ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಹೊಸದಾಗಿ 100 ಪ್ರಾಥಮಿಕ ಆರೋಗ್ಯ ಕೇಂದ್ರ: ಆರೋಗ್ಯ ಸಚಿವ ಸುಧಾಕರ್‌

ಆರೋಗ್ಯ ಸಚಿವ ಸುಧಾಕರ್‌
Last Updated 17 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಹೊಸದಾಗಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಇದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಹೆಚ್ಚು ಪ್ರಾಥಮಿಕ ಕೇಂದ್ರಗಳಿವೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಇಲ್ಲ. ಮಲೆನಾಡು ಪ್ರದೇಶಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಹೀಗಾಗಿ, ಸಮಗ್ರವಾಗಿ ವಿಶ್ಲೇಷಣೆ ನಡೆಸಿ ಕನಿಷ್ಠ 40 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್‌ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ, ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ದೊರೆಯುವುದು ಕಷ್ಟವಾದರೂ ಪ್ರಯತ್ನ ಮುಂದುವರಿಸಲಾಗುವುದು. ಜತೆಗೆ, ಈಗಿರುವ 9600 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕಳೆದ 5–6 ತಿಂಗಳಲ್ಲಿ ನಾಲ್ಕು ಸಾವಿರ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇಕಡ 90ರಷ್ಟು ವೈದ್ಯರಿದ್ದಾರೆ’ ಎಂದು ವಿವರಿಸಿದರು.

‘ಪ್ರಯೋಗಾಲಯ ತಂತ್ರಜ್ಞರ ನೇಮಕಾತಿಗೂ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ’ ಎಂದು ಸವಣೂರಿನ ಮಾಲತೇಶ್‌ ಎನ್ನುವವರ ಪ್ರಶ್ನೆಗೆ ಉತ್ತರಿಸಿದರು.

ಏಪ್ರಿಲ್‌ಗೆ ಅತ್ಯಾಧುನಿಕ ಆಂಬುಲೆನ್ಸ್‌ ಸೇವೆ:

‘ಅತ್ಯಾಧುನಿಕ ಮತ್ತು ಜೀವ ರಕ್ಷಕ ವ್ಯವಸ್ಥೆಗಳನ್ನು ಹೊಂದಿರುವ ಒಂದು ಸಾವಿರ ಆಂಬುಲೆನ್ಸ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಏಪ್ರಿಲ್‌ 1ಕ್ಕೆ ಈ ಹೊಸ ಸೌಲಭ್ಯ ದೊರೆಯಲಿದೆ’ ಎಂದು ಸಚಿವ ಸುಧಾಕರ್‌ ತಿಳಿಸಿದರು.

‘ ಈಗಿರುವ ವ್ಯವಸ್ಥೆಯಲ್ಲಿ ಚಾಲಕ ಕೊಂಡೊಯ್ದ ಅಥವಾ ರೋಗಿ ಹೇಳಿದ ಕಡೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಆಂಬುಲೆನ್ಸ್‌ಗಳಲ್ಲಿ ನಕಾಶೆ ವ್ಯವಸ್ಥೆಯೂ ಇರಲಿದೆ. ಯಾವ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಬೇಕು ಎನ್ನುವ ಸಂದೇಶವನ್ನು ಕೇಂದ್ರೀಕೃತವಾದ ವ್ಯವಸ್ಥೆಯ ಮೂಲಕ ಚಾಲಕರಿಗೆ ರವಾನಿಸಲಾಗುತ್ತದೆ. ಇದರಿಂದ, ರೋಗಿಗಳಿಗೆ ಸಮೀಪದ ಆಸ್ಪತ್ರೆಯಲ್ಲಿ ಅಗತ್ಯ ಇರುವ ಚಿಕಿತ್ಸೆ ತಕ್ಷಣಕ್ಕೆ ಲಭಿಸಲಿದೆ’ ಎಂದು ವಿವರಿಸಿದರು.

‘ಇದುವರೆಗೆ ಇದ್ದ 108 ಆಂಬುಲೆನ್ಸ್‌ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇರಲಿಲ್ಲ ಮತ್ತು ಹಲವು ರೀತಿಯ ಕೊರತೆಗಳಿದ್ದವು. ಹೀಗಾಗಿ, ಸಮಗ್ರ ಅಧ್ಯಯನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಿಂಗಪುರ, ಬ್ರಿಟನ್‌ ಸೇರಿದಂತೆ ಉತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿನ ಆರೋಗ್ಯ ಸೇವೆಗಳನ್ನು ಅಧ್ಯಯನ ಮಾಡಿ ಇಲ್ಲಿನ ಪರಿಸ್ಥಿತಿ ತಕ್ಕಂತೆ ಆಂಬುಲೆನ್ಸ್‌ಗಳನ್ನು ಸಿದ್ಧಪಡಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನೆರವು ಸಹ ಪಡೆಯಲಾಗಿದೆ. ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕ ಹೊಸ ಟೆಂಡರ್‌ ಕರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT