ಶನಿವಾರ, ಜೂನ್ 19, 2021
28 °C
ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞರಿಲ್ಲ, ತಂತ್ರಜ್ಞರೂ ಇಲ್ಲ

ರಾಜ್ಯ ಸರ್ಕಾರದ ಅಸಂಬದ್ಧ ಆದೇಶ: ಬಳಕೆಯಾಗದ 25 ವೆಂಟಿಲೇಟರ್‌!

ಸಂತೋಷ ಈ ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ 25 ವೆಂಟಿಲೇಟರ್‌ಗಳು ಇದ್ದರೂ ತುರ್ತು ಬಳಕೆಗೆ ಅವುಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸರ್ಕಾರದ ಆದೇಶವೇ ಅಡ್ಡಿಯಾಗಿದೆ.

‘ತಾಲ್ಲೂಕು ಆಸ್ಪತ್ರೆಗೆ ಮಂಜೂರು ಮಾಡಿದ ವೆಂಟಿಲೇಟರ್‌ಗಳು ಅಲ್ಲಿಯೇ ಬಳಕೆಯಾಗಬೇಕು. ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವಂತಿಲ್ಲ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೇ ಕಟ್ಟುನಿಟ್ಟಿನ ನಿರ್ದೇಶನ ಬಂದಿದೆ. ಆದರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರು, ತಂತ್ರಜ್ಞರು ಇಲ್ಲದ ಕಾರಣ ಅವು ಅಲ್ಲಿ ಬಳಕೆಯಾಗುತ್ತಿಲ್ಲ.

ಗಂಭೀರ ಲಕ್ಷಣಗಳನ್ನು ಹೊಂದಿ ರುವ ಕೋವಿಡ್‌ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರಲ್ಲಿ ಹಲವರಿಗೆ ವೆಂಟಿ ಲೇಟರ್‌ ನೆರವು ಅನಿವಾರ್ಯ. ಯಾವುದೇ ಚಿಕಿತ್ಸೆಗೆ ದೇಹ ಸ್ಪಂದಿಸದೇ ಇದ್ದಾಗ ವೈದ್ಯರು ಅಂತಿಮವಾಗಿ ಮೊರೆ ಹೋಗುವುದೇ ವೆಂಟಿಲೇಟರ್‌ಗೆ. ಜೀವರಕ್ಷಕ ಎಂದೇ ಪರಿಗಣಿಸುವ ಈ ಸಾಧನಗಳು ಸಾಕಷ್ಟಿದ್ದರೂ ಸರ್ಕಾರದ ಆದೇಶವನ್ನು ಪಾಲಿಸುವ ಭರದಲ್ಲಿ ಅಧಿಕಾರಿಗಳು ಅವುಗಳನ್ನು ಮುಟ್ಟಿಲ್ಲ.

ಬಳಕೆಯಾಗದಿರಲು ಕಾರಣವೇನು?: ರೋಗಿಗೆ ವೆಂಟಿಲೇಟರ್‌ ಬಳಸಿ ಚಿಕಿತ್ಸೆ ನೀಡಬೇಕಾದರೆ ದಿನದ 24 ಗಂಟೆ ಪರಿಶೀಲನೆ ಮಾಡುವ ತಂಡ ಬೇಕಾಗುತ್ತದೆ. ಅದರಲ್ಲೂ ಜನರಲ್‌ ಫಿಜಿಷಿಯನ್‌ ಹಾಗೂ ಅರಿವಳಿಕೆ ತಜ್ಞರು ಕಡ್ಡಾಯವಾಗಿ ಇರಬೇಕು. ಆದರೆ, ಜಿಲ್ಲೆಯ ಯಾವುದೇ ತಾಲ್ಲೂಕು ಆಸ್ಪತ್ರೆಯಲ್ಲೂ ವೆಂಟಿಲೇಟರ್‌ ಬಳಕೆ ಮಾಡುವ ಪ್ರತ್ಯೇಕ ವೈದ್ಯರು, ತಂತ್ರಜ್ಞರು ಇಲ್ಲ.

ಈಚೆಗಷ್ಟೇ ಅಫಜಲಪುರ ತಾಲ್ಲೂಕು ಆಸ್ಪತ್ರೆಯಲ್ಲಿದ್ದ ಏಳು ವೆಂಟಿಲೇಟರ್‌ಗಳನ್ನು ತರಿಸಿಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ನೀಡಿದ್ದರು. ಆದರೆ, ಅವುಗಳನ್ನು ಮರಳಿ ತಾಲ್ಲೂಕು ಅಸ್ಪತ್ರೆಗೇ ನೀಡಬೇಕು ಎಂದು ಅಲ್ಲಿನ ಜನರು ಪ್ರತಿಭಟನೆ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡಿದ್ದ ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ ಅವರ ಮುಂದೆಯೇ ಜನರು ಈ ವಿಷಯಕ್ಕೆ ಪಟ್ಟು ಹಿಡಿದರು.

ಸಂಸದರು, ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಮರುದಿನವೇ ವೆಂಟಿಲೇಟರ್‌ಗಳನ್ನು ಅಫಜಲಪುರಕ್ಕೆ ಸಾಗಿಸಲು ಕ್ರಮವಹಿಸಿದರು. ಆ ಘಟನೆ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಆಸ್ಪತ್ರೆಗಳ ವೆಂಟಿಲೇಟರ್‌ ವಿಚಾರವನ್ನೇ ಬಿಟ್ಟುಬಿಟ್ಟಿದ್ದಾರೆ.

ಸದ್ಯಕ್ಕೆ ಕೊರತೆ ಇಲ್ಲ: ‘ಜಿಲ್ಲಾ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾದ ಮೇಲೆ 10 ವೆಂಟಿಲೇಟರ್‌ಗಳನ್ನು ಎರವಲು ಪಡೆದಿದ್ದೇವೆ. ಮುಂದಿನ ವಾರ ಇನ್ನೂ 10 ಬರುತ್ತಿವೆ. ಒಟ್ಟಾರೆ ಕೋವಿಡ್‌ ಹಾಗೂ ಸಾಮಾನ್ಯ ರೋಗಿಗಳ ವಾರ್ಡ್‌ ಸೇರಿ 60 ಬಳಕೆಯಲ್ಲಿವೆ’ ಎನ್ನುತ್ತಾರೆ ಜಿಮ್ಸ್‌ ಅಧಿಕಾರಿಗಳು.

ಸದ್ಯಕ್ಕೆ ಎಲ್ಲ ವೆಂಟಿಲೇಟರ್‌ಗಳನ್ನೂ ಬಳಕೆ ಮಾಡಲಾಗುತ್ತಿದೆ. ಮೇ ಕೊನೆಯ ವಾರದಲ್ಲಿ ಸೋಂಕಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು, ವೆಂಟಿಲೇಟರ್‌ಗಳ ಕೊರತೆ ಕಾಡ ಬಹುದು ಎನ್ನುವುದು ಜಿಮ್ಸ್‌ ವೈದ್ಯರ ಹೇಳಿಕೆ.

*
ಸರ್ಕಾರದ ನಿರ್ದೇಶನದ ಪ್ರಕಾರ ತಾಲ್ಲೂಕು ಆಸ್ಪತ್ರೆಗಳ ವೆಂಟಿಲೇಟರ್‌ಗಳನ್ನು ಅಲ್ಲಿಯೇ ಬಿಡಲಾಗಿದೆ. ತೀರ ಅನಿವಾರ್ಯ ವಾದಾಗ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗುವುದು.
-ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

*
ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ ಆರಂಭಿ ಸಿದ್ದು, ಅಲ್ಲೂ ವೆಂಟಿಲೇಟರ್‌ ಅನಿವಾರ್ಯವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು.
-ಡಾ.ಉಮೇಶ ಜಾಧವ, ಸಂಸದ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು