ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಜಿಲ್ಲೆಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆ ಭರ್ತಿಗೆ ಅನುಮತಿ: ಸಚಿವ ಅಶೋಕ

Last Updated 16 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕಂದಾಯ ಇಲಾಖೆಯಲ್ಲಿ ಗ್ರೂಪ್‌ ‘ಸಿ’ ವೃಂದದ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು 14 ಜಿಲ್ಲೆಗಳಿಗೆ ಅನುಮತಿ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ’ ಎಂದರು.

‘ಆಯಾ ಜಿಲ್ಲೆಗಳಲ್ಲಿ ಮಂಜೂರಾದ ಗ್ರಾಮಲೆಕ್ಕಿಗರ ಹುದ್ದೆಗಳಲ್ಲಿ ಶೇ 30ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇದ್ದರೆ ನೇರ ನೇಮಕಾತಿ ಮೂಲಕ ಭರ್ತಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಖಾಲಿ ಇರುವ ಬೆರಳಚ್ಚುಗಾರರು ಮತ್ತು ವಾಹನ ಚಾಲಕರು ಮತ್ತು ಇತರ ಗ್ರೂಪ್‌ ‘ಡಿ’ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ’ ಎಂದೂ ವಿವರಿಸಿದರು.

‘ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳು ಮತ್ತು 53 ಉಪ ವಿಭಾಗಗಳಿವೆ. ಸಿಬ್ಬಂದಿ ಕೊರತೆ ಇದ್ದು, ತಹಶೀಲ್ದಾರ್‌ ಗ್ರೂಪ್‌ ‘ಎ’ ಹುದ್ದೆಗಳನ್ನು ತಹಶೀಲ್ದಾರ್‌ ಗ್ರೇಡ್‌–2 ವೃಂದದಿಂದ ಬಡ್ತಿ ಮೂಲಕ ತುಂಬಲಾಗುವುದು. ತಹಶೀಲ್ದಾರ್‌ ಗ್ರೂಪ್‌ ‘ಬಿ’ ಹುದ್ದೆಗಳನ್ನು ಶೇ 50ರಷ್ಟು ನೇರ ನೇಮಕಾತಿಯಿಂದ ಶೇ 50ರಷ್ಟು ಬಡ್ತಿ ಮೂಲಕ ತುಂಬಬೇಕಿದೆ. ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಹೆಚ್ಚಿನ ಸಮಯ ಅಗತ್ಯವಿದೆ. ಹೀಗಾಗಿ, ಈ ಹುದ್ದೆಗಳಿಗೆ ಶಿರಸ್ತೇದಾರರ ವೃಂದದಿಂದ ನಿಯಮ 32ರ ಅಡಿ ಸ್ವತಂತ್ರ ಪ್ರಭಾದಲ್ಲಿರಿಸಿ ತುಂಬಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT