ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ಜಿಲ್ಲೆಯಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆ: ಸಚಿವ ವಿ. ಸೋಮಣ್ಣ

ಮುಖ್ಯಮಂತ್ರಿಯಿಂದ ಆ. 15ರಂದು 5 ಸಾವಿರ ಮನೆ ಹಂಚಿಕೆ
Last Updated 25 ಮೇ 2021, 10:35 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಮಂತ್ರಿಗಳ ಎಲ್ಲರಿಗೂ ಸೂರು ಆಶಯದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 316 ಎಕರೆಯಲ್ಲಿ 46 ಸಾವಿರ ಮನೆಗಳ ನಿರ್ಮಾಣ ವಿವಿಧ ಹಂತಗಳಲ್ಲಿದ್ದು, ಆಗಸ್ಟ್ 15ರಂದು ಐದು ಸಾವಿರ ಮನೆಗಳನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಡವರಿಗೆ ವಿತರಿಸಲಿದ್ದಾರೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

‘ಪ್ರಧಾನಮಂತ್ರಿ ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಲಭ್ಯವಿರುವ 445 ಎಕರೆ ಸರ್ಕಾರಿ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲು ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಅವರು ಮಂಗಳವಾರ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಡವರಿಗೆ ಸೂರು ಒದಗಿಸುವ ಕೆಲಸದಲ್ಲಿ ಯಾವುದೇ ಅಧಿಕಾರಿಗಳು ವಿಳಂಬ, ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲ ಶಾಸಕರಿಗೂ ತಮ್ಮ ವ್ಯಾಪ್ತಿಯಲ್ಲಿ ಶೇ 50ರಷ್ಟು ಮನೆಗಳನ್ನು ಬಡವರಿಗೆ ವಿತರಿಸಲು ಅವಕಾಶ ಮಾಡಿಕೊಡಲಾಗುವುದು. ಆದರೆ ಅರ್ಹರಿಗೆ ಮಾತ್ರ ಮನೆಗಳನ್ನು ಹಂಚಬೇಕು. ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತಿದೆ. ತಲಾ ₹ 7 ಲಕ್ಷ ನಿಗದಿಪಡಿಸಿದ್ದ ದರಗಳನ್ನು ₹ 5 ಲಕ್ಷಕ್ಕೆ ಇಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₹ 4.20 ಲಕ್ಷ ನಿಗದಿಪಡಿಸಲು ಚಿಂತನೆ ನಡೆದಿದೆ’ ಎಂದರು.

‘ಕೊಳಚೆ ಅಭಿವೃದ್ಧಿ ಮಂಡಳಿ ಮೂಲಕ 1.80 ಲಕ್ಷ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಮನೆಗಳ ನಿರ್ಮಾಣ ಬಹತೇಕ ಪೂರ್ಣವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ‘ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳು 70 ಸಾವಿರ ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿವೆ’ ಎಂದರು.

ಸಭೆಯಲ್ಲಿ ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಶಾಸಕರಾದ ಆರ್. ಮಂಜುನಾಥ್, ಮುನಿರತ್ನ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥಪ್ರಸಾದ್, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮದ ಬಸವರಾಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಭೂಮಾಪನ ಹಾಗೂ ಭೂ ದಾಖಲೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT