ಭಾನುವಾರ, ನವೆಂಬರ್ 27, 2022
27 °C

ಕರ್ನಾಟಕದಲ್ಲಿ ಅರಣ್ಯೇತರ ಉದ್ದೇಶಕ್ಕೆ 1,865 ಎಕರೆ ಅರಣ್ಯ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಉದ್ದೇಶಗಳಿಗಾಗಿ 1,865 ಎಕರೆ ಅರಣ್ಯ ಬಳಸಲು ಅನುಮೋದನೆ ನೀಡಲಾಗಿದೆ.

ಅರಣ್ಯ ಸಂರಕ್ಷಣೆ ಕಾಯ್ದೆ 1980ರಡಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತಾವನೆಗಳ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಸಚಿವಾಲಯ ಅನುಮೋದನೆ ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ 48 ಪ್ರಸ್ತಾವನೆಗಳಿಗೆ ಪೂರ್ವಾನುಮೋದನೆ ನೀಡಲಾಗಿದೆ. 

ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ 318 ಹೆಕ್ಟೇರ್‌ ಅರಣ್ಯ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಬಹುತೇಕ ಪ್ರಸ್ತಾವನೆಗಳು ಗಣಿಗಾರಿಕೆಗೆ ಸಂಬಂಧಪಟ್ಟವು. ಉತ್ತರ ಕನ್ನಡದಲ್ಲಿ 171 ಹೆಕ್ಟೇರ್‌, ಚಿಕ್ಕಮಗಳೂರಿನಲ್ಲಿ 108 ಹೆಕ್ಟೇರ್‌, ತುಮಕೂರಿನಲ್ಲಿ 41 ಹೆಕ್ಟೇರ್, ರಾಮನಗರದಲ್ಲಿ 23 ಹೆಕ್ಟೇರ್‌, ರಾಯಚೂರಿನಲ್ಲಿ 15 ಹೆಕ್ಟೇರ್, ಬಾಗಲಕೋಟೆಯಲ್ಲಿ 12 ಹೆಕ್ಟೇರ್‌ ಅರಣ್ಯ ಬಳಕೆಗೆ ಅನುಮೋದನೆ ನೀಡಲಾಗಿದೆ. ಗಣಿಗಾರಿಕೆ, ನಾಲೆಗಳ ನಿರ್ಮಾಣ, ರಸ್ತೆ, ವಿದ್ಯುತ್‌ ಮಾರ್ಗ ಮತ್ತಿತರ ಯೋಜನೆಗಳಿಗೆ ಈ ಅರಣ್ಯ ಪ್ರದೇಶಗಳನ್ನು ಬಳಸಿಕೊಳ್ಳಲಾಗಿದೆ. 

ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ವೇಳೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು 2016ರಲ್ಲಿ ಆದೇಶ ಹೊರಡಿಸಲಾಗಿದೆ. ಬದಲಿಯಾಗಿ ಕಂದಾಯ ಭೂಮಿಯನ್ನು ನೀಡಬೇಕು ಎಂಬ ಷರತ್ತು ಇದೆ. ಕಳೆದ ಮೂರು ವರ್ಷಗಳಲ್ಲಿ 25 ಪ್ರಕರಣಗಳಲ್ಲಿ 425 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

75 ಪ್ರಸ್ತಾವನೆಗಳು: ಕರ್ನಾಟಕದಲ್ಲಿ ನೀರಾವರಿ, ರಸ್ತೆ, ವಿದ್ಯುದ್ದೀಕರಣ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಬಳಸಲು ಅನುಮೋದನೆ ಕೋರಿರುವ 75 ಪ್ರಸ್ತಾವನೆಗಳು ಕೇಂದ್ರ ಪರಿಸರ ಸಚಿವಾಲಯದ ಮುಂದೆ ಇವೆ. ಕೆಲವು ಪ್ರಕರಣಗಳಲ್ಲಿ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗಿದೆ. ಈ ಪ್ರಸ್ತಾವನೆಗಳು ಪರಿಶೀಲನೆಯ ಹಂತದಲ್ಲಿ ಇವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು