ಗುರುವಾರ , ಡಿಸೆಂಬರ್ 5, 2019
22 °C

ಫಣಿಯಮ್ಮ ‘ಮೊಳಗಿ’ಸಿದ ಡೊಳ್ಳಿನ ನಾದ !

Published:
Updated:

ಹೊನ್ನೇಸರದ ರಂಗಭೂಮಿ ಕಲಾವಿದೆ ಎಚ್‌. ಎಸ್‌. ಫಣಿಯಮ್ಮ,‘ಮೊಳಗು’ ಮಹಿಳಾ ಡೊಳ್ಳು ಕುಣಿತ ತಂಡವನ್ನು ಕಟ್ಟಿದ್ದಾರೆ. ಆ ತಂಡ ಈಗ ನಾಡಿನಾದ್ಯಂತ ಪ್ರದರ್ಶನ ನೀಡುತ್ತಾ, ಜನಮನ್ನಣೆ ಗಳಿಸಿದೆ.

ಡೊಳ್ಳು ಕುಣಿತ ತುಸು ಹೆಚ್ಚೇ ಶ್ರಮಬೇಡುವ ಕಲೆ. ಹಾಗಾಗಿ ಇದನ್ನು ‘ಗಂಡುಕಲೆ’ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಹಲವು ಮಹಿಳೆಯರು ಡೊಳ್ಳು ಕುಣಿತವನ್ನು ಕಲಿತು, ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಾ, ಡೊಳ್ಳು ಕುಣಿತ ‘ಹೆಣ್ಣು ಕಲೆಯೂ ಹೌದು’ ಎಂದು ಸಾಬೀತುಪಡಿಸುತ್ತಿದ್ದಾರೆ.

ಹೀಗೆ ಮಹಿಳೆಯರಿಗೆ ಡೊಳ್ಳುಕುಣಿತದ ತರಬೇತಿ ನೀಡಿ ಅವರನ್ನು ವೇದಿಕೆಗೆ ಕರೆತಂದ ವರಲ್ಲಿ ಕುಗ್ವೆ ರಾಮಪ್ಪ ಮೊದಲಿಗರು. ನಂತರ ಹಲವು ‘ಕಲಾ ಸೇವಕರು’ ಆ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಕೆಲವರು ಈ ಕಲೆಯನ್ನು ವಿದೇಶದವರೆಗೂ ಕೊಂಡೊಯ್ದಿದ್ದಾರೆ. ಅಂಥವರಲ್ಲಿ ಹೊನ್ನೇಸರದ ರಂಗಭೂಮಿ ಕಲಾವಿದೆ ಎಚ್‌.ಎಸ್‌. ಫಣಿಯಮ್ಮ ಕೂಡ ಪ್ರಮುಖರು.


ಫಣಿಯಮ್ಮ

ಫಣಿಯಮ್ಮ, ಈ ಕಲೆಯನ್ನು ಮಧ್ಯವಯಸ್ಕ ಮಹಿಳೆಯರಿಗಷ್ಟೇ ಅಲ್ಲದೇ, ಯುವತಿ ಯರಿಗೂ ಕಲಿಸುತ್ತಾ, ‘ಮೊಳಗು’ ಎಂಬ ತಂಡ ಕಟ್ಟಿ, ರಾಜ್ಯದಾದ್ಯಂತ ಪ್ರದರ್ಶನ ನೀಡಲು ಉತ್ತೇಜಿಸುತ್ತಿದ್ದಾರೆ.

ಬಾಲ್ಯದಿಂದಲೇ ಆಸಕ್ತಿ

ಫಣಿಯಮ್ಮ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಹೊನ್ನೇಸರದವರು. ತಂದೆ ವಾದ್ಯಕಾರ ಸೋಮಪ್ಪ, ತಾಯಿ ಲಾವಣಿ ಹಾಡುಗಾರ್ತಿ ಹಾಲಮ್ಮ. ಪೋಷಕರ ಕಲಾ ಪ್ರೀತಿಯಿಂದಾಗಿ, ಫಣಿಯಮ್ಮ ಅವರಿಗೆ ಬಾಲ್ಯದಿಂದಲೇ ಹಾಡು, ನಾಟಕಗಳಲ್ಲಿ ಆಸಕ್ತಿ ಬೆಳೆಯಿತು. 1984-85 ರಲ್ಲಿ ಹೆಗ್ಗೋಡಿನ ನಿನಾಸಂ ರಂಗ ಶಿಕ್ಷಣ ಕೇಂದ್ರದಿಂದ ಡಿಪ್ಲೋಮಾ ಪಡೆದರು. ಇದೇ ಕೇಂದ್ರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದರು. ಜಾನಪದ ಕಲಾ ಪ್ರಕಾರಗಳನ್ನು ಕಲಿಯುತ್ತಾ ಡೊಳ್ಳುಕುಣಿತವನ್ನು ಕೈಗೆತ್ತಿಕೊಂಡರು. ಮುಂದೆ ನಾಟಕ ನಿರ್ದೇಶನ ಮಾಡುತ್ತಾ, ರಂಗ ಪರಿಕರ, ವಸ್ತ್ರ ವಿನ್ಯಾಸ, ರಂಗೋಲಿ, ಕೋಲಾಟ, ಕಂಸಾಳೆ, ನಾಟಕರಚನೆ, ಹಸೆ ಚಿತ್ತಾರ ಸೇರಿದಂತೆ ಹತ್ತಾರು ಕಲೆಗಳನ್ನು ಕರಗತಮಾಡಿಕೊಂಡರು.

ಯುವತಿಯರಿಗೆ ಡೊಳ್ಳುಕುಣಿತ

ಸಾಗರದ ಶಾಂತಲಾ ಮಹಿಳಾ ಡೊಳ್ಳು ತಂಡದ ಸದಸ್ಯರಾಗಿದ್ದ ಫಣಿಯಮ್ಮ ಮೊದಲು ಮಧ್ಯವಯಸ್ಕ ಹೆಣ್ಣುಮಕ್ಕಳಿಗಷ್ಟೇ ಈ ಕಲೆಯನ್ನು ಕಲಿಸುತ್ತಿದ್ದರು. ‘ಇದನ್ನು ಯುವತಿಯರೂ ಏಕೆ ಕಲಿಯಬಾರದು’ ಎಂದು ಆಲೋಚಿಸಿದರು. ಇವರ ಆಲೋಚನೆ ಕೃತಿ ರೂಪಕ್ಕೆ ಇಳಿಯಲು ಸಹಕಾರ ನೀಡಿದ್ದು ಕುಗ್ವೆ ರಾಮಪ್ಪ ಮತ್ತು ಶಿವಮೊಗ್ಗದ ಜನಶಿಕ್ಷಣ ಸಂಸ್ಥೆ. ಇವರಿಬ್ಬರ ನೆರವಿನಿಂದ ಹತ್ತಾರು ಯುವತಿಯರು ಇಂದು ಡೊಳ್ಳುಕುಣಿತ ಕಲಿತರು. ಅದೇ ಯುವತಿಯರೊಂದಿಗೆ 2010ರಲ್ಲಿ ‘ಮೊಳಗು’ ಮಹಿಳಾ ಕಲಾ ತಂಡ ಕಟ್ಟಿದರು. ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳಲ್ಲಿ ಈ ತಂಡವನ್ನು ಭಾಗವಹಿಸುವಂತೆ ಉತ್ತೇಜಿಸಿದರು.


ಕುಗ್ವೆ ರಾಮಪ್ಪ

ತಂಡದ ಕಲಾ ಪಯಣ ಮುಂದುವರಿದಂತೆ ಫಣಿಯಮ್ಮ ಅವರಿಗೆ ‘ಈ ಕಲೆ ಕಲಿಯಲು ಬರುವವರಿಗೆ ಬೇರೆ ಕೆಲಸ ಸಿಗುವುದಿಲ್ಲ. ಜತೆಗೆ, ಆರೋಗ್ಯ ಸಮಸ್ಯೆ ತಲೆದೋರುತ್ತದೆ’ ಎಂಬಂತಹ ಆತಂಕದ ಮಾತುಗಳು ಸವಾಲಿನ ರೀತಿ ಎದುರಾದವು. ಆದರೆ, ಯಾವುದಕ್ಕೂ ಧೈರ್ಯಗೆಡದ ಅವರು, ಕಲಿಯಲು ಬರುವವರಿಗೆ ಧೈರ್ಯ ತುಂಬುತ್ತಾ,  ಡೊಳ್ಳುಕುಣಿತ ಕಲಿಸುವುದನ್ನು ಮುಂದುವರಿಸಿದರು.

ಆದರೆ, ಇಂಥ ಆತಂಕದ ಮಾತುಗಳಿಗೆ ಅವರ ತಂಡದಲ್ಲೇ ಇರುವ ಮಗುವಿನ ತಾಯಿ ಚೈತ್ರ ‘ಡೊಳ್ಳುಕುಣಿತದಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಅದಕ್ಕೆ ನಾನೇ ಉದಾಹರಣೆ’ ಎನ್ನುತ್ತಾರೆ. ಮತ್ತೊಬ್ಬ ಸದಸ್ಯೆ ಭೀಮನಕೊಣೆ ಪದ್ಮಶ್ರೀ, ‘ಭಾರದ ಡೊಳ್ಳು ಹೊತ್ತು ಪದ್ಮಾಸನ ಹಾಕುವುದರಿಂದ ಉತ್ತಮ ವ್ಯಾಯಾಮವಾಗುತ್ತದೆ. ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ’ ಎಂದು ಹೇಳುತ್ತಾ, ಅಚ್ಚರಿ ಮೂಡಿಸುತ್ತಾರೆ.


ಡೊಳ್ಳು ಕುಣಿತ ಅಭ್ಯಾಸದಲ್ಲಿ ಯುವತಿಯರು

ಡೊಳ್ಳುಕುಣಿತವನ್ನು, ಆಸಕ್ತಿ ಇದ್ದವರು ಯಾರು ಬೇಕಾದರೂ ಕಲಿಯಬಹುದು. ಆದರೆ ವಯಸ್ಕರಿಗಿಂತ, ಕಿರಿಯರಲ್ಲಿ ಶಕ್ತಿ, ಸಾಮರ್ಥ್ಯ ಹೆಚ್ಚಿರುವುದರಿಂದ ಅವರಿಗೆ ಕಲಿಸುವುದು ಸುಲಭ. 10 ರಿಂದ 12 ಕೆ.ಜಿ ತೂಕವಿರುವ ಡೊಳ್ಳನ್ನು ಹೊರುವುದು ಅವರಿಗೆ ಕಷ್ಟವಾಗುವುದಿಲ್ಲ ಎನ್ನುವುದು ಫಣಿಯಮ್ಮ ಅಭಿಪ್ರಾಯ. ‘ಮನಸ್ಸು ಮಾಡಿದರೆ ಹದಿನೈದು ದಿನಗಳಲ್ಲಿ ಡೊಳ್ಳು ಕುಣಿತ ಕಲಿಯಬಹುದು’ ಎನ್ನುತ್ತಾರೆ ಅವರು.

ಸಂಭಾವನೆ, ಸ್ವಾವಲಂಬಿ ಬದುಕು

ಪ್ರತಿ ಪ್ರದರ್ಶನಕ್ಕೂ ನಿಗದಿತ ಸಂಭಾವನೆ ಸಿಗುವುದರಿಂದ ತಂಡದ ಸದಸ್ಯರೆಲ್ಲ ಸ್ವಾವಲಂಬಿಯಾಗಿ ಬದುಕಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಆರ್ಥಿಕವಾಗಿಯೂ ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಮಹಿಳಾ ಡೊಳ್ಳು ಕುಣಿತ ತಂಡಗಳ ಸಂಖ್ಯೆ ಹೆಚ್ಚಾಗಿವೆ. ಪ್ರದರ್ಶನದ ಸಂಭಾವನೆಯಲ್ಲೂ ಪೈಪೋಟಿಯಿದೆ. ಇವೆಲ್ಲದರ ನಡುವೆ ‘ಮಹಿಳಾ ಡೊಳ್ಳು ಕುಣಿತ’ ಎಂದರೆ ಹೆಗ್ಗೋಡಿನ ಫಣಿಯಮ್ಮ ಎಂದು ಹೇಳುವಷ್ಟು ಜನಪ್ರಿಯರಾಗಿದ್ದಾರೆ.

ಈಗಾಗಲೇ ಇವರ ‘ಮೊಳಗು’ ತಂಡ, ಜಾತ್ರೆ, ಹಬ್ಬಗಳು, ಮದುವೆಮನೆ, ಸಾಹಿತ್ಯ ಸಮ್ಮೇಳನ, ರಾಜಕೀಯ ಕಾರ್ಯಕ್ರಮಗಳು. ದೂರದರ್ಶನ, ಯುವಜನ ಮೇಳಗಳಲ್ಲಿ ಪ್ರದರ್ಶನ ನೀಡಿ ಹೆಸರುಗಳಿಸುತ್ತಿದೆ. ಜತೆಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಶಿವಮೊಗ್ಗ, ಮೈಸೂರು, ಮಂಗಳೂರು, ಬೆಂಗಳೂರು ಹಾಗೂ ಚೆನ್ನೈ, ಕೋಲ್ಕತ್ತ, ಕೇರಳದಂತಹ ಹೊರ ರಾಜ್ಯಗಳಲ್ಲೂ ಈ ತಂಡ ಪ್ರದರ್ಶನ ನೀಡಿ ರಾಜ್ಯದ ಹೆಸರನ್ನು ಎತ್ತರಕ್ಕೇರಿಸಿದೆ. ತಮ್ಮ ಕಲಾ ಸಾಧನೆಗೆ ಪ್ರೋತ್ಸಾಹಿಸಿದ ನೀನಾಸಂ ಬಳಗ, ಪತಿ ವಿಜಯಕುಮಾರ್ ಜೊತೆಗೆ ತಮ್ಮ ಒಡಹುಟ್ಟಿದವರನ್ನು ಫಣಿಯಮ್ಮ ತುಂಬು ಹೃದಯ ದಿಂದ ನೆನೆಯುತ್ತಾರೆ. 

ಕುಗ್ವೆ ರಾಮಪ್ಪ ಮೊದಲಿಗರು..

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಕುಗ್ವೆಯ ಬಾಗಿಲು ರಾಮಪ್ಪ, ಸಾಗರದಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಡೊಳ್ಳು ಕುಣಿತವನ್ನು ಹೇಳಿಕೊಟ್ಟವರು. ಡೊಳ್ಳು ಕುಣಿತವಷ್ಟೇ ಅಲ್ಲದೇ, ಡೊಳ್ಳು ತಯಾರಿಕೆಯಲ್ಲಿ ಇವರು ನಿಪುಣರು. ಎರಡು ದಶಕಗಳಿಂದ ಈ ಡೊಳ್ಳು ಕುಣಿತವನ್ನು ಕರಗತ ಮಾಡಿಕೊಂಡು, ತಂಡಕಟ್ಟಿ ಅನೇಕ ಕಡೆ ಪ್ರದರ್ಶನವನ್ನು ನೀಡಿದ್ದಾರೆ. ರಾಮಪ್ಪ ಅವರ ಡೊಳ್ಳು ಕುಣಿತದ ಸಾಧನೆ ಗುರುತಿಸಿ ಜರ್ಮನಿಯ ಇಂಟರ್‌ ನ್ಯಾಷನಲ್ ಪೀಸ್ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಮಪ್ಪ ಅವರ ಸಾಧನೆಯನ್ನು ಸ್ಮರಿಸುವ ಫಣಿಯಮ್ಮ ಅವರು, ‘ಕರ್ನಾಟಕ ಸರ್ಕಾರ ಇನ್ನೂ ಅವರ ಕಲಾ ಸಾಧನೆಯನ್ನು ಗುರುತಿಸಿಲ್ಲ’ ಎಂದು ವಿಷಾದಿಸುತ್ತಾರೆ.

ಇದನ್ನೂ ಓದಿ: ‘ಆಧುನೀಕರಣ; ಅವನತಿಯತ್ತ ಗ್ರಾಮೀಣ ಕಲೆಗಳು’

ಪ್ರಶಸ್ತಿ- ಪುರಸ್ಕಾರ

ಬಹುಮುಖ ಪ್ರತಿಭೆಯ ಫಣಿಯಮ್ಮನವರಿಗೆ ಅನೇಕ ಸಂಘ ಸಂಸ್ಥೆ ಗೌರವಿಸಿವೆ. 2008ರಲ್ಲಿ ಬೆಂಗಳೂರಿನ ಸ್ತ್ರೀ ಪ್ರಗತಿ ಸಂಸ್ಥೆ, ‘ಜೀವನ್ಮುಖಿ (ಅವ್ವ ಪ್ರಶಸ್ತಿ)’ ನೀಡಿದೆ.  ಪ್ರಪಂಚ ಮಾಸ ಪತ್ರಿಕೆ 2011 ರಲ್ಲಿ ‘ರಂಗ ಪ್ರಪಂಚ ಪ್ರಶಸ್ತಿ’, ಸಾಗರದ ನಗರಸಭೆಯವರು ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರತಿಕ್ರಿಯಿಸಿ (+)