ಮಂಗಳವಾರ, ಜುಲೈ 5, 2022
21 °C
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ

ಶೇ 40 ರಷ್ಟು ಲಂಚ: ಏಪ್ರಿಲ್‌ನಲ್ಲಿ ಪ್ರತಿಭಟನೆ- ಗುತ್ತಿಗೆದಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇಕಡ 40ರಷ್ಟು ಲಂಚ ಪಡೆಯುವುದು ಇನ್ನೂ ನಿಂತಿಲ್ಲ. ಲಂಚದ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಏಪ್ರಿಲ್‌ ಕೊನೆಯ ವಾರ 50,000 ಗುತ್ತಿಗೆದಾರರೊಂದಿಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದರು.

ಜಾಗೃತ ಕರ್ನಾಟಕ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ಶೇಕಡ 40ರಷ್ಟು ಕಮಿಷನ್‌ ಯಾರಿಗೂ ಆಘಾತ ತರದ ಭಾರಿ ಹಗರಣ; ಕರ್ನಾಟಕಕ್ಕೇನು ಕಾದಿದೆ?’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬಹುದು ಎಂಬ ನಿರೀಕ್ಷೆ ನಾವು ಆರೋಪ ಮಾಡಿದಾಗ ಇತ್ತು. ಆದರೆ, ಯಾವ ಬದಲಾವಣೆಯೂ ಆಗಿಲ್ಲ’ ಎಂದರು.

‘ವಿವಿಧ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರಿಂದ ಶೇ 40ರಷ್ಟು ಲಂಚ ಪಡೆಯುವುದು ಈಗಲೂ ನಿಂತಿಲ್ಲ. ಭ್ರಷ್ಟಾಚಾರದ ಕುರಿತು ನಾವು ನೀಡಿರುವ ದೂರುಗಳ ಬಗ್ಗೆ ಸರ್ಕಾರ ಯಾವ ಕ್ರಮವನ್ನೂ ಜರುಗಿಸಿಲ್ಲ. ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಎಷ್ಟು ಮೊತ್ತದ ಲಂಚ ಪಡೆಯುತ್ತಾರೆ ಎಂಬುದನ್ನು ದೂರಿನಲ್ಲಿ ನಿಖರವಾಗಿ ಹೇಳಿದ್ದೇವೆ. ಸರ್ಕಾರ ತನಿಖೆ ನಡೆಸಲಿ. ನಮ್ಮ ಆರೋಪದಲ್ಲಿ ಸುಳ್ಳಿದ್ದರೆ ನಮ್ಮನ್ನು ಜೈಲಿಗೆ ಕಳುಹಿಸಲಿ’ ಎಂದು ಸವಾಲು ಹಾಕಿದರು.‌

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿನ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ‘10 ಪರ್ಸೆಂಟ್‌ ಸರ್ಕಾರ’ ಎಂದು ಟೀಕಿಸಿದ್ದರು. ಈಗ ಲಂಚದ ಪ್ರಮಾಣ ಶೇ 40ಕ್ಕೆ ಏರಿದೆ. ಶಾಸಕರಿಗೆ ಶೇ 15ರಷ್ಟು ಲಂಚ ಕೊಡದಿದ್ದರೆ ಗುತ್ತಿಗೆದಾರರಿಗೆ ಕಾರ್ಯಾದೇಶವೇ ಸಿಗುವುದಿಲ್ಲ. ಸಂಪೂರ್ಣ ಮಾಹಿತಿಯೊಂದಿಗೆ ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ಒದಗಿಸಲು ಸಿದ್ಧ: ‘ಲಂಚದ ಆರೋಪಕ್ಕೆ ದಾಖಲೆ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳುತ್ತಿದ್ದಾರೆ. ಲಂಚ ಕೊಟ್ಟವರು ಮತ್ತು ಪಡೆದವರು ದಾಖಲೆ ಇಟ್ಟುಕೊಳ್ಳುತ್ತಾರಾ? ನಾವು ಮಾಡಿರುವ ಆರೋಪಕ್ಕೆ ಈಗಲೂ ಬದ್ಧ. ಈ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಿದರೆ ಎಲ್ಲ ಮಾಹಿತಿಗಳನ್ನೂ ಒದಗಿಸಲು ಸಿದ್ಧ’ ಎಂದು ಕೆಂಪಣ್ಣ ಹೇಳಿದರು.

‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಮೂಲಕ ₹ 25,000 ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ. ಅದರಲ್ಲಿ ಶೇ 20ರಷ್ಟಾದರೂ ಕೆಲಸ ಆಗಿದೆಯೆ ಎಂಬುದನ್ನು ಸರ್ಕಾರ ತೋರಿಸಲಿ. ಆಗ ಅವರು ಹೇಳಿದಂತೆ ನಾವು ಕೇಳುತ್ತೇವೆ’ ಎಂದರು.

ವಿಕೇಂದ್ರೀಕರಣವೇ ಮದ್ದು: ನಿವೃತ್ತ ಐಎಎಸ್‌ ಅಧಿಕಾರಿ ಟಿ.ಆರ್‌. ರಘುನಂದನ್‌ ಮಾತನಾಡಿ, ‘ಅಧಿಕಾರ ವಿಕೇಂದ್ರೀಕರಣದಿಂದ ಭ್ರಷ್ಟಾಚಾರ ತಡೆಯಲು ಸಾಧ್ಯ. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಬೇಗ ಬಯಲಿಗೆ ಬರುತ್ತವೆ’ ಎಂದರು.

ಕಾರ್ಯನೀತಿ ವಿಶ್ಲೇಷಕ ಕೆ.ಸಿ. ರಘು ಮತ್ತು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯ ರೆಡ್ಡಿ ಮಾತನಾಡಿದರು.

‘ಪ್ರಜಾವಾಣಿ’ಯಿಂದ ಚರ್ಚೆಗೆ ಬಂತು

‘ಕಾಮಗಾರಿಗಳನ್ನು ನಡೆಸುತ್ತಿರುವ ವಿವಿಧ ಇಲಾಖೆಗಳಲ್ಲಿ ಶೇ 40 ರಷ್ಟು ಲಂಚ ಪಡೆಯುತ್ತಿರುವ ಕುರಿತು ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ ನಾವು ದೂರು ನೀಡಿದ್ದೆವು. ಆದರೆ, ಸಣ್ಣ ಚರ್ಚೆಯೂ ಆರಂಭವಾಗಿರಲಿಲ್ಲ. ‘ಪ್ರಜಾವಾಣಿ’ ಪತ್ರಿಕೆ ಈ ಕುರಿತು ವಿಸ್ತೃತವಾಗಿ ವರದಿಗಳನ್ನು ಪ್ರಕಟಿಸಿತು. ಆ ಬಳಿಕ ಸಾರ್ವಜನಿಕ ವಲಯದಲ್ಲಿ ಈ ಕುರಿತು ಚರ್ಚೆ ಆರಂಭವಾಯಿತು. ಈ ವಿಚಾರದಲ್ಲಿ ಪತ್ರಿಕೆಗೆ ನಾವು ಆಭಾರಿ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು