ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒಡಲು: ರಾಜ್ಯದಲ್ಲಿ 50 ಸಾವಿರ ಎಕರೆ ಒತ್ತುವರಿ

ಕೆರೆಗಳ ಸಂಖ್ಯೆ 35 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ
Last Updated 9 ಸೆಪ್ಟೆಂಬರ್ 2022, 18:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ 40 ಸಾವಿರ ಕೆರೆಗಳಿಗೆ ಸೇರಿದ 50 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಒತ್ತುವರಿಯಾಗಿದೆ. 21 ಸಾವಿರ ಕೆರೆಗಳಲ್ಲಿ ಒತ್ತುವರಿಯ ಅಳತೆಯನ್ನೇ ಮಾಡಿಲ್ಲ. 13 ಸಾವಿರ ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ. 8 ಸಾವಿರಕ್ಕೂ ಹೆಚ್ಚು ಕೆರೆಗಳು ಕಲುಷಿತವಾಗಿವೆ....

ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಜಿಲ್ಲೆವಾರು ರಾಜ್ಯದ ಕೆರೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಈ ಅಂಶ ಬಹಿರಂಗವಾಗಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ 10ನೇ ಸಮಿತಿ ಸಭೆಯಲ್ಲಿ ಕೆರೆಗಳ ಒತ್ತುವರಿ ತೆರವು ಮಾಡುವಂತೆ
ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.

ಈ ಹಿಂದೆ 35 ಸಾವಿರ ಕೆರೆಗಳಿರುವುದಕ್ಕೆ ದಾಖಲೆ ಇತ್ತು. ಜಿಲ್ಲಾ ಮಟ್ಟದ ಮಾಹಿತಿಗಳನ್ನು ಪಡೆದು ಒಟ್ಟುಗೂಡಿಸಿದಾಗ ಕೆರೆಗಳ ಸಂಖ್ಯೆ 40 ಸಾವಿರ ಮೀರಿದೆ. ‘ಕೆರೆಗಳ ಸಂಖ್ಯೆ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆ. ಕಂದಾಯ ಇಲಾಖೆಯ ದಾಖಲೆಗಳನ್ನು ಹೊಂದಾಣಿಕೆ ಮಾಡಿಕೊಂಡು ಮಾಹಿತಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವೆ ಇಲಾಖೆ ಹಾಗೂ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ನೀಡಿರುವ ಅಂಕಿ–ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಲು ಹೇಳಲಾಗಿದೆ’ ಎಂದು ಪ್ರಾಧಿಕಾರದ ಮೂಲಗಳು ಹೇಳಿವೆ.

ಕೆರೆ ಅಭಿವೃದ್ಧಿ ಸೆಸ್‌ ಎಂದು ಎಲ್ಲ ಪುರಸಭೆ, ನಗರ ಸಭೆಗಳಲ್ಲಿ ಆಸ್ತಿ ತೆರಿಗೆಯ ಶೇ 1ರಷ್ಟು ಸಂಗ್ರಹ ಮಾಡುತ್ತಿದ್ದು, ಅದನ್ನು ಕೂಡಲೇ ಬಳಸಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ. ತಂತಿಬೇಲಿ, ಏರಿ ಬಲಪಡಿಸುವುದು, ಹೂಳು ತೆಗೆಯುವ ಸಿವಿಲ್‌ ಕಾಮಗಾರಿಗಳಿಗೆ ಮಾತ್ರ ಈ ಸೆಸ್ ಹಣವನ್ನು ಬಳಕೆ ಮಾಡಲಾಗುತ್ತಿದೆ. ಅದರ ಜೊತೆಗೆ ಕೆರೆಗಳ ರಕ್ಷಣೆ ಹಾಗೂ ಗುಣಮಟ್ಟ ಕಾಪಾಡುವುದಕ್ಕೆ, ಕೆರೆ ನೀರನ್ನು ಸಂಸ್ಕರಣೆ
ಮಾಡಲು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕೆರೆಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಜಿಲ್ಲಾಧಿಕಾರಿ ಮಟ್ಟದಲ್ಲಿ ಸಭೆ ನಡೆಯಬೇಕು. ಪುನರ್‌ರಚಿಸಿರುವ ಸಮಿತಿ ವಿವರ ಹಾಗೂ ಪ್ರತಿ ತಿಂಗಳು ಕೈಗೊಳ್ಳಲಾಗುತ್ತಿರುವ ಮಾಹಿತಿಯನ್ನು ಪ್ರಾಧಿಕಾರಕ್ಕೆ ಕಳುಹಿಸಬೇಕು. ಹೈಕೋರ್ಟ್‌ ಕೆರೆಗಳ ಅಭಿವೃದ್ಧಿ ಹಾಗೂ ರಕ್ಷಣೆ ಕ್ರಮಗಳ ಬಗ್ಗೆ ನಿಗಾವಹಿಸುತ್ತಿದೆ. ಹೀಗಾಗಿ ಎಲ್ಲೂ ವ್ಯತ್ಯಾಸವಾಗದಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಎಲ್ಲ ಇಲಾಖೆ ಅಧಿಕಾರಿಗಳ ರಾಜ್ಯಮಟ್ಟದ ಅಪೆಕ್ಸ್‌ ಸಮಿತಿ ನಡೆಸಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯ

ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ನೀಡಿರುವ ವರದಿಯಂತೆ ರಾಜ್ಯದಲ್ಲಿ 8,579 ಕೆರೆಗಳು ಕಲುಷಿತವಾಗಿವೆ. ಇವುಗಳನ್ನು ರಕ್ಷಿಸುವ ಉದ್ದೇಶದಿಂದ ಯಾವ ರೀತಿಯ ಮಾಲಿನ್ಯವಿದೆ, ಯಾವ ಪ್ರಮಾಣದಲ್ಲಿದೆ ಎಂಬುದನ್ನು ಗುರುತಿಸಿ ವರದಿ ನೀಡಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಮಂಡಳಿಯಿಂದ ಬಾರದ್ದರಿಂದ ಪ್ರಾಧಿಕಾರ ಈ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿದೆ.

ಮಾಲಿನ್ಯವಿರುವ ಕೆರೆಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 1021 ಕೆರೆಗಳು ಕಲುಷಿತವಾಗಿವೆ. ಬೆಂಗಳೂರು ನಗರದಲ್ಲಿರುವ 837 ಕೆರೆಗಳೂ ಕಲುಷಿತ. ತುಮಕೂರು (827), ಹಾಸನ (756), ಕೋಲಾರ (664), ಹಾವೇರಿ (565), ಮೈಸೂರು (488), ಧಾರವಾಡ (470), ಬೆಂಗಳೂರು ಗ್ರಾಮಾಂತರ (308), ಚಿಕ್ಕಮಗಳೂರು (301), ಚಿಕ್ಕಬಳ್ಳಾಪುರ (282), ಮಂಡ್ಯ (253) ನಂತರದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT