ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಪತ್ತೆ | ಮಾಹಿತಿದಾರರಿಗೆ ₹ 5 ಲಕ್ಷದವರೆಗೂ ಬಹುಮಾನ: ಗೃಹ ಇಲಾಖೆ

Last Updated 15 ಡಿಸೆಂಬರ್ 2022, 13:12 IST
ಅಕ್ಷರ ಗಾತ್ರ

ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆಮಾಡಲು ನೆರವಾಗುವ ಮಾಹಿತಿದಾರರಿಗೆ ನೀಡುವ ಬಹುಮಾನದ ಮೊತ್ತವನ್ನು ₹ 5 ಲಕ್ಷದವರೆಗೂ ಹೆಚ್ಚಿಸಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವುದು, ಮಾದಕ ವಸ್ತು ಹಾಗೂ ಆಯುಧ ಕಳ್ಳಸಾಗಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಘೋಷಿತ ಅಪರಾಧಿಗಳ ಪತ್ತೆಗೆ ಮಾಹಿತಿ ನೀಡಿ ನೆರವಾಗುವವರಿಗೆ ₹ 20,000 ನಗದು ಬಹುಮಾನ ನೀಡಲು ಅವಕಾಶವಿತ್ತು. ಪ್ರಕರಣದ ತೀವ್ರತೆಯನ್ನು ಆಧರಿಸಿ ₹ 20,000ದಿಂದ ₹ 5 ಲಕ್ಷದವರೆಗೂ ನಗದು ಬಹುಮಾನ ನೀಡಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಅಧಿಕಾರ ನೀಡುವಂತೆ ಗೃಹ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

‘ಮಾಹಿತಿದಾರರಿಗೆ ₹ 20,000ದವರೆಗೆ ಮಾತ್ರ ಬಹುಮಾನ ನೀಡಲು ಅವಕಾಶ ಇರುವುದರಿಂದ ಹೆಚ್ಚಿನ ಜನರು ಪೊಲೀಸ್‌ ಇಲಾಖೆಗೆ ಮನವಿಗೆ ಸ್ಪಂದಿಸುವುದಿಲ್ಲ. ₹ 5 ಲಕ್ಷದವರೆಗೂ ಬಹುಮಾನ ನೀಡಲು ಅವಕಾಶ ಕಲ್ಪಿಸಬೇಕು. ಆಗ ತ್ವರಿತವಾಗಿ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗುತ್ತದೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು 2021ರ ಡಿಸೆಂಬರ್‌ನಲ್ಲಿ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು.

ಗೃಹ ಇಲಾಖೆಯು ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಕಳುಹಿಸಿತ್ತು. ಆರ್ಥಿಕ ಇಲಾಖೆಯು ಈ ತಿಂಗಳ 9ರಂದು ಒಪ್ಪಿಗೆ ನೀಡಿತ್ತು. ಆರ್ಥಿಕ ಇಲಾಖೆಯ ಅನುಮೋದನೆಯನ್ನು ಆಧರಿಸಿ ಮಾಹಿತಿದಾರರಿಗೆ ₹ 20,000ದಿಂದ ₹ 5 ಲಕ್ಷದವರೆಗೂ ಬಹುಮಾನ ನೀಡಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ.

‘ಮಾಹಿತಿದಾರರ ಬಹುಮಾನದ ಮೊತ್ತವನ್ನು 2017ರಲ್ಲಿ ಪರಿಷ್ಕರಿಸಲಾಗಿತ್ತು. ಆ ಬಳಿಕ ಹೆಚ್ಚಳ ಮಾಡಿರಲಿಲ್ಲ. ತ್ವರಿತವಾಗಿ ಆರೋಪಿಗಳನ್ನು ಪತ್ತೆಮಾಡಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಈಗ ಹೆಚ್ಚಳ ಮಾಡಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT