ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ | ತುರ್ತು ನೆರವಿಗೆ ₹ 500 ಕೋಟಿ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಸಂತ್ರಸ್ತರಿಗೆ ಆಹಾರದ ಕಿಟ್
Last Updated 13 ಜುಲೈ 2022, 19:30 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಭಾರಿ ಮಳೆಯಿಂದ ಹಾನಿಗೊಂಡಿರುವ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಸಣ್ಣ ಸೇತುವೆಗಳ ದುರಸ್ತಿ, ತುರ್ತು ಕಾರ್ಯಗಳಿಗೆ ತಕ್ಷಣ ₹ 500 ಕೋಟಿ ಬಿಡುಗಡೆ ಮಾಡುವು ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಗಳು ಹದಗೆಟ್ಟಿವೆ. ಮೂಲಸೌಕರ್ಯ ಹಾಳಾಗಿವೆ. ತಕ್ಷಣ ಮೂಲಸೌಕರ್ಯ ಮರುಸ್ಥಾಪನೆಗೆ ₹ 500 ಕೋಟಿ ಬಿಡುಗಡೆ ಮಾಡಲಾಗುವುದು.ಜಿಲ್ಲಾವಾರು ಹಾನಿವರದಿ ತರಿಸಿ ಕೊಂಡು ಎನ್‌ಡಿಆರ್‌ಎಫ್‌ ಅಡಿಯಲ್ಲಿ ಕೇಂದ್ರದಿಂದ ‍ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ನೆರವನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.

ಕಾಳಜಿ ಕೇಂದ್ರಗಳಲ್ಲಿ ಮೊಟ್ಟೆ: ನೆರೆ ಪೀಡಿತ ಸಂತ್ರಸ್ತರಿಗಾಗಿ ತೆರೆಯುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಪೌಷ್ಟಿಕ ಆಹಾರದ ಜತೆಗೆ ಮೊಟ್ಟೆಯನ್ನು ನೀಡಲಾಗುವುದು. ಸಂಬಂಧಿಗಳ ಮನೆ ಯಲ್ಲಿ ಉಳಿದಿರುವ ಸಂತ್ರಸ್ತರಿಗೂ ಆಹಾರದ ಕಿಟ್‌ ನೀಡಲಾಗುವುದು ಎಂದರು.

ಅಧ್ಯಯನ: ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಸಂಭವಿಸಿರುವ ಭೂಕಂಪ ನದ ಅಧ್ಯಯನ ನಡೆಸಿ, ಪರಿಹಾರ ಕ್ರಮಗಳ ಕುರಿತು ವರದಿ ಸಲ್ಲಿಸಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ, ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಭೂಕುಸಿತ ತಡೆಗೆ ಅಮೃತ ವಿಶ್ವ ವಿದ್ಯಾಲಯದಿಂದ ಕೊಡಗು ಜಿಲ್ಲೆಯಲ್ಲಿ ಅಧ್ಯಯನ ನಡೆದಿದೆ. ಕರಾವಳಿ ಜಿಲ್ಲೆಗಳು, ಪಶ್ಚಿಮ ಘಟ್ಟಗಳಲ್ಲೂ ಅಧ್ಯಯನಕ್ಕೆ ಆದೇಶಿಸಲಾಗಿದೆ. ವರದಿ ಶಿಫಾರಸುಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

32 ಮಂದಿ ಸಾವು: 14 ಕಾಳಜಿ ಕೇಂದ್ರ

ಉಡುಪಿ: ಈ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಸಂಬಂಧಿತ ಅವಘಡ ಗಳಲ್ಲಿ ರಾಜ್ಯದಲ್ಲಿ ಇದುವರೆಗೂ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಣ್ಮರೆಯಾಗಿದ್ದಾರೆ. 34 ಜನರಿಗೆ ಗಾಯಗಳಾಗಿವೆ.

‘ಪ್ರವಾಹದಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ ಒಟ್ಟು 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಿಳಿಸಿದರು.

ಪರಿಹಾರ ಕಾರ್ಯಗಳಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಕಾರ್ಯನಿರ್ವಹಿಸುತ್ತಿವೆ. 355 ಹೆಕ್ಟೇರ್ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

ಕರಾವಳಿಯ ಮೂರು ಜಿಲ್ಲೆಗಳಲ್ಲಿಯೇ 2,187 ಕಿ.ಮೀ ನಷ್ಟು ಲೋಕೋ ಪಯೋಗಿ, ಗ್ರಾಮೀಣ ರಸ್ತೆಗಳು ಹಾನಿಗೊಳಗಾಗಿವೆ. 1062 ಮನೆಗಳು‌ ಕುಸಿದಿವೆ. 168 ಸೇತುವೆಗಳಿಗೆ ಹಾನಿಯಾಗಿದ್ದು, 5,595 ವಿದ್ಯುತ್ ಕಂಬಗಳು ಬಿದ್ದಿವೆ. 422 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ ಎಂದು ವಿವರ ನೀಡಿದರು.

ಪರಿಹಾರ ಮೊತ್ತ ₹1 ಲಕ್ಷ ಹೆಚ್ಚಳ

ಬೆಂಗಳೂರು: ಅತಿವೃಷ್ಟಿ ಮತ್ತು ಪ್ರವಾಹದಿಂದ ಸಂಭವಿಸುವ ಮಾನವ ಜೀವಹಾನಿ, ಮನೆ ಕುಸಿತ ಹಾಗೂ ಗೃಹಬಳಕೆ ವಸ್ತುಗಳ ಹಾನಿಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿ ಕಂದಾಯ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಮಾನವ ಜೀವಹಾನಿ ಹಾಗೂ ಶೇ 75ರಷ್ಟು ಹಾನಿಯಾಗುವ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು ₹ 4 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸ ಲಾಗಿದೆ. ಗೃಹ ಬಳಕೆ ವಸ್ತುಗಳ ಹಾನಿಗೆ ನೀಡುವ ಪರಿಹಾರದ ಮೊತ್ತವನ್ನು ₹ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾಗಿರುವ ಪ್ರಕರಣಗಳಲ್ಲಿ ಪರಿಷ್ಕೃತ ದರ ದಲ್ಲೇ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯಂತೆ ಇದುವರೆಗೆ ಪರಿಹಾರ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಿದೆ. ಮಳೆಹಾನಿಯಿಂದ ಸಂತ್ರಸ್ತರಾಗುವ ಎಲ್ಲ ಕುಟುಂಬಗಳಿಗೂ ತಲಾ
₹ 10 ಸಾವಿರವನ್ನು ಬಟ್ಟೆ, ದಿನಬಳಕೆ ವಸ್ತುಗಳ ಖರೀದಿಗೆ ತುರ್ತು ಪರಿ ಹಾರದ ರೂಪದಲ್ಲಿ ಅವರ ಬ್ಯಾಂಕ್‌ ಖಾತೆಗಳಿಗೆ ತಕ್ಷಣ ವರ್ಗಾಯಿಸು ವಂತೆಯೂ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT