ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವೂರರಿಗೆ ಅಂಚೆಚೀಟಿ ಗೌರವ

Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಜೀವಮಾನದ ಉದ್ದಕ್ಕೂ ಪರಹಿತ ಸಾಧನೆಗಾಗಿ ಶ್ರಮಿಸಿದವರ ಹೆಸರಲ್ಲಿ ಅಂಚೆ ಇಲಾಖೆ, ‘ಅಂಚೆ ಚೀಟಿ’ ಹೊರತರುತ್ತಿದೆ. ಇದು 19ನೆಯ ಶತಮಾನದ ಉತ್ತರಾರ್ಧದಿಂದ ಬೆಳೆದುಬಂದಿದೆ. ಇಂಥದ್ದೊಂದು ಗೌರವ ಹಲವು ಕನ್ನಡಿಗರಿಗೆ ಒಲಿದಿದೆ. ಹೀಗೆ ಅಂಚೆಚೀಟಿಯ ಗೌರವಕ್ಕೆ ಪಾತ್ರರಾದವರಲ್ಲಿ ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದವರಾದ ಸರ್ ಗುರುನಾಥ ಬೇವೂರು (ಐಸಿಎಸ್‌) ಪ್ರಮುಖರು.

ಗುರುನಾಥ್ ಅವರು ಜನಿಸಿದ್ದು 1889ರಲ್ಲಿ. 1950ರಲ್ಲಿ ಅವರು ನಿಧನರಾದರು. 1989– ಸರ್‌ ಗುರುನಾಥ್ ಜನ್ಮ ಶತಮಾನೋತ್ಸವ ವರ್ಷ. ಆ ವರ್ಷದ ನವೆಂಬರ್ 20 ರಂದು ಬಾಗಲಕೋಟೆಯ ನಗರಸಭಾ ಭವನದಲ್ಲಿ ‘ಸರ್‌ ಗುರುನಾಥ ಬೇವೂರು ಸ್ಮರಣಾರ್ಥ’ 60 ಪೈಸೆ ಮೊತ್ತದ ಅಂಚೆ ಚೀಟಿ ಮತ್ತು ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು. ಅಂಚೆ ಚೀಟಿ ಬಿಡುಗಡೆಯಾಗಿ ಈ ನವೆಂಬರ್ 20ಕ್ಕೆ ಮೂವತ್ತು ವರ್ಷಗಳು ತುಂಬಿವೆ.

ಯಾರು ಈ ಗುರುನಾಥ

ಬೇವೂರು ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಗುರುನಾಥ ಬೇವೂರು ಅವರು ‘ಐಸಿಎಸ್‌’ ಪಾಸ್‌ ಮಾಡಿದ್ದರು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ದಕ್ಷ ಆಡಳಿತಗಾರರಾಗಿದ್ದವರು. ಮಧ್ಯಪ್ರದೇಶದಲ್ಲಿ 1912 ರಿಂದ 1922ರ ವರೆಗೆ ಅಸಿಸ್ಟೆಂಟ್ ಕಮೀಷನರ್ ಮತ್ತು ಡಿಸ್ಟ್ರಿಕ್ಟ್ ಕಮೀಷನರ್ ಆಗಿದ್ದರು. ನಂತರದ ದಿನಗಳಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಹುದ್ದೆಗೆ ಏರಿದರು. ಪಾಟ್ನಾ, ನಾಗಪುರ ಮುಂಬೈಗಳಲ್ಲಿ 12 ವರ್ಷ ಸೇವೆ ಸಲ್ಲಿಸಿದರು. ಅಂಚೆ ಇಲಾಖೆ ಅಭಿವೃದ್ಧಿಗಾಗಿ 1928ರಲ್ಲಿ ರಚಿಸಿದ ಏಕಸದಸ್ಯ ಆಯೋಗಕ್ಕೆ ಸರ್ ಗುರುನಾಥರನ್ನು ನೇಮಿಸಲಾಗಿತ್ತು. ಅವರ ಸಮಿತಿ ನೀಡಿದ್ದ ವರದಿ ಸ್ವೀಕೃತವಾಯಿತು. ಇವರ ಹೆಸರಲ್ಲಿ ‘ಬೇವೂರ ಟೈಮ್ ಟೆಸ್ಟ್’ ಎಂದು ಕರೆಯಲಾಗುವ ಅಂಚೆ ಕಾರ್ಯಮಾಪನ ಸೂತ್ರವು ಇಂದಿಗೂ ಅಂಚೆ ಇಲಾಖೆಯಲ್ಲಿ ಜಾರಿಯಲ್ಲಿದೆ.

ಇವರು 1934ರಲ್ಲಿ ಅಂಚೆ ಡೈರೆಕ್ಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಭಾರತೀಯ. ಆ ಸಮಯದಲ್ಲಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರನ್ನು ಭೇಟಿ ಮಾಡಿ, ಮನವೊಲಿಸಿ, ಮೈಸೂರಿನಲ್ಲಿ ಪಾರಂಪರಿಕ ಕಟ್ಟಡವೊಂದನ್ನು ಕಟ್ಟಿಸಿ, ಅಂಚೆ ಇಲಾಖೆಗೆ ಹಸ್ತಾಂತರಿಸಿದರು. ಆ ಕಟ್ಟಡಕ್ಕೆ ‘ಬೇವೂರ ಬಿಲ್ಡಿಂಗ್’ ಎಂದು ನಾಮಕರಣ ಮಾಡಲಾಯಿತು. ಮೈಸೂರಿನ ಇರ್ವಿನ್ ರೋಡ್‌ನಲ್ಲಿರುವ ಈ ಕಟ್ಟಡವು ಇಂದಿಗೂ ಸುಸ್ಥಿತಿಯಲ್ಲಿದೆ.

1935ರಲ್ಲಿ ಇಂಡಿಯನ್‌ ಪೋಸ್ಟಲ್‌ ಆರ್ಡರ್‌ ಪದ್ಧತಿ ಜಾರಿಗೆ ತಂದಿದ್ದು ಗುರುನಾಥ್ ಅವರು. 1939 ರಲ್ಲಿ ಸಂಚಾರಿ ಅಂಚೆ ಅಂಚೆಕಚೇರಿ ಆರಂಭಿಸಿದರು. 1935 ರಲ್ಲಿ ನಡೆದ 5ನೇ ಜಾರ್ಜ್‌ ಪಟ್ಟಾಭಿಷೇಕದ ರಜತ ಮಹೋತ್ಸವದ ಅಂಗವಾಗಿ ರಾಮೇಶ್ವರ ದೇವಸ್ಥಾನ, ಅಮೃತಸರದ ಸಿಖ್ಖರ ಸುವರ್ಣ ಮಂದಿರ, ಮುಂಬೈ ಗೇಟ್‌ ವೇ, ತಾಜ್‌ಮಹಲ್ ಸೇರಿದಂತೆ ದೇಶದ ಪ್ರಮುಖ ಸ್ಮಾರಕಗಳ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿದ ಕೀರ್ತಿ ಗುರುನಾಥ ಅವರಿಗೆ ಸಲ್ಲುತ್ತದೆ.

ಗುರುನಾಥ ಬೇವೂರು ಅವರು ಅಂಚೆ ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇಂಟರ್‌ ನ್ಯಾಷನಲ್ ಏರ್ ಮೇಲ್ ಕಾಂಗ್ರೆಸ್, ಹೇಗ್-ಹಾಲಂಡ್-1927; ಯುನಿವರ್ಸಲ್ ಪೋಸ್ಟಲ್ ಕಾಂಗ್ರೆಸ್ ಲಂಡನ್-1929; ಇಂಪೀರಿಯಲ್ ಟೆಲಿಗ್ರಾಫ್ ಕಾನ್ಫರೆನ್ಸ್ ಲಂಡನ್-1937; ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಶನ್ ಕಾನ್ಫರೆನ್ಸ್ ಷಿಕಾಗೊ-1945; ಇಂಪೀರಿಯಲ್ ಟೆಲಿಕಮ್ಯುನಿಕೇಷನ್ಸ್ ಕಾನ್ಫರೆನ್ಸ್ ಬರ್ಮುಡಾ-1945. ಇವು ಅವರು ಭಾಗವಹಿಸಿದ ಪರಿಷತ್ತುಗಳು.

ದ್ವಿತೀಯ ಜಾಗತಿಕ ಮಹಾಯುದ್ದ ಕಾಲದಲ್ಲಿ ಬೇವೂರ ಅವರು ಪೋಸ್ಟ್ ಅಂಡ್ ಏರ್ ಡಿಪಾರ್ಟ್‌ಮೆಂಟ್‍ನ ಕಾರ್ಯದರ್ಶಿಯಾಗಿದ್ದರು. ಮಹಾಯುದ್ಧದ ದುಷ್ಪರಿಣಾಮಗಳನ್ನು ಸರಿಪಡಿಸುವುದಕ್ಕಾಗಿ ‘ಫೈನಾನ್ಸ್ ಅಂಡ್ ಕಾಮರ್ಸ್ ಪೂಲ್’ಗಾಗಿ ಆರು ಸದಸ್ಯರನ್ನು ಆಯ್ಕೆ ಮಾಡಿದಾಗ ಅವರಲ್ಲಿ ಗುರುನಾಥ ಬೇವೂರ ಅವರು ಮುಂಚೂಣಿಯಲ್ಲಿದ್ದರು. ‌1946 ರಲ್ಲಿ ವೈಸ್‍ರಾಯ್ ಎಗ್ಸಿಕ್ಯೂಟಿವ್ ಕೌನ್ಸಿಲ್‍ನ ಸದಸ್ಯತ್ವ ದೊರೆಯಿತು. 1950, ಅಗಸ್ಟ್‌ 29 ರಂದು ಸರ್ ಗುರುನಾಥ ಬೇವೂರು ನಿಧನರಾದರು.

ಗುರುನಾಥ ಅವರ ಸೇವೆಗೆ ಬ್ರಿಟಿಷ್ ಸರ್ಕಾರದಿಂದ ಕಂಪಾನಿಯನ್ ಆಫ್ ಇಂಡಿಯನ್ ಎಂಪೈರ್‌(ಸಿಐಇ)ಪ್ರಶಸ್ತಿ-1932; ನೈಟ್‌ ಪದವಿ-1939; ನೈಟ್ ಕಮಾಂಡರ್‌ ಆಫ್ ದಿ ಇಂಡಿಯನ್ ಎಂಪೈರ್‌(ಕೆಸಿಐಇ)-1946; ಸಿಲ್ವರ್ ಜುಬಲಿ ಮೆಡಲ್-1935; ಕಾರೋನೇಷನ್ ಮೆಡಲ್-1937 ಮತ್ತಿತರ ಗೌರವಗಳು ಸಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT