ಭಾನುವಾರ, ಫೆಬ್ರವರಿ 28, 2021
31 °C
ಇಂದು ರಾಜ್ಯಪಾಲರ ಭಾಷಣ: ವಿಧಾನಸಭಾಧ್ಯಕ್ಷ ಕಾಗೇರಿ ಮಾಹಿತಿ

ಅಧಿವೇಶನದಲ್ಲಿ 11 ಮಸೂದೆಗಳ ಮಂಡನೆ: ವಿಧಾನಸಭಾಧ್ಯಕ್ಷ ಕಾಗೇರಿ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರುವಾರದಿಂದ (ಜ.28) ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ 3 ಸುಗ್ರೀವಾಜ್ಞೆಗಳೂ ಸೇರಿ ಒಟ್ಟು 11 ಮಸೂದೆಗಳು ಮಂಡನೆಯಾಗಲಿವೆ ಎಂದು ಹೇಳಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು ಮಸೂದೆಗಳನ್ನು ಸಾಕಷ್ಟು ಮುಂಚಿತವಾಗಿಯೇ ಸಚಿವಾಲಯಕ್ಕೆ ಕಳುಹಿಸಬೇಕು ಎಂದು ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಿಗ್ಗೆ 11 ಕ್ಕೆ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ.

ಮಸೂದೆ ಬೇಗನೆ ಕಳಿಸಿ

ಸಚಿವರು ಮಸೂದೆಗಳನ್ನು ಆದಷ್ಟು ಬೇಗನೆ ಕಳುಹಿಸಬೇಕು. ಅದು ಸಚಿವರ ಪ್ರಾಥಮಿಕ ಜವಾಬ್ದಾರಿ. ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಕಳೆದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಸರ್ಕಾರ ತರಾತುರಿಯಲ್ಲಿ ಮಂಡಿಸಿತ್ತು. ಇದರಿಂದ ವಿರೋಧ ಪಕ್ಷಗಳಿಂದ ಸರ್ಕಾರ ಟೀಕೆಗೆ ಒಳಗಾಗಿತ್ತು.

ಕರ್ನಾಟಕ ನಗರಪಾಲಿಕೆ ತಿದ್ದುಪಡಿ2020, ನಗರಸಭೆ ತಿದ್ದುಪಡಿ ಮತ್ತು ಇತರ ಕಾನೂನುಗಳು 2020, ತೋಟಗಾರಿಕೆ ವಿಶ್ವವಿದ್ಯಾಲಯ ಮಸೂದೆ, ಏಟ್ರಿಯಾ ವಿಶ್ವವಿದ್ಯಾಲಯ, ವಿದ್ಯಾಶಿಲ್ಪ ವಿಶ್ವವಿದ್ಯಾಲಯ, ಡಾ.ಮುರುಘ ರಾಜೇಂದ್ರ ವಿಶ್ವವಿದ್ಯಾಲಯಗಳ ಮಸೂದೆ ಮಂಡನೆಯಾಗಲಿವೆ ಎಂದು ಕಾಗೇರಿ ಹೇಳಿದರು.

‘ಕಳೆದ ಅಧಿವೇಶನದಲ್ಲಿ ನಡೆಯಬೇಕಿದ್ದ ‘ಒಂದು ದೇಶ ಒಂದು ಚುನಾವಣೆ’ ಕಲಾಪ ಮೊಟಕುಗೊಳಿಸಿದ್ದರಿಂದ ಸಾಧ್ಯವಾಗಲಿಲ್ಲ. ಈ ಅಧಿವೇಶನದಲ್ಲಿ ಒಂದು ದಿನದ ಚರ್ಚೆಗೆ ಸರ್ಕಾರ ಮತ್ತು ಕಲಾಪ ಸಲಹಾ ಸಮಿತಿಯಲ್ಲಿ  ಸಮಯಾವಕಾಶ ಕೋರಲಾಗುವುದು. ಈ ಕುರಿತ ಚರ್ಚೆ ದೇಶದ ಯಾವುದೇ ವಿಧಾನಸಭೆಗಳಲ್ಲೂ ನಡೆದಿಲ್ಲ. ನಮ್ಮಲ್ಲಿ ಅದಕ್ಕೆ ಚಾಲನೆ ನೀಡಬೇಕು ಎಂಬುದು ಆಶಯವಾಗಿದೆ’ ಎಂದು ಅವರು ತಿಳಿಸಿದರು.

ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ ಇಲ್ಲ

ಈ ಅಧಿವೇಶನದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು. ಕಲಾಪದಲ್ಲಿ ಭಾಗವಹಿಸಲು ಆರ್‌ಟಿಪಿಎಸಿಆರ್‌ ಪರೀಕ್ಷೆ ಕಡ್ಡಾಯವಿಲ್ಲ. ಮಾಸ್ಕ್‌ ಧರಿಸುವುದು, ಅಂತರ ಕಾಯ್ದಯಕೊಳ್ಳುವುದು ಕಡ್ಡಾಯ
ವಾಗಿದೆ ಎಂದು ಕಾಗೇರಿ ಹೇಳಿದರು.

ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ಕ್ಲಿನಿಕ್‌ ಮತ್ತು ಕೋವಿಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷೆ ಮಾಡಿಸಿಕೊಳ್ಳಬಹುದು. ಅನಾರೋಗ್ಯ ಇದ್ದವರು ಕಲಾಪದಿಂದ ದೂರ ಉಳಿಯುವುದು ಸೂಕ್ತ ಎಂದು ಹೇಳಿದರು.

ದೆಹಲಿ ಹಿಂಸಾಚಾರ ಕಪ್ಪು ಚುಕ್ಕೆ

 
ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಂವಿಧಾನವನ್ನು ಸ್ವೀಕರಿಸಿದ ದಿನವಾದ ಗಣರಾಜ್ಯೋತ್ಸವ ಎಲ್ಲರೂ ಸಂಭ್ರಮಿಸಿ, ಹೆಮ್ಮೆ ಪಡುವ ದಿನವಾಗಿದೆ. ಮನಬಂದಂತೆ ಹಿಂಸಾಚಾರ ನಡೆಸಿದ್ದು, ಕೆಂಪು ಕೋಟೆ ಮೇಲೆ ಅನ್ಯ ಧ್ವಜಗಳನ್ನು ಹಾರಿಸಿದ್ದು ಖಂಡನೀಯ ಎಂದಿದ್ದಾರೆ.

ಶಾಂತಿಯುತ ಹೋರಾಟ ಮತ್ತು ಮಾತುಕತೆಯ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅವಕಾಶ ಇದೆ. ಸರ್ಕಾರವೂ ರೈತ ಸಂಘಟನೆಗಳ ಮುಖಂಡರ ಜತೆಯಲ್ಲಿ ಮಾತುಕತೆಯಲ್ಲಿ ತೊಡಗಿತ್ತು. ಸಂವಿಧಾನ ಪ್ರತಿಭಟನೆ, ಹೋರಾಟಕ್ಕೆ ಅವಕಾಶ ನೀಡಿದೆಯೆ ಹೊರತು, ಹಿಂಸಾಚಾರಕ್ಕೆ ಅವಕಾಶ ನೀಡಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು