ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 70 ಲಕ್ಷ ಇ–ಶ್ರಮ ಕಾರ್ಡ್‌ ವಿತರಣೆ

ಎಂಆರ್‌ಪಿಎಲ್‌: ಫಲಾನುಭವಿಗಳಿಗೆ ಇ–ಶ್ರಮ ಕಾರ್ಡ್‌ ಹಸ್ತಾಂತರಿಸಿದ ಕೇಂದ್ರ ಸಚಿವ ರಾಮೇಶ್ವರ್‌ ತೆಲೀ
Last Updated 9 ಅಕ್ಟೋಬರ್ 2022, 15:45 IST
ಅಕ್ಷರ ಗಾತ್ರ

ಸುರತ್ಕಲ್‌: ‘ದೇಶದಲ್ಲಿ 38 ಕೋಟಿ ಮಂದಿಗೆ ಇ–ಶ್ರಮ ಕಾರ್ಡ್‌ ವಿತರಿಸುವ ಗುರಿ ಇದೆ. ಇದುವರೆಗೆ 28 ಕೋಟಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ 70 ಲಕ್ಷ ಇ–ಶ್ರಮ ಕಾರ್ಡ್‌ಗಳನ್ನು ವಿತರಿಸಲಾಗಿದೆ’ ಎಂದು ಕೇಂದ್ರ ಉದ್ಯೋಗ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೆಲೀ ತಿಳಿಸಿದರು.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ (ಎಂಆರ್‌ಪಿಎಲ್‌) ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಇ–ಶ್ರಮ ಕಾರ್ಡ್‌ಗಳನ್ನುಸಾಂಕೇತಿಕವಾಗಿ ಹಸ್ತಾಂತರಿಸಿದ ಬಳಿಕ ಅವರು ಮಾತನಾಡಿದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು ಆಯ್ದ 20 ಫಲಾನುಭವಿಗಳಿಗೆ ಸಚಿವರು ಸಾಂಕೇತಿಕವಾಗಿ ಹಸ್ತಾಂತರಿಸಿದರು. ‌

ಇ–ಶ್ರಮ ಕಾರ್ಡ್‌ಗಳನ್ನು ಆಯುಷ್ಮಾನ್ ಭಾರತ್‌, ಕಿಸಾನ್‌ ಸಮ್ಮಾನ್‌ ಯೋಜನೆ ಮತ್ತು ಪ್ರಧಾನ ಮಂತ್ರಿ ಯೋಗಿ ಮಾನ್ ಧನ್‌ ಯೋಜನೆಗಳ ಜೊತೆಗೆ ಬೆಸೆಯುವ ಬಗ್ಗೆ ಸಚಿವ ತೆಲೀ ಅವರು ಸುಳಿವು ನೀಡಿದರು.

‘ಉಜ್ವಲ ಯೋಜನೆಯಡಿ ದೇಶದಲ್ಲಿ ಸುಮಾರು 9 ಕೋಟಿ ಅಡುಗೆ ಅನಿಲ ಸಂಪ‍ರ್ಕಗಳನ್ನು ಹಾಗೂ ಕರ್ನಾಟಕದಲ್ಲಿ ಸುಮಾರು 37 ಲಕ್ಷ ಸಂಪರ್ಕಗಳನ್ನುಕಲ್ಪಿಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಎಂಆರ್‌ಪಿಎಲ್‌ ಸಂಸ್ಥೆಯು 39 ಚಿಲ್ಲರೆ ಮಾರಾಟ ಮಳಿಗೆಗಳನ್ನು (ಪೆಟ್ರೊಲ್‌ ಬಂಕ್‌) ಇದುವರೆಗೆ ಆರಂಭಿಸಿದೆ. 16 ಹೊಸ ಪೆಟ್ರೊಲ್‌ ಬಂಕ್‌ಗಳನ್ನು ಅರಂಭಿಸಲು ಸಿದ್ಧತೆಗಳು ನಡೆದಿವೆ. 2025ರ ಮಾರ್ಚ್‌ ಒಳಗೆ 119 ಪೆಟ್ರೋಲ್‌ ಬಂಕ್‌ಗಳನ್ನು ಆರಂಭಿಸಲಾಗುವುದು. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದರು.

ಎಂಆರ್‌ಪಿಎಲ್‌ನ ವಿಸ್ತರಣಾ ಯೋಜನೆಯಡಿ ಬೆಂಗಳೂರು ಬಳಿಯ ದೇವಗೊಂತಿಯಲ್ಲಿ ಎಂಆರ್‌ಪಿಎಲ್‌ನ ಹೊಸ ಮಾರುಕಟ್ಟೆ ಟರ್ಮಿನಲ್‌ ಅನ್ನು ₹ 3ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ವರ್ಚುವಲ್‌ ರೂಪದಲ್ಲಿ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಎಂಆರ್‌ಪಿಎಲ್‌ನಲ್ಲಿ ಸಂಭಾವ್ಯ ಅಗ್ನಿ ದುರಂತವನ್ನು ತಪ್ಪಿಸಿದ ಅಗ್ನಿಶಾಮಕ ತಂಡದ ಸದಸ್ಯರನ್ನು ಹಾಗೂ ಒಎನ್‌ಜಿಸಿಯ ಪ್ಯಾರಾಲಿಂಪಿಕ್‌ ಕ್ರೀಡಾಕೂಟದ ನಾಲ್ಕವೇ ಆವೃತ್ತಿಯಲ್ಲಿ ಏಳು ಪದಕಗಳನ್ನು ಗೆದ್ದ ತಂಡದ ಸದಸ್ಯರನ್ನು ಸಚಿವರು ಅಭಿನಂದಿಸಿದರು.

ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶನ ಎಂ.ವೆಂಕಟೇಶ್, ರಿಫೈನರೀಸ್ ವಿಭಾಗದ ನಿರ್ದೇಶಕ ಸಂಜಯ್‌ ವರ್ಮಾ, ಚಿಲ್ಲರೆ ಮಾರಾಟ ವಿಭಾಗದ ಕಾರ್ಯಕಾರಿ ನಿರ್ದೇಶಕ ಎಸ್‌.ಪಿ.ಕಾಮತ್‌, ಯೋಜನೆಗಳು ವಿಭಾಗದ ಕಾರ್ಯಕಾರಿ ನಿರ್ದೇಶಕ ಬಿಎಚ್‌ವಿ ಪ್ರಸಾದ್‌, ಇಂಡಿಯನ್‌ ಆಯಿಲ್‌ ಕಂಪನಿಯ ಕಾರ್ಯಕಾರಿ ನಿರ್ದೇಶಕ ಮತ್ತು ರಾಜ್ಯ ಮುಖ್ಯಸ್ಥ ಗುರುಪ್ರಸಾದ್‌ ಇದ್ದರು.

‘ಎಲ್‌ಪಿಜಿ–ಫೈಬರ್‌ ಸಿಲಿಂಡರ್’

‘ಅಡುಗೆ ಅನಿಲ (ಎಲ್‌ಪಿಜಿ) ತುಂಬಿಸಲು ಬಳಸುತ್ತಿರುವ ಲೋಹದ ಸಿಲಿಂಡರ್‌ಗಳು ಅತಿ ಭಾರವಾಗಿವೆ. ಈ ಸಮಸ್ಯೆ ನಿವಾರಿಸಲು ಫೈಬರ್‌ನಿಂದ ತಯಾರಿಸಿದ ಸಿಲಿಂಡರ್‌ಗಳನ್ನು ಪರಿಚಯಿಸಲು ಸಚಿವಾಲಯ ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಚಿಂತನೆ ನಡೆಸಿವೆ. ಫೈಬರ್‌ ಸಿಲಿಂಡರ್‌ಗಳನ್ನು ಬಳಕದಾರರು ಸುಲಭವಾಗಿ ಒಯ್ಯಬಹುದು’ ಎಂದು ರಾಮೇಶ್ವರ ತೆಲೀ ತಿಳಿಸಿದರು.

ಇ–ಶ್ರಮ ಕಾರ್ಡ್‌ಗೆ ವಿಮೆ ಸೌಕರ್ಯ: ‘ಇ–ಶ್ರಮ ಕಾರ್ಡ್‌ ಹೊಂದಿದ ಫಲಾನುಭವಿಗಳು ಪ್ರಧಾನ ಮಂತ್ರಿ ಸುರಕ್ಷ ವಿಮಾ ಯೋಜನೆ ಅಡಿಯಲ್ಲಿ ವಿಮಾ ಸೌಲಭ್ಯವನ್ನೂ ಪಡೆಯಲಿದ್ದಾರೆ’ ಎಂದು ಸಹಾಯಕ ಕಾರ್ಮಿಕ ಆಯುಕ್ತ (ಕೇಂದ್ರೀಯ) ಶ್ರೀನಿವಾಸ ಶೆಟ್ಟಿ ತಿಳಿಸಿದರು.

‘ಅಸಂಘಟಿತ ಕಾರ್ಮಿಕರ ಡೇಟಾಬೇಸ್‌ ಹೊಂದುವ ಹಾಗೂ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವ ಸಲುವಾಗಿ ಕಾರ್ಮಿಕ ಸಚಿವಾಲಯವು ಇ–ಶ್ರಮ ಪೋರ್ಟಲ್‌ ಅನ್ನು ರೂಪಿಸುತ್ತಿದೆ. ಜನಸೇವಾ ಕೇಂದ್ರಗಳ ಮೂಲಕ ಇದಕ್ಕೆ ನೋಂದಣಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 70 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.15 ಲಕ್ಷ ಮಂದಿ ಇ–ಶ್ರಮ್‌ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಈ ಯೋಜನೆಯಡಿ ಹೆಸರು ನೋಂದಾಯಿಸುವವರಿಗೆ ಪೂರೈಸುವ ಇ–ಶ್ರಮ ಕಾರ್ಡ್‌ ವ್ಯಕ್ತಿಯ ಜೀವನಪರ್ಯಂತ ಮಾನ್ಯತೆ ಹೊಂದಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT