ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ | ₹12,319 ಕೋಟಿ ನಷ್ಟ: ಸಚಿವ ಆರ್‌. ಅಶೋಕ

ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್‌. ಅಶೋಕ ಉತ್ತರ
Last Updated 20 ಸೆಪ್ಟೆಂಬರ್ 2022, 0:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಜುಲೈ 12ರಿಂದ ಈವರೆಗೆ₹ 12,319.30 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದರು.

ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ಸದನದಲ್ಲಿ ನಡೆದಿದ್ದ ಚರ್ಚೆಗೆ ಉತ್ತರಿಸಿದ ಅವರು, ‘ಈವರೆಗೆ 134 ಮಂದಿ ಮೃತಪಟ್ಟಿದ್ದಾರೆ.
ಬೆಳೆಹಾನಿ, ಜಾನುವಾರುಗಳ ಸಾವು, ಮನೆ ಕುಸಿತಸೇರಿ ₹ 7,381.45 ಕೋಟಿ ನಷ್ಟವಾಗಿದೆ. ರಸ್ತೆ,ಸೇತುವೆಗಳಿಗೆ ಆಗಿರುವ ಹಾನಿ, ಕೆರೆಗಳು ಒಡೆದಿರುವುದು, ಶಾಲೆ, ಅಂಗನವಾಡಿಗಳು, ಸರ್ಕಾರಿ ಕಚೇರಿಗಳ ಕಟ್ಟಡ ಕುಸಿತ ಸೇರಿದಂತೆ ಮೂಲಸೌಕರ್ಯಗಳಿಗೆ ₹ 4,662.84 ಕೋಟಿ ನಷ್ಟವಾಗಿದೆ’ ಎಂದರು.

ಕೇಂದ್ರ ಸರ್ಕಾರದಿಂದ ₹ 1,646.05 ಕೋಟಿ ನೆರವು ಕೋರಲಾಗಿದೆ. ಮಳೆಯಿಂದ ತೊಂದರೆ ಗೊಳಗಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಣೆ ಸೇರಿದಂತೆ ಪರಿಸ್ಥಿತಿ ನಿರ್ವಹಣೆಗೆ ಈವರೆಗೆ ₹ 645.14 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯ ಸರ್ಕಾರ ಅತ್ಯಂತ ಯಶಸ್ವಿಯಾಗಿ ಪರಿಸ್ಥಿತಿ ನಿರ್ವಹಣೆ ಮಾಡಿದೆ ಎಂದು ಹೇಳಿದರು.

ರಾಜ್ಯದ ಎಲ್ಲ 227 ತಾಲ್ಲೂಕುಗಳಲ್ಲೂ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಕೆಲವು ಭಾಗಗಳಲ್ಲಿ 50 ವರ್ಷಗಳಲ್ಲೇ ಅತ್ಯಧಿಕ ಮಳೆ ಯಾಗಿದೆ. ಬಹುತೇಕ ಜಲಾಶಯಗಳು ಭರ್ತಿಯಾ ಗುವ ಹಂತ ತಲುಪಿವೆ. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾದಂತೆ ತಮಿಳುನಾಡಿಗೆ ಈ ಬಾರಿ 224 ಟಿಎಂಸಿ ಅಡಿ ನೀರನ್ನು ಬಿಡಲಾಗಿದೆ. ಇದು 1974ರಿಂದ ಈವರೆಗಿನ ದಾಖಲೆಯ ಪ್ರಮಾಣದ ಹರಿವು ಎಂದು ಅಂಕಿಅಂಶ ನೀಡಿದರು.

‘ಅತ್ಯಂತ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿದ್ದೇವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಿಂತ ಹೆಚ್ಚಿನ ಮೊತ್ತದ ಪರಿಹಾರ ನೀಡಲಾಗಿದೆ. ಬೆಳೆಹಾನಿ ಕುರಿತು ಸಮೀಕ್ಷೆ ಮುಂದುವರಿದಿದೆ. ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸುವಲ್ಲಿ ಲೋಪಗಳಿಲ್ಲದಂತೆ ಸರ್ಕಾರ ಕೆಲಸ ಮಾಡಿದೆ. ಯಾವುದೇ ನ್ಯೂನತೆಗಳಿದ್ದರೂ ಸರಿಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT