ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತಕ್ಕೆ ಆಸ್ತಿ ವಿವರವನ್ನೇ ಸಲ್ಲಿಸದ 58 ಶಾಸಕರು

‍‍ಪ‍್ರಮಾಣಪತ್ರ ನೀಡದ ಸಚಿವ ಮಾಧುಸ್ವಾಮಿ, ಶ್ರೀರಾಮುಲು
Last Updated 10 ಜನವರಿ 2023, 15:59 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಾದ ಜೆ.ಸಿ. ಮಾಧುಸ್ವಾಮಿ, ಬಿ. ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ 58 ಶಾಸಕರು ಗಡುವು ಮುಗಿದು ಆರು ತಿಂಗಳು ಕಳೆದರೂ ಲೋಕಾಯುಕ್ತರಿಗೆ 2021–22ನೇ ಸಾಲಿನ ಆಸ್ತಿ ಮತ್ತು ಬಾಧ್ಯತೆಯ ವಿವರಗಳನ್ನು ಸಲ್ಲಿಸಿಲ್ಲ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಜೂನ್‌ 30ರೊಳಗೆ ಪ್ರತಿ ವರ್ಷದ ತಮ್ಮ ಆಸ್ತಿ ಹಾಗೂ ಸಾಲದ ವಿವರಗಳ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ಹಿಂದಿನ ವರ್ಷ 179 ಸದಸ್ಯರು ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸಿರಲಿಲ್ಲ. ಜೂನ್‌ 30ರ ನಂತರ 121 ಮಂದಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಗಡುವು ಮುಗಿದರೂ 2021–22ರ ಅವಧಿಯ ಆಸ್ತಿ ವಿವರ ಸಲ್ಲಿಸದ ಶಾಸಕರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆ ಬಳಿಕ ವಿಧಾನಸಭೆಯ 93 ಮತ್ತು ವಿಧಾನ ಪರಿಷತ್‌ನ 28 ಸದಸ್ಯರು ಆಸ್ತಿ ವಿವರ ಸಲ್ಲಿಸಿದ್ದಾರೆ. ವಿಧಾನಸಭೆಯ 34 ಮತ್ತು ವಿಧಾನ ಪರಿಷತ್‌ನ 24 ಸದಸ್ಯರು ಈವರೆಗೂ ಆಸ್ತಿ ವಿವರ ಸಲ್ಲಿಸಿಲ್ಲ’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 22ರ ಪ್ರಕಾರ, ‘ಪ್ರತಿಯೊಬ್ಬ ಸಾರ್ವಜನಿಕ ಸೇವಕನು ಪ್ರತಿ ವರ್ಷದ ಜೂನ್‌ 30ರೊಳಗೆ ಆಸ್ತಿ ಮತ್ತು ಬಾಧ್ಯತೆಯ ವಿವರಗಳನ್ನು ಸಲ್ಲಿಸಬೇಕು. ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಕ್ಕೆ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು’ ಎಂದು ಹೇಳಲಾಗಿದೆ.

ಶೀಘ್ರದಲ್ಲಿ ವರದಿ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ‘ಆಸ್ತಿ ವಿವರ ಸಲ್ಲಿಸದ ಶಾಸಕರ ವಿವರಗಳ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸುವುದು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟಿಸುವುದಕ್ಕೆ ಮಾತ್ರ ಕಾಯ್ದೆಯಲ್ಲಿ ಅವಕಾಶವಿದೆ. ಶೀಘ್ರದಲ್ಲಿ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿರುವ ನೈಜ ಹೋರಾಟಗಾರರ ವೇದಿಕೆಯ ಎಚ್‌.ಎಂ. ವೆಂಕಟೇಶ್‌, 58 ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಕಳೆದ ವರ್ಷದ್ದೂ ಬಾಕಿ

ವಿಧಾನಸಭೆಯ 12 ಮತ್ತು ವಿಧಾನ ಪರಿಷತ್‌ನ 13 ಸದಸ್ಯರು 2020–21ನೇ ಸಾಲಿನ ಆಸ್ತಿ ವಿವರವನ್ನು ಈವರೆಗೂ ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ರಾಜ್ಯಪಾಲರಿಗೆ ವರದಿ ಸಲ್ಲಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿದ ಬಳಿಕವೂ ಎರಡೂ ಸದನಗಳ 25 ಸದಸ್ಯರು ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT