ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ರಾಜ್ಯದಲ್ಲಿ 110 ಸಾವು, ₹3 ಸಾವಿರ ಕೋಟಿ ನಷ್ಟ: ಅಧ್ಯಯನ ತಂಡಕ್ಕೆ ಮಾಹಿತಿ

6.39 ಲಕ್ಷ ಹೆಕ್ಟೇರ್‌ ಬೆಳೆ ನಾಶ l ಕೇಂದ್ರ ತಂಡದಿಂದ ಅಧ್ಯಯನ l ವಿಶೇಷ ಅನುದಾನಕ್ಕೆ ಸಿ.ಎಂ ಮನವಿ
Last Updated 7 ಸೆಪ್ಟೆಂಬರ್ 2022, 18:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಜೂನ್‌ನಿಂದ ಈಚೆಗೆ 110 ಮಂದಿ ಮೃತಪಟ್ಟಿದ್ದು, ಸುಮಾರು 6.39 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿದೆ. ಒಟ್ಟು ಅಂದಾಜು ₹ 3,000 ಕೋಟಿಗೂ ಅಧಿಕ ನಷ್ಟವಾಗಿದೆ.

ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ವಿವಿಧ ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಅಧ್ಯಯನ
ಕ್ಕಾಗಿ ಬಂದಿರುವ ಕೇಂದ್ರದ ಅಧಿಕಾರಿ ಗಳ ತಂಡದ ಎದುರು, ಅಂಕಿ ಅಂಶ ಮುಂದಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡಿನ ಬವಣೆಯನ್ನು ವಿವರಿಸಿದರು.

‘ಕರ್ನಾಟಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ಅನುದಾನ ನೀಡಲೇ ಬೇಕು’ ಎಂದು ಒತ್ತಾಯಿಸಿದರು.

ಮಂಗಳವಾರ ಸಂಜೆಯೇ ನಗರಕ್ಕೆ ಬಂದಿಳಿದ ಕೇಂದ್ರ ತಂಡವನ್ನು ಬೆಂಗಳೂರಿನ ಜಡಿ ಮಳೆ ಮತ್ತು ಹಲವು ಬಡಾವಣೆಗಳಲ್ಲಿನ ‘ಪ್ರವಾಹ’ ಸ್ವಾಗತಿಸಿತು. ನಗರದ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ ತಂಡ ಒಂದು ವಾರಕ್ಕೂ ಹೆಚ್ಚು ಅವಧಿಯ ಮಳೆಯಿಂದ ‘ಸಿಲಿಕಾನ್‌ ಸಿಟಿ’ ‘ತೇಲುವ ನಗರ’ವಾಗಿ ಪರಿಣಮಿಸಿರುವುದನ್ನು ಕಣ್ಣಾರೆ ಕಂಡಿತು.

ಮೂರು ದಿನ ರಾಜ್ಯದ ವಿವಿಧೆಡೆ ಭೇಟಿ ನೀಡಲಿರುವ ತಂಡ, ಪ್ರವಾಹ ದಿಂದಾಗಿರುವ ಹಾನಿಯನ್ನು ಪರಿಶೀಲಿಸ ಲಿದೆ.

ಕೇಂದ್ರ ತಂಡದ ಜತೆಗೆ ಬುಧವಾರ ನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ದಕ್ಷಿಣ ಮತ್ತು ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿನಲ್ಲೂ ಪ್ರವಾಹ ಉಂಟಾಗಿ ಜನ, ಜಾನುವಾರು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಭಾರಿ ಪ್ರಮಾಣದ ಹಾನಿಯನ್ನು ತಂಡದ ಗಮನಕ್ಕೆ ತರಲಾಯಿತು. ತಂಡ ಪ್ರವಾಸ ಮುಗಿಸಿ ಬಂದ ನಂತರ ಮತ್ತೊಂದು ಸಭೆ ನಡೆಸಿ ಪರಿಷ್ಕೃತ ಮನವಿಪತ್ರ ನೀಡಲಾಗುವುದು’ ಎಂದರು.

ಮಳೆಯಿಂದಾಗಿ ಬೆಂಗಳೂರು ನಗರದ ಜನರಿಗೆ ಆಗಿರುವ ಸಮಸ್ಯೆಗಳು, ಕೆರೆಗಳು ಕೋಡಿ ಹರಿದಿರುವುದು, ಜನವಸತಿ ಪ್ರದೇಶಗಳಲ್ಲಿ ನೀರುನುಗ್ಗಿರುವುದನ್ನು ನೋಡುವಂತೆ ಸಭೆ ಯಲ್ಲಿ ತಂಡಕ್ಕೆ ಸಲಹೆ ನೀಡಲಾಯಿತು. ಅಲ್ಲದೆ, ಕರಾವಳಿ ಪ್ರದೇಶದಲ್ಲಿ ಮೀನುಗಾರರ ದೋಣಿಗಳಿಗೆ ಆಗಿರುವ ಹಾನಿ, ಪಶ್ಚಿಮಘಟ್ಟದಲ್ಲಿ ಭೂಕುಸಿತ, ವಿವಿಧ ನಗರಗಳಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿ ಆಗಿರುವ ಹಾನಿಯ ಪ್ರಮಾಣವನ್ನು ತಂಡಕ್ಕೆ ವಿವರಿಸಲಾಯಿತು ಎಂದರು.

‘ಜುಲೈನಿಂದ ಈವರೆಗೆ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ನಿಭಾಯಿಸಲು ಒಟ್ಟು ಎಂಟು ಸಭೆಗಳನ್ನು ನಡೆಸಿದ್ದೇನೆ. ಅಲ್ಲದೇ, ಸಂತ್ರಸ್ತರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಸಂಬಂಧಿಕರ ಮನೆಗಳಿಗೆ ತೆರಳಿದ ಸಂತ್ರಸ್ತರಿಗೆ ಡ್ರೈ ರೇಷನ್ ಕಿಟ್‌ ವಿತರಣೆ ಮಾಡಿರುವುದಾಗಿಯೂ ಅವರ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದರು.

‘ಕಡಲ ಕೊರೆತ ತಡೆಗಟ್ಟಲು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ₹350 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಹೊಸ ಹೊಸ ಜಾಗಗಳಲ್ಲಿ ಕಡಲ ಕೊರೆತ ಉಂಟಾಗಿದೆ. ಆದ್ದರಿಂದ ರಾಜ್ಯದ ಸಂಪೂರ್ಣ ಕರಾವಳಿ ಪ್ರದೇಶ ರಕ್ಷಣೆಗೆ ಕೇಂದ್ರದ ನೆರವಿನ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ’ ಎಂದರು.

ಕಳೆದ ನವೆಂಬರ್‌ನಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮಳೆಯ ಮಾದರಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಕೈಗೊಳ್ಳಲೂ ಮನವಿ ಮಾಡಿರುವುದಾಗಿ ಬೊಮ್ಮಾಯಿ ತಿಳಿಸಿದರು.

ಮೂರು ತಂಡಗಳಲ್ಲಿ ಪ್ರವಾಸ

ಕೇಂದ್ರ ಅಧಿಕಾರಿಗಳ ತಂಡ ಬೆಂಗಳೂರಿನ ಮಹದೇವಪುರಕ್ಕೆ ಭೇಟಿ ನೀಡಿತು. ಆ ಬಳಿಕ ಒಂದು ತಂಡವು ಹೆಲಿಕಾಪ್ಟರ್‌ ಮೂಲಕ ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರಕ್ಕೂ, ಎರಡನೇ ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಮೂರನೇ ತಂಡ ಬೀದರ್‌ ಮತ್ತು ಕಲಬುರಗಿಗೂ ತೆರಳಿದವು.

ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ ಕುಮಾರ್‌, ಕೇಂದ್ರಹಣಕಾಸು ಇಲಾಖೆ ಉಪಕಾರ್ಯದರ್ಶಿ ಮಹೇಶ್ ಕುಮಾರ್, ಇಂಧನ ಇಲಾಖೆ ಸಹಾಯಕ ನಿರ್ದೇಶಕ ಭಾವ್ಯ ಪಾಂಡೆ, ಜಲಶಕ್ತಿ ಸಚಿವಾಲಯದ ಅಶೋಕ್ ಕುಮಾರ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವಿ.ವಿ.ಶಾಸ್ತ್ರಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ನಿರ್ದೇಶಕ ಡಾ. ಕೆ. ಮನೋಹರನ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ. ತಿವಾರಿ ಇದ್ದಾರೆ.

ಪೂರ್ವ ಬೆಂಗಳೂರು: ಶಾಶ್ವತ ಪರಿಹಾರ

ಬೆಂಗಳೂರು: ‘ಮಹದೇವಪುರ ವಲಯದ(ಪೂರ್ವ ಬೆಂಗಳೂರು) ಸಮಸ್ಯೆಗೆ ಮುಂದಿನ ಮಳೆಗಾಲದ ವೇಳೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು’ ಎಂದುಐಟಿ ಕಂಪನಿಗಳ ಪ್ರಮುಖರಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

ನಾಸ್ಕಾಂ ಪ್ರತಿನಿಧಿಗಳು ಸೇರಿದಂತೆ ಉದ್ಯಮಿಗಳ ಜೊತೆ ವಿಧಾನಸೌಧದಲ್ಲಿ ಬುಧವಾರ ಸಭೆ ನಡೆಸಿದ ಅವರು, ‘ಉದ್ಯಮಿಗಳ ಸಮಸ್ಯೆ ಆಲಿಸಲು ಇನ್ನು ಮುಂದೆ ಪ್ರತಿ ತಿಂಗಳು ವರ್ಚುವಲ್ ಸಭೆ ನಡೆಸಲಾಗುವುದು' ಎಂದರು.

ಇದಕ್ಕೆ ಸ್ಪಂದಿಸಿದ ಐಟಿ ಕಂಪನಿಗಳ ಪ್ರಮುಖರು, ‘ನಮಗ್ಯಾರಿಗೂ ಬೆಂಗಳೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆ ಮತ್ತು ನಷ್ಟವನ್ನು ಸರ್ಕಾರದ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT