ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಐಡಿಎಲ್‌ ಬಳಿ ₹ 17 ಸಾವಿರ ಕೋಟಿ!: ಸಿಎಜಿ ವರದಿ

* ಶೇ 28ರಷ್ಟು ಕಾಮಗಾರಿಗಳು ಮಾತ್ರ ಪೂರ್ಣ * ಕೆಲಸ ಮಾಡದೆ ಹಣ ಉಳಿಸಿಕೊಂಡ ನಿಗಮ– ಸಿಎಜಿ
Last Updated 23 ಫೆಬ್ರುವರಿ 2023, 16:42 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) 2016–17ರಿಂದ 2020–21ರ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿರುವ ಮೊತ್ತದಲ್ಲಿ ₹ 17,320.30 ಕೋಟಿಯನ್ನು ಕೆಲಸ ಮಾಡದೆ ತನ್ನ ಬಳಿಯಲ್ಲೇ ಉಳಿಸಿಕೊಂಡಿದೆ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗ‍ಪಡಿಸಿದೆ.

2016–17ರಿಂದ 2020–21ರ ಅವಧಿಯಲ್ಲಿನ ಕೆಆರ್‌ಐಡಿಎಲ್‌ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿ ಗುರುವಾರ ಮಂಡಿಸಲಾಯಿತು. ಸರ್ಕಾರದ ಅನುದಾನ ಬಳಕೆಯಲ್ಲಿ ನಿಗಮವು ನಿಯಮ ಉಲ್ಲಂಘಿಸಿರುವುದು ಮತ್ತು ಹಣಕಾಸು ನಿರ್ವಹಣೆಯಲ್ಲಿ ಲೋಪ ಎಸಗಿರುವುದನ್ನು ಸಿಎಜಿ ಪರಿಶೋಧನಾ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.

ಈ ಅವಧಿಯಲ್ಲಿ ಕೆಆರ್‌ಐಡಿಎಲ್‌ಗೆ ಒಟ್ಟು 84,574 ಕಾಮಗಾರಿಗಳನ್ನು ವಹಿಸಲಾಗಿತ್ತು. ಅವುಗಳಲ್ಲಿ 24,014 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಕೇವಲ ಶೇಕಡ 28ರಷ್ಟು ಗುರಿ ಸಾಧನೆಯಾಗಿದೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದರಲ್ಲೂ ಒಂದರಿಂದ 29 ತಿಂಗಳುಗಳವರೆಗೂ ವಿಳಂಬ ಆಗಿತ್ತು ಎಂದು ವರದಿ ಹೇಳಿದೆ.

2016ರ ಏಪ್ರಿಲ್‌ ಆರಂಭದಲ್ಲಿ ನಿಗಮದ ಖಾತೆಯಲ್ಲಿ ₹ 6,748.10 ಕೋಟಿ ಶಿಲ್ಕು ಇತ್ತು. ನಂತರದ ಐದು ವರ್ಷಗಳಲ್ಲಿ ₹ 17,803.43 ಕೋಟಿ ಅನುದಾನ ಬಿಡುಗಡೆಯಾಗಿದೆ. 2021ರ ಮಾರ್ಚ್‌ ಅಂತ್ಯಕ್ಕೆ ನಿಗಮದ ಖಾತೆಯಲ್ಲಿ ₹ 17,320.30 ಕೋಟಿ ಸಂಗ್ರಹವಾಗಿದೆ. ಹಣ ಲಭ್ಯವಿದ್ದರೂ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇರುವುದು ಕಂಡುಬಂದಿದೆ ಎಂದು ಸಿಎಜಿ ತಿಳಿಸಿದೆ.

ಅನುದಾನಕ್ಕಿಂತ ಹೆಚ್ಚಿನ ವೆಚ್ಚ: 1,379 ಕಾಮಗಾರಿಗಳ ಕುರಿತು ಪರೀಕ್ಷಾ ತನಿಖೆ ನಡೆಸಲಾಗಿದೆ. ಅವುಗಳಲ್ಲಿ 439 ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳಿಂದ 515.16 ಕೋಟಿ ಅನುದಾನವನ್ನು ಕೆಆರ್‌ಐಡಿಎಲ್‌ಗೆ ಬಿಡುಗಡೆ ಮಾಡಲಾಗಿತ್ತು. ನಿಗಮವು ಈ ಕಾಮಗಾರಿಗಳಿಗೆ ₹ 54.39 ಕೋಟಿಯನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಿದೆ. ಈ ಮೊತ್ತವನ್ನು ಪಡೆಯಲು ಸಂಬಂಧಿಸಿದ ಸಂಸ್ಥೆಗಳಿಗೆ ಬೇಡಿಕೆಯನ್ನೂ ಸಲ್ಲಿಸಿಲ್ಲ ಎಂಬ ಉಲ್ಲೇಖ ವರದಿಯಲ್ಲಿದೆ.

ಟೆಂಡರ್‌ ಇಲ್ಲದೆ ಖರೀದಿ: ಸಿಎಜಿ ಪರಿಶೋಧನೆಯ ಅವಧಿಯಲ್ಲಿ ನಿಗಮದ ವಿವಿಧ ಉಪ ವಿಭಾಗಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಮತ್ತು ಕೆಆರ್‌ಐಡಿಎಲ್‌ ಕೇಂದ್ರ ಕಚೇರಿಯ ಸುತ್ತೋಲೆಗಳನ್ನು ಉಲ್ಲಂಘಿಸಿ ₹ 754.32 ಕೋಟಿ ಮೌಲ್ಯದ ಸಿಮೆಂಟ್‌, ಕಬ್ಬಿಣ, ಡಾಂಬರು ಮತ್ತಿತರ ವಸ್ತುಗಳನ್ನು ಟೆಂಡರ್‌ ಇಲ್ಲದೇ ಖರೀದಿಸಿತ್ತು. ಈ ಅವಧಿಯಲ್ಲಿ ಜಿಎಸ್‌ಟಿ ಕಾಯ್ದೆಯಡಿ ನೋಂದಣಿಯಾಗದ ಮಾರಾಟಗಾರರಿಂದ ₹ 448.35 ಕೋಟಿ ಮೌಲ್ಯದ ನಿರ್ಮಾಣ ಸಾಮಗ್ರಿ ಖರೀದಿ ನಡೆದಿದೆ ಎಂಬುದು ಪತ್ತೆಯಾಗಿದೆ.

‘ಇದೇ ಅವಧಿಯಲ್ಲಿ ನೋಂದಣಿಯಾಗದ ಗುಂಪು ನಾಯಕರಿಗೆ ₹ 1,066.92 ಕೋಟಿ ಕೂಲಿ ಪಾವತಿಸಲಾಗಿದೆ. ಖರೀದಿ ಮತ್ತು ಕೂಲಿ ಪಾವತಿಯ ಮೊತ್ತದ ಅನುಸಾರ ₹ 214.46 ಕೋಟಿಯಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಇಂತಹ ಅಕ್ರಮಗಳು ಮುಂದುವರಿದಿದ್ದರೂ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಇದು ನಿಗಮದ ಕೇಂದ್ರ ಕಚೇರಿಯ ದುರ್ಬಲ ಹಣಕಾಸಿನ ನಿಯಂತ್ರಣವನ್ನು ಸೂಚಿಸುತ್ತದೆ’ ಎಂದು ಸಿಎಜಿ ತಿಳಿಸಿದೆ.

ಕಾರ್ಯಕ್ರಮಗಳ ಆಯೋಜನೆ, ಯುಪಿಎಸ್‌ ಖರೀದಿ, ಅಧಿಕ ಸಾಮರ್ಥ್ಯದ ವಿದ್ಯುತ್‌ ಪ್ರಸರಣ ಮಾರ್ಗಗಳ ಬದಲಾವಣೆ ಸೇರಿದಂತೆ ಅನರ್ಹ ಕಾಮಗಾರಿಗಳನ್ನೂ ಕೆಆರ್‌ಐಡಿಎಲ್‌ಗೆ ವಹಿಸಿರುವುದು ಕಂಡುಬಂದಿದೆ. ಈ ರೀತಿ ₹ 16.28 ಕೋಟಿ ವೆಚ್ಚದ 14 ಕಾಮಗಾರಿಗಳನ್ನು ನೀಡಲಾಗಿತ್ತು ಎಂದು ವರದಿ ಹೇಳಿದೆ.

₹ 238.89 ಕೋಟಿ ಬಡ್ಡಿ ಜಮೆಯಾಗಿಲ್ಲ

ಸರ್ಕಾರಿ ನಿಧಿಗಳ ಮೇಲೆ ಗಳಿಸಿದ ಬಡ್ಡಿ ಮೊತ್ತವನ್ನು ಪ್ರತೀ ಹಣಕಾಸು ವರ್ಷದ ಅಂತ್ಯದಲ್ಲಿ ಲೆಕ್ಕ ಶೀರ್ಷಿಕೆ 0049ಕ್ಕೆ ಜಮಾ ಮಾಡುವಂತೆ ಹಣಕಾಸು ಇಲಾಖೆಯು 2018ರ ಮಾರ್ಚ್‌ 1ರಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಕೆಆರ್‌ಐಡಿಎಲ್‌ 2018ರಿಂದ 2021ರ ಅವಧಿಯಲ್ಲಿ ಸರ್ಕಾರಿ ನಿಧಿಗಳ ಮೇಲೆ ಗಳಿಸಿದ ₹ 238.89 ಕೋಟಿ ಬಡ್ಡಿಯನ್ನು ನಿಗದಿತ ಸರ್ಕಾರಿ ಖಾತೆಗೆ ಜಮಾ ಮಾಡಿಲ್ಲ ಎಂಬುದನ್ನು ಸಿಎಜಿ ವರದಿ ಹೊರಗೆಡವಿದೆ.

ಬಂಡೆಕಲ್ಲಿನ ಲೆಕ್ಕವೇ ಇಲ್ಲ

ನಿಗಮದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಅಥವಾ ಗುಂಪು ನಾಯಕರನ್ನು ಬಳಸಿಕೊಂಡು ಕೈಗೊಂಡಿರುವ ಬಂಡೆಗಳ ಒಡೆಯುವುದರಿಂದ ಲಭಿಸುವ ಜಲ್ಲಿ ಮತ್ತು ಕಲ್ಲುಗಳ ಪ್ರಮಾಣ ಹಾಗೂ ಅವುಗಳನ್ನು ವಿಲೇವಾರಿ ಮಾಡಿರುವ ಲೆಕ್ಕವೇ ಕೆಆರ್‌ಐಡಿಎಲ್‌ ಬಳಿ ಇಲ್ಲ.

11 ಕಾಮಗಾರಿಗಳ ದಾಖಲೆಗಳನ್ನು ಈ ಉದ್ದೇಶಕ್ಕಾಗಿ ಸಿಎಜಿ ಪರಿಶೀಲಿಸಿದೆ. ಕಾರ್ಮಿಕರ ವೇತನ ಪಾವತಿ ಮಾಹಿತಿ ಪ್ರಕಾರ, ಈ ಕಾಮಗಾರಿಗಳಲ್ಲಿ 35,961.10 ಚದರ ಮೀಟರ್‌ ಬಂಡೆ ಒಡೆಯಲಾಗಿದೆ. ಅಲ್ಲಿ ಲಭಿಸಿದ ಕಲ್ಲಿನ ಪ್ರಮಾಣ ಮತ್ತು ಅವುಗಳನ್ನು ವಿಲೇವಾರಿ ಮಾಡಿದ ಲೆಕ್ಕಪತ್ರ ನಿಗಮದ ಬಳಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT