ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಗಡಿ ಜಿಲ್ಲೆಯ ಕಸಾಪ ಘಟಕಗಳಿಗೆ ತಲಾ ₹ 1 ಲಕ್ಷ

Last Updated 28 ಫೆಬ್ರುವರಿ 2023, 13:59 IST
ಅಕ್ಷರ ಗಾತ್ರ

ಬೆಂಗಳೂರು: ‌‘ನೆರೆ ರಾಜ್ಯಗಳಿಗೆ ಹೊಂದಿಕೊಂಡಿರುವ ಕರ್ನಾಟಕದ 19 ಗಡಿ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು, ಆಯಾ ಗಡಿಭಾಗಕ್ಕೆ ಸಂಬಂಧಿಸಿದ ವಿಶಿಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ಸಲಹೆ ನೀಡಿದರು.

ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲ 19 ಗಡಿ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳಿಗೆ ಪ್ರಾಧಿಕಾರದ ವತಿಯಿಂದ ತಲಾ ₹ 1 ಲಕ್ಷ ಅನುದಾನವನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

‘ಗಡಿಭಾಗದ ಹಳ್ಳಿಯಲ್ಲಿ ಅಥವಾ ಗಡಿಗೆ ಹೊಂದಿಕೊಂಡ ಹೊರರಾಜ್ಯದ ಕನ್ನಡ ಪ್ರದೇಶದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಬೇಕಿದೆ. ಜೊತೆಗೆ, ಗಡಿಭಾಗದ ಜನರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ವಿಚಾರಗೋಷ್ಠಿ, ಸಂವಾದಗಳನ್ನು ಅಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳು ಆಯೋಜಿಸಬೇಕು. ಅದಕ್ಕೆ ನೆರವಾಗುವ ಉದ್ದೇಶದಿಂದ ಈ ಅನುದಾನ ನೀಡಲಾಗಿದೆ. ಈ ಅನುದಾನದ ಜೊತೆಗೆ ಆಯಾ ಜಿಲ್ಲಾ ಘಟಕಗಳು ತಮ್ಮ ಸಂಪನ್ಮೂಲವನ್ನೂ ಕ್ರೋಡೀಕರಿಸಿ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು’ ಎಂದೂ ಅವರು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಷಿ ಮಾತನಾಡಿ, ‘ಮುಂದಿನ ವರ್ಷಗಳಲ್ಲಿಯೂ ಗಡಿನಾಡ ಜಿಲ್ಲಾ ಸಾಹಿತ್ಯ ಪರಿಷತ್‌ ಘಟಕಗಳಿಗೆ ಪ್ರಾಧಿಕಾರದಿಂದ ಅನುದಾನ ನೀಡುವ ಸಂಪ್ರದಾಯ ಮುಂದುವರೆಸಬೇಕು’ ಎಂದರು.

ಎಲ್ಲ 19 ಗಡಿ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳಿಗೆ ಅನುದಾನದ ಹಂಚಿಕೆ ಪತ್ರ ಹಾಗೂ ಚೆಕ್‌ನ್ನು ಪ್ರಾಧಿಕಾರ ಅಧ್ಯಕ್ಷರು ವಿತರಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT