ಶನಿವಾರ, ಆಗಸ್ಟ್ 13, 2022
26 °C

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ಆರೋಪ: ತನಿಖೆಗೆ ಡಿಕೆಶಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಡೆದ ಅಕ್ರಮ ಆರೋಪದ ಬಗ್ಗೆ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಅವರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ನಡೆದ ಬಗ್ಗೆ ಮಾಡಿದ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಶನಿವಾರ  ಪ್ರತಿಕ್ರಿಯಿಸಿದ ಅವರು, ‘ಯಾವ್ಯಾವ ಕೋಡ್‌ಗಳಲ್ಲಿ ಬಿಲ್ ಪಾಸ್ ಆಗುತ್ತಿದೆ. ಯಾವ್ಯಾವ ಎಂಜಿನಿಯರ್ ಏನೇನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ₹ 10 ಕೋಟಿಗೂ ಒಂದೊಂದು ಟೆಂಡರ್ ಆಗುತ್ತಿದೆ’ ಎಂದರು.

‘ಜಲ ಸಂಪನ್ಮೂಲ ಇಲಾಖೆ ಮುಖ್ಯಮಂತ್ರಿ ಬಳಿಯಿದೆ. ಹೀಗಾಗಿ, ವಿಶ್ವನಾಥ್ ಅವರು ಮಾಡಿರುವ ಆರೋಪದ ಬಗ್ಗೆ ಮುಖ್ಯಮಂತ್ರಿ ಉತ್ತರ ಕೊಡಬೇಕಿತ್ತು. ಆದರೆ, ಯಾರೋ ಎಂ.ಡಿ ಕೈಯಲ್ಲಿ ಉತ್ತರ ಕೊಡಿಸಿದ್ದಾರೆ. ಜಂಟಿ ಸದನ ಸಮಿತಿ ರಚಿಸಿ ಆರೋಪದ ಬಗ್ಗೆ ತನಿಖೆಗೆ ನಡೆಸಬೇಕು. ಟೆಂಡರ್‌ನಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ ಎಂಬುವುದು ಸೇರಿ ಎಲ್ಲವೂ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

‘ವಿಧಾನ ಮಂಡಲ ಅಧಿವೇಶನ ಕರೆಯಲು ಇಷ್ಟ ಇಲ್ಲದಿದ್ದರೆ ಎಲ್ಲ ಪಕ್ಷಗಳ ನಾಯಕರ ವರ್ಚುವಲ್ ಅಧಿವೇಶನ ಕರೆಯಲಿ. ಅದಕ್ಕೆ ನಾನೇ ವ್ಯವಸ್ಥೆ ಮಾಡಿಕೊಡ್ತೇನೆ. ಬೆಡ್ ವಿಚಾರ, ಅರೆ ಹುಚ್ಚ, ಬಾಸ್ಟರ್ಡ್ಎಂದೆಲ್ಲ ಮಾತಾಡಿಕೊಂಡಿದ್ದಾರೆ. ದೂರವಾಣಿ ಕರೆ ಕದ್ದಾಲಿಕೆ ಆರೋಪದ ಬಗ್ಗೆ ಯಾವುದೊ ಪೊಲೀಸ್ ಅಧಿಕಾರಿ ಕೈಯಲ್ಲಿ ಮಾಡಿಸುತ್ತಿದ್ದಾರೆ. ಹಿಂದೆ, ನಾನು ದೂರವಾಣಿ ಕದ್ದಾಲಿಕೆ ವಿಚಾರ ಹೇಳಿದಾಗ, ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಸಚಿವ ಅಶೋಕ ಹೇಳಿದ್ದರು. ಪಾಪ, ಕುಮಾರಸ್ವಾಮಿ ಮೇಲೂ ದೂರವಾಣಿ ಕದ್ದಾಲಿಕೆ ಆರೋಪ ಬಂತು. ಆಗ ಅವರು ಸಿಬಿಐಗೆ ಕೊಟ್ಟಿದ್ದರು. ಈಗ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಸಿಬಿಐಗೆ ಯಾಕೆ ಕೊಡುತ್ತಿಲ್ಲ. ಕಮಿನರ್‌ ಕೈಯಲ್ಲಿ ಯಾಕೆ ತನಿಖೆ ಮಾಡಿಸುತ್ತಿರುವುದು’ ಎಂದು ಪ್ರಶ್ನಿಸಿದರು.

ಜನ ಸಾಮಾನ್ಯರ ಕರ್ಮಕಾಂಡ: ‘ರಾಮನ ಪಾರ್ಟಿಯಲ್ಲಿ ರಾಮಾಯಣ ನಡೆಯುತ್ತಿದೆ, ಮಹಾಭಾರತವೂ ನಡೆಯುತ್ತಿದೆ. ಬಿಜೆಪಿಯಲ್ಲಿ ಯುದ್ಧಕಾಂಡ, ಜನ ಸಾಮಾನ್ಯರ ಕರ್ಮಕಾಂಡ. ರಾಜ್ಯ ಹೆಲ್ತ್ ಟೂರಿಸಂಗೆ ಪ್ರಸಿದ್ಧ. ಆದರೆ, ಈಗ ಇಲ್ಲಿ ಹೆಲಿ ಟೂರಿಸಂ ಆರಂಭವಾಗಿದೆ’ ಎಂದು ಬಿಜೆಪಿ ಶಾಸಕರ ದೆಹಲಿ ಪ್ರವಾಸವನ್ನು ಅವರು ಲೇವಡಿ ಮಾಡಿದರು.

‘ಜನರ ಕಷ್ಟಕ್ಕೆ ಕಾಂಗ್ರೆಸ್ ಪಕ್ಷ ಸ್ಪಂದಿಸುತ್ತಾ ಬರುತ್ತಿದೆ. ದೇಶದ ಜನರ ಜೊತೆಯಲ್ಲೇ ತ್ಯಾಗ ಮಾಡಿಕೊಂಡು ಬರುತ್ತಿದೆ. ಕೋವಿಡ್‌ ಅಲೆಯನ್ನು ಮೊದಲೇ ತಡೆಯಲು ಅವಕಾಶ ಇತ್ತು. ಆದರೆ, ಅಂಥ ಯಾವುದೇ ಕೆಲಸ ಆಗಲಿಲ್ಲ. ಆಗಲೇ ರಾಹುಲ್ ಗಾಂಧಿ ಈ ವಿಚಾರದಲ್ಲಿ ಧ್ವನಿ ಎತ್ತಿದ್ದರು’ ಎಂದರು.

‘ಕೋವಿಡ್‌ನಿಂದ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆ ಆಗಿದೆ. ಸರ್ಕಾರ ಒಂದೊಂದು ರೀತಿ ತೀರ್ಮಾನ ತೆಗೆದುಕೊಳ್ಳುತ್ತಿದೆ. ಮೂರನೇ ಅಲೆ ಆರಂಭವಾಗಲಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಭವಿಷ್ಯವೇ ಈ ದೇಶದ ಭವಿಷ್ಯ. ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವ ಕಾರ್ಯ ಮುಗಿಸಬೇಕು. ಮೂರನೇ ಅಲೆ ತಡೆಯಲೇಬೇಕು. ಈ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದರು.

ಇದನ್ನೂ ಓದಿ... ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ

‘ಎಲ್ಲರಿಗೂ ಲಸಿಕೆ ಕೊಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಅವರ ಹೇಳಿಕೆಯನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡರು. ಅವರ ವಿಚಾರಗಳು ಈಗ ಅರ್ಥವಾಗುತ್ತಿದೆ. ಲಸಿಕೆ ಕೊಟ್ಟಿದ್ದರೆ ಕೋವಿಡ್ ತಡೆಯಬಹುದಿತ್ತು. ಕೊರೊನಾ ಮೂರನೇ ಅಲೆಗೆ ಅವಕಾಶ ಕೊಡಬಾರದು. ಜನರ ಜೀವ ಉಳಿಸುವುದು ಮುಖ್ಯ. 18 ವರ್ಷದೊಳಗಿನ ವಿದ್ಯಾರ್ಥಿಗಳಿಗೂ ಲಸಿಕೆ ನೀಡಬೇಕು. ಮಕ್ಕಳಿಗೂ ಲಸಿಕೆ ನೀಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಎರಡು ನಿಮಿಷದ ವಿಡಿಯೊ ಮಾಡಿ ಪಕ್ಷದ ವ್ಯಾಕ್ಸಿನೇಟ್ ಕರ್ನಾಟಕ ಫ್ಲಾಟ್ ಫಾರ್ಮ್ ಕಳುಹಿಸಿದರೆ, ಉತ್ತಮ 100 ವಿಡಿಯೊಗಳಿಗೆ  ಬಹುಮಾನ ನೀಡುತ್ತೇವೆ. ನೂರು ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುತ್ತೇವೆ. ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಪ್ರಚಾರ ಮಾಡುತ್ತೇವೆ’ ಎಂದರು.

‘ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ಸದಸ್ಯರ ಕುಟುಂಬಕ್ಕೆ ಸರ್ಕಾರ ₹ 1 ಲಕ್ಷ ಪರಿಹಾರ ಘೊಷಿಸಿದೆ. ಹೀಗಾಗಿ, ಕೋವಿಡ್‌ನಿಂದ ಸತ್ತವರ ಅಡಿಟ್ ಆಗಬೇಕು. ಮೃತಪಟ್ಟವರೆಲ್ಲರಿಗೂ ಪರಿಹಾರ ಸಿಗಬೇಕು. ಕೆಲವರು ಕೋವಿಡ್‌ನಿಂದ ಮನೆಯಲ್ಲೇ ಸತ್ತಿದ್ದಾರೆ. ಸತ್ತವರ ಕುಟುಂಬದವರು ಅರ್ಜಿ ಸಲ್ಲಿಸಬೇಕು. ಈ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ಡೆತ್ ಅಡಿಟ್ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸತ್ತವರ ಲೆಕ್ಕ ಮುಚ್ಚಿಡಲು ಸಾಧ್ಯವಿಲ್ಲ. ಅವರು ಮುಚ್ಚಿಟ್ಟರೂ ನಾವು ಬಿಚ್ಚಿಡುತ್ತೇವೆ’ ಎಂದು ಸವಾಲು ಹಾಕಿದರು.

ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ ಮುಖ್ಯ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್ ಅಹ್ಮದ್‌ಖಾನ್‌ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ಇದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಯಾರೇ ನಾಯಕರಿಗೆ ಆಸೆ, ಆಕಾಂಕ್ಷೆಗಳು ಇರಬಹುದು. ಯಾರೂ ಶಿಸ್ತು ಮೀರಿ ಹೋಗಬಾರದು ಎಂದು ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್ ಕೂಡ ಅದನ್ನೇ ಹೇಳಿದೆ. ಕೆಲವರದ್ದು ವೈಯಕ್ತಿಕ ಅಭಿಪ್ರಾಯ ಹಾಗೂ ಮಾತು’ ಎಂದರು.

‘ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ ಮುಖ್ಯ. ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಇದನ್ನೇ ಹೇಳಿದ್ದೇನೆ. ಸಿದ್ದರಾಮಯ್ಯ ಬಗ್ಗೆಯೂ ಅಭಿಮಾನ, ಅಭಿಮಾನಿಗಳು ಇರುತ್ತಾರೆ. ನಾನು, ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಪರಮೇಶ್ವರ್ ಇರಬಹುದು. ಎಲ್ಲರಿಗೂ ಆಸೆ, ‌ಆಕಾಂಕ್ಷೆಗಳು ಇರುತ್ತದೆ. ಆದರೆ, ನಮ್ಮ ಗುರಿ ಮುಖ್ಯಮಂತ್ರಿ ಆಗುವುದಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು