ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮೂರ ತರಕಾರಿ ನಮಗೆ’

Last Updated 13 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಈ ಊರಿನಲ್ಲಿ ಎರಡು ಧಾರ್ಮಿಕ-ಸಾಮಾಜಿಕ ಆಶಯದ ವಾಟ್ಸಾಪ್ ಬಳಗವಿದೆ. ಬಳಗದ ವ್ಯಾಪ್ತಿಯ ಸುಮಾರು ಮೂವತ್ತು ಮನೆಗಳ ಊಟದ ಬಟ್ಟಲಿನಲ್ಲೀಗ ತಾಜಾ ತರಕಾರಿಯ ಸ್ವಾದ! ಬಳಗವು ಕೊರೊನಾ ಲಾಕ್‍ಡಾನಿನಲ್ಲೂ ತರಕಾರಿಯನ್ನು ಮನೆಗಳಿಗೆ ಪೂರೈಸುವ ಕೆಲಸ ಮಾಡುತ್ತಿದೆ. ‘ನಮ್ಮೂರಿನ ತರಕಾರಿಯನ್ನು ನಮ್ಮೂರ ಜನ ಬಳಸುವಂತಾಗಬೇಕು’ ಎಂಬ ದೂರದೃಷ್ಟಿ.

ಕಾಸರಗೋಡು ಜಿಲ್ಲೆಯ ಮೀಯಪದವಿನ ‘ಚೌಟರ ಚಾವಡಿ’ಯಲ್ಲಿ ಮಾರ್ಚ್ ಮೊದಲ ವಾರ ಹಣ್ಣು - ತರಕಾರಿ ಮೇಳ ಜರುಗಿತ್ತು. ಅಲ್ಲಿ ಬೆಳೆಗಾರ-ಬಳಕೆದಾರರ ಮಧ್ಯೆ ಸಂವಹನ ಕೊಂಡಿ ಬೆಸೆದಿತ್ತು. ಹೀಗೆ ಆರಂಭಗೊಂಡ ಬೆಳೆಗಾರರ ಸಂಪರ್ಕಸೇತುವಿಗೆ ಬಂದವರು ಶ್ರೀಧರ ಶೆಟ್ಟಿ ಮತ್ತು ಹರೀಶ್ ದೇರಂಬಳ. ಇವರ ತರಕಾರಿಯೀಗ ವಾಟ್ಸಾಪ್ ಬಳಗದ ಮೂಲಕ ಊರಿನ ಅಡುಗೆ ಮನೆ ತಲಪುತ್ತಿದೆ.

ಮೇಳದ ಸಂಘಟಕರಲ್ಲೊಬ್ಬರು ಸಾಮಾಜಿಕ ಮುಂದಾಳು ಹಾಗೂ ಕೃಷಿಕರಾದ ಜಯಪ್ರಕಾಶ್ ತೊಟ್ಟೆತ್ತೋಡಿ. ಇವರ ಮನೆಯಂಗಳವು ಬೆಳೆಗಾರ ಮತ್ತು ವಾಟ್ಸಾಪ್ ಬಳಗಕ್ಕೆ ಕೊಂಡಿಯಾಯಿತು. ಬಳಗದ ಇಬ್ಬರು ಭಾರವಾಹಿಗಳು ತಮ್ಮ ವ್ಯಾಪ್ತಿಯ ಮನೆಗಳ ಬೇಡಿಕೆಯಂತೆ ತರಕಾರಿಯನ್ನು ಒಯ್ಯುತ್ತಾರೆ. ಅಂದಂದಿನ ಲೆಕ್ಕ ಅಂದಂದೇ ಚುಕ್ತಾ.

ಮಾರ್ಚ್ 30ರಂದು ಆರಂಭಗೊಂಡ ವ್ಯವಸ್ಥೆಯಲ್ಲಿ ಇದುವರೆಗೆ ನಾಲ್ಕೂವರೆ ಕ್ವಿಂಟಾಲ್ ತರಕಾರಿ ಮಾರಾಟವಾಗಿದೆ. ಮುಖ್ಯವಾಗಿ ಹರೀಶ್ ದೇರಂಬಳರು ಬೆಳಿಗ್ಗೆ ಸುಮಾರು ಹತ್ತೂವರೆ ಹನ್ನೊಂದರ ಆಜೂಬಾಜಿನಲ್ಲಿ ತರಕಾರಿ ತಲಪಿಸುತ್ತಾರೆ. ನಮ್ಮಲ್ಲಿ ಇಂತಿಂತಿಹ ತರಕಾರಿಯಿದೆ ಎಂದು ಹಿಂದಿನ ದಿನವೇ ಸಂಬಂಧಪಟ್ಟವರಿಗೆ ತಿಳಿಸುತ್ತಾರೆ. ಅದು ವಾಟ್ಸಾಪ್ ಗುಂಪಿನಲ್ಲಿ ಹರಿದಾಡುತ್ತಾರೆ. ಆಸಕ್ತರು ಬೇಡಿಕೆ ಸಲ್ಲಿಸುತ್ತಾರೆ.

‘ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತರಕಾರಿಯನ್ನು ಪೇಟೆಗೆ ಒಯ್ಯುವಂತಿಲ್ಲ. ಊರಿನ ತರಕಾರಿಯು ಊರಿಗೆ ಬಳಕೆಯಾದರೆ ಹೆಮ್ಮೆಯಲ್ವಾ. ಈಗ ದಿನಕ್ಕೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿ ತರಕಾರಿ ಗಳಿಸಿಕೊಡುತ್ತದೆ‘ ಎನ್ನುವ ಖುಷಿ ಹರೀಶರದ್ದು. ಅಲಸಂಡೆ, ತೊಂಡೆ, ಬದನೆ, ಬೆಂಡೆ, ಹಾಗಲ, ಸೌತೆ, ಬಸಳೆ, ಸೊರೆಕಾಯಿ.. ಇವಕ್ಕೆಲ್ಲಾ ಬೆಳೆದವರಿಂದಲೇ ದರ ನಿಶ್ಚಯ.

ಮೀಯಪದವಿನಿಂದ ಮೂರು ಕಿಲೋಮೀಟರ್ ದೂರದಲ್ಲಿದೆ ಜಯಪ್ರಕಾಶರ ಮನೆ. ಕೊರೊನಾ ತಡೆಯ ನಿರ್ಬಂಧಗಳ ಹಿನ್ನೆಲೆಯಲ್ಲಿ ವಾಟ್ಸಾಪ್ ಬಳಗದ ವ್ಯವಸ್ಥೆಯು ತುಂಬಾ ಹೊಂದಿಕೊಳ್ಳುತ್ತದೆ. ಊರಿನ ಸುತ್ತುಮುತ್ತಲಿನ ಹಸಿರು ಮನಸಿಗರು ‘ತಮಗೂ ತರಕಾರಿ ಬೇಕಿತ್ತಲ್ಲಾ. ಒದಗಿಸಬಹುದೇ‘ ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದಾಂತೆ.

‘ಈಗ ಎರಡು, ಮೂರು ಏರಿಯಾಗಳಿಗೆ ಮಾತ್ರ ವಿತರಣೆಯಾಗುತ್ತಿದೆ. ನಮ್ಮೂರಿನ ಎಲ್ಲರೂ ಸ್ಪಂದಿಸಿದರೆ ಇಲ್ಲಿಯ ತರಕಾರಿ ನಮಗೇ ಸಾಲದು. ಇನ್ನೂ ನಮ್ಮೂರಲ್ಲಿ ರೈತ ಮತ್ತು ಗ್ರಾಹಕ ಕೊಡುಕೊಳ್ಳುವಿಕೆಯಲ್ಲಿ ಮಡಿವಂತಿಕೆ ಬಿಟ್ಟಿಲ್ಲ‘ ಎನ್ನುವ ವಾಸ್ತವವನ್ನು ಹೇಳುವ ಜಯಪ್ರಕಾಶ್ ಹೊಸ ಸುಳಿವನ್ನು ನೀಡಿದರು. ‘ಸದ್ಯ ಯಾವ ದರಕ್ಕೆ ತರಕಾರಿ ಖರೀದಿ ಆಗುತ್ತದೋ ಅದೇ ದರಕ್ಕೆ ಮಾರಾಟ. ಮುಂದೆ ಕೊರೋನಾ ಮುಕ್ತವಾದ ಬಳಿಕ ಎಲ್ಲವೂ ಸರಿಹೋದರೆ ಸ್ಥಳೀಯ ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಲ್ಲಿಯ ಯುವ ತಂಡದ ನೇತೃತ್ವದಲ್ಲಿ ವಾರದ ಸಂತೆ ಮಾಡುವ ಯೋಚನೆಯಿದೆ‘.

‘ಅಲ್ಲಲ್ಲಿನ ಬೆಳೆ ಆಯಾಯ ಊರಿನ ಅಗತ್ಯ ಪೂರೈಸುವುದು ಬಹೂಪಯೋಗಿ ಪರಿಕಲ್ಪನೆ. ಬಹಳ ಹಿಂದೆ ಇದ್ದ ವಾರದ ಸಂತೆಯ ಆಶಯವೂ ಇದುವೇ. ಇದರಿಂದಾಗ ಆಯಾ ಹಳ್ಳಿಯ ಹಣ ಅಲ್ಲೇ ಉಳಿಯುತ್ತದೆ. ಮಧ್ಯವರ್ತಿಗಳಿಂದಾಗುವ ಶೋಷಣೆ ತಪ್ಪುವುದು ಬಹು ದೊಡ್ಡ ಲಾಭ. ವಾಟ್ಸಪ್ ಬಳಕೆಯಿಂದ ಈ ಥರದ ‘ನಮ್ಮೂರ ತರಕಾರಿ ನಮಗೇ’ ಎನ್ನುವ ವ್ಯವಸ್ಥೆ ದೇಶದ ಕೆಲವೆಡೆಗಳಲ್ಲಿ ನಡೆಯುತ್ತಿದೆ. ಇಂತಹ ಪ್ರಯೋಗಗಳನ್ನು ಕೊರೋನಾ ಭಯದ ನಂತರವೂ ಬಲಪಡಿಸಿ ಮುಂದುವರಿಸಬೇಕಾದ ಜವಾಬ್ದಾರಿ ಆಯಾಯಾ ಊರಿನವರದು‘ ಎನ್ನುವ ಆಶಯ ಹಿರಿಯ ಪತ್ರಕರ್ತ ಶ್ರೀಪಡ್ರೆಯವರದು. ಮೀಯಪದವಿನ ತರಕಾರಿ ಮೇಳದ ಕಾರ್ಯಹೂರಣದ ಪರಿಕಲ್ಪನೆ ಇವರದು.

ಜಯಪ್ರಕಾಶರು ಬೆಳೆಗಾರರ ಮತ್ತು ಗ್ರಾಹಕರ ಬೆನ್ನು ತಟ್ಟಿದ ಪರಿಣಾಮದಿಂದ ಊರಿನ ತರಕಾರಿಗೆ ಊರಿನಲ್ಲೇ ಮಾರಾಟ ಕೊಂಡಿ ಏರ್ಪಟ್ಟಿದೆ. ಇಂತಹ ಬೆನ್ನು ತಟ್ಟುವ ಸಮ್ಮನಸಿಗರ ಸಂಖ್ಯೆ ಹೆಚ್ಚಾಗಬೇಕು.

***

‘ನಮ್ಮೂರ ತರಕಾರಿ ನಮಗೇ’ ಎನ್ನುವ ವ್ಯವಸ್ಥೆ ದೇಶದ ಕೆಲವೆಡೆಗಳಲ್ಲಿ ನಡೆಯುತ್ತಿದೆ. ಇಂತಹ ಪ್ರಯೋಗಗಳನ್ನು ಕೊರೋನಾ ಭಯದ ನಂತರವೂ ಬಲಪಡಿಸಿ ಮುಂದುವರಿಸಬೇಕಾದ ಜವಾಬ್ದಾರಿ ಆಯಾಯಾ ಊರಿನವರದು‘

– ಶ್ರೀಪಡ್ರೆ, ಕೃಷಿ ಪತ್ರಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT