ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಒಡನಾಡಿ ಸರ್ವೋದಯದ ‘ಭೋಸಲೆ’

Last Updated 3 ಅಕ್ಟೋಬರ್ 2019, 9:34 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಕಡೋಲಿಗೆ ಹೋಗಿ ‘ಕುಟ್ರೆ ಸದಾಶಿವ ಭೋಸಲೆ’ ಬಗ್ಗೆ ಒಮ್ಮೆ ಕೇಳಿ ನೋಡಿ. ಅಲ್ಲಿನ ಜನ ‘ಅವರು ನಮ್ಮ ದಾದಾ’ ಎಂದು ಅಭಿಮಾನದಿಂದಲೇ ಮಾತು ಆರಂಭಿಸುತ್ತಾರೆ. ‘ಮಹಾನ್ ಗಾಂಧಿವಾದಿ, ದೇಶಭಕ್ತ’ ಎನ್ನುತ್ತಾ ಭಾವುಕರಾಗುತ್ತಾರೆ. ಅವರ ಹೆಸರು ಹೇಳಿದರೆ ಸಾಕು ಜನರಲ್ಲಿ ಅತೀವ ಪ್ರೀತಿ, ಗೌರವ, ಭಕ್ತಿ.

ಸದಾಶಿವ ಭೋಸಲೆ ಅವರು ಹುಟ್ಟಿದ್ದು 1920 ರಲ್ಲಿ. ಬಾಪು ಸಾಹೇಬ್ ಮತ್ತು ಸಾವಿತ್ರಿ ಭೋಸಲೆ ತಂದೆ-ತಾಯಿ. ವಿದ್ಯಾರ್ಥಿ ದಿಸೆಯಲ್ಲೇ ಸಂಘಟನೆ, ಸ್ವಾತಂತ್ರ್ಯ ಹೋರಾಟದಲ್ಲಿ ಇವರಿಗೆ ವಿಶೇಷ ಒಲವು. ಇಂಟರ್ ಮೀಡಿಯೆಟ್‌ ಮುಗಿಸಿ, 1942 ರಲ್ಲಿ ಅರಣ್ಯ ಅಧಿಕಾರಿ ಹುದ್ದೆಯ ಸಂದರ್ಶನಕ್ಕೆ ಪುಣೆಗೆ ಹೋಗಿದ್ದರು. ಇದೇ ವೇಳೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆಕೊಟ್ಟರು. ಸಂದರ್ಶನಕ್ಕೆ ಹೋಗದೆ ಚಳವಳಿಯತ್ತ ಹೊರಟರು. ಯರವಾಡ ಜೈಲು ಸೇರಿದರು. ಎರಡು ವರ್ಷದ ಸೆರೆಮನೆ ವಾಸದಲ್ಲಿ ಗಾಂಧೀಜಿ ವಿಚಾರಗಳಿಂದ ಮತ್ತಷ್ಟು ಮಾಗಿದರು. ಜೈಲಿನಿಂದ ಬಂದವರೇ ‘ಗಾಂಧೀಜಿಯ ಕನಸಿನ ಭಾರತ ಕಟ್ಟಲು ಜೀವ ಕೊಡ್ತೇನೆ’ ಎಂದರು. ಇವರ ಅಚಲ ನಿರ್ಧಾರಕ್ಕೆ ಕುಟುಂಬ ಸೋತು, ಸಮ್ಮತಿಸಿತು.

ಮನೆಯಲ್ಲಿ ಆಗರ್ಭ ಶ್ರೀಮಂತಿಕೆ ಇದ್ದರೂ, ದೇಗುಲದಲ್ಲಿ ಖಾದಿ ನೂಲಿನಿಂದ ತಯಾರಿಸಿದ ಮಾಂಗಲ್ಯದಿಂದ ವತ್ಸಲಾ ಅವರನ್ನು ವರಿಸಿದರು. ಸರಳ ವಿವಾಹದ ಸಂದೇಶ ಸಾರಿದರು. 1946ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ದಕ್ಷಿಣ ಬೆಳಗಾವಿಯಿಂದ ಶಾಸಕರಾದರು. ಜನಮುಖಿ ಕೆಲಸಗಳಿಂದ ಜನಮನ ಗೆದ್ದರು. ಎರಡನೇ ಬಾರಿಗೂ ಬಾಗೇವಾಡಿ ಕ್ಷೇತ್ರದ ಶಾಸಕರಾದರು. ಗಾಂಧೀಜಿಯ ತತ್ವದರ್ಶಗಳಿಗೆ ವಿರುದ್ಧವಾಗಿ ಆಡಳಿತ ಸಾಗಿದೆ ಎಂದು ಅರ್ಧದಲ್ಲೇ (1955 ರಲ್ಲಿ) ವಿನೋಬಾ ಭಾವೆ ಸಮ್ಮುಖದಲ್ಲಿ ರಾಜಿನಾಮೆ ಕೊಟ್ಟರು.

ವಿನೋಬಾ ಭಾವೆಯ ಗ್ರಾಮ ಸ್ವರಾಜ್ಯ ಮತ್ತು ಭೂದಾನ ಚಳವಳಿಯಲ್ಲಿ ಪಾಲ್ಗೊಂಡು ಕರ್ನಾಟಕ ಸುತ್ತಿದರು. ಆಚಾರ್ಯರ ಅಣತಿಯಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕುಸೂರಿನಲ್ಲಿ ಆರು ವರ್ಷ ಇದ್ದು, ಜನರನ್ನು ತರಬೇತಿಗೊಳಿಸಿ, ಮುಖ್ಯವಾಹಿನಿಗೆ ತಂದರು. ಅಲ್ಲಿಂದ ಊರಿಗೆ ಬಂದು ತಂದೆಯ ಮನವೊಲಿಸಿ ತಮ್ಮ ಪಾಲಿನ ಇಪ್ಪತ್ತೈದು ಎಕರೆಯಲ್ಲಿ ಇಪ್ಪತ್ನಾಲ್ಕು ಎಕರೆಯನ್ನು ಐವತ್ತು ಜನ ಬಡವರಿಗೆ ಹಂಚಿದರು. ಈ ಮೂಲಕ ಬೇರೆಯವರಿಗೆ ಭೂದಾನ ಮಾಡಲು ಪ್ರೇರಣೆಯಾದರು.

ದೇವಗಿರಿಯ ಒಂದು ಎಕರೆಯಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ‘ಗಾಂಧಿ ಘರ್’ ನಿರ್ಮಿಸಿದರು. ಮನೆ ತೊರೆದು ಅಲ್ಲಿ ನಿತ್ಯವೂ ಜನರಲ್ಲಿ ಗಾಂಧಿ ವಿಚಾರಧಾರೆಗಳನ್ನು ಬಿತ್ತುತ್ತಾ ಶಾಶ್ವತವಾಗಿ ಅಲ್ಲೇ ಉಳಿದರು. ‘ಮಹಿಳಾ ಸಬಲೀಕರಣ ಜರೂರುತ್ ಇದೆ’ ಎಂದು ‘ಕಸ್ತೂರಿ ಬಾ ಕೇಂದ್ರ’ ತೆರೆದರು. ಇನ್ನು 1960ರಲ್ಲಿ ಗ್ರಾಮದಲ್ಲಿ ಸರ್ಕಾರ ಸರಾಯಿ ಅಂಗಡಿಗೆ ಪರವಾನಿಗೆ ಕೊಟ್ಟಿದ್ದನ್ನು ಪ್ರತಿಭಟಿಸಿ, ಶತಗೌಡ ದೇಸಾಯಿ, ಗಂಗರಾಮ ಡೊಂಗರೆ, ಮಹಾದೇವ ಅಪ್ಟೇಕರ್, ಲಕ್ಷ್ಮಣ ಒಣಗೇಕರ್ ಇತರರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತರು. ಸರ್ಕಾರ ಮಣಿದು ಪರವಾನಿಗೆ ರದ್ದುಪಡಿಸಿತು. ಅಂದಿನಿಂದ ಇಲ್ಲಿ ಮದ್ಯದ ಅಂಗಡಿ ಬಂದಿಲ್ಲ.

ಭೋಸಲೆ ಅವರು ಇವತ್ತಿಗೂ ಸ್ವಾತಂತ್ರ್ಯ ಯೋಧ ವೇತನದ ನಯಾ ಪೈಸೆಯನ್ನೂ ಸ್ವಂತಕ್ಕೆ ಬಳಸಿಲ್ಲ. ಬಾಗಲಕೋಟೆಯ ಮುಧೋಳದಲ್ಲಿ ಗಾಂಧಿ ವಿಚಾರಗಳನ್ನು ಜನರಿಗೆ ತಲುಪಿಸಲು ‘ವಾತ್ಸಲ್ಯಧಾಮ’ ತೆರೆಯಲಿಕ್ಕೆ ದೇಣಿಗೆ ನೀಡಿದ್ದಲ್ಲದೇ, ₹1 ಲಕ್ಷವನ್ನು ಸಮಾಜ ಸೇವಾ ಕೆಲಸಗಳಿಗೆ ಕೊಟ್ಟಿದ್ದಾರೆ.

ಸಮಾಜದ ಕಲ್ಯಾಣಕ್ಕೆ ಸದಾ ಶ್ರಮಿಸುತ್ತಿರುವ ಶಿವಾಜಿ ಕಾಗಣಿಕರ್, ಆಶೋಕ್ ದೇಶಪಾಂಡೆ, ದಿಲೀಪ್ ಕಾಮತ್.. ಇವರಿಂದ ಪ್ರಭಾವಿತರಾದವರೇ. ಇವರೆಲ್ಲರ ಪರಿಶ್ರಮದಿಂದ ಕಡೋಲಿ ಇಂದು ಸರ್ವೋದಯ ಊರು ಎಂದೇ ಪ್ರಸಿದ್ಧಿ ಆಗಿದೆ. ‘ಗಾಂಧಿ ಘರ್’ ಗಾಂಧಿ ಮೆಮೊರಿಯಲ್ ಟ್ರಸ್ಟ್‌ಗೆ ಸೇರಿದ್ದು, ಅಲ್ಲಿ ಸಾರ್ವಜನಿಕ ಸಭೆಗಳು ನಡೆಯುತ್ತವೆ. ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ, ಸರ್ಕಾರದ ಹಣದ ಪೋಲು ತಡೆಯಲು 1982 ರವರೆಗೂ ಊರಲ್ಲಿ ಗ್ರಾಮ ಪಂಚಾಯಿತಿ, ರೈತ ಸಹಕಾರ ಸಂಘದ ಚುನಾವಣೆ ನಡೆಸಲು ಅವಕಾಶ ನೀಡದೆ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದರು!.

ಇಂಥ ಆಧುನಿಕ ಗಾಂಧಿಗೀಗ ಭರ್ತಿ 99 ವರ್ಷಗಳು. ಈ ಇಳಿ ವಯಸ್ಸಿನಲ್ಲೂ ದಂಪತಿ ಚಟುವಟಿಕೆಯಿಂದ ಇದ್ದಾರೆ. ಕಳೆದ ವರ್ಷವಷ್ಟೆ ಮಗ ವಿನೋದ್ ಭೋಸಲೆ ಒತ್ತಾಯಕ್ಕೆ ಮಣಿದು ಮನೆಗೆ ಬಂದಿದ್ದಾರೆ. ಸದಾ ದೇಶದ ಹಿತ ಚಿಂತನೆಯ ಪುಸ್ತಕಗಳನ್ನು ಓದುತ್ತಾರೆ. ಪ್ರಸ್ತುತ ಗಾಂಧೀಜಿ ತತ್ವಗಳ ಪಾಲನೆಯಾಗುತ್ತಿಲ್ಲ ಎಂಬ ಬೇಸರ ಅವರ ಮನದಲ್ಲಿದೆ.

ಕುಟ್ರೆರವರ ಸಂಪರ್ಕಕ್ಕಾಗಿ ಮೊ ನಂ 9448863904.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT