ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದ ಜಡಮಡಗು ಬೆಟ್ಟದಲ್ಲಿ ಶಿಲಾಯುಗದ ಕುರುಹು

Last Updated 11 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸಂಶೋಧನೆಗೆ ಮತ್ತು ಚಾರಣಕ್ಕೂ ಉತ್ತಮವಾದ ಸ್ಥಳ ಜಡಮಡಗು ಅಕ್ಕಮ್ಮನ ಬೆಟ್ಟ. ಇತಿಹಾಸದ ದೃಷ್ಟಿಯಿಂದ ಶಿಲಾಯುಗದ ನೆಲೆಯನ್ನು ಸಂರಕ್ಷಿಸಬೇಕಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಿಂದ ಪೂರ್ವದಿಕ್ಕಿಗೆ 18 ಕಿ.ಮೀ ದೂರದಲ್ಲಿ ಕಲ್ಲುಗಳನ್ನು ರಾಶಿ ಹಾಕಿದಂತಹ ಬೆಟ್ಟಗಳು ಕಾಣುತ್ತವೆ. ಇವುಗಳ ನಡುವಿರುವ ಕಾಲುದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ಎದುರಿಗೆ ಉದ್ದವಾಗಿ ಹೊರಳು ಕಲ್ಲಿನಂತೆ ಮೈಚಾಚಿಕೊಂಡಿರುವ ಬೆಟ್ಟವೊಂದು ಕಾಣುತ್ತದೆ. ಅದೇ ಜಡಮಡಗು ಅಕ್ಕಮ್ಮಬೆಟ್ಟ. ಈ ಬೆಟ್ಟದಲ್ಲಿ ಬೃಹತ್‌ ಶಿಲಾಯುಗದ ಕುರುಹುಗಳಿವೆ.

ಈ ಬೆಟ್ಟದಲ್ಲಿರುವ ಬಂಡೆಗಳ ಆಕೃತಿ ನೋಡಿದರೆ, ಪ್ರಕೃತಿಯೇ ಬಂಡೆಗಳನ್ನು ಕಡೆದು ಚಿತ್ತಾರವಾಗಿಸಿದೆ ಎನ್ನಿಸುತ್ತದೆ. ಗುಡ್ಡದ ಮೇಲೆ ಬಿದ್ದ ಮಳೆ ನೀರು ಜಡಮಡಗು ನದಿಯಾಗಿ ಹರಿಯುತ್ತದೆ. ಈ ನದಿಯ ಹತ್ತಿರದಲ್ಲೇ ಬೆಟ್ಟವಿರುವುದರಿಂದ ಜಡಮಡಗು ಬೆಟ್ಟವೆಂದೂ, ಬೆಟ್ಟದ ಮೇಲೆ ಅಕ್ಕಮ್ಮ ಎಂದು ಹೆಸರಿಸಲಾಗಿರುವ ಶಿಲಾಯುಧಗಳನ್ನು ಇಟ್ಟು ಪೂಜಿಸುವುದರಿಂದ ಜಡಮಡುಗು ಅಕ್ಕಮಬೆಟ್ಟ ಎಂದು ಹೆಸರಾಗಿದೆ.

ಬೃಹತ್ ಶಿಲಾಯುಗದ ನೆಲೆ

ಈ ನೆಲೆಯಲ್ಲಿ ಇರುವ ಅನೇಕ ರಚನೆಗಳು ನಾಶವಾಗಿವೆ. ಈಗ ಉಳಿದಿರುವುದು ಎರಡು ಮಾತ್ರ. ಒಂದರಲ್ಲಿ ಆಯತಾಕಾರದ ಬೃಹತ್ ಕಲ್ಲಿನ ಚಪ್ಪಡಿಗಳ ಕಲ್ಲಿನ ಪೆಟ್ಟಿಗೆ ಇದೆ. ಎಂಟು ಅಡಿ ಚದರದ ನಾಲ್ಕು ಬಂಡೆಗಳಿಂದ ರಚಿಸಲಾಗಿದೆ. ಪ್ರತಿ ಬಂಡೆಯ ದಪ್ಪ ನಾಲ್ಕು ಇಂಚು. ಪೂರ್ವ ದಿಕ್ಕಿಗಿರುವ ಬಂಡೆಗೆ ಸುಮಾರು ಒಂದೂವರೆ ಅಡಿ ಸುತ್ತಳತೆಯ ಕಿಂಡಿಯನ್ನು ಕೊರೆಯಲಾಗಿದೆ. ಈ ಆಯುತಾಕಾರದ ರಚನೆಯ ಸುತ್ತಲೂ ಹೂವಿನ ದಳಗಳಂತೆ ಬೃಹತ್ ಬಂಡೆಗಳನ್ನು, ವರ್ತುಲಾಕಾರದಲ್ಲಿ ಹೂವಿನ ಮಧ್ಯದಲ್ಲಿ ಮೊಗ್ಗಿನ ದಳಗಳು ಮುಚ್ಚಿಕೊಂಡಿರುವಂತೆ ಓರೆಯಾಗಿ ಹೂಳಲಾಗಿದೆ.

ಈ ಬಂಡೆಗಳ ಸಾಲಿನಿಂದ ಸಾಲಿನ ನಡುವೆ ಸುಮಾರು ಒಂದೂವರೆ ಅಡಿಯಷ್ಟು ಅಂತರವಿದೆ. ಈ ಅಂತರದಲ್ಲಿ ಸೈಜುಕಲ್ಲುಗಳನ್ನು ಹಾಗೂ ಚಕ್ಕೆ ಕಲ್ಲುಗಳನ್ನು ಪೇರಿಸಿ ಬಿಗಿ ಮಾಡಿದ್ದಾರೆ. ಬಹುಶಃ ಬಂಡೆಗಳು ಮತ್ತಷ್ಟು ಓರೆಯಾಗಿ ಬಾಗಿ ಬೀಳಬಾರದೆಂಬ ಉದ್ದೇಶವಿರಬಹುದು. ಈ ಕಲ್ಲಿನ ಪೆಟ್ಟಿಗೆಗಳ ರಚನೆಗೆ ಬಳಸಲಾಗಿರುವ ಬಂಡೆಗಳು ನಾಲ್ಕು ಇಂಚು ದಪ್ಪವಿದೆ. ವರ್ತುಲಾಕಾರದಲ್ಲಿರುವ ಬಂಡೆಗಳನ್ನು ಆರೋಹಣ ಕ್ರಮದಲ್ಲಿ (ಮೇಲಿನ ಸಾಲಿನಿಂದ ಕೊನೆಯ ಸಾಲಿಗೆ ಕ್ರಮವಾಗಿ ಎತ್ತರ ಕಡಿಮೆಯಾಗುತ್ತಾ ಬಂದಿವೆ) ನಿಲ್ಲಿಸಲಾಗಿದೆ.

ಎರಡನೆಯ ರಚನೆಯಲ್ಲಿ ವರ್ತುಲಾಕಾರದ ಬಂಡೆಗಳು ಬಹುತೇಕ ನಾಶವಾಗಿವೆ. ಚೌಕಾಕಾರದ ಕಲ್ಲಿನ ಕೋಣೆಯನ್ನು ಮಾತ್ರ ನೋಡಬಹುದು. ಈ ರಚನೆಗೆ ಬಳಸಲಾಗಿರುವ ಕಲ್ಲಿನ ಚಪ್ಪಡಿಗಳ ಎತ್ತರ ಲೆಕ್ಕಾಚಾರ ಹಾಕಿದರೆ ಸಂಪೂರ್ಣವಾಗಿ ಚೌಕಾಕಾರದ ಕೋಣೆಯಾಗಿದ್ದು, ಒಬ್ಬ ಮನುಷ್ಯ ಆರಾಮವಾಗಿ ಒಳಗೆ ನಿಂತುಕೊಳ್ಳಬಹುದು. ಈ ಕೋಣೆಯ ಕಲ್ಲಿನ ಪೆಟ್ಟಿಗೆಯ ಮೂರು ದಿಕ್ಕುಗಳ ಬಂಡೆಗಳು ಉಳಿದುಕೊಂಡಿವೆ. ಉತ್ತರ ದಿಕ್ಕಿಗೆ ಇರುವ ಬಂಡೆಗೆ ಕಿಂಡಿಯನ್ನು ಕೊರೆದಿರುವುದು ಸೇರಿದಂತೆ ಮೊದಲನೆಯ ರಚನೆಗೆ ಹೋಲಿಸಿದಾಗ ಬಹಳ ವ್ಯತ್ಯಾಸಗಳನ್ನು ಕಾಣಬಹುದು.

ಶಿಲಾಯುಗದ ಆಯುಧಗಳು

ಇದೇ ಬೆಟ್ಟದ ಮೇಲೆ ಸಣ್ಣದಾದ ನೀರಿನ ಹೊಂಡವಿದೆ. ಅದರ ಮುಂದೆ ಇರುವ ಎತ್ತರವಾದ ಸ್ಥಳದಲ್ಲಿ ಎರಡು ಸಣ್ಣ ಗುಡಿಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಅವರು ಅಕ್ಕಮ್ಮನವರು ಎಂದು ನಂಬಲಾದ ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧಗಳನ್ನು (ಏಳು) ಒಂದು ಗುಡಿಯಲ್ಲೂ, ಮತ್ತೊಂದು ಗುಡಿಯಲ್ಲಿ ಎರಡು ಆಯುಧಗಳನ್ನು ಪೂಜೆಗೆ ಇಡಲಾಗಿದೆ.

ಇಲ್ಲಿಂದ ಸ್ವಲ್ಪ ದೂರದಲ್ಲಿ ಶಿಲಾಗೋರಿಗಳ ಬಳಿ ನಸುಕೆಂಪು ಬಣ್ಣದ ಮಡಿಕೆ ಕುಡಿಕೆ ಚೂರುಗಳು ಲಭ್ಯವಾಗಿವೆ. ಅವುಗಳ ಹೊರಭಾಗ ಒರಟಾಗಿದ್ದು, ದಪ್ಪದಾಗಿದ್ದು, ಮೃತ ಪಾತ್ರೆಗಳಾಗಿವೆ(ಚಿತಾಭಸ್ಮ ತುಂಬುವ ಮಡಿಕೆ). ಒಳಭಾಗ ಕಪ್ಪು ಬಣ್ಣದಿಂದ ಮತ್ತು ಹೊರಭಾಗ ಕೆಂಪು ಬಣ್ಣದಿಂದ ಕೂಡಿರುವ ತೆಳುವಾದ ಮಡಿಕೆ ಕುಡಿಕೆಗಳ ನಮೂನೆಗಳು ಬೆಟ್ಟದ ಕೆಳಗೆ ಸಿಕ್ಕಿವೆ. ಎರಡು ಬದಿಗಳು ಹೊಳಪಿನಿಂದ ಕೂಡಿವೆ. ಜೊತೆಗೆ ಕೊತ್ತೂರು ಕಡೆಯಿಂದ ಜಡಮಡಗು ಅಕ್ಕಮ್ಮ ಬೆಟ್ಟದವರೆಗೂ ಪ್ರಾರಂಭವಾಗುವ ಬ್ಲಾಕ್‍ಡೈಕ್ ಶಿಲೆಗಳ ಸಾಲಿನ ಕೆಳಗೆ ಗುಹೆಗಳು ಇವೆ. ಆ ಗುಹೆಗಳ ಒಳ ಹೊಕ್ಕು ಪರಿಶೀಲಿಸಿದಾಗ ಅದರಲ್ಲಿ ಮಡಿಕೆಗಳು ಕಂಡುಬಂದಿವೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಗಮನಸೆಳೆವ ವರ್ಣ ಚಿತ್ರಗಳು

ಇದೇ ಬೆಟ್ಟಕ್ಕೆ ಹೊಂದಿಕೊಂಡಿರುವ ಇನ್ನೊಂದು ಸಣ್ಣ ಬೆಟ್ಟದ ಮೇಲೆ ಭೂಮಿಗೆ ಅಭಿಮುಖವಾಗಿ ಭಾಗಿರುವ ಬೃಹತ್ ಬಂಡೆಯ ಮೇಲೆ ಕೆಂಪು ಬಣ್ಣ ಚಿತ್ರಗಳು ಕಾಣುತ್ತವೆ. ಆದರೆ ಅವು ಅಸ್ಪಷ್ಟವಾಗಿದ್ದು, ಕೆಳಭಾಗದಲ್ಲಿ ಕೊಂಬುಳ್ಳ ಆಕಾರದ ಯಾವುದೋ ಪ್ರಾಣಿಯ ಚಿತ್ರವಿದೆ.

ಕೊತ್ತೂರು ಕಡೆಯಿಂದ ಪ್ರಾರಂಭವಾಗುವ ಬ್ಲಾಕ್‍ಡೈಕ್ ಶಿಲೆಗಳ ಬೆಟ್ಟದ ಸಾಲಿನ ಆರಂಭದಲ್ಲಿ ಬಂಡೆಗಳಿಗೆ ಕಲ್ಲಿನಿಂದ ಕುಟ್ಟಿಕುಟ್ಟಿ ರಚನೆ ಮಾಡಲಾದ (ಎನ್‌ಗ್ರೇವಿಂಗ್‌) ಗೂಳಿಯ ಕುಟ್ಟುಚಿತ್ರಗಳು ಕಂಡುಬರುತ್ತವೆ.

ಒಟ್ಟಾರೆ, ಸಂಶೋಧನೆಗೆ ಮತ್ತು ಚಾರಣಕ್ಕೂ ಉತ್ತಮವಾದ ಸ್ಥಳ. ಮಳೆಗಾಲದಲ್ಲಿ ಜಡಮಡಗು ಜಲಪಾತ ನೋಡುಗರ ಆಕರ್ಷಿಣಿಯ ಸ್ಥಳವಾಗುತ್ತದೆ. ಸರ್ಕಾರ ಇತ್ತ ಗಮನ ಹರಿಸಿ ವಿಶಿಷ್ಟ ಮತ್ತು ವೈವಿಧ್ಯವುಳ್ಳ ಈ ಬೃಹತ್ ಶಿಲಾಯುಗದ ನೆಲೆಯನ್ನು ಸಂರಕ್ಷಿಸಬೇಕಾಗಿದೆ.

(ಲೇಖಕರು ಇತಿಹಾಸ ಸಂಶೋಧಕರು)

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT