ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಚೇತನ ಮಕ್ಕಳ ಕಲಿಕೋತ್ಸವ !

Last Updated 11 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಿವಿ ಕೇಳಿಸದವರು, ಅಕ್ಷರ ಗುರುತಿಸಲಾರದವರು, ಲೆಕ್ಕ ಮಾಡಲು ಸಾಧ್ಯವಾಗದವರು, ಅಸ್ಪಷ್ಟವಾಗಿ ಮಾತನಾಡುವವರು, ಮಾನಸಿಕ ಮತ್ತು ದೈಹಿಕ ನ್ಯೂನತೆ ಇರುವವರು, ಭಾವನೆಗಳ ಮೇಲೆ ನಿಯಂತ್ರಣ ಇಲ್ಲದವರು, ಚಂಚಲ ಸ್ವಭಾವದವರು ಮುಂತಾದ ವಿಶೇಷ ಮಕ್ಕಳ ಕಲಿಕಾ ತೊಡಕುಗಳನ್ನು ನಿವಾರಿಸಿ, ಅವರ ಬಾಳಲ್ಲಿ ಬೆಳಕು ತರುವ ಪ್ರಯತ್ನ ಮಾಡುತ್ತಿದೆ ಧಾರವಾಡದ ‘ಕ್ರಿಯಾಶೀಲ ಗೆಳೆಯರು’ ವಿಶೇಷ ಶಾಲೆ. ನ.14, ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಮಕ್ಕಳ ಕಲಿಕೋತ್ಸವದ ಕುರಿತ ಪರಿಚಯ ಇಲ್ಲಿದೆ.

‘ನನ್ಮಗ ಉಡಾಳ ಇದ್ದ, ಸರ್‌ ಕಡೆ ಹೋದ ಮೇಲೆ ಸುಧಾರಿಸಿದ...’ ಈ ಮಾತು ಜನರ ಬಾಯಿಂದ ಬಾಯಿಗೆ ಹರಡಿ, ಕಲಿಕೆಯಲ್ಲಿ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಒಬ್ಬೊಬ್ಬರಾಗಿ ಬಂದು ನಮ್ಮ ಶಾಲೆಯನ್ನು ಸೇರಿದರು. ಇಲ್ಲಿ ಸುಧಾರಣೆಯಾದ ಮಕ್ಕಳು ಮರಳಿ ಗೂಡಿಗೆ ಹೋಗಿವೆ. ಈಗ ಬರೋಬ್ಬರಿ 48 ಮಕ್ಕಳು ನನ್ನ ಜೊತೆಯಲ್ಲಿವೆ...’ ಎಂದು ಖುಷಿಯನ್ನು ವ್ಯಕ್ತಪಡಿಸಿದವರು ಧಾರವಾಡದ ‘ಕ್ರಿಯಾಶೀಲ ಗೆಳೆಯರು’ ವಿಶೇಷ ಶಾಲೆಯ ಮುಖ್ಯಸ್ಥ ಮುಕುಂದ ಮೈಗೂರ.

ಈ ಮಾತು, 23 ವರ್ಷಗಳ ಸುದೀರ್ಘ ಪಯಣಕ್ಕೆ ಮುನ್ನುಡಿ ಬರೆಯಿತು. ಹೌದು, 1996ರಲ್ಲಿ ಆರಂಭವಾದ ಈ ವಿಶೇಷ ಶಾಲೆ, ‘ದೃಢ ಹೆಜ್ಜೆ’ ಕಾರ್ಯಕ್ರಮದಡಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳ ಕಲಿಕೆಯಲ್ಲಿ ಸುಧಾರಣೆ ತಂದು, ಅವರ ಬಾಳಲ್ಲಿ ಬೆಳಕು ಮೂಡಿಸಿದೆ.

ಧಾರವಾಡದ ಮಾಳಮಡ್ಡಿ 6ನೇ ಅಡ್ಡರಸ್ತೆಯಲ್ಲಿರುವ ಮುಕುಂದ ಮೈಗೂರ ಅವರ ಮನೆಯೇ ಶಾಲೆಯಾಗಿ ಪರಿವರ್ತನೆಯಾಗಿದೆ. ನೆಲ ಅಂತಸ್ತಿನಲ್ಲಿ ತಮ್ಮ ವಾಸ. ಮೇಲಂತಸ್ತಿನಲ್ಲಿ ಬಾಡಿಗೆಗೆ ಇದ್ದವರನ್ನು ಖಾಲಿ ಮಾಡಿಸಿ, ಅದನ್ನು ವಿಶೇಷ ಮಕ್ಕಳ ಕಲಿಕೆಗಾಗಿ ಮೀಸಲಿಟ್ಟಿದ್ದಾರೆ. ಇತ್ತೀಚೆಗೆ ಎದುರು ಮನೆಯನ್ನು ಖರೀದಿಸಿ, ಅದನ್ನೂ ಮಕ್ಕಳ ಆಟ–ಪಾಠಕ್ಕೆ ಬಳಸುತ್ತಾ, ಅವರ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿ ವಿವಿಧ ಜಿಲ್ಲೆಗಳಿಗೆ ಸೇರಿದ 8 ವರ್ಷದಿಂದ 16 ವರ್ಷದೊಳಗಿನ ಬಾಲಕ–ಬಾಲಕಿಯರು ಕಲಿಯುತ್ತಿದ್ದಾರೆ. ಮನೆಯ ಅಂಗಳದಲ್ಲೇ ಕಲಿಕಾ ವಾತಾವರಣ ಸೃಷ್ಟಿಸಿರುವುದರಿಂದ ’ಶಾಲೆಯ ಭೀತಿ’ಯನ್ನು ಮಕ್ಕಳಿಂದ ನಿವಾರಿಸಬಹುದು ಎಂಬುದು ಅವರ ಅಭಿಮತ.

ವಿಶೇಷ ಶಾಲೆಗೆ ಪ್ರೇರೇಪಣೆ

ಪರಿಸರವಾದಿ, ರಂಗಕರ್ಮಿಯೂ ಆಗಿರುವ ಮುಕುಂದ ಮೈಗೂರ ಅವರು,1986ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಶಿಬಿರದಲ್ಲಿ ಬಾದಲ್‌ ಸರ್ಕಾರ್‌ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಎರಡೂ ಕಾಲು ಊನವಾಗಿದ್ದ ಬಾಲಕನೊಬ್ಬ ‘ಆನೆ ಆಟ’ದಲ್ಲಿ ಭಾಗವಹಿಸಲು ಸಾಧ್ಯವಾಗದೆ, ಮೈಗೂರ ಅವರ ಪಕ್ಕದಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ, ಸಂಭ್ರಮಿಸುತ್ತಿದ್ದ.

ಆ ಬಾಲಕನ ಅಸಹಾಯಕತೆ ಮೈಗೂರ ಅವರ ಮನ ಕಲಕಿತು. ಇಂಥ ವಿಶೇಷ ಮಕ್ಕಳಿಗೆ ಏನಾದರೂ ಕೊಡುಗೆ ಕೊಡಬೇಕು ಎಂಬ ಆಸೆ ಆ ಶಿಬಿರದಲ್ಲಿ ಚಿಗುರೊಡೆಯಿತು. ಆ ಕನಸೇ 1996ರಲ್ಲಿ ಧಾರವಾಡದಲ್ಲಿ ‘ಕ್ರಿಯಾಶೀಲ ಗೆಳೆಯರು’ ಎಂಬ ಸ್ವಯಂಸೇವಾ ಸಂಸ್ಥೆಯಾಗಿ ಮೈದಳೆದು, ನಂತರ ವಿಶೇಷ ಶಾಲೆಯಾಗಿ ರೂಪುಗೊಂಡಿತು.

ಇಲ್ಲಿ ಕಲಿಯುತ್ತಿರುವ ವಿಶೇಷ ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆ (ಆಟಿಸಂ); ಚಂಚಲತೆ ಮತ್ತು ಅತಿ ಚಟುವಟಿಕೆಯ ಸಮಸ್ಯೆ (ಎಡಿಎಚ್‌ಡಿ), ಗೀಳು ಮನೋರೋಗ (ಒಸಿಡಿ), ಕಲಿಕೆಯ ನ್ಯೂನತೆ ಅಥವಾ ಭಾಷಾ ನ್ಯೂನತೆ (ಡಿಸ್ಲೆಕ್ಸಿಯಾ).

‘ನಾನು ಬಿ.ಕಾಂ ಓದಿದ್ದು.ಆರಂಭದಲ್ಲಿ ಮಕ್ಕಳಿಗೆ ಟ್ಯೂಷನ್‌ ಮಾಡುತ್ತಿದ್ದೆ. ರಜಾ ದಿನಗಳಲ್ಲಿ ರಂಗ ಶಿಬಿರಗಳನ್ನು ಆಯೋಜಿಸುತ್ತಿದ್ದೆ. ಅಲ್ಲಿಗೆ ಬರುತ್ತಿದ್ದ ಕೆಲವು ಮಕ್ಕಳಲ್ಲಿ ಕಲಿಕಾ ಸಮಸ್ಯೆಗಳಿರುವುದು ಗಮನಕ್ಕೆ ಬಂದಿತು. ಅಷ್ಟೇ ಅಲ್ಲ, ‘ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಕೆಟ್ಟ ಚಟಗಳ ಕಡೆ ಒಲವು, ಅತಿಯಾದ ಕೋಪ, ಮನೆ ಬಿಟ್ಟು ಹೋಗುವುದು, ಹಿಂಸಾತ್ಮಕ ಮನೋಭಾವ ಮುಂತಾದ ಗುಣಗಳು ನಮ್ಮ ಮಕ್ಕಳಲ್ಲಿವೆ’ ಎಂದು ಪಾಲಕರು ನನ್ನ ಬಳಿ ದೂರುತ್ತಿದ್ದರು. ನಂತರ ಅವರಿಗೆ ವಿಶೇಷ ತರಬೇತಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡೆ. ಮನೋವಿಜ್ಞಾನವನ್ನು ಓದಿಕೊಂಡೆ. ಜತೆಗೆ ರಂಗಕಲೆ, ಚಿತ್ರಕಲೆ, ಯೋಗ, ಮಡ್‌ ಥೆರಪಿಯ ತರಬೇತಿ ಪಡೆದೆ. ಇದರಿಂದ ವಿಶೇಷ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಾಯಿತು’ ಎಂದರು ಮುಕುಂದ ಮೈಗೂರ.

ನಾಲ್ಕು ಮಕ್ಕಳಿಗೆ ಒಬ್ಬ ಶಿಕ್ಷಕ

‘ನಮ್ಮ ಶಾಲೆಯಲ್ಲಿರುವ 48 ಮಕ್ಕಳು ತರಹೇವಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ನಾಲ್ಕು ಮಕ್ಕಳಿಗೆ ಒಬ್ಬ ಶಿಕ್ಷಕನಂತೆ ಒಟ್ಟು 12 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಇವರೆಲ್ಲರೂ ವಿಶೇಷ ತರಬೇತಿ ಪಡೆದಿದ್ದಾರೆ. ರಾಜ್ಯ ಪಠ್ಯಕ್ರಮದ ಜತೆ, ಕ್ರಿಯೇಟಿವ್‌ ಟೀಚಿಂಗ್‌ ಸಿಲಬಸ್‌ ಅನ್ನು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುತ್ತೇವೆ. ಆಟ–ನಾಟಕಗಳ ಮೂಲಕ ಪಾಠ ಮಾಡುವುದು ನಮ್ಮ ಬೋಧನಾ ಕ್ರಮ’ ಎನ್ನುತ್ತಾರೆ ಶಿಕ್ಷಕಿ ಹಾಗೂ ಮೈಗೂರರ ಪತ್ನಿ ಮಾಲತಿ.

‘ಯೋಗ, ಧ್ಯಾನಗಳು ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ಹಾಡು, ಕುಣಿತಗಳು ಎಡ ಮತ್ತು ಬಲ ಮಿದುಳಿನ ನರಗಳನ್ನು ಚುರುಕಾಗಿಸುತ್ತವೆ. ರಂಗಚಟುವಟಿಕೆಗಳು ಸಂವಹನ, ಏಕಾಗ್ರತೆ, ಪರಸ್ಪರ ಬಾಂಧವ್ಯ ವೃದ್ಧಿಸುತ್ತವೆ. ಪ್ರತಿ ದಿನ ಸಂಜೆ ಹೇಳಿಕೊಡುವ ಮೃತ್ಯುಂಜಯ ಮತ್ತು ಹಯಗ್ರೀವ ಸ್ತೋತ್ರಗಳು ಭಾಷಾ ಉಚ್ಚಾರಣೆಗೆ ಸಹಕಾರಿಯಾಗಿವೆ. ವಿಜ್ಞಾನ ಮಾದರಿಗಳು, ಚಿತ್ರಪಟ, ಅಕ್ಷರಗಳ ಪಟ್ಟಿಗಳು, ಕಲರ್‌ ಬಾಕ್ಸ್‌, ವಿಶೇಷ ಕಲಿಕಾ ಉಪಕರಣಗಳ ಮೂಲಕ ಸುಲಭವಾಗಿ ವಿಶೇಷ ಮಕ್ಕಳಿಗೆ ವಿಷಯಗಳನ್ನು ಅರ್ಥ ಮಾಡಿಸಬಹುದು. ಮಕ್ಕಳ ಬಗ್ಗೆ ಪಾಲಕರಿಗಿಂತ ಹೆಚ್ಚು ಪ್ರೀತಿ ಮತ್ತು ಕಾಳಜಿ ತೋರುತ್ತೇವೆ’ ಎನ್ನುತ್ತಾರೆ ಶಿಕ್ಷಕಿ ಕಲಾವತಿ.

‘ಉಡಾಳ ಅನ್ನಬೇಡಿ, ಉದಾಸೀನ ತೋರಬೇಡಿ...’

’100 ಮಕ್ಕಳಲ್ಲಿ ಶೇ 12ರಷ್ಟು ಮಕ್ಕಳು ಕಲಿಕಾ ಸಮಸ್ಯೆ ಎದುರಿಸುತ್ತಾರೆ’ – ಇದು ಸರ್ಕಾರಿ ಅಂಕಿ ಅಂಶ. ಆದರೆ ನಮ್ಮ ಸಮೀಕ್ಷೆ ಪ್ರಕಾರ ಶೇ 40ರಷ್ಟು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂಥ ಮಕ್ಕಳಿಗೆ ವಿಶೇಷ ತರಬೇತಿಯ ಅಗತ್ಯವಿರುತ್ತದೆ ಎನ್ನುತ್ತಾರೆ ಮುಕುಂದ ಮೈಗೂರ.

ಮುಕುಂದ ಮೈಗೂರ
ಮುಕುಂದ ಮೈಗೂರ

‘ನಮ್ಮ ಶಿಕ್ಷಣ ವ್ಯವಸ್ಥೆ ‘ಮಾರ್ಕ್ಸ್‌ವಾದಿ’ (Marks) ಗಳನ್ನು ಸೃಷ್ಟಿಸುತ್ತಿದೆ. ಅಂಕಗಳ ಆಧಾರದಲ್ಲಿ ದಡ್ಡ, ಜಾಣ ಎಂಬುದನ್ನು ಅಳೆಯುತ್ತದೆ. ಇದು ತಪ್ಪು. ಪ್ರತಿ ಮಗುವಿಗೂ ವಿಶೇಷ ಜ್ಞಾನವಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಬೇರೆಯವರೊಂದಿಗೆ ಹೋಲಿಸಿ, ನಿಂದಿಸಬಾರದು. ಹಾಗೆ ಮಾಡಿದರೆ ಕೀಳರಿಮೆ ಬೆಳೆದು, ದ್ವೇಷ ಮನೋಭಾವ ಹೆಚ್ಚಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅಗತ್ಯವಿದ್ದರೆ ಚಿಕಿತ್ಸೆ ‌ಕೊಡಿಸಬೇಕು. ಜತೆಗೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ಮನಮುಟ್ಟುವ ಹಾಗೆ ಬೋಧಿಸಿದರೆ ಮಗು ಓದಿನಲ್ಲಿ ಖಂಡಿತಾ ಮೇಲುಗೈ ಸಾಧಿಸುತ್ತದೆ. ಯಾರನ್ನೂ ಉಡಾಳ ಎಂದು ಬೈದು, ಅವರ ಬಗ್ಗೆ ಉದಾಸೀನ ತೋರಬೇಡಿ’ ಎನ್ನುವುದು ಮೈಗೂರರ ಮನದಾಳದ ಮಾತು. ಮುಕುಂದ ಅವರ ಸಂಪರ್ಕಕ್ಕೆ ಮೊ: 94488 22199.

ರೋಗ ವಾಸಿಯಾಯ್ತು, ಓದು ತಲೆಗತ್ತಿತು...

ರಾಯಬಾಗದ 8ನೇ ತರಗತಿಯ ಶ್ವೇತಾ (ಹೆಸರು ಬದಲಿಸಲಾಗಿದೆ) ‘ಬೈಪೊಲಾರ್‌ ಡಿಸಾರ್ಡರ್‌’ನಿಂದ ಬಳಲುತ್ತಿದ್ದಳು. ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು, ಕಣ್ಣುಗಳನ್ನು ಕಿರಿದಾಗಿಸುತ್ತಾ ವಿಚಿತ್ರವಾಗಿ ನೋಡುವುದು, ಒಂದೇ ಸಮನೆ ನಗುವುದು, ಅಳುವುದು.. ಇಂಥ ವರ್ತನೆಗಳಿದ್ದವು. ವೈದ್ಯಕೀಯ ಚಿಕಿತ್ಸೆ ನಂತರ ಈ ರೋಗ ವಾಸಿಯಾಗುವುದಿಲ್ಲ ಎಂದು ಪಾಲಕರು ಕೈಚೆಲ್ಲಿದ್ದರು.

ನಂತರ ಕೊನೆಯ ಪ್ರಯತ್ನ ಎಂಬಂತೆ, ಆಕೆಯನ್ನು ಈ ವಿಶೇಷ ಶಾಲೆಗೆ ಸೇರಿಸಿದರು. ಪ್ರೀತಿ, ವಿಶ್ವಾಸ ತೋರಿದ ಶಾಲೆಯ ಸಿಬ್ಬಂದಿ, ಆಕೆಗೆ ದೃಷ್ಟಿ ದೋಷ ಇರುವುದನ್ನು ಪತ್ತೆ ಹಚ್ಚಿದರು. ನಂತರ ಕಣ್ಣಿನ ಪರೀಕ್ಷೆ ಮಾಡಿಸಿ, ಕನ್ನಡಕ ಕೊಡಿಸಿದರು. ಅವಳ ಆಸಕ್ತಿಗೆ ಅನುಗುಣವಾಗಿ ಸಂಗೀತ, ನೃತ್ಯ, ಯೋಗ ತರಬೇತಿ ನೀಡಿದರು. ಆಯುರ್ವೇದ ಚಿಕಿತ್ಸೆ ಕೊಡಿಸಿದರು. ಅವಳಿಗೆ ಆಸಕ್ತಿಯಿದ್ದ ಚಿತ್ರಕಲೆಗೆ ಪ್ರೋತ್ಸಾಹ ನೀಡಿದರು. ಒಂದು ವರ್ಷದ ವಿಶೇಷ ತರಬೇತಿ ನಂತರ ಆಕೆಯ ವರ್ತನೆಯಲ್ಲಿ ಸುಧಾರಣೆ ಕಂಡು ಬಂದಿತು. ಅಷ್ಟೇ ಏಕೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 91 ಅಂಕ ಗಳಿಸಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದಳು.

ಐಐಟಿ ಪಾಸು ಮಾಡಿದ!

ವಿಜಯಪುರದ ಸಂದೀಪ(ಹೆಸರು ಬದಲಿಸಲಾಗಿದೆ) ಓದಿನಲ್ಲಿ ಜಾಣ. ಆದರೆ, ಅವನ ವರ್ತನೆ ಶಿಕ್ಷಕರಿಗೆ ಮತ್ತು ಸಹಪಾಠಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಅತಿಯಾದ ಕೋಪ, ಹಿಂಸಾತ್ಮಕ ಮನೋಭಾವ, ಪಾಲಕರು ಮತ್ತು ಶಿಕ್ಷಕರ ಮೇಲೆ ರೇಗಾಟ, ಹೇಳಿದ್ದನ್ನು ಕೇಳದೆ ಮೊಂಡುತನ ಮಾಡುವುದು, ನಾನೇಕೆ ಮಾಡಬೇಕು ಎಂದು ತಿರುಗಿ ಬೀಳುವುದು... ಇಂಥ ವರ್ತನೆಗಳಿಂದ ಬೇಸರ ಉಂಟು ಮಾಡುತ್ತಿದ್ದ.

ಆತನನ್ನು ಈ ವಿಶೇಷ ಶಾಲೆಗೆ ಸೇರಿಸಿದರು. ‘ಎಡಿಎಚ್‌ಡಿ’ ಸಮಸ್ಯೆಯಿಂದ ಬಳಲುತ್ತಿರುವುದು ಖಚಿತವಾಯಿತು. ನಂತರ ಅವನ ಎಲ್ಲ ಪ್ರಶ್ನೆಗಳಿಗೂ ಶಾಲೆಯ ಸಿಬ್ಬಂದಿ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಅವನ ವರ್ತನೆಯನ್ನು ದೂಷಿಸದೆ ಸಹಾನುಭೂತಿ ತೋರಿಸಿದರು. ಯೋಗ ಮತ್ತು ರಂಗ ತರಬೇತಿ ನೀಡಿದರು. ಕ್ರಮೇಣ ಸಂದೀಪ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿತ. ತನ್ನ ಅತಿರೇಕದ ವರ್ತನೆ ತಿದ್ದಿಕೊಂಡ. ವಿಶೇಷ ಎಂದರೆ, ಐಐಟಿ ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ‍್ಯಾಂಕ್‌ ಪಡೆದ. ಸದ್ಯ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾನೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT