ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಪಿಎಚ್‌ಸಿ ಮೇಲ್ಜರ್ಜೆಗೆ: ₹1 ಸಾವಿರ ಕೋಟಿ ವೆಚ್ಚ

ಗಣರಾಜ್ಯೋತ್ಸವ ಭಾಷಣದಲ್ಲಿ ಸರ್ಕಾರದ ಸಾಧನೆ ತೆರೆದಿಟ್ಟ ರಾಜ್ಯಪಾಲ
Last Updated 26 ಜನವರಿ 2023, 14:48 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ, ತೋಟಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ರಾಜ್ಯ ಸರ್ಕಾರದ ಸಾಧನೆಗಳನ್ನು ಗಣರಾಜ್ಯೋತ್ಸವ ಭಾಷಣದಲ್ಲಿ ಬಿಚ್ಚಿಟ್ಟ ರಾಜ್ಯಪಾಲ ಥಾವರ್‌ಚಾಂದ್‌ ಗೆಹಲೋತ್‌, ‘ವಿಭಿನ್ನ ಮತ್ತು ಸರ್ವರನ್ನು ಒಳಗೊಂಡ ಯೋಜನೆಗಳಿಂದಾಗಿ ಕರ್ನಾಟಕ ಅಗ್ರಸ್ಥಾನದಲ್ಲಿದೆ’ ಎಂದು ಪ್ರತಿಪಾದಿಸಿದರು.

ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗುರುವಾರ ನಡೆದ 74ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣದ ಬಳಿಕ ಹಿಂದಿಯಲ್ಲಿ ಭಾಷಣ ಮಾಡಿದ ಅವರು, ‘ಸುಲಲಿತ ವ್ಯಾಪಾರದಲ್ಲಿ ಶ್ರೇಷ್ಠ ಸಾಧಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಇದೇ ರೀತಿ ನವೋದ್ಯಮ ವಲಯದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ರಾಜ್ಯ ಎಂದು ಘೋಷಿಸಲಾಗಿದೆ’ ಎಂದರು.

ಆರೋಗ್ಯ ಕ್ಷೇತ್ರದ ಸಾಧನೆ ಮತ್ತು ಮುನ್ನೋಟ ವಿವರಿಸಿದ ರಾಜ್ಯಪಾಲರು, ‘ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆ ಅಡಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು 83ರಿಂದ 69ಕ್ಕೆ ಇಳಿದಿದೆ. ಒಟ್ಟು ₹ 1 ಸಾವಿರ ಕೋಟಿ ವೆಚ್ಚದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) 30 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮುಂದಿನ ಎರಡು ವರ್ಷಗಳಲ್ಲಿ ಮೇಲ್ಜರ್ಜೆಗೇರಿಸಲಾಗುವುದು’ ಎಂದು ತಿಳಿಸಿದರು.

‘ಮರು ಜಾರಿಗೊಳಿಸಿರುವ ‘ಯಶಸ್ವಿನಿ’ ಯೋಜನೆ ಅಡಿಯಲ್ಲಿ 2023ರ ಜ.17ರ ಅಂತ್ಯಕ್ಕೆ 32.32 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ’ ಎಂದು ವಿವರಿಸಿದರು.

‘ರಾಜ್ಯದಾದ್ಯಂತ ಇರುವ ಸಣ್ಣ ಮತ್ತು ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರನ್ನು ಗುರುತಿಸಲು ಕಳೆದ ವರ್ಷ ಅಕ್ಟೋಬರ್‌ 1ರಿಂದ 11ನೇ ಕೃಷಿ ಗಣತಿ ಕಾರ್ಯ ಆರಂಭಿಸಲಾಗಿದೆ. 2022–23ನೇ ಸಾಲಿಗೆ ಒಟ್ಟು 20.19 ಲಕ್ಷ ರೈತರಿಗೆ ಕೃಷಿ ಸಾಲ ಯೋಜನೆ ಅಡಿಯಲ್ಲಿ ₹ 15,066 ಕೋಟಿ ಮೊತ್ತದಷ್ಟು ಬೆಳೆ ಸಾಲವನ್ನು 2022ರ ಡಿಸೆಂಬರ್‌ ಅಂತ್ಯದವರೆಗೆ ನೀಡಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ₹5 ಲಕ್ಷಗಳವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗಿದೆ‘ ಎಂದು ವಿವರಿಸಿದರು.

‘2020–21ನೇ ‘ಸುಸ್ಥಿರ ಅಭಿವೃದ್ಧಿ ಗುರಿ‘ (ಎಸ್‌ಜಿಡಿ) ಸೂಚ್ಯಂಕ ವರದಿ ಪ್ರಕಾರ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ಸ್ವಸ್ಥ ಮತ್ತು ಸಮೃದ್ಧ ನಾಡು ಕಟ್ಟುವಲ್ಲಿ ಕೈಜೋಡಿಸೋಣ. ದೇಶದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ‘ ಎಂದು ಕರೆ ನೀಡಿದರು.

ಸ್ಫೂರ್ತಿ ಯೋಜನೆ ವಿಸ್ತರಣೆ: ‘ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಸ್ಫೂರ್ತಿ ಯೋಜನೆಯನ್ನು ಬಾಗಲಕೋಟೆ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳ 11 ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು. ಈ ಯೋಜನೆಗೆ ₹ 12.51 ಕೋಟಿ ವೆಚ್ಚದಲ್ಲಿ ಮೀಸಲಿಡಲಾಗುವುದು’ ಎಂದು ರಾಜ್ಯಪಾಲರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT