ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಸಾವಿರ ಮಕ್ಕಳು ಮರಳಿ ಶಾಲೆಗೆ: ಹೈಕೋರ್ಟ್‌ಗೆ ಮಾಹಿತಿ

Last Updated 16 ಫೆಬ್ರುವರಿ 2023, 19:07 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ 24 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ 21,407 ಮಕ್ಕಳನ್ನು ಗುರುತಿಸಲಾಗಿದೆ ಹಾಗೂ 6 ರಿಂದ 14 ವರ್ಷದ 17,266 ಮಕ್ಕಳನ್ನು ಶಾಲೆಗೆ ಮರಳಿ ದಾಖಲಿಸಲಾಗಿದೆ’ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಸಂಬಂಧ ಹೈಕೋರ್ಟ್ 2013ರಲ್ಲಿ ದಾಖಲಿಸಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಈ ಸಂಬಂಧ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

ಪ್ರಮಾಣ ಪತ್ರದಲ್ಲೇನಿದೆ?: 2022ರ ನವೆಂಬರ್ 8ರಂದು ಹೈಕೋರ್ಟ್‌ ನೀಡಿರುವ ನಿರ್ದೇಶನದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗಿತ್ತು. ಅಲ್ಲಿ ದೊರೆತ ಮಾಹಿತಿ ಅನುಸಾರ ರಾಜ್ಯದಲ್ಲಿ ಒಟ್ಟು 24,308 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರಲ್ಲಿ ಇನ್ನೂ 2,901 ಮಕ್ಕಳನ್ನು ಗುರುತಿಸಬೇಕಿದೆ. ವಿಳಾಸ ಮತ್ತು ಫೋನ್ ನಂಬರ್‌ ತಪ್ಪಾಗಿ ನೀಡಿರುವ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿಯೇ 2,254 ಮಕ್ಕಳನ್ನು ಗುರುತಿಸಲು ಸಾಧ್ಯವಾಗಿಲ್ಲ‘ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

‘6ರಿಂದ 14 ವರ್ಷದ 17,266 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. 1,813 ಮಕ್ಕಳು ವಲಸೆ ಹೋಗಿದ್ದಾರೆ. 259 ಮಕ್ಕಳು ಅನಾರೋಗ್ಯ ಪೀಡಿತರು. ಮುಕ್ತ ಶಾಲೆಗೆ 29, ಮದರಸಾಕ್ಕೆ 120 ಮಕ್ಕಳನ್ನು ದಾಖಲಿಸಲಾಗಿದೆ. 127 ಮಕ್ಕಳು ಸಾವನ್ನಪ್ಪಿದ್ದು, 37 ಮಕ್ಕಳು 6 ವರ್ಷಕ್ಕಿಂತ ಕಡಿಮೆ ವಯೋಮಾನದವರು. 1,756 ಮಕ್ಕಳು 14 ವರ್ಷ ಮೀರಿದವರು‘ ಎಂದು ವಿವರಿಸಲಾಗಿದೆ.

‘3ರಿಂದ 6 ವರ್ಷದ 5,19,369 ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿದ್ದಾರೆ. 51,084 ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. 7,747 ಮಕ್ಕಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. 11,174 ಮಕ್ಕಳು 6 ವರ್ಷ ಮೀರಿದ್ದು, ಅದರಲ್ಲಿ 211 ಮಕ್ಕಳನ್ನು ಎರಡು ಕೇಂದ್ರಗಳಲ್ಲಿ ನೋಂದಣಿ ಮಾಡಿಸಲಾಗಿದೆ. 149 ಮಕ್ಕಳು ಮೃತಪಟ್ಟಿದ್ದಾರೆ. 72 ಮಕ್ಕಳು ಪತ್ತೆಯಾಗಿಲ್ಲ’ ಎಂದು ತಿಳಿಸಲಾಗಿದೆ. ನ್ಯಾಯಪೀಠ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT