ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿಯಲ್ಲಿ ತುಂಬಿದ್ದ ಸಸಿಗಳ ಅಡಿಯಲ್ಲಿತ್ತು 3,400 ಕೆ.ಜಿ. ಗಾಂಜಾ!

Last Updated 29 ಆಗಸ್ಟ್ 2021, 21:27 IST
ಅಕ್ಷರ ಗಾತ್ರ

ಬೆಂಗಳೂರು: ನರ್ಸರಿಯಿಂದ ತಂದಿದ್ದ ಸಸಿಗಳ ಜೊತೆಯಲ್ಲೇ ಬೃಹತ್‌ ಪ್ರಮಾಣದ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರನ್ನು ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಲಾರಿಯಲ್ಲಿದ್ದ 3,400 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

ಡಿ.ಶಿಂಧೆ, ಎಂ.ಆರ್‌.ಕಾಂಬ್ಳೆ ಹಾಗೂ ಎನ್‌.ಜೋಗದಾಂದ್‌ ಬಂಧಿತರು. ಇವರೆಲ್ಲಾ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯವರು.

ಲಾರಿಯ ಮೂಲಕ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಬೆನ್ನಲ್ಲೇ ಜಂಟಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಹಾಗೂ ಹೈದರಾಬಾದ್‌ ಅಧಿಕಾರಿಗಳ ತಂಡ ಹೈದರಾಬಾದ್‌ ಹೊರವರ್ತುಲ ರಸ್ತೆಯ ಟೋಲ್‌ ಸಂಗ್ರಹ ಕೇಂದ್ರದ ಬಳಿ ಲಾರಿಯನ್ನು ತಡೆದು ಪರಿಶೀಲಿಸಿತ್ತು. ಆಗ ಕೋಟ್ಯಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ.

‘ಆರೋಪಿಗಳು ಗಾಂಜಾ ತುಂಬಿದ್ದ141 ಪ್ಲಾಸ್ಟಿಕ್‌ ಚೀಲಗಳನ್ನು ಗಿಡಗಳ ಅಡಿಯಲ್ಲಿ ಅಡಗಿಸಿಟ್ಟಿದ್ದರು. ಗಿಡದ ಬುಡದಲ್ಲಿನ ಮಣ್ಣಿನಲ್ಲೂ ಗಾಂಜಾ ಪೊಟ್ಟಣಗಳು ಇದ್ದವು. ಇವುಗಳನ್ನು ಮುಂಬೈ, ಪುಣೆ, ಥಾಣೆ ನಗರಗಳು ಹಾಗೂ ಹೊರ ರಾಜ್ಯಗಳಿಗೆ ಪೂರೈಕೆ ಮಾಡಲು ಮುಂದಾಗಿದ್ದರು. ಆರೋಪಿಗಳ ಜೊತೆ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇವರು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು. ಪಾರ್ಟಿಗಳಿಗೂ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಅವರಿಂದ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಕಳೆದ ವರ್ಷ ಒಟ್ಟು 1,971 ಕೆ.ಜಿ.ಗಾಂಜಾ ಜಪ್ತಿ ಮಾಡಿ, ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ವರ್ಷದಲ್ಲಿ ಈವರೆಗೆ 7,500 ಕೆ.ಜಿ.ಗಾಂಜಾ ಜಪ್ತಿ ಮಾಡಿ 25 ಮಂದಿಯನ್ನು ಬಂಧಿಸಲಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT