ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ40 ಕಮಿಷನ್‌ ಆರೋಪ ಮಾಡಿದವರ ಮೇಲೆ ಮಾನನಷ್ಟ ಮೊಕದ್ದಮೆ: ಸಚಿವ ಮುನಿರತ್ನ

Last Updated 28 ಆಗಸ್ಟ್ 2022, 10:02 IST
ಅಕ್ಷರ ಗಾತ್ರ

ಕೋಲಾರ: ‘ಕಮಿಷನ್‌ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರಿಗೆ ಸೋಮವಾರ ವಕೀಲರ ಮೂಲಕ ಮಾನಷ್ಟ ಮೊಕದ್ದಮೆ ನೋಟಿಸ್‌ ಕಳುಹಿಸುವೆ. 7 ದಿನಗಳಲ್ಲಿ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳಂತೆ ನಡೆದುಕೊಳ್ಳದಿದ್ದರೆ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗುತ್ತಿಗೆದಾರರ ಕಚೇರಿಗಳಿಗೂ ಬೆಳಿಗ್ಗೆ 11ಗಂಟೆಗೆ ನೋಟಿಸ್‌ ಕಳುಹಿಸುತ್ತೇನೆ. ಪತ್ರ ತಲುಪಿದ ಏಳು ದಿನಗಳಲ್ಲಿ ಮಾಧ್ಯಮಗಳ ಮೂಲಕ ಕ್ಷಮೆ ಕೋರಬೇಕು. ಇಲ್ಲವೇ ಆರೋಪಕ್ಕೆ ತಕ್ಕಂತೆ ಪೂರಕ ದಾಖಲೆ ಬಿಡುಗಡೆ ಮಾಡಬೇಕು’ ‌ಎಂದರು.

‘ಪ್ರಧಾನಿಗೆ ದಾಖಲೆ ನೀಡಲಿ. ಲೋಕಾಯುಕ್ತ ಅಥವಾ ರಾಜ್ಯಪಾಲರಿಗೆ ದಾಖಲೆ ನೀಡಲಿ. ನಾನು ಮಾನನಷ್ಟ ಮೊಕದ್ದಮೆ ಹೂಡುತ್ತಿರುವುದರಿಂದ ನ್ಯಾಯಾಲಯಕ್ಕೆ ದಾಖಲೆ ಒಪ್ಪಿಸಲಿ. ₹ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಈಗಾಗಲೇ ತಿಳಿಸಿದ್ದೇನೆ’ ಎಂದು ಹೇಳಿದರು.

ಕಾಮಗಾರಿ ತನಿಖೆ

‘ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಯಲಿದೆ. ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಈ ವಾರ ಆದೇಶ ಹೊರಬೀಳಲಿದೆ. ಯಾವ ಯಾವ ಇಲಾಖೆಯಲ್ಲಿ ಕಾಮಗಾರಿ ನಡೆದಿದೆ ಅಲ್ಲಿ ಮೇಲಧಿಕಾರಿಗಳಿಂದ ತಪಾಸಣೆ ಕಾರ್ಯ ನಡೆಸಲಾಗುವುದು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಳಪೆ ರಸ್ತೆ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಡಿಸಿಸಿ ಬ್ಯಾಂಕ್‌ ಅವ್ಯವಹಾರದ ಬಗ್ಗೆಯೂ ತನಿಖೆ ನಡೆಯಲಿದೆ’ ಎಂದರು.

‘ಆ.19ರಂದು ಕೋಲಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿದ್ದು, ಗುಣಮಟ್ಟ ಪರಿಶೀಲಿಸುವುದಾಗಿ ಹೇಳಿದ್ದೆ. ಆ.22ರಂದು ಸಭೆ ನಡೆಸಿ ಡಿಸಿಸಿ ಬ್ಯಾಂಕ್‌ ಅವ್ಯವಹಾರದ ಬಗ್ಗೆ ಮಾಹಿತಿ ಪಡೆಯುವುದಾಗಿ ಹೇಳಿದ್ದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಗುತ್ತಿಗೆದಾರರು ಬಾಕಿ ಹಣ ಪಾವತಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಮಾರ್ಗದರ್ಶನದಂತೆ ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ’ ಎಂದು ತಿಳಿಸಿದರು.

‘ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್‌ ಮುಖಂಡರು, ಕೆಂಪಣ್ಣ ಅವರಿಂದ ದಾಖಲೆ ಪಡೆದು, ಸತ್ಯಾಂಶವಿದ್ದರೆ ಮಾತನಾಡಲಿ’ ಎಂದು ಸವಾಲು ಹಾಕಿದರು.

ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ‘ಕಳಪೆ ಕಾಮಗಾರಿ ಗುಟ್ಟು ಬಹಿರಂಗವಾಗಲಿದೆ ಎಂಬ ಭಯದಿಂದ ಗುತ್ತಿಗೆದಾರರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಸಹಿಸದೆ, ಬಿಜೆಪಿ ಬಗ್ಗೆ ಮಾತನಾಡಲು ಬೇರೆ ಯಾವುದೇ ವಿಷಯ ಇಲ್ಲದೆ ಕಾಂಗ್ರೆಸ್‌ನವರು ಈ ಕುತಂತ್ರ ರೂಪಿಸಿದ್ದಾರೆ. ಮುನಿರತ್ನ ಅವರು ಯಾವುದೇ ರೀತಿ ತನಿಖೆಗೆ ಹೆದರಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT