ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಕ್ರೈಂ: ಎನ್‌ಸಿಆರ್‌ ಪೋರ್ಟಲ್‌ನಲ್ಲಿ ಕರ್ನಾಟಕದಿಂದ 80,379 ದೂರು ದಾಖಲು

Last Updated 26 ಡಿಸೆಂಬರ್ 2022, 13:20 IST
ಅಕ್ಷರ ಗಾತ್ರ

ಬೆಳಗಾವಿ: ಸೈಬರ್‌ ಅಪರಾಧ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ರೂಪಿಸಿರುವ ‘ನ್ಯಾಷನಲ್‌ ಕ್ರೈಮ್‌ ರಿಪೋರ್ಟಿಂಗ್‌ ಪೋರ್ಟಲ್‌’ನಲ್ಲಿ ಕರ್ನಾಟಕದಿಂದ 80,379 ದೂರುಗಳು ದಾಖಲಾಗಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಸಚಿವರು, ‘ಸೈಬರ್‌ ವಂಚಕರಿಂದ ನಡೆದಿರುವ ಕೃತ್ಯಗಳ ಕುರಿತು ದಾಖಲಾದ ದೂರುಗಳಿಗೆ ಸಂಬಂಧಿಸಿದಂತೆ 528 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗಿದೆ. 2,738 ಪ್ರಕರಣಗಳಲ್ಲಿ ಸಂಜ್ಞೇಯವಲ್ಲದ ಅಪರಾಧ ಪ್ರಕರಣ ದಾಖಲಿಸಲಾಗಿದೆ. 901 ದೂರುಗಳನ್ನು ತಿರಸ್ಕರಿಸಲಾಗಿದೆ’ ಎಂದು ವಿವರ ನೀಡಿದರು.

53,229 ದೂರುಗಳು ಪರಿಶೀಲನೆ ಹಂತದಲ್ಲಿವೆ. 14,960 ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ. 5,734 ದೂರುಗಳಿಗೆ ಸಂಬಂಧಿಸಿದಂತೆ ಕ್ರಮ ಬಾಕಿ ಇದೆ.2,028 ಮಂದಿ ದೂರುಗಳನ್ನು ಹಿಂಪಡೆದಿದ್ದಾರೆ ಎಂದರು.

ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ, ಅಶ್ಲೀಲ ಹಾಗೂ ಸಮಾಜಘಾತುಕ ವಿಷಯಗಳು ಹಾಗೂ ದೃಶ್ಯಾವಳಿಗಳನ್ನು ಅಪ್‌ಲೋಡ್‌ ಮಾಡಿರುವ ಆರೋಪದಡಿ 2018ರಿಂದ 2023ರವರೆಗೆ 568 ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.

‘ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮಾಹಿತಿ, ಚಿತ್ರ, ದೃಶ್ಯಾವಳಿಗಳನ್ನು ಅಪ್‌ಲೋಡ್‌ ಮಾಡಿ ಮಕ್ಕಳು, ಯುವಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಈ ಸಂಬಂಧ ದಾಖಲಾಗುವ ದೂರುಗಳ ಪೈಕಿ ಶೇ 0.75ರಷ್ಟು ಪ್ರಕರಣಗಳಲ್ಲೂ ಸರ್ಕಾರ ಕ್ರಮ ಜರುಗಿಸಿಲ್ಲ. ಈ ವಿಚಾರದಲ್ಲಿ ಕಠಿಣ ಕ್ರಮ ಜರುಗಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ರಮೇಶ್ ಆತಂಕ ವ್ಯಕ್ತಪಡಿಸಿದರು.

‘ಸೈಬರ್‌ ವಂಚನೆ, ಅಕ್ರಮ ತಡೆಗೆ ಸರ್ಕಾರ ಬದ್ಧವಾಗಿದೆ. ಈ ಕಾರಣಕ್ಕಾಗಿ ಸೈಬರ್‌ ಅಪರಾಧ ನಿಯಂತ್ರಣ ಪೊಲೀಸ್‌ ಠಾಣೆಗಳಿಗೆ ತಜ್ಞ ಸಿಬ್ಬಂದಿ ನೇಮಿಸಲಾಗಿದೆ. ಅಹ್ಮದಾಬಾದ್‌ನ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮೂಲಕ ಪೊಲೀಸರಿಗೆ ತರಬೇತಿ ಕೊಡಿಸಲಾಗುತ್ತಿದೆ. ಒಂದು ವರ್ಷದಲ್ಲಿ ₹ 70 ಕೋಟಿ ಮೌಲ್ಯದ ಅಕ್ರಮವನ್ನು ನಮ್ಮ ಪೊಲೀಸರು ತಡೆದಿದ್ದಾರೆ’ ಎಂದು ಗೃಹ ಸಚಿವರು ತಿಳಿಸಿದರು.

ಸೈಬರ್‌ ಅಪರಾಧ ನಿಯಂತ್ರಣ ಪೊಲೀಸ್‌ ಠಾಣೆಗಳಿಗೆ ಸಿಬ್ಬಂದಿ ಹಾಗೂ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಟಿ.ಎ. ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸೈಬರ್‌ ಅಪರಾಧ ನಿಯಂತ್ರಣಕ್ಕಾಗಿ ಪೊಲೀಸರಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುತ್ತಿದೆ. ಸೈಬರ್‌ ಅಪರಾಧ ಪೊಲೀಸ್ ಠಾಣೆಗಳಿಗೆ ಸೈಬರ್‌ ಮತ್ತು ಡಿಜಿಟಲ್‌ ವಿಶ್ಲೇಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT