ಸೋಮವಾರ, ಆಗಸ್ಟ್ 15, 2022
22 °C

ಜಿಕೆವಿಕೆ ಪಾರಂಪರಿಕ ಜೀವವೈವಿಧ್ಯ ತಾಣದ ಗಡಿ ಗುರುತಿಸಲು ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಪಾರಂಪರಿಕ ಜೀವವೈವಿಧ್ಯ ತಾಣದ ಗಡಿ ಗುರುತಿಸಲು ಅರಣ್ಯ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಜಂಟಿ ಸಮೀಕ್ಷೆ ಕೈಗೊಳ್ಳಲು, ಜೀವವೈವಿಧ್ಯ ತಾಣ ನಿರ್ವಹಣೆ ಕುರಿತು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಲ್ಲದೆ, 2021ರ ಜನವರಿಯಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣಗಳ ಮಹತ್ವ, ನಿರ್ವಹಣೆ ಕುರಿತು ರಾಷ್ಟ್ರೀಯ ಸಮಾಲೋಚನಾ ಕಾರ್ಯಾಗಾರವನ್ನು ಜೆಕೆವಿಕೆಯಲ್ಲಿ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ.

ಜಿಕೆವಿಕೆ ಜೀವವೈವಿಧ್ಯ ತಾಣ ನಿರ್ವಹಣಾ ಸಮಿತಿ ಪುನರ್‌ ರಚಿಸಬೇಕು, ತಾಣ ಘೋಷಣೆಯಾದ ನಂತರದ ಬೆಳವಣಿಗೆ, ಫಲಶ್ರುತಿ ಬಗ್ಗೆ ಅಧ್ಯಯನ ನಡೆಸಬೇಕು, ಜೀವವೈವಿಧ್ಯ ತಾಣ ನಿರ್ವಹಣೆಗೆ ಮಂಡಳಿ ಅನುದಾನ ನೀಡಬೇಕು, ಕೃಷಿ, ತೋಟಗಾರಿಕಾ ಜೀವವೈವಿಧ್ಯ ಕುರಿತು ರಾಜ್ಯಮಟ್ಟದ ಸಮಾಲೋಚನೆ ನಡೆಸಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜೆಕೆವಿಕೆ ಪಾರಂಪರಿಕ ಜೀವವೈವಿಧ್ಯ ತಾಣಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ತಜ್ಞರು ಮತ್ತು ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಸಮಾಲೋಚನೆ ನಡೆಸಿತು. ಅಲ್ಲದೆ, ತಾಣದ ನಿರ್ವಹಣೆಯ ಕುರಿತು ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 412 ಎಕರೆ ಪ್ರದೇಶವನ್ನು ಪಾರಂಪರಿಕ ಜೀವವೈವಿಧ್ಯ ತಾಣವೆಂದು ಗುರುತಿಸಿ 2010ರಲ್ಲಿ ಸರ್ಕಾರ ಘೋಷಿಸಿದೆ. ವಿನಾಶದ ಅಂಚಿನಲ್ಲಿರುವ ಸಸ್ಯವರ್ಗ ಸೇರಿ 1 ಲಕ್ಷ ಗಿಡಮರಗಳ ಅನನ್ಯ ಜೀವವೈವಿಧ್ಯ ಭಂಡಾರ ಇಲ್ಲಿದೆ. ಬೆಂಗಳೂರು ನಗರಕ್ಕೆ ಜಿಕೆವಿಕೆ ಜೀವವೈವಿಧ್ಯ ತಾಣ ನೀಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ’ ಎಂದು ಅನಂತ ಹೆಗಡೆ ಆಶೀಸರ ಹೇಳಿದರು. ಅಲ್ಲದೆ, ತಾಣದ ನಿರ್ವಹಣೆಗೆ ನಿರಂತರ ಅಗತ್ಯ ಕ್ರಮ ತೆಗೆದುಕೊಂಡಿರುವ ಕೃಷಿ ವಿಶ್ವವಿದ್ಯಾಲಯ ಅಭಿನಂದನಾರ್ಹ ಎಂದೂ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಪ್ರಸಾದ್‌ ಅವರು ವಿಶ್ವವಿದ್ಯಾಲಯದ ಹಸಿರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ‘ಇಲ್ಲಿ ಜಲ ಮತ್ತು ಇಂಧನ ಸ್ವಾವಲಂಬನೆಗೆ ಮುಂದಾಗಿದ್ದೇವೆ. 1,300 ಎಕರೆ ಪ್ರದೇಶ ವೃಕ್ಷಗಳಿಂದ ಕಂಗೊಳಿಸುವ ವಿಶೇಷ ಯೋಜನೆ ರೂಪಿಸಿದ್ದೇವೆ. ವಿದ್ಯಾರ್ಥಿವನ, ಜೈವಕ ಇಂಧನ ಪಾರ್ಕ್‌, ಸಸ್ಯ ಶಾಸ್ತ್ರೀಯ ವನ ಇದೆ’ ಎಂದು ಮಾಹಿತಿ ನೀಡಿದರು.

ಕೃಷಿ ವಿಜ್ಞಾನಿ ಶ್ಯಾಮಲಮ್ಮ ಮಾತನಾಡಿ, ‘ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿರುವ ಹಲಸಿನ ತಳಿಗಳ ಜೀನ್ ಬ್ಯಾಂಕ್‌, ನರ್ಸರಿ ಮಾಡಿದ್ದೇವೆ’ ಎಂದರು. ಜೇನು ಸಂಶೋಧನೆ ಕುರಿತು ಎನ್‌.ಎಸ್‌. ಭಟ್‌ ಮತ್ತು ವಿಜಯಕುಮಾರ್‌ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು