ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಯರಗುಪ್ಪಿಯ ಹೆಜ್ಜೆ ಮೇಳ

Last Updated 9 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹಲಗೆಯ ನಾದ, ಶೀಟಿಯ ಶಬ್ದ, ಜನರ ಕೂಗಿನ ನಡುವೆ ಒಂದೇ ಬಗೆಯ ದಿರಿಸು ಧರಿಸಿರುವ ಯುವಕರ ತಂಡ ಮುಳ್ಳಿನಿಂದ ರಚಿಸಿರುವ ಚೌಕಗಳ ನಡುವೆ ಹೆಜ್ಜೆ ಹಾಕುತ್ತಿದ್ದಾರೆ. ಈ ಸಾಹಸವನ್ನು ಸಾವಿರಾರು ಜನರು ಉಸಿರು ಬಿಗಿ ಹಿಡಿದುಕೊಂಡು ವೀಕ್ಷಿಸುತ್ತಾರೆ.
ಇದು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಮೊಹರಂ ಆಚರಣೆ ಅಂಗವಾಗಿ ನಡೆಯುವ ‘ಹೆಜ್ಜೆ ಮೇಳ’.

ಉತ್ತರ ಕರ್ನಾಟಕ ಭಾಗದ ಹಲವೆಡೆ ಮೊಹರಂ ಆಚರಣೆಯನ್ನು ಹಿಂದೂ– ಮುಸ್ಲಿಮರು ಭಾವೈಕ್ಯದಿಂದ ಆಚರಿಸುತ್ತಾರೆ. ಯರಗುಪ್ಪಿಯ ಹೆಜ್ಜೆ ಮೇಳಕ್ಕೆ 30 ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಸುತ್ತಲಿನ ಹತ್ತಾರು ಜಿಲ್ಲೆಗಳ 40ಕ್ಕೂ ಹೆಚ್ಚು ತಂಡಗಳು ಹೆಜ್ಜೆ ಮೇಳದಲ್ಲಿ ಭಾಗವಹಿಸುತ್ತವೆ. ಅವರ ಕುಣಿತ ನೋಡುವುದೇ ಬಹು ಅಂದ.

ಗ್ರಾಮ ಕುಸ್ತಿ ಬಯಲಿನಲ್ಲಿ ನಡೆಯುವ ಮೇಳದಲ್ಲಿ ಕೋಲುಮೇಳ, ಕಡೆಗೋಲು ಕುಣಿತ, ಜತ್ತಿಗೆ ಕುಣಿತ, ಮುಳ್ಳು ಹೆಜ್ಜೆ ಕುಣಿತವನ್ನು ಜಾನಪದ, ಕೋಲಾಟ ಹಾಗೂ ಹೆಜ್ಜೆ ಮೇಳದ ಪದಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾರೆ. ಒಂದೇ ಬಗೆಯ ದಿರಿಸು, ತಲೆಗೊಂದು ಪಟ್ಟಿ, ಕೈಯಲ್ಲೊಂದು ಛತ್ರಿ ಹಿಡಿದು ಹೆಜ್ಜೆ ಹಾಕುತ್ತಾ, ಅನೇಕ ಸಾಹಸಗಳನ್ನು ಮಾಡುತ್ತಾರೆ. ಪಿರಮಿಡ್‌ ರಚಿಸುತ್ತಾರೆ, ಕಂಬ ಏರುತ್ತಾ ಸಾಹಸ ಮಾಡುತ್ತಾರೆ. ಮುಳ್ಳುಗಳ ನಡುವೆ ಕುಣಿಯುತ್ತಾರೆ. ಈ ಸಾಹಸ ನೋಡುಗರ ಮೈನವಿರೇಳಿಸುತ್ತದೆ. ‘ಗ್ರಾಮದಲ್ಲಿನ ಹಿಂದೂ– ಮುಸ್ಲಿಮರು ಎಂಬ ಭೇದವಿಲ್ಲ. ಎಲ್ಲರೂ ಸೇರಿ ಮೊಹರಂ ಆಚರಿಸುತ್ತೇವೆ. ‘ಪಂಜಾ’ಗಳಿಗೆ ಎಲ್ಲರೂ ಸಕ್ಕರೆ ಊದಿಸಿ, ನಮಿಸುತ್ತಾರೆ. ಹಿಂದೂಗಳು ಕೆಂಡ ಹಾಯುತ್ತಾರೆ. ಇಲ್ಲಿನ ಜನರಲ್ಲಿ ಹಿಂದೂ ಮುಸ್ಲಿಂ ಎಂಬ ಭೇದವಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಿಂಗಪ್ಪ ನಂಜಮ್ಮನವರ.

‘ಹೆಜ್ಜೆ ಮೇಳಕ್ಕೆ ಎಷ್ಟು ವರ್ಷಗಳಾಗಿದೆ ಎಂಬುದು ಗೊತ್ತಿಲ್ಲ. ಆದರೆ, ನೂರಾರು ವರ್ಷಗಳ ಇತಿಹಾಸವಿದೆ. ಶರೀಫರು ಇಲ್ಲಿ ಯುವಕರಿಗೆ ಕುಣಿತ ಕಲಿಸಿದ್ದಾರಂತೆ. ಹಾಗಾಗಿ ಈ ಮೇಳಕ್ಕೆ ಮಹತ್ವ ಹೆಚ್ಚಿದೆ. ಸೆ.11ಕ್ಕೆ ಹೆಜ್ಜೆ ಮೇಳ ಮತ್ತೆ ನಡೆಯಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT