ಬುಧವಾರ, ಸೆಪ್ಟೆಂಬರ್ 22, 2021
21 °C
ಶುಭಾಶಯಗಳ ಮಹಾಪೂರ

ಸಿದ್ದರಾಮಯ್ಯಗೆ 74ರ ಸಂಭ್ರಮ; ಸಂವಿಧಾನ ಆಶಯ ಈಡೇರಿಸೋಣ -ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುರುವಾರ (ಆಗಸ್ಟ್‌ 12) 74ನೇ ಜನ್ಮದಿನ ಆಚರಿಸಿಕೊಂಡ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ, ಜೆಡಿಎಸ್‌ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಮುಖಂಡರು, ಹಾಲಿ, ಮಾಜಿ ಶಾಸಕರು, ಸಂಸದರು ಶುಭ ಕೋರಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಕೂಡಾ ಶುಭ ಹಾರೈಸಿ, ಆಶೀರ್ವದಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಅವರ ನಿವಾಸಕ್ಕೆ ನೂರಾರು ಸಂಖ್ಯೆಯಲ್ಲಿ ಬಂದ ಪಕ್ಷದ ಕಾರ್ಯಕರ್ತರು ಶುಭ ಕೋರಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಅಭಿಮಾನಿಯೊಬ್ಬರು ಹಾಡೊಂದಕ್ಕೆ ಕುಣಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ನಾನು ಐದನೇ ತರಗತಿಗೆ ನೇರವಾಗಿ ದಾಖಲಾತಿಯಾದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಬರೆದುಕೊಂಡ ಪ್ರಕಾರ ನನಗೀಗ 74 ವರ್ಷ ತುಂಬಿ 75ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ನಾವು ಹಿಂದಿನ 74 ವರ್ಷಗಳ ಇತಿಹಾಸವನ್ನು ಹಿಂತಿರುಗಿ ನೋಡಬೇಕು. ಸಂವಿಧಾನದ ಆಶಯಗಳು ಈಡೇರಿವೆಯೊ, ಇಲ್ಲವೊ ಎಂಬುದನ್ನು ಗಮನಿಸಿ, ಈಡೇರದೇ ಇದ್ದರೆ ಅದನ್ನು ಈಡೇರಿಸುವ ಶಪಥ ಮಾಡಬೇಕು’ ಎಂದರು.

ಬಿಜೆಪಿ ವಿಫಲ: ‘ಚುನಾವಣೆಗೆ ಇನ್ನೂ ಒಂದು ವರ್ಷ ಎಂಟು ತಿಂಗಳು ಬಾಕಿ ಇದೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಸರ್ಕಾರ ಕೋವಿಡ್‌ ನಿಯಂತ್ರಣ, ನೆರೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಭರವಸೆಗಳನ್ನು ನೀಡುವುದಷ್ಟೇ ಅಲ್ಲದೆ, ಕೋವಿಡ್‌ನಿಂದ ಸಾವಿಗೀಡಾದವರ ಲೆಕ್ಕದಲ್ಲೂ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕ ಎಂ.ಪಿ. ಕುಮಾರಸ್ವಾಮಿ, ತಮ್ಮದೇ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಸಿಗುವ ಅನುದಾನದ ಬಗ್ಗೆ ನೀವೆ ಊಹಿಸಿ’ ಎಂದರು.

‘ಜಾತಿ ಸಮೀಕ್ಷೆ ವರದಿಯನ್ನೇ ಸ್ವೀಕರಿಸಿಯೇ ಇಲ್ಲ. ಹಾಗಿರುವಾಗ ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಬಿಜೆಪಿಯವರಿಗೆ ಹೇಗೆ ಗೊತ್ತಾಯಿತು. ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಕಾಣುತ್ತದೆ. ಸಮೀಕ್ಷೆಯ ವರದಿ ಸ್ವೀಕರಿಸಿ ಸದನದಲ್ಲಿ ಚರ್ಚೆ ಮಾಡಲಿ. ಆಗ ಅದು ವೈಜ್ಞಾನಿಕವೊ, ಅವೈಜ್ಞಾನಿಕವೊ ಗೊತ್ತಾಗಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು