ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ದಲಿತ ಕುಟುಂಬದ 10 ಜನರ ಕೂಡಿಹಾಕಿ ಹಿಂಸೆ, ಪ್ರಕರಣ ದಾಖಲು

₹9 ಲಕ್ಷ ಸಾಲ ನೀಡಿದ್ದ ಎಸ್ಟೇಟ್‌ ಮಾಲೀಕರಿಂದ ಕೃತ್ಯ: ಆರೋಪ
Last Updated 12 ಅಕ್ಟೋಬರ್ 2022, 1:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಹುಣಸೆಹಳ್ಳಿ ಪುರದ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 10 ಮಂದಿಯನ್ನು ಎಸ್ಟೇಟ್‌ ಮಾಲೀಕ ಕೂಡಿಹಾಕಿ ಹಿಂಸಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಎಸ್ಟೇಟ್‌ ಮಾಲೀಕರೂ ಆದ ಬಿಜೆಪಿ ಬೆಂಬಲಿಗ ಜಗದೀಶ ಗೌಡ, ಅವರ ಪುತ್ರ ತಿಲಕ್‌ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಐಪಿಸಿ 504 (ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು), 323 (ಹಲ್ಲೆ), 342 (ಅಕ್ರಮ ಬಂಧನ), ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

‘ನಾನು, ಪತ್ನಿ ಅರ್ಪಿತಾ, ಸಹೋದರಿಯರಾದ ರೂಪಾ, ಕವಿತಾ, ಐವರು ಮಕ್ಕಳು ಸಹಿತ ಒಟ್ಟು 10 ಮಂದಿಯನ್ನು ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೂ ಮನೆಯೊಳಗೇ ಇದ್ದೆವು. ಅದರೊಳಗೆ ಶೌಚಾಲಯವೂ ಇರಲಿಲ್ಲ. ರೂಪಾ ಅವರು ಬಚ್ಚಿಟ್ಟಿದ್ದ ಮೊಬೈಲ್‌ನಿಂದ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಪತ್ನಿ ಗರ್ಭಿಣಿ, ಅವರ ಹೊಟ್ಟೆಗೆ ಪೆಟ್ಟು ಬಿದ್ದು, ಗರ್ಭಪಾತವಾಗಿದೆ. ಸಂಜೆ ಮನೆಯ ಬೀಗ ತೆಗೆದರು, ಆಸ್ಪತ್ರೆಗೆ ಕರೆದೊಯ್ದೆವು’ ಎಂದುಅರ್ಪಿತಾ ಪತಿ ವಿಜಯ್‌ ದೂರಿದ್ದಾರೆ.

‘ದೂರು ಆಧರಿಸಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳನ್ನು ಬಂಧಿಸಿಲ್ಲ. ದೂರಿನಲ್ಲಿ ಗರ್ಭಪಾತದ ಉಲ್ಲೇಖ ಇಲ್ಲ. ತನಿಖೆ ಶುರುವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ದೂರಿನಲ್ಲೇನಿದೆ?

‘ಎಸ್ಟೇಟ್‌ ಮಾಲೀಕರಾದ ಜಗದೀಶ, ಪುತ್ರ ತಿಲಕ್ ಅವರು ಸಾಲ ವಾಪಸ್‌ ನೀಡುವಂತೆ ಪೀಡಿಸಿ, ಬೈದು, ಥಳಿಸಿ ಕೂಲಿ ಲೈನ್‌ಮನೆಯಲ್ಲಿ ಕೂಡಿಹಾಕಿ ಹಿಂಸಿಸಿದ್ದಾರೆ’ ಎಂದು ಅರ್ಪಿತಾ ದೂರು ನೀಡಿದ್ದಾರೆ.

‘ಪತಿ ವಿಜಯ್‌, ಕುಟುಂಬದೊಂದಿಗೆ ಮೂರು ತಿಂಗಳಿಂದ ಜಗದೀಶ ಅವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಕೂಲಿಲೈನ್ ನಲ್ಲಿ ವಾಸ ಇದ್ದೇವೆ. ಸುಮಾರು 15 ದಿನಗಳ ಹಿಂದೆ ಪತಿಯ ಸಂಬಂಧಿ ಸತೀಶ, ಮಂಜು ಅವರಿಗೂ ಮತ್ತು ಪಕ್ಕದ ಮನೆಯವರಿಗೂ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ಎಸ್ಟೇಟ್ ಮಾಲೀಕ ಜಗದೀಶ ಅವರು ಮಂಜು ಅವರನ್ನು ನಿಂದಿಸಿ, ಥಳಿಸಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಇನ್ನು ಮುಂದೆ ಇಲ್ಲಿ ಕೆಲಸ ಮಾಡಲ್ಲ, ಬೇರೆ ಕಡೆ ಹೋಗುತ್ತೇವೆ ಎಂದು ಮಾಲೀಕರಿಗೆ ಹೇಳಿದ್ದೆವು. ಪಡೆದಿರುವ ಸಾಲದ ಹಣವನ್ನು ವಾಪಸ್‌ ಕೊಟ್ಟು ಬೇರೆ ಕಡೆಗೆ ಹೋಗಿ ಎಂದು ಜಗದೀಶ ಹೇಳಿದ್ದರು. ಹೀಗಾಗಿ, ಹಣ ಹೊಂದಿಸಲು ಮಂಜು, ಸತೀಶ ಅವರು ಬೇರೆ ಎಸ್ಟೇಟ್‌ಗೆ ಹೋಗಿದ್ದರು. ಅ. 8ರಂದು ಬೆಳಿಗ್ಗೆ 10.30 ಗಂಟೆಗೆ ನಾವು ಪತಿ, ಪತ್ನಿ ಇಬ್ಬರೂ ಕೂಲಿಲೈನ್ ಮನೆಯಲ್ಲಿ ಇದ್ದಾಗ ಜಗದೀಶ, ತಿಲಕ್ ಅಲ್ಲಿಗೆ ಬಂದರು. ಹಣ ತರಲು ಹೋದವರು ಇನ್ನೂ ಬಂದಿಲ್ಲ ಎಂದು ಜೋರು ಮಾಡಿ ಬೈಯ್ದು, ಮೊಬೈಲ್ ಕಿತ್ತುಕೊಂಡರು. ಮೊಬೈಲ್ ಕೊಡಲ್ಲ ಎಂದಿದ್ದಕ್ಕೆ ಜಗದೀಶ ಅವರು ಕೆನ್ನೆಗೆ ಬಾರಿಸಿದರು. ಗಲಾಟೆ ಬಿಡಿಸಲು ಬಂದ ಪತಿ ವಿಜಯ್‌, ಪತಿಯ ಸಹೋದರಿಯರಾದ ರೂಪಾ, ಕವಿತಾ ಅವರಿಗೂ ಬೈದು, ಹೊಡೆದರು. ನಮ್ಮನ್ನೆಲ್ಲ ಕೂಲಿಲೈನ್‌ನಲ್ಲಿ ಕೂಡಿಹಾಕಿದರು‘ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಹೊಟ್ಟೆನೋವು ಇತ್ತು. ಮೂಡಿಗೆರೆಯ ಆಸ್ಪತ್ರೆಯಲ್ಲಿ ತೋರಿಸಿ, ಇದೇ 9ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದೇನೆ. ಜಗದೀಶ, ತಿಲಕ್ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT