ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣದಲ್ಲಿ ₹ 130 ಕೋಟಿ ಅಕ್ರಮ: ಪ್ರಿಯಾಂಕ್‌ ಖರ್ಗೆ

ಮೂವರು ಗುತ್ತಿಗೆದಾರರಿಗೆ ಒಟ್ಟು ₹176 ಕೋಟಿ ಮೊತ್ತದ ಕಾಮಗಾರಿ
Last Updated 19 ಮಾರ್ಚ್ 2022, 14:47 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಾಲ್ಕು ನಿಗಮಗಳಲ್ಲಿ 2019–20 ಮತ್ತು 2020–21ನೇ ಆರ್ಥಿಕ ವರ್ಷಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗಳಲ್ಲಿ ₹ 130 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಭವ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳಲ್ಲಿ ಈ ಎರಡು ವರ್ಷಗಳಲ್ಲಿ 14,577 ಕೊಳವೆ ಬಾವಿಗಳನ್ನು ಕೊರೆಯಲು ₹ 267 ಕೋಟಿ ವೆಚ್ಚ ಮಾಡಲಾಗಿದೆ. 2018ರ ದರದಲ್ಲಿ ಈ ಕಾಮಗಾರಿಗಳಿಗೆ ₹ 130 ಕೋಟಿ ಮಾತ್ರ ವೆಚ್ಚವಾಗುತ್ತಿತ್ತು’ ಎಂದರು.

‘ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮಗಳಲ್ಲಿ 2019–20 ಮತ್ತು 2020–21ರಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದೆ. ಸರ್ಕಾರ 100 ಪುಟಗಳ ಉತ್ತರ ನೀಡಿದೆ. ಅದರಲ್ಲೇ ಅಕ್ರಮಕ್ಕೆ ಸಂಬಂಧಿಸಿದ ಮಾಹಿತಿಗಳು ಇವೆ’ ಎಂದು ಹೇಳಿದ ಅವರು, ದಾಖಲೆಗಳನ್ನು ಪ್ರದರ್ಶಿಸಿದರು.

2018–19ರಲ್ಲಿ ಪ್ರತಿ ಮೀಟರ್‌ ಕೊಳವೆಬಾವಿ ಕೊರೆಯಲು ₹ 279ರಿಂದ ₹ 305ರವರೆಗೂ ದರ ನೀಡಲಾಗಿತ್ತು. 2019–20ಮತ್ತು 2020–21ರಲ್ಲಿ ಪ್ರತಿ ಮೀಟರ್‌ಗೆ ₹ 612 ದರ ನೀಡಲಾಗಿದೆ. ಪ್ರತಿ ಮೀಟರ್‌ಗೆ ₹ 307ರಿಂದ ₹ 333ರವರೆಗೂ ಹೆಚ್ಚುವರಿ ದರ ನೀಡಲಾಗಿದೆ. ಇದೇ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾ‍ಪ್ತಿಯ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ 2018–19ರ ದರದಲ್ಲೇ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದರು.

ಟೆಂಡರ್‌ನಲ್ಲೂ ಅಕ್ರಮ: ಹಿಂದೆ ಜಿಲ್ಲಾವಾರು ಟೆಂಡರ್‌ ನೀಡಲಾಗುತ್ತಿತ್ತು. ಆದರೆ, ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕೆಲಸ ಮಾಡಿರುವ ಗುತ್ತಿಗೆದಾರರೇ ಟೆಂಡರ್‌ನಲ್ಲಿ ಭಾಗವಹಿಸಬೇಕು ಎಂಬ ಷರತ್ತು ವಿಧಿಸಿ, ಕೆಲವೇ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ರಾಯಚೂರಿನ ಪಂಚಮುಖಿ ಬೋರ್‌ವೆಲ್ಸ್‌ನ ಕೆ. ಚಂದ್ರಶೇಖರ್‌ ನಾಯಕ್‌, ಸಿಂಧನೂರಿನ ಗುತ್ತಿಗೆದಾರ ವೀರಭದ್ರಪ್ಪ ಮತ್ತು ಬೆಳಗಾವಿಯ ಮಾರುತಿ ರಾಕ್‌ ಡ್ರಿಲ್ಲರ್ಸ್‌ನ ಶರವಣ ಎಂಬುವವರಿಗೆ ₹ 176 ಕೋಟಿ ಮೊತ್ತದ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.

‘ಈ ಮೂವರೂ ಗುತ್ತಿಗೆದಾರರು ಆದಾಯ ತೆರಿಗೆ ರಿಟರ್ನ್ಸ್‌, ಹಿಂದೆ ಕಾಮಗಾರಿ ನಿರ್ವಹಿಸಿರುವುದು, ಹಣಕಾಸು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸಲ್ಲಿಸಿ ಟೆಂಡರ್‌ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ದಾಖಲೆಗಳನ್ನು ಪಡೆದು ಪರಿಶೀಲಿಸುವಂತೆ ನಿರ್ದೇಶನ ನೀಡಿದ ಬಳಿಕವೂ ಕ್ರಮ ಕೈಗೊಂಡಿಲ್ಲ. ಟೆಂಡರ್‌ ಪ್ರಕ್ರಿಯೆ ಮತ್ತು ದರ ನಿಗದಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ’ ಎಂದು ಪ್ರಿಯಾಂಕ್‌ ಆರೋಪಿಸಿದರು.

ಸಚಿವರ ಪಾತ್ರ: ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ 2020ರ ನವೆಂಬರ್‌ 10ರಂದು ಆದೇಶವೊಂದನ್ನು ಹೊರಡಿಸಲಾಗಿತ್ತು. 2021ರ ಜನವರಿ 2ರಂದು ಮತ್ತೊಂದು ಆದೇಶ ಹೊರಡಿಸಿ, ಟೆಂಡರ್‌ ಷರತ್ತುಗಳನ್ನು ಬದಲಿಸಲಾಗಿದೆ. ‘ಸಚಿವರಿಂದ ಅನುಮೋದನೆ ಪಡೆದು ಪರಿಷ್ಕೃತ ಆದೇಶ ಹೊರಡಿಸಲಾಗಿದೆ’ ಎಂಬ ಉಲ್ಲೇಖ ಆದೇಶದಲ್ಲಿದೆ. ಹಿಂದಿನ ಸಮಾಜ ಕಲ್ಯಾಣ ಸಚಿವರು ಏಕೆ ಎರಡೇ ತಿಂಗಳಲ್ಲಿ ಟೆಂಡರ್‌ ಮಾರ್ಗಸೂಚಿಗಳನ್ನು ಬದಲಿಸಿದರು ಎಂದು ಪ್ರಶ್ನಿಸಿದರು.

‘ಟೆಂಡರ್‌ ಮತ್ತು ನಂತರದ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದ ದುರ್ಬಳಕೆ ಮಾಡಿರುವ ಸಚಿವರ ರಾಜೀನಾಮೆಯನ್ನು ಮುಖ್ಯಮಂತ್ರಿಯವರು ಪಡೆಯಬೇಕು. ಅದು ಸಾಧ್ಯವಾಗದೇ ಇದ್ದರೆ ಮುಖ್ಯಮಂತ್ರಿಯವರೇ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

‘ಇದು ಕರ್ನಾಟಕ ಫೈಲ್ಸ್‌’

‘ಬಿಜೆಪಿ ರಾಜ್ಯದಲ್ಲಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ಚುನಾವಣಾ ಪ್ರಚಾರದ ಟೂಲ್‌ ಕಿಟ್‌ ಆಗಿ ಬಳಸುತ್ತಿದೆ. ವಿಧಾನಸಭೆಯ ಅಧ್ಯಕ್ಷರೇ ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡಿದರು. ರಾಜ್ಯ ಸರ್ಕಾರ ಈ ಸಿನಿಮಾಕ್ಕೆ ತೆರಿಗೆ ವಿನಾಯ್ತಿಯನ್ನೂ ನೀಡಿದೆ. ಇಲ್ಲಿರುವುದು ಕರ್ನಾಟಕ ಫೈಲ್ಸ್‌. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಹಣದ ಲೂಟಿಯ ಕತೆಯ ಕರ್ನಾಟಕ ಫೈಲ್ಸ್‌ನಲ್ಲಿದೆ’ ಎಂದ ಪ್ರಿಯಾಂಕ್‌ ಖರ್ಗೆ ದಾಖಲೆಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT