ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧದ ನಡುವೆ ಬೆಲೆ ಕಂಡವರು...

ಲಾಕ್‌ಡೌನ್ ಮಧ್ಯೆಯೂ ಕಲ್ಲಂಗಡಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿ
Last Updated 6 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಕಲ್ಲಂಗಡಿಗೆಡಿಜಿಟಲ್ ಮಾರ್ಕೆಟ್‌!
ಉಡುಪಿ ಜಿಲ್ಲೆಯ ಹಿರಿಯಡಕದ ಬೊಮ್ಮರಬೆಟ್ಟು ಗ್ರಾಮದ ಸುರೇಶ್‌ ನಾಯಕ್‌ ಅವರು ಈ ಬಾರಿ ಹದಿಮೂರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದರು. ಹೆಚ್ಚೂ ಕಡಿಮೆನೂರು ಟನ್‌ ಕಲ್ಲಂಗಡಿ ಹಣ್ಣು. ಇನ್ನೇನು ಫಸಲು ಕೊಯ್ದು ಮಾರುಕಟ್ಟೆಗೆ ಕಳಿಸಬೇಕು ಎನ್ನುವಷ್ಟರಲ್ಲಿ, ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಯಿತು. ಹೀಗಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ದಿಗ್ಬಂಧನ ವಿಧಿಸಿತು. ಪರಿಣಾಮವಾಗಿ ಕೊಯ್ದ ಹಣ್ಣನ್ನು ಸಾಗಿಸುವಂತಿಲ್ಲ. ಮಾರುಕಟ್ಟೆಯೂ ಇಲ್ಲ...!

ಏನ್ಮಾಡೋದು? ಸುರೇಶ್ ಯೋಚನೆ ಮಾಡಲು ಆರಂಭಿಸಿದರು. ಕೊಯ್ದಹಣ್ಣನ್ನು ಜಮೀನಿನಲ್ಲೇ ಬಿಟ್ಟರೆ ಕೊಳೆಯುವುದು ಗ್ಯಾರಂಟಿ ಎಂದು ಅವರಿಗೆ ಖಚಿತವಾಗಿತ್ತು.ಆದರೆ ಹತಾಶರಾಗಲಿಲ್ಲ. ಸ್ವಲ್ಪ ತಲೆಗೆ ಕೆಲಸ ಕೊಟ್ಟಾಗ, ಆ ಕ್ಷಣದಲ್ಲಿ ಅವರಿಗೆ ಹೊಳೆದಿದ್ದು ‘ಸಾಮಾಜಿಕ ಜಾಲತಾಣ’ಗಳನ್ನು ಬಳಸಿಕೊಂಡು ಗ್ರಾಹಕರನ್ನೇ ಜಮೀನಿನ ಬಳಿಗೆ ಕರೆತರುವಂತಹ ಐಡಿಯಾ. ಅದಕ್ಕಾಗಿ ಅವರು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ಚೈತನ್ಯ ಅವರ ಸಲಹೆ ಪಡೆದರು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ‘ನಾನಿಷ್ಟು ಕಲ್ಲಂಗಡಿ ಬೆಳೆದಿದ್ದೇನೆ. ಬೇಕಾದವರು ಸಂಪರ್ಕಿಸಬಹುದು‘ ಎಂದು ಮಾಹಿತಿ ಹಾಕಿ ತಮ್ಮ ದೂರವಾಣಿ ಸಂಖ್ಯೆಯನ್ನೂ ನಮೂದಿಸಿದರು. ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಯಿತು. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬೀಳುತ್ತಿದ್ದ ಗ್ರಾಹಕರಿಂದ ಕರೆಗಳು ಬರಲು ಶುರುವಾದವು.

ಕಟಾವು ಮಾಡಿ ಹಣ್ಣುಗಳನ್ನು ಹೊಲ ಇರುವ ಬೊಮ್ಮರಬೆಟ್ಟುವಿನಲ್ಲಿ ರಾಶಿ ಹಾಕಿಯೇ ಬಿಟ್ಟರು.ಜಿಲ್ಲಾಡಳಿತ ಕೂಡ ಬೆಳಿಗ್ಗೆ 7ರಿಂದ 11ರವರೆಗೆ ದಿನಸಿ, ತರಕಾರಿ ಖರೀದಿಗೆ ಅವಕಾಶ ಕೊಟ್ಟಿದ್ದರಿಂದ ಹಿರಿಯಡಕ, ಪೆರ್ಡೂರು, ಮಣಿಪಾಲ, ಉಡುಪಿ ಸುತ್ತಮುತ್ತಲಿನ ಗ್ರಾಹಕರು ಬೈಕ್ ಹಾಗೂ ಕಾರುಗಳಲ್ಲಿ ಸುರೇಶ್ ಅವರ ಜಮೀನಿಗೆ ಲಗ್ಗೆ ಇಟ್ಟರು. ಸಾಮಾಜಿಕ ಅಂತರ ಕಾಪಾಡಿಕೊಂಡೇ ಹಣ್ಣನ್ನು ಖರೀದಿಸಿದರು. ಬೆಳಿಗ್ಗೆ 9 ರಿಂದ ಸಂಜೆಯಾಗುವುದರೊಳಗೆ 40 ಟನ್ ಹಣ್ಣು ಮಾರಿಬಿಟ್ಟರು.

ಸುರೇಶ್‌

ದರ ಕಡಿಮೆ ಮಾಡಿದರು..
‌ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 20 ದರ ಇದ್ದರೆ, ಸುರೇಶ್ ₹ 10ಕ್ಕೆ ಮಾರುತ್ತಿದ್ದಾರೆ. ಗ್ರಾಹಕರು ಇಷ್ಟಪಟ್ಟ ಹಣ್ಣುಗಳನ್ನು ಆರಿಸಿಕೊಳ್ಳುವ ಅವಕಾಶವನ್ನೂ ನೀಡಿದ್ದಾರೆ. ‘ಈ ಕಾರಣಕ್ಕೆ ಒಬ್ಬರಿಂದ ಒಬ್ಬರಿಗೆ ಈ ಸುದ್ದಿ ಹರಡಿ ಈಗ ಪ್ರತಿದಿನ 5 ಟನ್ ಕಲ್ಲಂಗಡಿ ಮಾರಾಟವಾಗುತ್ತಿದೆ‘ ಎಂದು ಸುರೇಶ್‌ ಯಶೋಗಾಥೆ ಹಂಚಿಕೊಂಡರು.

‘ಪ್ರತಿ ವರ್ಷ ಕೆ.ಜಿ.ಗೆ ₹ 13 ರಿಂದ ₹14ಕ್ಕೆ ಮಾರಾಟ ಮಾಡುತ್ತಿದ್ದೆ. ಬೇಸಿಗೆ ಹಾಗೂ ಜಾತ್ರೋತ್ಸವ ಸಂದರ್ಭ ಇರುತ್ತಿದ್ದರಿಂದ ಹಣ್ಣಿಗೆ ಬೇಡಿಕೆ ಇರುತ್ತಿತ್ತು. ಈ ವರ್ಷ ಲಾಕ್‌ಡೌನ್ ಆಗಿದ್ದರಿಂದ ₹ 10ಕ್ಕೆ ಮಾರುತ್ತಿದ್ದೇನೆ. ಸಾಗಾಟ ವೆಚ್ಚ ಕೂಡ ಇಲ್ಲವಾದ್ದರಿಂದ ನಷ್ಟವಂತೂ ಆಗುವುದಿಲ್ಲ. ಹಾಕಿದ ಬಂಡವಾಳಕ್ಕೆ ಮೋಸವಿಲ್ಲ‘ ಎಂದು ಹೇಳುವಾಗ ಅವರ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.

ಮಾರುಕಟ್ಟೆ ಗೊತ್ತಿರಬೇಕು..
ಪ್ರಗತಿಪರ ಕೃಷಿಕ ಸುರೇಶ್‌ ನಾಯಕ್‌ 8 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಪ್ರತಿ ವರ್ಷ, ಬೆಳೆಯುವಾಗಲೇ ಎಲ್ಲೆಲ್ಲಿ ಹಣ್ಣಿಗೆ ಮಾರುಕಟ್ಟೆ ಇದೆ ಎಂಬುದನ್ನು ಖಾತರಿಪಡಿಸಿಕೊಂಡಿರುತ್ತಾರೆ. ಇಲ್ಲಿವರೆಗೂ ಮಾರುಕಟ್ಟೆ ತಾಪತ್ರಯ ಎದುರಾಗಿರಲಿಲ್ಲ. ಈ ವರ್ಷ ಕೊರೊನಾದಿಂದಾಗಿ ತೊಂದರೆಯಾಯಿತು. ‘ರೈತರು ಬರಿ ಬೆಳೆದರೆ ಸಾಲದು, ಬೆಳೆದಿದ್ದನ್ನು ಮಾರುಕಟ್ಟೆ ಮಾಡುವ ದಾರಿಗಳನ್ನು ಕಲಿತಿರಬೇಕು‘ ಎನ್ನುವುದು ಅವರ ಅಭಿಪ್ರಾಯ. ‘ಈಗ ಸಾಮಾಜಿಕ ಜಾಲತಾಣಗಳು ರೈತರ ಪಾಲಿಗೆ ಅತಿದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿಕೊಡುತ್ತಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು’ ಎನ್ನುತ್ತಾರೆ ಸುರೇಶ್.

ಪರ್ಯಾಯ ಮಾರುಕಟ್ಟೆಇಂದಿನ ಅಗತ್ಯ
ಕಲ್ಲಂಗಡಿ ಜತೆಗೆ ಕುಂಬಳ, ಸಿಹಿ ಕುಂಬಳ, ಮುಳ್ಳುಸೌತೆ, ಬೆಂಡೆ, ಅಲಸಂದೆ ಕೂಡ ಬೆಳೆದಿದ್ದು, ಇವುಗಳನ್ನೂ ನೇರವಾಗಿ ಮಾರಾಟ ಮಾಡಿದ್ದೇನೆ. ಸಾಮಾಜಿಕ ಜಾಲತಾಣ ಪರಿಣಾಮಕಾರಿ ಮಾಧ್ಯಮವಾಗಿದ್ದು, ಮಾರುಕಟ್ಟೆಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ. ರೈತ ಮಾರುಕಟ್ಟೆ ಇಲ್ಲ ಎಂದು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಸ್ತೆಗೆ ಅಥವಾ ತಿಪ್ಪೆಗೆ ಸುರಿಯುವ ಬದಲು ಪರ್ಯಾಯ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಇಂದಿನ ಅತಿ ಅಗತ್ಯ ಎನ್ನುವುದು ಸುರೇಶ್‌ ಅವರ ಅಭಿಪ್ರಾಯ.

ಸುರೇಶ್ ನಾಯಕ್ ಸಂಪರ್ಕಕ್ಕೆ: 94800 16147

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT