಿ ಬಿಡುಗಡೆಯಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಲ್ವರು ಸಾಹಿತಿಗಳ ಚುಕ್ಕಿ ಚಿತ್ರಗಳ ಸ್ಟ್ಯಾಂಪ್‌ಗಳಿವೆ. ಕವಿ ಮುದ್ದಣ್ಣ, ಸಂಗೀತಗಾರರಾದ ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಕುಮಾರ ಗಂಧರ್ವರಂತಹವರು ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ನಟರಾದಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್ ಹೊರತುಪಡಿಸಿದರೆ, ಗುಬ್ಬಿವೀರಣ್ಣ, ಪುಟ್ಟಣ್ಣ ಕಣಗಾಲ್‌, ನಾಗೇಂದ್ರರಾವ್‌, ಸುಬ್ಬಯ್ಯನಾಯ್ಡು, ಸಿ.ಬಿ.ಮಲ್ಲಪ್ಪ, ಹಂದಿಗನೂರು ಸಿದ್ಧರಾಮಪ್ಪ, ಟೈಗರ್ ವರದಾಚಾರ್, ಅಮೀರ್‌ಬಾಯಿ ಕರ್ನಾಟಕಿ ಅವರಂತಹ ಪ್ರತಿಭಾಶಾಲಿ ಕಲಾವಿದರು ಅಂಚೆ ಚೀಟಿಗಳಲ್ಲಿ ಇನ್ನೂ ಕಾಣಿಸಿಕೊಳ್ಳಬೇಕಿದೆ.

ಸಾಂದರ್ಭಿಕ ಹಾಗೂ ಗಣ್ಯರ ನೆನಪಿನಲ್ಲಿ ಅವರು ಜೀವನ ಸಾಧನೆಯನ್ನು ಅನಾವರಣ ಗೊಳಿಸುವ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಹೊರತರುವುದು ಎಲ್ಲೆಡೆ ರೂಢಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಮಲಾದೇವಿ ಚಟ್ಟೋಪಾದ್ಯಾಯ ಅವರ ಹೆಸರಿನಲ್ಲಿ ಪ್ರಕಟವಾದ ಅಂಚೆ ಚೀಟಿಯಲ್ಲಿ ಅವರ ಸಾಧನೆಯ (ಚನ್ನಪಟ್ಟಣದ ಕರಕುಶಲ ವಸ್ತುಗಳು) ಚಿತ್ರವನ್ನು ಪ್ರಕಟಿಸಲಾಗಿದೆ. ಇದು ಅವರ ಆಶಯವೂ ಆಗಿತ್ತು.

ವಿಶ್ವಸಾಂಸ್ಕೃತಿಕ ತಾಣವಾದ ಹಂಪಿಗೆ ಎರಡು ಅಂಚೆ ಚೀಟಿಗಳಲ್ಲಿ ಕಾಣಿಸಿಕೊಳ್ಳುವ ಅದೃಷ್ಟವಿತ್ತು. ಕೋಲಾರ ಗೋಲ್ಡ್‌ ಮೈನ್ಸ್‌ ಶತಮಾನೋತ್ಸವ ಸಂದರ್ಭದಲ್ಲಿ (1980)‘ಗೋಲ್ಡ್ ಮೈನಿಂಗ್‌ ಸ್ಟ್ಯಾಂಪ್’ ಬಿಡುಗಡೆಯಾಯಿತು. ಆದರೆ, ಪಟ್ಟದಕಲ್ಲು, ಬೇಲೂರು ಹಳೇಬೀಡು, ಬಾದಾಮಿಗಳಿಗೆ ಆ ಅದೃಷ್ಟ ಬರಬೇಕಿದೆ.

ಎರಡು ವಿಶ್ವ ಕನ್ನಡ ಸಮ್ಮೇಳನಗಳು, ಸಾಹಿತ್ಯ ಪರಿಷತ್ ಶತಮಾನೋತ್ಸವ, ಸೇರಿದಂತೆ ಅನೇಕ ವಿಶೇಷ ಸಂದರ್ಭಗಳಲ್ಲೂ ಅಂಚೆ ಚೀಟಿಗಳು ಬಿಡುಗಡೆಯಾಗಲಿಲ್ಲ. ಅಷ್ಟೇ ಏಕೆ, ತಿಂಗಳು ಗಟ್ಟಲೆ ಮಹಾತ್ಮ ಗಾಂಧೀಜಿಯವರು ವಿಶ್ರಾಂತಿ ಪಡೆದ ನಂದಿಬೆಟ್ಟ, ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಸೂಜಿಗಲ್ಲಿನಂತಹ ಸೆಳೆಯುವ ವಿಧಾನಸೌಧ, ಖ್ಯಾತ ಕಲಾವಿದ ಕೆ.ವೆಂಕಟಪ್ಪ, ಕೆ.ಕೆ.ಹೆಬ್ಬಾರ್ ಅವರಂಥವರು ಇನ್ನೂ ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಬೇಸರವಲ್ಲದೇ ಮತ್ತೇನು.

ಇಂಥ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ತೋರಿಸುವಷ್ಟು ಆಸಕ್ತಿಯನ್ನು ನಮ್ಮ ರಾಜ್ಯದ ನಾಯಕರು ತೋರಿಸುವುದಿಲ್ಲ. ಇದರೊಂದಿಗೆ ಕೇಂದ್ರದ ನಿರ್ಲಕ್ಷ್ಯ, ಜತೆಗೆ ನಮ್ಮ ಅವಜ್ಞೆಯೂ ಕಾರಣ. ರಾಜ್ಯ ಸರ್ಕಾರ ನಮ್ಮ ಕೇಂದ್ರ ಸಚಿವರು, ಸಂಸದರು ಸಮರ್ಥ ಪ್ರಸ್ತಾವನೆಗಳೊಂದಿಗೆ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿದರೆ ಇದು ಅಸಾಧ್ಯವಾದ ವಿಚಾರವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT